More

    ಕತ್ತಲ ಹೆದ್ದಾರಿಗಳಲ್ಲಿ ಆರದಿರಲಿ ಬದುಕಿನ ಬೆಳಕು

    ಕತ್ತಲ ಹೆದ್ದಾರಿಗಳಲ್ಲಿ ಆರದಿರಲಿ ಬದುಕಿನ ಬೆಳಕುತಂತ್ರಜ್ಞಾನ ಎಷ್ಟೇ ಮುಂದುವರಿದರೂ, ದೇಶ ಆರ್ಥಿಕವಾಗಿ ಎಷ್ಟೇ ಬಲಗೊಳ್ಳುತ್ತಿದ್ದರೂ ಭಾರತದಲ್ಲಿ ಸರ್ವಋತು ರಸ್ತೆಗಳು ತಿರುಕನ ಕನಸೇ.. ಒಂದು ಮಳೆಗೇ ಗುಂಡಿ ಬೀಳುವ, ಕೆಸರು ಗದ್ದೆಯಾಗುವ, ಕೆರೆಯಾಗುವ, ತೊರೆಯಾಗುವ, ಅಪಾಯಗಳನ್ನು ಆಹ್ವಾನಿಸುವ ಕಳಪೆ ರಸ್ತೆಗಳಲ್ಲೇ ಜೀವ ಕೈಯಲ್ಲಿ ಹಿಡಿದು ಸಾಗಬೇಕು…

    ಡ್ರೈವಿಂಗ್ ಅನ್ನುವುದೊಂದು ಗಣಿತ,
    ಎಲ್ಲಿಂದಲೋ ಹೊರಟವರು, ಇನ್ನೆಲ್ಲಿಗೋ ತಲುಪುವವರೆಗೆ ಮಾರ್ಗಮಧ್ಯದಲ್ಲಿ ಅದೆಷ್ಟು ಲೆಕ್ಕಾಚಾರಗಳು, ಗಣಿತ ಪ್ರಜ್ಞೆಯ ಆಕಸ್ಮಿಕಗಳು, ಅವಾಂತರ, ಅನಾಹುತಗಳು, ಅದೃಷ್ಟಗಳು. ಎಲ್ಲವೂ ಸೆಕೆಂಡ್ ಲೆಕ್ಕಾಚಾರಗಳಷ್ಟೇ.. ದಿಢೀರನೆ ಯಾರೋ ವ್ಯಕ್ತಿ, ಯಾವುದೋ ವಾಹನ, ಬೀದಿ ಹಸು ಅಥವಾ ಗುಂಡಿ ಅಡ್ಡ ಸಿಕ್ಕು ಒಂದು ಸೆಕೆಂಡ್ ತಡವಾಗಿಬಿಟ್ಟರೆ, ಅಷ್ಟರಲ್ಲಿ ಸಿಗ್ನಲ್ ದೀಪದಲ್ಲಿ ಹಸಿರು ಮಾಯವಾಗಿ ಕೆಂಪು ಬಂದುಬಿಟ್ಟಿರುತ್ತದೆ. ಮತ್ತೆ ಒಂದೂವರೆ ನಿಮಿಷ ನಿಂತಲ್ಲೇ ನಿಲ್ಲಬೇಕು. ಅವಸರದ ಜಗತ್ತಿನಲ್ಲಿ, ತರಾತುರಿಯ ಸಂಚಾರದಲ್ಲಿ ಒಂದು ನಿಮಿಷ ಸಿಗ್ನಲ್​ನಲ್ಲಿ ನಿಲ್ಲುವಂತಾದರೂ ಛೇ ಎಂಬ ಹಿಡಿಶಾಪ. ಅಪಘಾತಗಳೂ ಅಷ್ಟೇ; ಒಂದೊಂದು ಸೆಕೆಂಡ್​ಗಳ ವ್ಯತ್ಯಾಸದಿಂದ ಅಪಘಾತ ಸಂಭವಿಸಿರುತ್ತದೆ ಅಥವಾ ತಪ್ಪಿರುತ್ತದೆ. ಆ ಕ್ಷಣ ದಾಟಿಬಿಟ್ಟರೆ ಅದೃಷ್ಟ, ಅದಾಗದೆ ಸಿಲುಕಿಕೊಂಡರೆ ದುರದೃಷ್ಟ.

    ಯಾರ ಸಾವು, ಯಾರ ಬದುಕು, ಯಾರ ಅನ್ನ ಎಲ್ಲೆಲ್ಲಿ ಬರೆದಿಹುದೋ? ಮನೆಯಿಂದ ಹೊರಟ ಮೇಲೆ, ತಿರುಗಿ ಮನೆ ಸೇರುವವರೆಗೂ ನಮ್ಮ ಪ್ರಾಣ ನಮ್ಮ ಕೈಯಲ್ಲಿರುವುದಿಲ್ಲ ಎನ್ನುವುದು ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ನಿಜವೇ. ಏಕೆಂದರೆ, ರಸ್ತೆ ಅಪಘಾತಗಳು, ದುರಂತ ಸಾವುಗಳು ನೂರಕ್ಕೆ ತೊಂಬತ್ತೊಂಬತ್ತು ಬಾರಿ ಸತ್ತವರ ಅಥವ ಗಾಯಾಳುಗಳ ತಪ್ಪಿನಿಂದ ಸಂಭವಿಸಿರುವುದಿಲ್ಲ. ಯಾರದೋ ತಪ್ಪಿಗೆ ಇನ್ನಾರಿಗೋ ಶಿಕ್ಷೆಯೇ ಹೆಚ್ಚಿನ ಸಂದರ್ಭಗಳಲ್ಲಿ. ಯಾವ ದೋಷವೋ, ಗ್ರಹಚಾರವೋ, ಇರಬಾರದ ಜಾಗದಲ್ಲಿ, ಇರಬಾರದ ಹೊತ್ತಿನಲ್ಲಿ ಅವರು ಸಿಲುಕಿಕೊಂಡಿರುತ್ತಾರೆ. ಹೆದ್ದಾರಿಗಳಲ್ಲಿ ಪ್ರತಿನಿತ್ಯ ಇಂಥ ಅದೆಷ್ಟು ದುರ್ಘಟನೆಗಳು ಘಟಿಸುವುದಿಲ್ಲ. ಯಾವುದೋ ಲಾರಿ ನಿಯಂತ್ರಣ ತಪ್ಪಿ ಪಕ್ಕದ ರಸ್ತೆಗೆ ಜರುಗಿ ಎದುರಿನಿಂದ ಬರುವ ವಾಹನದ ಮೇಲೆ ಪಲ್ಟಿ ಹೊಡೆಯುತ್ತದೆ.. ಹೊರಲಾಗದ ಹೊರೆಹೊತ್ತ ಸರಕುವಾಹನ ತಿರುವಿನಲ್ಲಿ ಆಯ ತಪ್ಪಿ ಪಕ್ಕದಲ್ಲಿ ಹೋಗುವ ಬೈಕ್​ಸವಾರನ ಮೇಲೆ ಮಗುಚಿಕೊಳ್ಳುತ್ತದೆ… ಸರಿಯಾಗಿ ನಿರ್ವಹಣೆ ಇಲ್ಲದ ಸಾರ್ವಜನಿಕ ಸಾರಿಗೆ ವಾಹನದ ಟೈರ್ ಸ್ಪೋಟಗೊಂಡು ಪಕ್ಕದಲ್ಲಿ ಬರುತ್ತಿರುವ ವಾಹನ ಸವಾರರನ್ನು ಬಲಿತೆಗೆದುಕೊಳ್ಳುತ್ತದೆ. ಎಕ್ಸ್​ಪ್ರೆಸ್ ವೇನಲ್ಲಿ ಯಾರದೋ ಸೆಲ್ಪೀ ಹುಚ್ಚಿಗೆ ಸಂಬಂಧವೇ ಇಲ್ಲದ ವಾಹನಗಳಲ್ಲಿದ್ದವರು ಮೇಲ್ಸೇತುವೆಯಿಂದ ಕೆಳಕ್ಕೆಬಿದ್ದು ಸಾಯುತ್ತಾರೆ..

    ರಸ್ತೆ ಅಪಘಾತಗಳೆಂಬುದೇ ಕ್ರೂರ; ಭೀಕರ; ಬೀಭತ್ಸ. ಊಹಿಸಿಕೊಳ್ಳಲೂ ಆಗದಂಥ ಘನಘೊರ ರೀತಿಯ ಸಾವುಗಳನ್ನು ರಸ್ತೆಯಲ್ಲಿ ಕಾಣುವಾಗ, ಅಯ್ಯೋ ವಿಧಿಯೇ, ಕರುಣೆಯೇ ಇಲ್ಲವೇ ಎಂಬ ಶೋಕ.. ಕ್ಷಣಹೊತ್ತು ಮೊದಲು ಜತೆಯಲ್ಲಿದ್ದ ಸಹೋದ್ಯೋಗಿ, ಕರೆ ಮಾಡಿ ಮಾತನಾಡಿದ್ದ ಸ್ನೇಹಿತ, ಎದುರು ಸಿಕ್ಕಿ ನಗೆಯಾಡಿದ್ದ ಪರಿಚಿತ ಮರುಕ್ಷಣದಲ್ಲಿ ಟ್ಯಾಂಕರ್-ಟಿಪ್ಪರ್ ಲಾರಿಗಳ ಅಡಿ ಸಿಕ್ಕಿ ಜೀವ ಬಿಟ್ಟರೆ ಅಂಥ ಸಾವನ್ನು, ನೋವನ್ನು, ಆಘಾತವನ್ನು ಅರಗಿಸಿಕೊಳ್ಳುವ ಶಕ್ತಿಯಾದರೂ ಮನುಷ್ಯರಿಗಿದೆಯೇ?

    ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ದೇಶ ಆರ್ಥಿಕವಾಗಿ ಎಷ್ಟೇ ಬಲಗೊಳ್ಳುತ್ತಿದ್ದರೂ ಭಾರತದಲ್ಲಿ ಸರ್ವಋತು ರಸ್ತೆಗಳು ತಿರುಕನ ಕನಸೇ.. ಒಂದು ಮಳೆಗೇ ಗುಂಡಿ ಬೀಳುವ, ಕೆಸರು ಗದ್ದೆಯಾಗುವ, ಕೆರೆಯಾಗುವ, ತೊರೆಯಾಗುವ, ಅಪಾಯಗಳನ್ನು ಆಹ್ವಾನಿಸುವ ಕಳಪೆ ರಸ್ತೆಗಳಲ್ಲೇ ಜೀವ ಕೈಯಲ್ಲಿ ಹಿಡಿದು ಸಾಗಬೇಕು… ದಿಢೀರನೆ ಗುಂಡಿ ಎಂದು ದ್ವಿಚಕ್ರಿ ಬ್ರೇಕ್ ಹಾಕಿದರೆ, ಹಿಂದೆ ಯಮವೇಗದಲ್ಲಿ ಬರುತ್ತಿರುವ ವಾಹನಗಳವರು ಡಿಕ್ಕಿ ಹೊಡೆಯುವುದು ಗ್ಯಾರಂಟಿ.. ಬೆಂಗಳೂರಿನಲ್ಲೇ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅದೆಷ್ಟು ವಿದ್ಯಾರ್ಥಿನಿಯರು, ಆಫೀಸಿಗೆ ಹೊರಟ ಮಹಿಳೆಯರು ಟಿಪ್ಪರ್ ಲಾರಿಯಡಿ ಸಿಲುಕಿ ಸತ್ತಿಲ್ಲ? ಕಿರಿದಾದ ರಸ್ತೆಗಳಲ್ಲಿ, ವಿಪರೀತ ಟ್ರಾಫಿಕ್​ನಲ್ಲಿ, ಶರವೇಗದಲ್ಲಿ, ಎಚ್ಚರ ಮರೆತು ಸಾಗುವ ವಾಹನಗಳಿಂದ ತಪ್ಪಿಸಿಕೊಂಡು, ಗುಂಡಿಯಲ್ಲಿ ಬೀಳದೆ, ದಿಢೀರನೆ ಪ್ರತ್ಯಕ್ಷವಾಗುವ ರಸ್ತೆ ಉಬ್ಬುಗಳಿಂದ ಮುಗ್ಗರಿಸದೆ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದೂ ಬ್ರಹ್ಮವಿದ್ಯೆಯೇ ಸರಿ.

    ಅಪಘಾತಗಳು ನಡೆದಾಗ ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬ ಸಂಕಟ ಒಂದೆಡೆಯಾದರೆ, ವಿಧಿಯ ಅಲಿಖಿತ ಗಣಿತ ಹೇಗೆಲ್ಲ ಸಿಲುಕಿಸುತ್ತದೆ ಎನ್ನುವುದೂ ಊಹಿಸಲು ಸಾಧ್ಯವಿಲ್ಲ… ಎಲ್ಲ ವಾರ್ತಾವಾಹಿನಿಗಳಲ್ಲಿ ಸಂಜೆ ಸಮಯ ಪ್ರಸಾರ ಮಾಡುವ ವೈರಲ್ ವೀಡಿಯೋ ಗಳಂತೆ ಅಪಘಾತಕ್ಕೆ ಸಿಲುಕುವ ಅಥವಾ ಪವಾಡಸದೃಶವಾಗಿ ಪಾರಾಗುವ ನಡುವಿನ ಅಂತರ ಕೂದಲ ಎಳೆಯಷ್ಟೇ ಮಾತ್ರ.. ಮಳೆಯಲ್ಲಿ ಸಾಗುತ್ತಿರುವಾಗ ನಿರೀಕ್ಷೆಯೇ ಮಾಡಲು ಸಾಧ್ಯವಾಗದಂತೆ ಮರ ವಾಹನದ ಮೇಲೆ ಬೀಳುತ್ತದೆ.. ಕೆಲವೊಮ್ಮೆ ಬೃಹತ್ ಮರವೇ ಬಿದ್ದರೂ ಈತ ಕೂದಲು ಕೊಂಕದಂತೆ ಬಚಾವಾಗಿರುತ್ತಾರೆ.. ಕೆಲವೊಮ್ಮೆ ವಾಹನ ಚಲಿಸಿದ ಒಂದು ಸೆಕೆಂಡ್ ಬಳಿಕ ಸೇತುವೆಯೇ ಕುಸಿದಿರುತ್ತದೆ.. ಸಿಗ್ನಲ್ ಜಂಕ್ಷನ್​ನಲ್ಲಿ ಹಸಿರು ಬೆಳಗಿತೆಂದು ಆಕ್ಸಿಲರೇಟರ್ ತುಳಿಯುವ ಹೊತ್ತಿಗೆ ಎದುರು ದಿಕ್ಕಿನಿಂದ ಸಿಗ್ನಲ್ ಜಂಪ್ ಮಾಡಿ ನುಗ್ಗುವ ಸವಾರ ಗುದ್ದಿರುತ್ತಾನೆ… ಹಳದಿ ಕಂಡು ಕೆಂಪು ದೀಪ ಬಂತೆಂದು ಎಚ್ಚರಿಕೆಯಿಂದ ವಾಹನ ನಿಲ್ಲಿಸಿದರೆ, ಹಿಂದಿನಿಂದ ವೇಗವಾಗಿ ಬರುವ ವಾಹನ ಸವಾರ ಜೀವ ತೆಗೆದಿರುತ್ತಾನೆ.. ಅಪಘಾತಗಳಿಗೆ ಒಂದು ಪ್ಯಾಟರ್ನ್ ಎಂಬುದಿಲ್ಲ.. ಕೆಲವು ಜಾಗದ ದೋಷದಿಂದ ಪದೇಪದೆ ಅಪಘಾತ ಸಂಭವಿಸಬಹುದು.. ಆದರೆ, ಯಾವ ಅಪಘಾತವೂ ಸ್ವರೂಪದಲ್ಲಿ, ಪರಿಣಾಮದಲ್ಲಿ ಇನ್ನೊಂದು ಆಕ್ಸಿಡೆಂಟ್​ನ ಪುನರಾವರ್ತನೆ ಆಗಿರುವುದಿಲ್ಲ.. ಕಾರ್ಯ, ಕಾರಣ, ಪರಿಣಾಮ, ಸಂದರ್ಭ ಎಲ್ಲವೂ ಬೇರೆಬೇರೆ ಆಗಿರುತ್ತದೆ…

    ಒಬ್ಬಾತ ಸತ್ತಾಗ ಆತನ ಕುಟುಂಬ ಬೀದಿಗೆ ಬೀಳುವುದೆಂಬ ಮಾತು ಭಾರತೀಯ ಸಂದರ್ಭದಲ್ಲಿ ಅಕ್ಷರಶಃ ಸತ್ಯ.. ಅದರಲ್ಲೂ ರಸ್ತೆ ಅಪಘಾತಗಳು ಅದೆಷ್ಟು ಲಕ್ಷ ಕುಟುಂಬಗಳನ್ನು ಬೀದಿಪಾಲು ಮಾಡಿಲ್ಲ? ಚಾರ್ಲಿ ಸಿನಿಮಾದಲ್ಲಿ ಪುಟ್ಟ ಹುಡುಗನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಮಗಳೊಂದಿಗೆ ಪಕ್ಕದೂರಿಗೆ ತೆರಳಿದ್ದ ದಂಪತಿ ಮರಳುವುದೇ ಇಲ್ಲ. ರಸ್ತೆ ಅಪಘಾತ ಆ ಕುಟುಂಬವನ್ನೇ ಪ್ರಪಾತಕ್ಕೆ ದೂಡಿಬಿಡುತ್ತದೆ. ಇಂಥ ಎಷ್ಟು ದುರಂತಗಳು ನಿಜ ಬದುಕಿನಲ್ಲೂ ಆಗಿಲ್ಲ? ಬೇಗ ಬರುತ್ತೇನೆ, ಸಂಜೆ ಸಿನಿಮಾಕ್ಕೆ ಹೋಗೋಣ, ಸಿದ್ಧವಾಗಿರು ಎಂದು ಹೇಳಿಹೋದ ಗಂಡ ಮರಳುವುದೇ ಇಲ್ಲ… ಅಮ್ಮ ಆಫೀಸಿನಿಂದ ಬಂದ ಕೂಡಲೇ ಶಾಪಿಂಗ್ ಹೋಗಬೇಕು ಎಂದು ಕಾಯುವ ಅದೆಷ್ಟೋ ಮಕ್ಕಳ ಆಸೆ ಈಡೇರುವುದೇ ಇಲ್ಲ.. ಡಾಕ್ಟರ್ ಇಂಜಿನಿಯರ್, ಇನ್ನೂ ಏನೇನೋ ಆಗಬೇಕೆಂಬ ಕನಸು ಕಟ್ಟಿಕೊಂಡ ಅದೆಷ್ಟು ಮುಗ್ಧ ಜೀವಗಳು ರಸ್ತೆಯಲ್ಲಿ ಶವವಾಗಿಲ್ಲ? ಜಾಲಿ ರೈಡ್​ಗೆ ಹೊರಟವರು, ಆಸ್ಪತ್ರೆಗೆ, ಇಂಟರ್​ವ್ಯೂಗೆ, ಮತ್ತೇನೋ ತುರ್ತು ಕಾರ್ಯಕ್ಕೆ ತರಾತುರಿಯಲ್ಲಿ ಹೊರಟವರು, ಇನ್ನಾವುದೋ ಅವಸರ ಇದ್ದವರು ಅದೇ ಅವಸರದಲ್ಲೇ ಬಾರದ ಲೋಕಕ್ಕೆ ಹೊರಟೇ ಬಿಡುತ್ತಾರೆ…

    ರಸ್ತೆಯಲ್ಲಿ ಹೋಗುವಾಗ ಸಾವಿರ ಜನ ಅಕ್ಕ ಪಕ್ಕ ಹಿಂದೆ ಮುಂದೆ ಸರಿದು ಹೋಗುತ್ತಿರುತ್ತಾರೆ. ಅವರ್ಯಾರೂ ನಮ್ಮ ಪರಿಚಿತರಲ್ಲ. ಆದರೆ, ಎಲ್ಲರೂ ಮನುಷ್ಯರು. ಯಾವ ಜೀವವೂ ಅನಗತ್ಯವಾಗಿ, ತನ್ನ ತಪ್ಪಿಲ್ಲದೆ ಸಾಯಬಾರದು… ರಸ್ತೆಯಲ್ಲಿ ಸಂಚರಿಸುವಾಗ ನಮ್ಮ ಆತುರದಿಂದ, ಅಸಹನೆಯಿಂದ, ಆವೇಶದಿಂದ, ಅತಿ ವೇಗದಿಂದ ಅಪಘಾತಕ್ಕೆ ಕಾರಣರಾಗುವುದು ಬೇಡ ಎಂಬ ಸಾಮಾನ್ಯ ಪ್ರಜ್ಞೆ ಎಲ್ಲರಲ್ಲೂ ಇರಬೇಕು… ನಾವೇ ನೇರವಾಗಿ ಅಪಘಾತ ಮಾಡದೇ ಇರಬಹುದು, ಆದರೆ, ನಮ್ಮ ಯಾವುದೋ ಸಣ್ಣ ತಪ್ಪು, ಅಯಾಚಿತ, ಅನುದ್ದೇಶಿತ ವರ್ತನೆ, ಕ್ರಿಯೆಯಿಂದ ಬೇರಾವುದೋ ವಾಹನಗಳು ಡಿಕ್ಕಿಯಾಗುವಂತಾದರೂ ನಾವು ನೈತಿಕ ಅಪರಾಧಿಯೇ..

    ಭಾರತೀಯ ಸಂದರ್ಭದಲ್ಲಿ ಹೇಳುವಾಗ ರಸ್ತೆ ಸಂಚಾರದಲ್ಲಿ ಶಿಸ್ತೆನ್ನುವುದು ಇಲ್ಲವೇ ಇಲ್ಲ. ಸಂಚಾರ ದಟ್ಟಣೆಗಳಲ್ಲಿ ಕಾಯುವ ಸಹನೆಯಿಲ್ಲ. ಲೇನ್ ಅನುಸರಿಸುವ ಶಿಸ್ತಿಲ್ಲ. ಡ್ರೖೆವಿಂಗ್ ಕಲಿಯುವ ಸಂದರ್ಭದಲ್ಲಿ ಹೇಳಿಕೊಡುವ ಯಾವ ಸುರಕ್ಷತಾ ನಿಯಮಗಳನ್ನೂ ಚಾಲನೆಯ ಸಮಯ ಪಾಲಿಸುವುದಿಲ್ಲ. ದಿಢೀರನೆ ನುಗ್ಗುವುದು, ಸರಕ್ಕನೆ ತಿರುಗುವುದು, ಹಿಂದೆ ವಾಹನ ಬರುತ್ತಿರುವುದನ್ನು ಗಮನಿಸದೆ ಏಕಾಏಕಿ ಕಾರಿನ ಬಾಗಿಲು ತೆರೆಯುವುದು, ಹಿಂದೆ ಬರುತ್ತಿರುವ ವಾಹನಗಳಿಗೆ ಸೂಚನೆ ನೀಡದೆ ಇದ್ದಕ್ಕಿದ್ದಂತೆ ಎಡಬಲಕ್ಕೆ ತಿರುಗುವುದು, ಅವಶ್ಯಕತೆ ಇಲ್ಲದಿದ್ದರೂ ಬ್ರೇಕ್ ಹಾಕುವುದು, ಶಾಲಾ ವಾಹನಗಳಿಂದ ಮಕ್ಕಳನ್ನು ಇಳಿಸಿದ ಬಳಿಕ ಅವರು ರಸ್ತೆ ದಾಟುವವರೆಗೂ ಕಾಯದೇ, ಮಕ್ಕಳು ವಾಹನದ ಹಿಂದೆಯೋ, ಮುಂದೆಯೋ ಇರುವುದನ್ನು ಗಮನಿಸದೆ, ಅವರ ಮೇಲೆ ವಾಹನ ಹರಿಸುವುದು, ನಿಲ್ದಾಣಗಳಲ್ಲಿ ಜನ ಹತ್ತುವವರೆಗೆ, ಇಳಿಯುವವರೆಗೆ ತಾಳ್ಮೆ ಇಲ್ಲದವರಂತೆ ಬಸ್ ಚಲಾಯಿಸಿ ಆಯತಪ್ಪಿ ಕೆಳಬಿದ್ದವರ ಮೈಮೇಲೆ ಚಕ್ರ ಹರಿದು ಜೀವಹರಣವಾಗುವುದು, ಅನಗತ್ಯವಾಗಿ ಹಾರ್ನ್ ಮಾಡಿ ಕಿರಿಕಿರಿ ಮಾಡುವುದು, ಓವರ್​ಟೇಕ್ ಮಾಡುವುದಕ್ಕೆ ದಾರಿ ಬಿಡುವುದು ಕ್ಷಣ ತಡವಾದರೂ, ಜನ್ಮಾಂತರದ ಶತ್ರುಗಳಂತೆ ಕೆಕ್ಕರಿಸಿ ನೋಡುವುದು, ಅವಾಚ್ಯ ಬೈಗುಳ ಪ್ರಯೋಗಿಸುವುದು, ಫುಟ್​ಪಾತ್ ಮೇಲೆ ವಾಹನ ಚಲಾಯಿಸುವುದು, ಹೆಣ್ಣು ಮಕ್ಕಳು ವಾಹನ ಓಡಿಸುತ್ತಿರುವಾಗ ಉದ್ದೇಶಪೂರ್ವಕವಾಗಿ ಹತ್ತಿರ ಹೋಗಿ ಚಮಕ್ ಕೊಡುವುದು, ಮುಖ್ಯರಸ್ತೆಯಲ್ಲಿ ಬರುತ್ತಿರುವ ವಾಹನಗಳನ್ನು ಲೆಕ್ಕಿಸದೆ ಏಕಾಏಕಿ ಕೂಡುರಸ್ತೆಗಳಿಂದ ವಾಹನಗಳನ್ನು ನುಗ್ಗಿಸುವುದು… ಹೀಗೆ ಒಂದೇ ಎರಡೇ. ಇಂಥ ಎಲ್ಲ ಸಂದರ್ಭಗಳಲ್ಲಿ ಕೆಲವರ ಅವಸರ, ಅವಾಂತರ, ಅಚಾತುರ್ಯದಿಂದ ನಿಯಮ ಪಾಲಿಸಿಕೊಂಡು ಹೋಗುತ್ತಿರುವವರೂ ತೊಂದರೆಗೆ ಸಿಲುಕುವುದು ಅನೇಕ ಬಾರಿ..

    ಇತ್ತೀಚಿನ ಎನ್​ಸಿಆರ್​ಬಿ ವರದಿ ಪ್ರಕಾರ 2021ರಲ್ಲಿ ಭಾರತದ ರಸ್ತೆಗಳಲ್ಲಿ ಒಂದು ಲಕ್ಷ 55 ಸಾವಿರ ಜನ ಅಪಘಾತದಿಂದ ಮೃತಪಟ್ಟಿದ್ದಾರೆ. ಈ ರೀತಿ ಮೃತಪಟ್ಟವರಲ್ಲಿ 44.5 ಪ್ರತಿಶತ ದ್ವಿಚಕ್ರವಾಹನ ಸವಾರರು. ಈ ಒಂದೂವರೆ ಲಕ್ಷದಲ್ಲಿ 87 ಸಾವಿರ ಜನರ ಸಾವಿಗೆ ಅತಿಯಾದ ವೇಗ ಕಾರಣವಾದರೆ, ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ 44 ಸಾವಿರ ಅಪಮೃತ್ಯು ಸಂಭವಿಸಿದೆಯಂತೆ. ಒಟ್ಟಾರೆ 4.3 ಲಕ್ಷ ರಸ್ತೆ ಅಪಘಾತಗಳು ಕಳೆದೊಂದು ವರ್ಷದಲ್ಲಿ ಸಂಭವಿಸಿದ್ದು, 3.73 ಲಕ್ಷ ಜನ ಗಾಯಾಳುಗಳಾಗಿದ್ದಾರೆ.

    ಸತ್ತವರನ್ನು ಬದುಕಿಸುವ ಶಕ್ತಿ ಮನುಷ್ಯನಿಗಿಲ್ಲವೆಂದ ಮೇಲೆ ಸಾಯಿಸುವ ಅಧಿಕಾರವೂ ಇಲ್ಲ. ರಸ್ತೆ ಅಪಘಾತಗಳು ಆಕಸ್ಮಿಕವೇ ಆದರೂ, ಚಾಲಕರಿಗೆ ವಾಹನದಲ್ಲಿ ಕುಳಿತವರ ಜೀವ ತನ್ನ ಕೈಯಲ್ಲಿದೆ ಎಂಬ ಪ್ರಜ್ಞೆಯಂತೂ ಇರಬೇಕು. ಹುಟ್ಟಿದವನು ಸಾಯಲೇಬೇಕು, ಜಾತಸ್ಯ ಮರಣಂ ಧ್ರುವಂ, ನಿಜ. ಇಲ್ಲಿ ಯಾರೂ ಚಿರಂಜೀವಿಗಳಾಗಿ ಹುಟ್ಟಿಲ್ಲ. ಆದರೆ, ಆ ನಿಶ್ಚಿತ ಸಾವು ಬರುವಾಗ ಬರಲಿ, ಅಕಾಲಿಕವಾಗಿ, ಅಪಮೃತ್ಯುವಾಗಿ ರಸ್ತೆಯಲ್ಲಿ ಎದುರು ಸಿಕ್ಕುವುದು ಬೇಡ. ಪ್ರತಿಯೊಬ್ಬರೂ ಅವರವರ ಎಚ್ಚರಿಕೆಯಿಂದ ವಾಹನ ಚಲಾಯಿಸಿದರೆ, ನೂರಕ್ಕೆ ತೊಂಬತ್ತು ಅಪಘಾತಗಳು ಕಡಿಮೆಯಾಗುತ್ತವೆ. ಸಾವೆನ್ನುವುದು ಘೋರ. ಅದರಲ್ಲೂ ಅಪಘಾತದ ದುರ್ಮರಣಗಳು ಕ್ರೂರ. ಅಂಥ ದುರ್ವಿಧಿ ಶತ್ರುಗಳಿಗೂ ಬೇಡ. ಏನಂತೀರಿ..

    ತನುವೆಂಬ ಮಂಟಪದೊಳಗೆ
    ಅನುದಿನವೂ
    ಕ್ಷಣಕ್ಷಣವೂ ನೆಲೆಸಿರುವ
    ಮುಖ್ಯಪ್ರಾಣ
    ಅವನಿದ್ದೊಡೆ ಜೀವ
    ತೊರೆದರೆ ಶವ!

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts