More

    ಕಾಂಗ್ರೆಸ್ ವಿರುದ್ಧ ಕುಮಾರಾಸ್ತ್ರ: 10 ತಿಂಗಳ ಬಳಿಕ ಕುಮಾರ್ ಪ್ರತ್ಯಕ್ಷ

    ಅರವಿಂದ ಅಕ್ಲಾಪುರ ಶಿವಮೊಗ್ಗ
    ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದು ಈಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ರಾಜಕೀಯ ವಲಯದಲ್ಲಿ ನಡೆಯುತ್ತಿದ್ದ ಚರ್ಚೆಗೆ ಪೂರ್ಣ ವಿರಾಮ ಬಿದ್ದಂತಾಗಿದೆ.

    ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಸಭೆಯ ವೇದಿಕೆಗೆ ಕುಮಾರ್ ಆಗಮಿಸುತ್ತಿದ್ದಂತೆಯೇ ಚಪ್ಪಾಳೆ, ಶಿಳ್ಳೆ ಕೇಳಿ ಬಂದವು. ವರ್ಷದ ಬಳಿಕವೂ ಕುಮಾರ್ ಖದರ್ ಕಡಿಮೆಯಾಗಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿತ್ತು. ಮುಖ್ಯವಾಗಿ ಲೋಕಸಭೆ ಚುನಾವಣೆ ಪ್ರಚಾರ ಕಣದಲ್ಲಿ ಬಿಜೆಪಿ ಕೈಗೆ ಕುಮಾರಾಸ್ತ್ರ ಸಿಕ್ಕಿರುವುದು ಆ ಪಕ್ಷದ ಲೆಕ್ಕಾಚಾರವನ್ನು ಸರಿದೂಗಿಸಿದೆ.
    ವಿಧಾನಸಭೆ ಚುನಾವಣೆ ಸೋಲಿನ ಬಳಿಕ ತೀವ್ರ ಬೇಸರಗೊಂಡಿದ್ದ ಕುಮಾರ್, ಕ್ಷೇತ್ರದಲ್ಲಿ ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿರಲಿಲ್ಲ. ಬಿಜೆಪಿ ಜಿಲ್ಲಾ ಕಚೇರಿಯತ್ತಲೂ ಮುಖ ಮಾಡಿರಲಿಲ್ಲ. ಒಂದು ರೀತಿ ರಾಜಕೀಯ ಅಜ್ಞಾತವಾಸದಲ್ಲಿದ್ದರು.
    ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ ಎಂದು ಆಪ್ತರ ಬಳಿ ಕುಮಾರ್ ಅನೇಕ ಬಾರಿ ಹೇಳಿಕೊಂಡಿದ್ದರು. ಹೀಗಾಗಿ ಅವರು ಮತ್ತೆ ಬಿಜೆಪಿಯತ್ತ ಮುಖ ಮಾಡುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗಿತ್ತು. ಅವರನ್ನು ಸಂಪರ್ಕಿಸಿ ಮತ್ತೆ ಬಿಜೆಪಿಯಲ್ಲಿ ಸಕ್ರಿಯಗೊಳಿಸುವ ಪಕ್ಷದ ಮುಖಂಡರ ಪ್ರಯತ್ನಗಳೂ ಫಲ ನೀಡಿರಲಿಲ್ಲ.
    ಹೀಗಾಗಿ ಈ ಬಾರಿ ಕುಮಾರ್ ಬಂಗಾರಪ್ಪ ಹೊರತುಪಡಿಸಿ ಲೋಕಸಭಾ ಚುನಾವಣೆ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರು ಭಾವಿಸಿದ್ದರು. ಇನ್ನೊಂದೆಡೆ ಬಿಜೆಪಿಯಿಂದ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಕುಮಾರ್ ಎಂಬ ವದಂತಿಗಳೂ ಹರಿದಾಡುತ್ತಿದ್ದವು. ಇದೀಗ ಕುಮಾರಾಗಮನ ಬಿಜೆಪಿಯ ಆತಂಕವನ್ನು ದೂರ ಮಾಡಿದೆ.
    ರಾಜಕೀಯ ಪುನರ್ಜನ್ಮ:ರಾಜಕೀಯದಲ್ಲಿ ಸೋತು ಸುಣ್ಣವಾಗಿದ್ದ ಕುಮಾರ್ ಬಂಗಾರಪ್ಪಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ. 2018ರ ವಿಧಾನಸಭೆ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಅವರನ್ನು ಸಾಗರಕ್ಕೆ ಶಿಫ್ಟ್ ಮಾಡಿಸಿ ಕಾಂಗ್ರೆಸ್‌ನಲ್ಲಿದ್ದ ಕುಮಾರ್ ಬಂಗಾರಪ್ಪ ಅವರನ್ನು ಬಿಜೆಪಿಗೆ ಕರೆತಂದು ಸೊರಬ ಟಿಕೆಟ್ ಕೊಡಿಸಿದ್ದು ಯಡಿಯೂರಪ್ಪ. ಅಷ್ಟೇ ಅಲ್ಲದೆ ಕುಮಾರ್ ಪರವಾಗಿ ವ್ಯಾಪಕ ಪ್ರಚಾರ ನಡೆಸಿದ್ದ ಬಿಎಸ್‌ವೈ, ಶಿಕಾರಿಪುರ ಹಾಗೂ ಸೊರಬ ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಬಹಿರಂಗವಾಗಿ ಹೇಳಿದ್ದರು. ಆ ಮೂಲಕ ಕುಮಾರ್ ರಾಜಕೀಯವಾಗಿ ಮತ್ತೆ ತಲೆ ಎತ್ತುವುದು ಸಾಧ್ಯವಾಗಿತ್ತು.
    ತಂಗಿ ವಿರುದ್ಧ ಅಣ್ಣನ ಪ್ರಚಾರ:ಲೋಕಸಭೆ ಚುನಾವಣೆಯಲ್ಲಿ ಕುಮಾರ್ ತಂಗಿ ಗೀತಾ ಕಾಂಗ್ರೆಸ್ ಅಭ್ಯರ್ಥಿ. ಈಗ ತಂಗಿ ವಿರುದ್ಧವೇ ಅಣ್ಣ ಪ್ರಚಾರ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಹಾಗೆ ನೋಡಿದರೆ ಬಂಗಾರಪ್ಪ ಕುಟುಂಬದಲ್ಲಿ ಕುಮಾರ್ ಒಂದು ಕಡೆ, ಇನ್ನುಳಿದವರು ಒಂದು ಕಡೆ ಎಂಬ ವಾತಾವರಣ ಸೃಷ್ಟಿಯಾಗಿ 20 ವರ್ಷಗಳಾಗಿವೆ. ಅದರಲ್ಲೂ ಕಳೆದ 15 ವರ್ಷದಲ್ಲಿ ಮಧು-ಕುಮಾರ್ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡವರಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೀತಾ, 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಧು ವಿರುದ್ಧವಾಗಿ ಕುಮಾರ್ ಪ್ರಚಾರ ಮಾಡಿದ್ದರು. ಈಗ ಮತ್ತೊಮ್ಮೆ ಪ್ರಚಾರ ಕಣ ಸಿದ್ಧವಾಗಿದೆ.
    ರೆಬಲ್ ಕುಮಾರ!:ಬಂಡಾಯಕ್ಕೆ ಮತ್ತೊಂದು ಹೆಸರು ಕುಮಾರ್ ಬಂಗಾರಪ್ಪ. 2004ರಲ್ಲಿ ಬಂಗಾರಪ್ಪ ಬಿಜೆಪಿಗೆ ಬಂದಾಗ ಕುಮಾರ್ ಕೂಡಾ ಅವರೊಂದಿಗೆ ಬಂದರು. ಯಾವಾಗ ಕುಮಾರ್‌ಗೆ ಸೊರಬ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಲು ಬಂಗಾರಪ್ಪ ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದು ಬಹಿರಂಗವಾಯಿತೋ ಕುಮಾರ್ ಕಾಂಗ್ರೆಸ್‌ಗೆ ಮರಳಿದರು. ಮಧುಗೆ ಬಿಜೆಪಿ ಟಿಕೆಟ್ ನೀಡಲಾಯಿತು. ಮೊದಲ ಬಾರಿಗೆ ಅಣ್ಣ-ತಮ್ಮ ರಾಜಕೀಯ ಅಖಾಡದಲ್ಲಿ ಎದುರಾದರು. ಕುಮಾರ್‌ಗೆ ಗೆಲುವಾಯಿತು. ಇಲ್ಲಿಂದ ಮನಸ್ತಾಪ ಹೆಚ್ಚುತ್ತಲೇ ಹೋಯಿತು.
    2008ರಲ್ಲಿ ಮಧು ಬಂಗಾರಪ್ಪ ಸಮಾಜವಾದಿ ಪಕ್ಷದಿಂದ, ಕುಮಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಇವರಿಬ್ಬರ ನಡುವೆ ಬಿಜೆಪಿಯ ಹರತಾಳು ಗೆಲುವು ಸಾಧಿಸಿದರು. 2014ರಲ್ಲಿ ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಕುಮಾರ್ ಬಹಳಷ್ಟು ಪ್ರಯತ್ನ ಮಾಡಿದ್ದರು. ಮಂಜುನಾಥ ಭಂಡಾರಿ ಅಭ್ಯರ್ಥಿ ಎಂದು ಘೋಷಣೆಯಾದಾಗ ಸ್ವಲ್ಪ ಸಮಯ ಚುನಾವಣಾ ಕಣದಿಂದ ದೂರವುಳಿದು ಬಂಡಾಯದ ಬಿಸಿ ಮುಟ್ಟಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts