More

    ಸವ್ಯಸಾಚಿ ಅಂಕಣ| ಕರೊನಾ ಕಾಲದ ಕ್ರಿಕೆಟ್ ಕದನ ಯುವಕರ ಪ್ರವರ್ಧಮಾನ

    ಸವ್ಯಸಾಚಿ ಅಂಕಣ| ಕರೊನಾ ಕಾಲದ ಕ್ರಿಕೆಟ್ ಕದನ ಯುವಕರ ಪ್ರವರ್ಧಮಾನಐಪಿಎಲ್ ಬ್ಯಾಟ್ಸ್​ಮನ್​ಗಳ ರಸದೌತಣವಾಗಿದ್ದರೂ ಬೌಲರ್​ಗಳು ಛಲಬಿಡದೆ ಸಾಹಸ ಮೆರೆಯುತ್ತಾರೆ. ಅದರಲ್ಲೂ ಸ್ಪಿನ್ನರ್​ಗಳ ಸಾಹಸವನ್ನು ಮೆಚ್ಚಲೇಬೇಕು. ಕೋಲ್ಕತ ನೈಟ್​ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಅಂಥ ಓರ್ವ ಸಪ್ರೈಸ್ ಪ್ಯಾಕೇಜ್. 26 ವರ್ಷದ ಈ ತರುಣ ಐಪಿಎಲ್ ಯಶಸ್ಸಿನ ಬೆನ್ನೇರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡದಲ್ಲೂ ಸ್ಥಾನ ಪಡೆದಿದ್ದರು. ಗಾಯ ಅಡ್ಡ ಬಂದಿದ್ದರಿಂದ ನಿರಾಸೆ ಪಡಬೇಕಾಯಿತು.

    ಕರೊನಾ ಜತೆಯಲ್ಲೇ ಜೀವನ ಎನ್ನುವುದು ಕ್ರಿಕೆಟ್ ಪಾಲಿಗಂತೂ ಸದ್ಯದ ಮಟ್ಟಿಗೆ ನಿಜವಾಗಿದೆ. ಈ ಮಹಾಮಾರಿ ಜೀವಜಗತ್ತಿನಲ್ಲಿ ಕಾಣಿಸಿಕೊಂಡು ವರ್ಷಾಚರಣೆ ಮುಗಿದಿದ್ದರೂ, ನಿರ್ಗಮನದ ಸ್ಪಷ್ಟ ಸೂಚನೆಗಳು ಸಿಗುತ್ತಿಲ್ಲ. ಅದರ ನಡುವೆಯೇ ಕ್ರಿಕೆಟ್ ಚಟುವಟಿಕೆಗಳು ಒಂದರ ಮೇಲೊಂದು ಅದರ ಪಾಡಿಗೆ ನಡೆಯುತ್ತಲೇ ಇವೆ.

    ಮೊನ್ನೆ ಅರಬ್ ನಾಡಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಗಿಯಿತು. ಎರಡು ತಿಂಗಳ ಈ ಸುದೀರ್ಘ ಟೂರ್ನಿಯಲ್ಲಿ ವೈರಸ್ ಅಡೆತಡೆಗಳು ಎಲ್ಲೂ ಕಾಡಲಿಲ್ಲ ಎನ್ನುವುದು ಪ್ರಶಂಸಾರ್ಹ. ಅದರ ನಡುವೆ ಪಾಕಿಸ್ತಾನದಲ್ಲೂ ಒಂದು ಪ್ರೀಮಿಯರ್ ಲೀಗ್ ನಡೆಯಿತು. ವಿವಿಧ ದೇಶಗಳು ದ್ವಿಪಕ್ಷೀಯ ಸರಣಿಗಳನ್ನೂ ಶುರು ಮಾಡುತ್ತಿವೆ. ಟೀಮ್ ಇಂಡಿಯಾ ಕೂಡ ಟಿ20, ಏಕದಿನ, ಟೆಸ್ಟ್ ಸರಣಿಗಳನ್ನೊಳಗೊಂಡ ಸುದೀರ್ಘ ಸರಣಿ ಆಡಲು ಆಸ್ಟ್ರೇಲಿಯಾ ನೆಲದಲ್ಲಿ ಬೀಡುಬಿಟ್ಟಿದೆ. ಇನ್ನೇನು 27ಕ್ಕೆ ಮೊದಲ ಏಕದಿನ ಪಂದ್ಯವೂ ಆರಂಭ. ಆರೆಂಟು ತಿಂಗಳಿಂದ ಲಾಕ್​ಡೌನ್ ಕಾರಣಕ್ಕೆ ಮನೆಯೊಳಗಿದ್ದ ಜನರನ್ನು ಇದೀಗ ಕ್ರಿಕೆಟ್ ಮನೆಯಿಂದ ಆಚೆ ಹೋಗದೆ ಟಿವಿ ಎದುರು ಕೂರುವಂತೆ ಮಾಡುತ್ತಿದೆ.

    ಟೀಮ್ ಇಂಡಿಯಾ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸಗಳೆಂದರೆ ಯಾವಾಗಲೂ ಮಹತ್ವವೇ. ಕಾರಣ ಅಲ್ಲಿ ಸರಣಿ ಗೆಲ್ಲುವುದು ಮಹತ್ಸಾಧನೆ ಎಂಬ ಪರಿಸ್ಥಿತಿ ಈಗಲೂ ಇರುವುದು. ಅಲ್ಲಿನ ವಾತಾವರಣ, ದುರ್ಗಮ ಪಿಚ್​ಗಳು ಹಾಗೂ ಬಲಾಢ್ಯ ಆಸೀಸ್ ತಂಡಗಳ ವಿರುದ್ಧ ಗೆಲ್ಲುವುದೆಂದರೆ, ಸಿಂಹದ ಗುಹೆಯಲ್ಲಿ ಗೆಲ್ಲುವ ಸಾಹಸವೇ ಸರಿ. ಆದರೂ, ಈ ಬಾರಿ ಭಾರತ ತಂಡದ ಪಾಲಿಗೆ ಒಂದು ಅನುಕೂಲವೆಂದರೆ, ಎಲ್ಲ ಆಟಗಾರರು ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಆತ್ಮವಿಶ್ವಾಸದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಲು ತುದಿಗಾಲಲ್ಲಿ ನಿಂತಿರುವುದು. ಕೆಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಮಯಾಂಕ್ ಅಗರ್​ವಾಲ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹೀಗೆ ತಂಡದ ಬಹುತೇಕ ಸದಸ್ಯರು ಆಸೀಸ್ ನಾಡಿನಲ್ಲಿ ಹೊಸ ಸಾಧನೆ ಬರೆಯುವ ತವಕದಲ್ಲಿದ್ದಾರೆ.

    ಆಸ್ಟ್ರೇಲಿಯಾ ಪ್ರವಾಸಕ್ಕೆ ಪೂರ್ವಭಾವಿ ತಾಲೀಮಿನಂತೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹಲವು ಯುವ ಪ್ರತಿಭೆಗಳ ಸಾಮರ್ಥ್ಯ ಪ್ರದರ್ಶನಕ್ಕೂ ಅವಕಾಶ ಒದಗಿಸಿತು. ವಿಶ್ವದ ಶ್ರೇಷ್ಠ ಪಂಕ್ತಿಯ ಬ್ಯಾಟ್ಸ್​ಮನ್​ಗಳು ಹಾಗೂ ಬೌಲರ್​ಗಳ ವಿರುದ್ಧ ಭಾರತೀಯ ಯುವಕರ ಚೇತೋಹಾರಿ ಪ್ರದರ್ಶನ ಭವಿಷ್ಯದ ದೃಷ್ಟಿಯಿಂದ ಭರವಸೆ ಮೂಡಿಸಿತು. ಆಸೀಸ್ ಪ್ರವಾಸದ ಏಳುಬೀಳುಗಳಲ್ಲಿ ತಲ್ಲೀನರಾಗುವ ಮುನ್ನ ಐಪಿಎಲ್​ನ ವೀರಪ್ರತಿಭೆಗಳ ಸಾಹಸದ ಬಗ್ಗೆ ಮೆಲುಕು ಹಾಕಲು ಇದೊಂದು ಕೊನೆಯ ಅವಕಾಶ.

    ಐಪಿಎಲ್ ಬ್ಯಾಟ್ಸ್​ಮನ್​ಗಳ ರಸದೌತಣವಾಗಿದ್ದರೂ ಬೌಲರ್​ಗಳು ಛಲಬಿಡದೆ ಸಾಹಸ ಮೆರೆಯುತ್ತಾರೆ. ಅದರಲ್ಲೂ ಸ್ಪಿನ್ನರ್​ಗಳ ಸಾಹಸವನ್ನು ಮೆಚ್ಚಲೇಬೇಕು. ಕೋಲ್ಕತ ನೈಟ್​ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಅಂಥ ಓರ್ವ ಸಪ್ರೈಸ್ ಪ್ಯಾಕೇಜ್. 26 ವರ್ಷದ ಈ ತರುಣ ಐಪಿಎಲ್ ಯಶಸ್ಸಿನ ಬೆನ್ನೇರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡದಲ್ಲೂ ಸ್ಥಾನ ಪಡೆದಿದ್ದರು. ಗಾಯ ಅಡ್ಡ ಬಂದಿದ್ದರಿಂದ ನಿರಾಸೆ ಪಡಬೇಕಾಯಿತು.

    ವರುಣ್ ಬೌಲಿಂಗ್​ನಂತೆ ಅವರ ಹಿನ್ನೆಲೆ ಕೂಡ ರೋಚಕ. ಜೂನಿಯರ್ ಕ್ರಿಕೆಟ್ ದಿನಗಳಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್​ಮನ್ ಆಗಿದ್ದವರು. ಆದರೆ, 21ನೇ ವಯಸ್ಸಿನಲ್ಲಿ ಇಂಜಿನಿಯರಿಂಗ್ ಸೇರಿದರು. ಐದು ವರ್ಷ ಕೋರ್ಸ್ ಮುಗಿಸಿ ಕೆಲಸಕ್ಕೂ ಸೇರಿದರು. ಅಷ್ಟಾದರೂ ಕ್ರಿಕೆಟ್ ಸೆಳೆತ ಬಿಡಲಾಗದೆ ವೇಗದ ಬೌಲರ್ ಆಗಿ ಮರಳಿದರು. ಆದರೆ, ಮಂಡಿ ಗಾಯದಿಂದಾಗಿ ಸ್ಪಿನ್ನರ್ ಆಗಿ ಬದಲಾದರು. ಇಷ್ಟೆಲ್ಲ ಏಗಾಟಗಳ ನಡುವೆ ಒಂದು ಸಿನಿಮಾದಲ್ಲೂ ನಟಿಸಿದರು. ಕರ್ನಾಟಕದ ಬೀದರ್​ನಲ್ಲಿ ಜನಿಸಿದ ಕಾರಣಕ್ಕೆ ಕನ್ನಡಿಗ ಎಂದು ಹೇಳಿಕೊಳ್ಳಬಹುದಾದ ಈ ತರುಣ ತಮಿಳುನಾಡು ಪ್ರೀಮಿಯರ್​ಲೀಗ್ ಮೂಲಕ ಐಪಿಎಲ್ ಪ್ರವೇಶ ಪಡೆದವರು. ಐಪಿಎಲ್ ಪೂರ್ವಾರ್ಧದಲ್ಲಿ ಕೋಲ್ಕತ ನೈಟ್​ರೈಡರ್ಸ್ ನಾಯಕರಾಗಿದ್ದ ದಿನೇಶ್ ಕಾರ್ತಿಕ್ ಪ್ರೋತ್ಸಾಹದಿಂದಾಗಿ ವರುಣ್ ಪ್ರತಿಭೆ ಬೆಳಕಿಗೆ ಬರುವುದು ಸಾಧ್ಯವಾಯಿತು. ವಿಶೇಷವೆಂದರೆ, ವರುಣ್​ರ ಸ್ಪಿನ್ ಬತ್ತಳಿಕೆಯಲ್ಲಿ ಆಫ್​ಸ್ಪಿನ್, ಲೆಗ್​ಸ್ಪಿನ್, ಗೂಗ್ಲಿ, ಟಾಪ್ ಸ್ಪಿನ್, ಕೇರಂ ಬಾಲ್, ಫ್ಲಿಪರ್, ಸ್ಲೈಡರ್ ಹೀಗೆ ಎಲ್ಲ ಅಸ್ತ್ರಗಳೂ ಇವೆ. ಈ ಬಾರಿ ಕೆಕೆಆರ್- ಚೆನ್ನೈ ಸೂಪರ್ಕಿಂಗ್ಸ್ ಮೊದಲ ಮುಖಾಮುಖಿಯ ಬಳಿಕ ಎಂಎಸ್ ಧೋನಿ ಜೊತೆ ಸೆಲ್ಪೀ ತೆಗೆಸಿಕೊಂಡಿದ್ದ ವರುಣ್, ಕೆಕೆಆರ್-ಚೆನ್ನೈ 2ನೇ ಮುಖಾಮುಖಿ ಆದಾಗ ಎಂಎಸ್ ಧೋನಿಯನ್ನೇ ಕ್ಲೀನ್​ಬೌಲ್ಡ್ ಮಾಡಿದ್ದರು!

    ಕಿಂಗ್ಸ್ ಇಲೆವೆನ್ ತಂಡದ ರವಿ ಬಿಷ್ಣೋಯಿ 20 ವರ್ಷದ ಚಾಣಾಕ್ಷ ಸ್ಪಿನ್ನರ್. ಅವರ ಗೂಗ್ಲಿಗಳು ಬ್ಯಾಟ್ಸ್ ಮನ್​ಗಳ ನಿದ್ರೆಗೆಡಿಸಿದವು. ಮುಂಬೈ ಇಂಡಿಯನ್ಸ್ ತಂಡದ 21 ವರ್ಷದ ರಾಹುಲ್ ಚಾಹರ್ ಮೊದಲ ನೋಟಕ್ಕೆ ದಕ್ಷಿಣ ಆಫ್ರಿಕಾ ಸಂಜಾತನಂತೆ ಕಂಡರೂ, ಅಪ್ಪಟ ಭಾರತೀಯ. ಅವರ ಲೆಗ್​ಬ್ರೇಕ್ ಎಸೆತಗಳು ಬ್ಯಾಟ್ಸ್​ಮನ್​ಗಳಿಗೆ ನಡುಕ ಹುಟ್ಟಿಸಿದವು. ರಾಯಲ್ ಚಾಲೆಂಜರ್ಸ್ ತಂಡದ ಯಜುವೇಂದ್ರ ಚಾಹಲ್​ಗೀಗ 30 ವರ್ಷ. ಆದರೆ, ಅವರ ಕೌಶಲಕ್ಕಿನ್ನೂ ತಾರುಣ್ಯ. ಬ್ಯಾಟ್ಸ್​ಮನ್​ಗಳನ್ನು ಗಲಿಬಿಲಿಗೊಳಿಸಿ ವಿಕೆಟ್ ಕಬಳಿಸುವುದಕ್ಕೆ ಅವರ ಬಳಿ ನಾನಾ ಅಸ್ತ್ರಗಳು.

    ರಾಯಲ್ ಚಾಲೆಂಜರ್ಸ್ ತಂಡ ಟೂರ್ನಿ ಪೂರ್ವಾರ್ಧದಲ್ಲಿ ಗಳಿಸಿದ ಹಲವು ಗೆಲುವುಗಳಲ್ಲಿ ವೇಗದ ಬೌಲರ್ ನವದೀಪ್ ಸೈನಿಗೆ ಕೊಡುಗೆಯೂ ದೊಡ್ಡ ಪ್ರಮಾಣದ್ದು. ಬ್ಯಾಟ್ಸ್​ಮನ್​ಗಳಿಗೆ ಬ್ಯಾಟ್ ಬೀಸಲು ಅವಕಾಶ ಕೊಡದಂತೆ ನಿಖರ ಬೌಲಿಂಗ್, ವೇಗ, ಎಸೆತಗಳಲ್ಲಿನ ವೈವಿಧ್ಯ, ದಣಿವಿಲ್ಲದ ಉತ್ಸಾಹ… ರಾಜಸ್ಥಾನ ರಾಯಲ್ಸ್ ತಂಡದ ಕಾರ್ತಿಕ್ ತ್ಯಾಗಿ ಸಹ ಇಂಥ ಮತ್ತೋರ್ವ ಉತ್ಸಾಹಿ ಬೌಲರ್. ಇನ್ನು ಕೆಕೆಆರ್ ಯಶಸ್ಸಿಗೆ ಕೊಡುಗೆ ನೀಡಿದ ಕಮಲೇಶ್ ನಾಗರಕೋಟಿ ಮತ್ತು ಶಿವಮ್ ಮಾವಿ ಬೌಲಿಂಗ್ ಕೂಡ ಮೆಚ್ಚುವಂಥದ್ದೇ.

    ಇವರೆಲ್ಲರಿಗಿಂತ ಭಿನ್ನ ಹಾಗೂ ಈ ಋತುವಿನ ಅಚ್ಚರಿ ಎಂದರೆ ಸನ್​ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ. ನಟರಾಜನ್. ಎಕ್ಸ್​ಪ್ರೆಸ್ ವೇಗಿ ಅಲ್ಲವಾದರೂ ಕರಾರುವಕ್ ಜಾಗಕ್ಕೆ ಎಸೆಯುವ ಇವರ ನಿಯಂತ್ರಣ ಅದ್ಭುತವೆಂಬಂತೆ ಎಲ್ಲ ಘಟಾನುಘಟಿ ಬ್ಯಾಟ್ಸ್​ಮನ್​ಗಳನ್ನು ಅಚ್ಚರಿಗೆ ದೂಡಿತು. ಬ್ಯಾಟ್ಸ್​ಮನ್​ಗಳು ಓವರ್​ನಲ್ಲಿ ಆರಕ್ಕೆ ಆರೂ ಸಿಕ್ಸರ್ ಬಾರಿಸಿದ್ದನ್ನು ಕಂಡಿದ್ದೇವೆ. ಆದರೆ, ಬೌಲಿಂಗ್​ನಲ್ಲಿ ಆರಕ್ಕೆ ಆರೂ ಯಾರ್ಕರ್ ಎಸೆತ ಹಾಕುವಂಥ ಅಪರೂಪದ ಬೌಲರ್ ನಟರಾಜನ್. ಅವರ ಎಸೆತಗಳು ಫರ್ಗ್ಯುಸನ್, ಪ್ಯಾಟಿನ್ಸನ್, ಬೌಲ್ಟ್, ಬುಮ್ರಾ, ರಬಾಡ, ಮಾರಿಸ್​ರಷ್ಟು ವೇಗ ಇಲ್ಲವಾದರೂ, ರಬಾಡ, ಬುಮ್ರಾರಂತೆ ಸತತವಾಗಿ ಯಾರ್ಕರ್​ಗಳನ್ನು ಹಾಕುವ ಚಾಕಚಕ್ಯತೆ ಮಾತ್ರ ಅದ್ಭುತವಾಗಿ ಗಮನ ಸೆಳೆಯಿತು. ಡೆತ್ ಓವರ್​ಗಳಲ್ಲಿ ಒಂದೊಂದು ರನ್​ಗೂ ಕಂಜೂಸುತನ ತೋರಿ ಸನ್​ರೈಸರ್ಸ್ ಸ್ಪರ್ಧೆಯಲ್ಲುಳಿಯುವಂತೆ ಮಾಡುತ್ತಿದ್ದವರು ನಟರಾಜನ್.

    ಕಡುಬಡತನದ ಕೌಟುಂಬಿಕ ಹಿನ್ನೆಲೆಯ ನಟರಾಜನ್ 2017ರಲ್ಲಿ ಕಿಂಗ್ಸ್ ಪಂಜಾಬ್ ತಂಡದಲ್ಲಿದ್ದರಾದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಸನ್​ರೈಸರ್ಸ್ ತಂಡದಲ್ಲಿದ್ದರೂ ಬೆಂಚ್ ಕಾಯಿಸಿದ್ದಷ್ಟೇ ಸಾಧನೆಯಾಗಿತ್ತು. ಐಪಿಎಲ್​ನಲ್ಲಿ ಗಳಿಸಿದ ಹಣದಲ್ಲಿ ಊರಿನಲ್ಲೊಂದು ಮನೆ ಕಟ್ಟಿಸಿ, ಅಪ್ಪ-ಅಮ್ಮನನ್ನು ಕೂಲಿಕೆಲಸದಿಂದ ಬಿಡಿಸಿದ್ದು ಅವರ ಸಾಧನೆ. ಅಷ್ಟೇ ಅಲ್ಲ, ಹಳ್ಳಿಯಲ್ಲೊಂದು ಕ್ರಿಕೆಟ್ ಅಕಾಡೆಮಿ ನಡೆಸುತ್ತಿರುವ ಅವರು ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಈ ವರ್ಷದ ಪ್ರದರ್ಶನದ ಆಧಾರದ ಮೇಲೆಯೇ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಆರ್​ಸಿಬಿ ಪರ ಮಿಂಚಿ ಐಪಿಎಲ್​ನ ಉದಯೋನ್ಮುಖ ಆಟಗಾರ ಗೌರವಕ್ಕೆ ಪಾತ್ರರಾದ ದೇವದತ್ ಪಡಿಕ್ಕಲ್​ರ ಬ್ಯಾಟಿಂಗ್ ನೋಡುವಾಗ ಅನೇಕರಿಗೆ ಯುವರಾಜ್ ಸಿಂಗ್ ನೆನಪಾಗುತ್ತಾರೆ. ಕೆಲವರು ಭಾರತದ ವಾರ್ನರ್ ಎಂದು ಹೊಗಳಿದ್ದೂ ಇದೆ. ವಿಕೆಟ್​ನ ಸುತ್ತ ವಿವಿಧ ದಿಕ್ಕಿನಲ್ಲಿ ಅವರ ಹೊಡೆತಗಳು ನೋಡುಗರ ಎದೆಯಲ್ಲಿ ರೋಮಾಂಚನದ ಅಲೆ ಎಬ್ಬಿಸುತ್ತವೆ. ಪಡಿಕಲ್ ವಿಶೇಷವೆಂದರೆ ಅವರ ಕಣ್ಣಂದಾಜು; ಚೆಂಡನ್ನು ನಿಖರವಾಗಿ ಗ್ರಹಿಸಿ ಯಾವ ಎಸೆತ ದಂಡಿಸಬೇಕು, ಯಾವುದನ್ನು ಕೆಣಕಬಾರದು ಎಂಬ ಅದ್ಭುತ ವಿವೇಚನೆ. ತುಂಬಿತುಳುಕುತ್ತಿರುವ ಭಾರತ ತಂಡದ ಅಗ್ರಕ್ರಮಾಂಕದ ಬ್ಯಾಟಿಂಗ್ ಪ್ರವೀಣರಿಗೆ ಪಡಿಕಲ್ ಸ್ಪರ್ಧೆಯೊಡ್ಡುತ್ತಿದ್ದಾರೆ.

    ಶುಭಮಾನ್ ಗಿಲ್ 2018ರ 19 ವಯೋಮಿತಿ ವಿಶ್ವಕಪ್ ಸೆಮಿಫೈನಲ್​ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಪ್ರವರ್ಧಮಾನಕ್ಕೆ ಬಂದವರು. ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಜೊತೆಗಿನ ಇನ್​ಸ್ಟಾಗ್ರಾಂ ‘ಗೆಳೆತನ’ದಿಂದ ಸುದ್ದಿಯಲ್ಲಿರುವ ಗಿಲ್, ಬ್ಯಾಟ್ಸ್​ಮನ್ ಆಗಿಯೂ ತೆಂಡುಲ್ಕರ್ ಸೇರಿದಂತೆ ಹಲವು ದಿಗ್ಗಜ ಬ್ಯಾಟ್ಸ್​ಮನ್​ಗಳ ಗಮನ ಸೆಳೆದಿದ್ದಾರೆ. ಈ ಐಪಿಎಲ್​ನಲ್ಲೂ ಕೆಕೆಆರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಗಿಲ್ ಪ್ರಮುಖ ಕೊಂಡಿಯಾಗಿದ್ದರು. ಸದ್ಯದ ಅವರ ಆಟ ಉಜ್ವಲ ಭವಿಷ್ಯದತ್ತ ಬೆಳಕು ತೋರುತ್ತಿದೆ.

    ಟೂರ್ನಿಯ ಆರಂಭಿಕ ಪಂದ್ಯಗಳ ಸೂಪರ್​ಸ್ಟಾರ್ ನಿಜಕ್ಕೂ ಸಂಜು ಸ್ಯಾಮ್ಸನ್. ರಾಜಸ್ಥಾನ ರಾಯಲ್ಸ್​ಗೆ ಶುರುವಾತಿನ ಪಂದ್ಯಗಳಲ್ಲಿ ಗೆಲುವು ತಂದು ಕೊಟ್ಟಿದ್ದು ಇವರ ಆಟವೇ. ಆಟ ಎನ್ನುವುದಕ್ಕಿಂತ ಸಂಜು ಭೋರ್ಗರತೆ, ಬೌಲರ್ ಯಾರೆಂದು ಲೆಕ್ಕಿಸದೆ ಸಿಕ್ಸರ್​ಗಳನ್ನು ಚಚ್ಚುವ ದಿಟ್ಟತನ.. ಇಂಥ ಆಟಗಾರನಿಗೆ ಭಾರತ ತಂಡದಲ್ಲೇಕೆ ಸ್ಥಾನವಿಲ್ಲ ಎಂಬ ಪ್ರಶ್ನೆ ಮೂಡಿಸಿದ್ದು ಸಹಜ. ಇಂದಲ್ಲ ನಾಳೆ ಟೀಮ್ ಇಂಡಿಯಾ ಪರವೂ ಯಶಸ್ವಿಯಾಗುವ ಪ್ರತಿಭೆ, ಯೋಗ್ಯತೆ ಈ ವಿಕೆಟ್ಕೀಪರ್ ಬ್ಯಾಟ್ಸ್​ಮನ್​ಗಿದೆ. ಆಸ್ಟ್ರೇಲಿಯಾ ಪ್ರವಾಸವೇ ಸಂಜು ಪಾಲಿಗೆ ಅಂಥ ಅವಕಾಶದ ಬಾಗಿಲು ತೆರೆಯಲೂ ಬಹುದು.

    ಸಿಕ್ಸರ್​ಗಳೆಂದಾಗ ಮುಂಬೈ ಇಂಡಿಯನ್ಸ್​ನ ಮಧ್ಯಮ ಕ್ರಮಾಂಕದ ತರುಣ ಇಶಾನ್ ಕಿಶನ್ ಮರೆಯಲು ಸಾಧ್ಯವೇ ಇಲ್ಲ. ಜೂನಿಯರ್ ಕ್ರಿಕೆಟ್ ದಿನಗಳಿಂದಲೂ ಸುದ್ದಿ ಮಾಡುತ್ತಲೇ ಇರುವ ಬಿಹಾರಿ ತರುಣ ಇಶಾನ್ ಈ ಐಪಿಎಲ್​ನಲ್ಲಿ ಸಿಕ್ಸರ್ ಮಷಿನ್ ಎನಿಸಿಕೊಂಡರು. 4ನೇ ಕ್ರಮಾಂಕದಲ್ಲಿ, ನಾಯಕ ರೋಹಿತ್ ಶರ್ಮ ಗಾಯಗೊಂಡಾಗ ಆರಂಭಿಕರಾಗಿ ಛಾಪು ಮೂಡಿಸಿದ ಇಶಾನ್ ಅತ್ಯಧಿಕ 30 ಸಿಕ್ಸರ್ ಸಿಡಿಸಿದ್ದು ದಾಖಲೆ. ಎಡಗೈ ಆಟಗಾರ ಇಶಾನ್ ಆಟದ ವೈಶಿಷ್ಟ್ಯವೆಂದರೆ ನಿರ್ಭೀತ ಧೋರಣೆ, ಮಣಿಕಟ್ಟಿನ ಕೌಶಲ, ಶಕ್ತಿಶಾಲಿ ಹೊಡೆತಗಾರಿಕೆ.

    ಸುರೇಶ್ ರೈನಾ ವೈಯಕ್ತಿಕ ಕಾರಣಕ್ಕೆ ಐಪಿಎಲ್-13ರಿಂದ ಹೊರನಡೆದಾಗ, ರೈನಾ ಜಾಗ ತುಂಬಲು ಋತುರಾಜ್ ಗಾಯಕ್ವಾಡ್​ರಂಥ ಪ್ರತಿಭಾವಂತರು ತಂಡದಲ್ಲಿದ್ದಾರೆ ಎಂದು ಮಾಲೀಕ ಎನ್. ಶ್ರೀನಿವಾಸನ್ ಹೇಳಿದ್ದರು. ಆಗ ಎಲ್ಲರಲ್ಲೂ ಯಾರಿರಬಹುದು ಈ ಋತುರಾಜ ಎಂಬ ಕುತೂಹಲ ಮೂಡಿತ್ತು. ಟೂರ್ನಿ ಆರಂಭಿಕ ಪಂದ್ಯಗಳಲ್ಲಿ ಈ ನಿರೀಕ್ಷೆಯ ಒತ್ತಡವೇ ಹೆಗಲೇರಿ ಋತುರಾಜ ವಿಫಲರಾದರು. ಚೆನ್ನೈ ಪಂದ್ಯದ ಮೇಲೆ ಪಂದ್ಯ ಸೋಲುತ್ತಿರುವಾಗ ತಂಡದ ಯುವ ಆಟಗಾರರಲ್ಲಿ ಯಶಸ್ವಿಯಾಗುವುದಕ್ಕೆ ತುಡಿತವೇ ಇಲ್ಲ ಎಂದು ನಾಯಕ ಧೋನಿ ಟೀಕೆಯನ್ನೂ ಎದುರಿಸಬೇಕಾಯಿತು. ಕೊನೆಗೂ ಚೆನ್ನೈ ಟೂರ್ನಿಯಿಂದ ಹೊರಬೀಳುವುದು ಖಚಿತಗೊಳ್ಳುವ ಹೊತ್ತಿಗೆ ಋತುರಾಜನ ನೈಜ ಸಾಮರ್ಥ್ಯವೂ ಅನಾವರಣಗೊಂಡಿತು. ಸತತ 3 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠರಾದ ಈ ಯುವಕ ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತ ನೈಟ್​ರೈಡರ್ಸ್ ತಂಡಗಳನ್ನು ಪ್ಲೇಆಫ್ ಸ್ಪರ್ಧೆಯಿಂದ ಹೊರಹಾಕಿದ್ದಲ್ಲದೆ, ಆರ್​ಸಿಬಿಗೂ ನೀರು ಕುಡಿಸಿದರು.

    ಈ ಎಲ್ಲ ಆಟಗಾರರಲ್ಲಿ ಕೆಲವರು ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೂ ತೆರಳಿದ್ದಾರೆ. ಸುದೀರ್ಘ ಪ್ರವಾಸದಲ್ಲಿ ಈ ಯುವಕರಿಗೂ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಸಿಗಬಹುದು. ಸಿಗದಿದ್ದವರೂ ಬೇಸರಿಸಬೇಕಿಲ್ಲ. ಇನ್ನಾರು ತಿಂಗಳಲ್ಲಿ ಮತ್ತೆ ಐಪಿಎಲ್ ಮರಳಲಿದೆ. ಜೊತೆಗೆ 2021ರಲ್ಲಿ ಭಾರತದ ಕ್ರಿಕೆಟ್ ಕ್ಯಾಲೆಂಡರ್ ವರ್ಷಪೂರ್ತಿ ಭರ್ತಿಯಾಗಿದೆ. ಹಾಗಾಗಿ ಸಮರ್ಥರೆಲ್ಲರಿಗೂ ಒಂದಲ್ಲ ಒಂದು ಅವಕಾಶ ಸಿಗಲಿದೆ.
    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts