More

    ಸವ್ಯಸಾಚಿ | ಇಪ್ಪತ್ತೊಂದಾಯಿತು, ಪ್ರಬುದ್ಧರಾಗುವ ಹೊತ್ತು

    ಸವ್ಯಸಾಚಿ | ಇಪ್ಪತ್ತೊಂದಾಯಿತು, ಪ್ರಬುದ್ಧರಾಗುವ ಹೊತ್ತು21 ಎನ್ನುವುದು ಭಾರತದಲ್ಲಿ, ಜಗತ್ತಿನ ಅನೇಕ ದೇಶಗಳಲ್ಲಿ ಹಲವು ಕಾನೂನುಬದ್ಧ ಹಕ್ಕು ಕೊಡಿಸುವ ವರ್ಷ. ಹದಿಹರೆಯದ ಹುಡುಗಾಟಿಕೆಯಿಂದ ಹೊರಬಂದು ಜವಾಬ್ದಾರಿ ಅರಿಯುವ ವರ್ಷ. ಕರೊನಾದಿಂದ ಅಸ್ತವ್ಯಸ್ತವಾಗಿರುವ ಬದುಕು ಕಟ್ಟುವುದಕ್ಕೆ ಸಾಮಾಜಿಕ ಪ್ರಬುದ್ಧತೆ ಅಗತ್ಯವಿದೆ.

    ಜಗದ ಕಡಲನು ಸುತ್ತುತಿದೆ ಹಗಲಿರುಳ ಹಡಗು

    ನಿಮಿ ನಿಮಿಷದೊಂದು ತೆರೆ ತೆರೆವ ಅನಿಮಿಷ-ಮಿಣಿಕು

    ಗಾಳಿ-ಬಿರುಗಾಳಿ-ಸುಳಿ ಕರುಣೆ-ಕ್ರೌರ್ಯದ ತೊಡಕು (ಚೆನ್ನವೀರ ಕಣವಿ)

    ಕತ್ತಲೆಯ ದಾರಿ ದೂರ ಎಂಬ ಮಾತಿನ ಅನುಭವ ಎಲ್ಲರಿಗೂ ಇಪ್ಪತ್ತನೇ ಇಸವಿಯಲ್ಲಾಯಿತು. ಅಂತೂ ಎಲ್ಲ ಕಾಳರಾತ್ರಿಗಳ ಅಂಚಿನಲ್ಲೊಂದು ಸೂರ್ಯೋದಯವಿದೆ ಎಂಬಂತೆ 2020ರ ಅಂತ್ಯವಾಗಿ 2021 ಉದಯವಾಗಿದೆ. ಹೊಸ ವರ್ಷವನ್ನು ಹಿಂದಿನ ವರ್ಷಗಳಷ್ಟು ಅಬ್ಬರ-ಸಂಭ್ರಮವಿಲ್ಲದಿದ್ದರೂ ಉತ್ಸಾಹದಿಂದ ಬರಮಾಡಿಕೊಂಡಾಗಿದೆ. ಮುಂದಿನ ಒಂದು ವರ್ಷದ ಹಾದಿಯ ಖರ್ಚಿಗಾಗುವಷ್ಟು ಸಕಾರಾತ್ಮಕತೆಯ ಸರಕನ್ನು ಪಯಣಾರಂಭದ ಈ ಹೊತ್ತಿನಲ್ಲಿ ಸಂಗ್ರಹಿಸಿಕೊಳ್ಳುವ ಸಂಕಲ್ಪ ಮಾಡಬೇಕಿದೆ.

    ಬರುವೆನೆಂದಿತು ಬೆಳಕು/ಬಾ ಎಂದೆ ನಾನೂ;/ಬಂದಂತೆಯೇ ಹೋಯ್ತು

    ಸುಮ್ಮನಿರೆ ಬಾನೂ! (ಬಿ.ಎ. ಸನದಿ)

    ನಾವೆಲ್ಲರೂ ಆಶಾವಾದಿಗಳು. ಜಗತ್ತಿನ ಬಂಡಿ ಸಾಗುತ್ತಿರುವುದೇ ಆಶಾವಾದವೆಂಬ ಗಾಲಿಗಳ ಮೇಲೆ. ಯಾವುದೇ ಕಷ್ಟ, ನೋವು, ಸವಾಲುಗಳ ಸಂದರ್ಭದಲ್ಲೂ ನಾಳೆಯೆಂಬುದು ಒಳಿತು ತಂದೀತೆಂಬ ಭರವಸೆಯೇ ಮನಸ್ಸಿನ ಭಾರ ಕಡಿಮೆ ಮಾಡುತ್ತದೆ. ಹೋರಾಡುವ ಛಲ ತುಂಬುತ್ತದೆ. ಬೆನ್ನಹಿಂದಿರುವ ಕರಾಳ ವರ್ಷ ಜಗತ್ತಿನ ಮೇಲೆ ಉಂಟು ಮಾಡಿದ ವ್ಯಾವಹಾರಿಕ ನಷ್ಟ ತುಂಬಲಾಗದ್ದಾದರೆ, ಜನರ ಮಾನಸಿಕತೆಯ ಮೇಲೆ ತಂದೊಡ್ಡಿದ ಆಘಾತವೂ ಅಷ್ಟಿಷ್ಟಲ್ಲ. ಹಿಂದೆಲ್ಲ ಯುದ್ಧಗಳು ನಡೆದಾಗ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಜನ ಸಾಯುತ್ತಿದ್ದರು. 2020ರಲ್ಲಿ ಕರೊನಾ ಎಂಬ ಮಹಾಮಾರಿ ಎದುರಿನ ಮಹಾಯುದ್ಧದಲ್ಲಿ ಆ ದೇಶ, ಈ ದೇಶವೆಂಬ ವ್ಯತ್ಯಾಸವಿಲ್ಲದೆ ಲಕ್ಷಾಂತರ ಜನ ಬದುಕಿನ ಹೋರಾಟದಲ್ಲಿ ಕೈಚೆಲ್ಲಿದರು. ಯಾವ ದೇಶ, ರಾಜ್ಯ, ನಗರ, ಊರು, ಯಾವ ಕೇರಿಯಲ್ಲಿ ವಿಚಾರಿಸಿದರೂ, ಕರೊನಾದಿಂದ ಅಥವಾ ಕರೊನಾ ಕಾಲದಲ್ಲಿ ಅಸುನೀಗಿದವರಿದ್ದಾರೆ. ಈ ಸಾವು ತಂದ ನೋವು ಕುಟುಂಬದ ಮೇಲೆ, ಹತ್ತಿರದ ಸಂಬಂಗಳ ಮೇಲೆ, ಒಟ್ಟಾರೆ ವ್ಯವಸ್ಥೆಯ ಮೇಲೆ ಬೀರಿರುವ ಪರಿಣಾಮ ಅಪಾರ. ಕುಟುಂಬದ ನೊಗ ಹೊತ್ತವರು ಅಕಾಲಿಕವಾಗಿ ಅಗಲಿದಾಗ ಬೀದಿಗೆ ಬಿದ್ದವರೆಷ್ಟೋ. ವಯಸ್ಸಿನ ಭೇದವಿಲ್ಲದೆ ಪ್ರೀತಿಪಾತ್ರರು ಇನ್ನಿಲ್ಲವಾದಾಗ ಬದುಕಿನಲ್ಲಿ ಉತ್ಸಾಹ ಕಳೆದುಕೊಂಡವರೆಷ್ಟೋ. ವಿಧಿಯೆನ್ನುವುದು ಬಹಳ ಕ್ರೂರಿ.

    ಸಮಯ ನೇಗಿಲು/ಹಗಲು ರಾತ್ರಿಗಳ- ಜೋಡೆತ್ತುಗಳು-/ಜನ್ಮ, ಮರಣದ- ಸುಗ್ಗಿ ಎರಡು-/ಸಾಗುವಳಿ ನಡೆದಿದೆ- ನಿರಂತರ-/ನಾವು? ಬೀಜಗಳು-/ಜನ್ಮ- ಮರಣದ ಸುಗ್ಗಿಯಲ್ಲಿ- ಬಿದ್ದು/ಬೆಳೆದು,/ಅಳಿದು,/ಹೋಗೋಣ. (ಚಂದ್ರಕಾಂತ ಕುಸನೂರ)

    2021ರ ಹೊಸ್ತಿಲು ದಾಟಿ ಹೊಸ ಮನೆಯೊಳಕ್ಕೆ ಪ್ರವೇಶಿಸಿರುವ ನಾವು ಧೃತಿಗೆಟ್ಟ ಮನವನ್ನು ಆಧರಿಸಿ ಧೈರ್ಯ ತುಂಬುವ ಯತ್ನ ಆಗಬೇಕಿದೆ. ಏಕೆಂದರೆ, ಘಾಸಿಗೊಂಡಿರುವ ಜನ, ಸಮಾಜಕ್ಕೆ ಸ್ಫೂರ್ತಿಯ ಅಮೃತಸಿಂಚನವಾಗಲು ಪವಾಡವೇನೂ ನಡೆಯಬೇಕಿಲ್ಲ. ಬಿದ್ದ ಮೇಲೆ ಏಳುವುದು, ತಪ್ಪುಗಳಿಂದ ಕಲಿಯುವುದು, ಅವಘಡ, ಅನಾಹುತಗಳಿಂದ ಮರುಹುಟ್ಟು ಪಡೆದು ಇತಿಹಾಸ ಸೃಷ್ಟಿಸುವುದು ಅನಾದಿಕಾಲದಿಂದಲೂ ನಡೆದುಬಂದಿದೆ. ಮನುಷ್ಯ ಶಕ್ತಿಯೇ ಅಂಥದ್ದು. ಶೂನ್ಯದಿಂದ ಸ್ವರ್ಗ ಸೃಷ್ಟಿಸುವ, ಕಲ್ಪನೆಯನ್ನು ವಾಸ್ತವವಾಗಿಸುವ, ಸೃಜನಶೀಲ ಶಕ್ತಿ ಮನುಷ್ಯರಿಗೆ ಪ್ರಕೃತಿ ಕೊಟ್ಟ ವರ. ನಮ್ಮ ಚರಿತ್ರೆಯನ್ನು ಅವಲೋಕಿಸಿದರೆ, ನಾಮಾವಶೇಷವಾದ ಬೂದಿನೆಲದಿಂದ ಸಂಪದ್ಭರಿತ ದೇಶವನ್ನೇ ಕಟ್ಟಿದ ಉದಾಹರಣೆಗಳು ಅನೇಕ. ಕರೊನಾ ತಂದೊಡ್ಡಿರುವ ಅನಾಹುತಗಳನ್ನೂ ಮೀರಿ, ಮರೆತು ಸಮಾಜ, ಜಗತ್ತು ಮುನ್ನಡೆಯಲಿದೆ. ಆ ಸಂಯಮ, ಸಾಮರ್ಥ್ಯ ನಮಗಿದೆ. ಬದುಕೆನ್ನುವುದು ಹೋರಾಟ. ಕೆಲವೊಮ್ಮೆ ತುಂಬಲಾಗದ ಹಾನಿ ಅನುಭವಿಸಿದ ಮೇಲೂ ಹೊಸ ಹಾದಿಯನ್ನು, ಸಾಧ್ಯತೆಯನ್ನು ಹುಡುಕಿಕೊಂಡು ಹೆಜ್ಜೆ ಮುಂದಿಡುವುದು ಅನಿವಾರ್ಯ.

    ದೂರದಲಿ ಬಾನಿನಲಿ ಮೇಘಮಾಲೆಯು ತೇಲೆ/ಅದನು ಮರುಬಿಂಬಿಸಲು ಕೊಳಗಳಿಲ್ಲಿಲ್ಲ,/ಸೋಪಾನದೊಡ್ಯಾಣಗಳನಿಲ್ಲಿ ಕಂಡಿಲ್ಲ;/ಇಲ್ಲ, ನಮ್ಮೂರಿನಲಿ ಹೊಳೆಗಳಿಲ್ಲ (ಎಲ್.ಜಿ. ಸುಮಿತ್ರಾ)

    ಸಾಹಿತ್ಯವೆನ್ನುವುದು ಎಲ್ಲ ಕಾಲದಲ್ಲೂ ಮನುಷ್ಯನ ಸಂಗಾತಿ. ಮನುಷ್ಯ ಬದುಕಿನ ನವರಸ ಸಂದರ್ಭಗಳಲ್ಲೂ ಜೊತೆಗಿರುವ, ಕೈಹಿಡಿಯುವ ಶಕ್ತಿ ಸಾಹಿತ್ಯಕ್ಕಿದೆ. ತುಂಬಾ ನೋವಾದಾಗ, ಬದುಕಿನಲ್ಲಿ ಸೋತು ಹೋದಾಗ, ಇನ್ನೇನು ಸಾಧ್ಯವಿಲ್ಲ ಎಂದು ಕೈಚೆಲ್ಲುವ ಸಂದರ್ಭ ಎದುರಾದಾಗಲೂ ಒಂದು ಪುಸ್ತಕ ಓದುವುದರಿಂದ ಹೊಸದೊಂದು ಸ್ಫೂರ್ತಿಯ ಕಿಡಿ ಅಂತರ್ಮನದಲ್ಲಿ ಸ್ಫುರಣಗೊಳ್ಳುವ ಸಾಧ್ಯತೆಗಳಿರುತ್ತದೆ. ಪ್ರಪಂಚದ ಅನೇಕ ಸಮಸ್ಯೆಗಳಿಗೆ ಪರಿಹಾರ ಮಹಾಕಾವ್ಯಗಳಲ್ಲಿರುತ್ತದೆ. ಸಾಧಕರೊಬ್ಬರ ಸಾಹಸದ ಯಶೋಗಾಥೆ ಅವರಂತೆ ನೂರಾರು ಜನರಿಗೆ ಯಶಸ್ವಿಯಾಗುವುದಕ್ಕೆ ಪ್ರೇರಣೆಯಾಗುತ್ತದೆ. ಈ ಕರೊನಾ ಕಾಲದಲ್ಲಿ ಮನೆಯೊಳಗೆ ಬಂಯಾಗಿದ್ದ ಜನರಲ್ಲಿ ಹೆಚ್ಚಿನವರು ಪುಸ್ತಕ ಓದುವ ಹುಚ್ಚು ಬೆಳೆಸಿಕೊಂಡು; ಹೆಚ್ಚಿಸಿಕೊಂಡು ಹೊಸ ಸಾಧ್ಯತೆಗಳನ್ನು ಕಂಡುಕೊಂಡರು. ನೆಮ್ಮದಿ ಹುಡುಕಿಕೊಂಡರು.

    ಬಿತ್ತರದಾಗಸ ಹಿನ್ನೆಲೆಯಾಗಿರೆ/ಪರ್ವತದೆತ್ತರ ಸಾಲಾಗೆಸೆದಿರೆ

    ಕಿಕ್ಕಿರಿದಡವಿಗಳಂಚಿನ ನಡುವೆ/ಮೆರೆದಿರೆ ಜಲಸುಂದರಿ ತುಂಗೆ

    ದೇವರು ರುಜು ಮಾಡಿದನು:/ರಸವಶನಾಗುತ ಕವಿ ಅದ

    ನೋಡಿದನು! (ಕುವೆಂಪು)

    ಎಲ್ಲ ಕಾವ್ಯಗಳೂ, ಕಥೆಗಳೂ ಕಟ್ಟುಕಲ್ಪನೆಗಳಲ್ಲ. ಸೃಜನಶೀಲ ಕಲ್ಪನೆಗಳ ಹಿಂದೊಂದು ವಾಸ್ತವದ ನೆರಳಿರುತ್ತದೆ. ಅನುಭವದ ಸೆಲೆಯಿರುತ್ತದೆ. ಸಂಬಂಧದ ಸೆಳೆತವಿರುತ್ತದೆ. ಅದೇ ಕಾರಣಕ್ಕೆ ಕಾವ್ಯಗಳು, ಕಥೆಗಳು ಜೀವನಕ್ಕೆ ಹತ್ತಿರವೆನಿಸುತ್ತವೆ. ಆಪ್ತವಾಗುತ್ತವೆ. ಒಳಮನದ ಮೂಲೆಯಲ್ಲೆಲ್ಲೋ ಅವಿತು ಕುಳಿತ ಅತೃಪ್ತಿಗಳು ಜಗತ್ತಿನ ಯಾವುದೋ ಮೂಲೆಯ ಕಥೆಯಲ್ಲಿ ತನ್ನ ನೆರಳನ್ನು ಕಂಡು, ಹೋಲಿಕೆಯನ್ನು ಕಂಡು ಶಮನಗೊಳ್ಳುತ್ತವೆ. ಮನಸ್ಸಿಗೆ ಮುದ ನೀಡುವ ಅಂಥ ಒಂದೆರಡು ಕಿರುಕಥೆಗಳ ಗುಚ್ಛ ಇಲ್ಲಿದೆ..

    ವಿಳಾಸ ಹುಡುಕುತ್ತ ಬಂದು ಬಾಗಿಲು ತಟ್ಟಿದವನಿಗೆ ದಿಢೀರ್ ಆಘಾತ. ಕಾರಣ ಬಾಗಿಲು ತೆರೆದಿದ್ದು ಅವಳು. ಅರೆ, ನಾನಿಲ್ಲಿ ಬರಬಾರದಿತ್ತು.. ಎಂಬ ಮಾತು ಅವನಿಗೇ ಗೊತ್ತಿಲ್ಲದಂತೆ ಹೊರಬಿದ್ದಿತ್ತು. ಇಲ್ಲ.. ನೀನು ಯಾವತ್ತೋ ಬರಬೇಕಿತ್ತು… ಎಂಬ ಅವಳ ಮಾತು ಹೊಸ ಆರಂಭವೊಂದಕ್ಕೆ ಮುನ್ನುಡಿ ಬರೆದಿತ್ತು.

    ಕವಿತೆ ಅದ್ಭುತವಾಗಿತ್ತು. ಇಷ್ಟೊಂದು ಪ್ರೀತಿಸುವ ಜೀವ ನನ್ನ ಜೀವನದಲ್ಲೂ ಇದ್ದಿದ್ದರೆ, ನನ್ನ ಬಗ್ಗೆಯೂ ಕವನ ಬರೆಯುತ್ತಿದ್ದನೋ ಏನೋ ಎಂದು ಅವಳು ಹಂಬಲಿಸಿದಳು. ಆದರೆ, ಆ ಕವಿತೆಯನ್ನು ಆತ ತನಗಾಗಿಯೇ ಬರೆದಿದ್ದು ಎಂಬುದು ಅವಳಿಗೆ ಅರ್ಥವಾಗಲೇ ಇಲ್ಲ.

    *****

    ಐ ಲವ್ ಯೂ ಎಂದು ಆತ ಯಾವತ್ತೂ ಹೇಳಲೇ ಇಲ್ಲ. ಆದರೆ, ಪ್ರತಿ ಮುಂಜಾನೆ ಅವಳ ಮುಖ ನೋಡಲು ಆತ ಕಾತರಿಸುತ್ತಿದ್ದ. ಕಣ್ಣುಗಳನ್ನು ರೆಪ್ಪೆ ಕಾಯುವಂತೆ ಆತ ಅವಳ ಬಗ್ಗೆ ಮುತುವರ್ಜಿ ವಹಿಸುತ್ತಿದ್ದ. ಅವಳು ಹೇಳಿದ್ದನ್ನು ದೈವವಾಣಿ ಎಂಬಂತೆ ಪಾಲಿಸುತ್ತಿದ್ದ. ಅವಳಿಗೆ ಸಣ್ಣ ನೋವಾದರೆ ಯಾತನೆಪಡುತ್ತಿದ್ದ. ಆದರೆ, ನೀನಂದರೆ ನನಗಿಷ್ಟ ಎಂದು ಹೇಳುವ ಧೈರ್ಯವನ್ನು ಆತ ಮಾಡಲೇ ಇಲ್ಲ.

    *****

    ನೀನೇ ನನ್ನ ಜಗತ್ತು ಎಂದು ಅವನು ಹೇಳಿದಾಗ, ನನ್ನ ಕನಸಿನ ಜಗತ್ತು ಬೇರೆಯೇ ಇದೆ ಎಂದಳವಳು. ಹಾಗಾದರೆ ನಿನ್ನ ಜಗತ್ತಿನಲ್ಲಿ ಸುಖವಾಗಿ ಬದುಕು ಎಂದು ಅವನು ಅವಳನ್ನು ಕಳಿಸಿದ. ಆದರೆ, ಅವನೇ ನನ್ನ ಜಗತ್ತು ಎಂದು ಅವಳಿಗೆ ಅರ್ಥವಾಗುವ ಹೊತ್ತಿಗೆ ಕಾಲ ಮಿಂಚಿತ್ತು.

    *****

    ಸವ್ಯಸಾಚಿ | ಇಪ್ಪತ್ತೊಂದಾಯಿತು, ಪ್ರಬುದ್ಧರಾಗುವ ಹೊತ್ತು

    ಆಕೆಯೋರ್ವ ರಂಗ ನಟಿ. ರಂಗಭೂಮಿ ನಟಿಯೆಂದ ಮೇಲೆ ಬಡತನವನ್ನೇ ಉಂಡುಟ್ಟು ಕಲಾಸೇವೆಯಲ್ಲಿ ಸಾರ್ಥಕ್ಯ ಕಂಡುಕೊಳ್ಳುವಾಕೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನೋಡಲು ಸುಂದರಿ. ಆದರೆ, ನಾಟಕದಲ್ಲಿ ಪಾತ್ರ ಮಾಡುವುದರಿಂದ ಬರುವ ಸಂಪಾದನೆ ಯಾವುದಕ್ಕೂ ಸಾಲದು. ನಾಟಕದಲ್ಲಿ ಸೀತೆಯ ಪಾತ್ರ ಮಾಡಿದರೂ, ಕಷ್ಟವೆಂದಾಗ ಒಲವಿನಿಂದ ಸಮಾಧಾನಿಸುವ ರಾಮ ನಿಜಬದುಕಿನಲ್ಲಿಲ್ಲ. ಸಂಜೆ ರಂಗದ ಮೇಲೆ ರಾಜ್ಯಗಳ ರಾಣಿ ಆಕೆ. ಆದರೆ, ಮಾರನೆಯ ದಿನ ಉಣ್ಣಲು ದಿನಸಿ ಇಲ್ಲವಲ್ಲ ಎಂಬ ಚಿಂತೆ ಮನಸ್ಸಿನೊಳಗೆ. ದೇವಸ್ಥಾನವೊಂದರ ವಾರ್ಷಿಕೋತ್ಸವದಲ್ಲಿ ನಾಟಕ ಪ್ರದರ್ಶನ. ಈ ನಟಿ ರತಿಯ ಪಾತ್ರವನ್ನು ಸೊಗಸಾಗಿ ನಿರ್ವಹಿಸುತ್ತಿದ್ದಾಳೆ. ವೇದಿಕೆ ಮುಂಭಾಗದಲ್ಲಿ ಜರತಾರಿ ಲಂಗ ತೊಟ್ಟು ಕುಳಿತ ಚೆಲುವೆಯರಿಗೆ ರತಿಯ ಬೆಡಗು, ಬಿನ್ನಾಣದ ಮೇಲೆ ಕಣ್ಣು. ನಾವೂ ಆಕೆಯಂತೆ ವೇದಿಕೆ ಹತ್ತುವಂತಿದ್ದರೆ ಎಂಬ ಆಸೆ. ಆದರೆ, ಈ ನಟಿಗೆ ಸಭಿಕರ ನಡುವೆ ಕುಳಿತು ನೋಡುವ, ಆಸ್ವಾದಿಸುವ ಅವಕಾಶ ನನಗಿಲ್ಲವಲ್ಲ ಎಂಬ ಕೊರಗು. ಇಂಥ ಭಾವಪರವಶತೆಯನ್ನು ಕಾವ್ಯರೂಪದಲ್ಲಿ ಕಟ್ಟಿಕೊಟ್ಟವರು ವಸುದೇವ ಭೂಪಾಲಂ.

    ಸೀತೆಯಾದರು ಕೂಡ ಒಲಿದಿನಿನುಡಿವ ರಾಮನಿಲ್ಲ

    ಅರೆಗಳಿಗೆ ಗಿರಿಜೆ ನಾ ಗೆಲಲು ಶಿವಯೋಗಿ ಕಾಣನಲ್ಲ

    ರಾಜ್ಯಗಳ ರಾಣಿ ಈ ಸಂಜೆ, ನಾಳೆ ಉಣಲಶನವಿಹುದೋ…

    …ಮಂದಿರದಿ ಮುಂದುಗಡೆ ಕುಳಿತಿಹರು ಚೆಲುವೆಯರು ಜರಿಯಧರಿಸಿ

    ರತಿಯ ನೃತ್ಯವ ನೋಡಿ ಅವರೆದೆಯು ಕುಣಿಯುವುದು ಪಾದದೊಡನೆ

    …ನಟಿಯ ಪದವಿಯನೊಲಿದು ಕರುಬುವರು ಚೆಲುವೆಯರು

    ಸಭಿಕರಲಿ ನಾ ಕುಳಿತು ನಲಿವ ಸೊಗವೆಂದೋ

    ಶುಭಚಿಂತನೆ ನಮ್ಮ ಸಂಸ್ಕೃತಿ. ಯಾವುದೇ ಇರಲಿ, ಹೊಸತೆನ್ನುವುದು ಎದುರಾದಾಗ ಅದರಲ್ಲಿ ಒಳಿತನ್ನು ಹುಡುಕುವುದು ಸಮಾಜದ ಜಾಯಮಾನ. ಅದೇ ರೀತಿ 2021 ಕೂಡ ಸಕಾರಾತ್ಮಕವಾಗಿರಲಿ ಎಂದು ಆಶಿಸುವುದರಲ್ಲಿ ತಪ್ಪೇನಿಲ್ಲ. ಹಾಗೆ ನೋಡಿದರೆ, ಸಂಖ್ಯಾಶಾಸ್ತ್ರದ ದೃಷ್ಟಿಯಿಂದ 21 ಪ್ರಬಲ ಸಂಖ್ಯೆ. ಗಣಪತಿಗೆ ಪ್ರಿಯವಾದ ಸಂಖ್ಯೆ ಕೂಡ. ಗಣಪತಿಗೆ ಇಪ್ಪತ್ತೊಂದು ಬಗೆಯ ಪತ್ರೆಗಳಿಂದ ಅರ್ಚಿಸುವ ವಿಧಾನವಿದೆ. ಗಣಪತಿಗೆ 21 ನಮಸ್ಕಾರ ಮಾಡುವ ಪರಿಪಾಠವಿದೆ. ವೇದ, ಆಗಮ, ಶಾಸ್ತ್ರಗಳಲ್ಲಿ 21ನೇ ಅಂಕಿಗೆ ಇನ್ನೂ ಅನೇಕ ಮಹತ್ವಗಳಿವೆ. ಅಷ್ಟೇ ಅಲ್ಲ, ಅಂಕಿ 2 ಸಮತೋಲನ, ನಿಸ್ವಾರ್ಥತೆ, ಕಾರುಣ್ಯ, ಪ್ರೀತಿ ಮೊದಲಾದ ಗುಣಗಳನ್ನು ಪ್ರತಿನಿಧಿಸಿದರೆ, ಅಂಕಿ 1 ಸ್ವಾಭಿಮಾನ, ಸ್ವತಂತ್ರ ಪ್ರವೃತ್ತಿ, ಯಶಸ್ಸು, ಬದ್ಧತೆ ಮತ್ತು ಹೊಸ ಆರಂಭದ ತುಡಿತಗಳನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಈ ವರ್ಷ ಅನೇಕರ ಪಾಲಿಗೆ ‘ಸಂಖ್ಯಾಬಲ’ ಇದೆ ಎಂದು ಭಾವಿಸಬಹುದು. ಅದೇನೇ ಇರಲಿ. ಬಂದದ್ದೆಲ್ಲ ಬರಲಿ, ಎದುರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂಬ ಆಶಾವಾದ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ.

    ಮೂರಾಗಬಯಸುವೆನು ಮುಕ್ಕಾಗ ಬಯಸುವೆನು/ಸಿಕ್ಕು ನಿನ್ನಯ ಪಾದತುಳಿತದಲ್ಲಿ!/ನೂರಾಗ ಬಯಸುವೆನು ನುಗ್ಗಾಗ ಬಯಸುವೆನು/ಸಿಕ್ಕು ನಿನ್ನಯ ಕೊನೆಯ ಕುಣಿತದಲ್ಲಿ (ದೇವೇಂದ್ರಕುಮಾರ ಹಕಾರಿ)

    ಕೊನೆಯದಾಗಿ, 21 ಎನ್ನುವುದು ಭಾರತದಲ್ಲಿ, ಜಗತ್ತಿನ ಅನೇಕ ದೇಶಗಳಲ್ಲಿ ಹಲವು ಕಾನೂನುಬದ್ಧ ಹಕ್ಕು ಕೊಡಿಸುವ ವರ್ಷ. ಹದಿಹರೆಯದ ಹುಡುಗಾಟಿಕೆಯಿಂದ ಹೊರಬಂದು ಜವಾಬ್ದಾರಿ ಅರಿಯುವ, ಪ್ರಬುದ್ಧರಾಗುವ ವರ್ಷ. ಕರೊನಾದಿಂದ ಅಸ್ತವ್ಯಸ್ತವಾಗಿರುವ ಬದುಕು ಹಾಗೂ ಸಮಾಜ ಕಟ್ಟುವುದಕ್ಕೆ ಎಲ್ಲ ರಾಜಕೀಯ, ಸಂಕುಚಿತ ಮನೋಭಾವ ಮೀರಿದ ಸಾಮಾಜಿಕ ಪ್ರಬುದ್ಧತೆ ಅಗತ್ಯವಿದೆ.

    ನನ್ನ ಮನವು ಹಾಯಬೇಕು ದಿಗ್ದಿಗಂತದಾಚೆಗೂ

    ಏರಬೇಕು ಮುಗಿಲಿನಾಚೆ ತಾರೆಯಾಚೆಯಾಚೆಗೂ

    ಇಳಿಯಬೇಕು ಪಾತಾಳದ ಗಹನ ತಿಮಿರದಾಳಕು

    ಇನ್ನು ಇನ್ನು ಅಗಲಕೂ, ಮೇಲಕೂ, ಆಳಕೂ!

    ನನ್ನ ಮನವ ನನಗೆ ಕೊಡು

    ಓ ಸಮಾಜಭೈರವ (ಡಾ. ಎಂ. ಗೋಪಾಲಕೃಷ್ಣ ಅಡಿಗ)

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts