More

    ನಗರಸಭೆಯಿಂದ 97.85 ಲಕ್ಷ ರೂ. ಉಳಿತಾಯ ಬಜೆಟ್

    ಚಿತ್ರದುರ್ಗ: ನಗರಸಭೆಯ ಸಭಾಂಗಣದಲ್ಲಿ 2023-24ನೇ ಸಾಲಿಗೆ ಬುಧವಾರ 97.85 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
    ನಗರದ ವಿವಿಧ ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು 46 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಎಎಚ್‌ಪಿ ಯೋಜನೆಯಡಿ ನಗರದಲ್ಲಿ ಜಿ+2 ಮಾದರಿಯ 1,001 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

    ನಗರದಲ್ಲಿ ಹೊಸದಾಗಿ ಕೊಳವೆಬಾವಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ ಹಾಗೂ ದುರಸ್ತಿಗೆ 5 ಕೋಟಿ ರೂ., ಒಳಚರಂಡಿ ಅಭಿವೃದ್ಧಿ, ನಿರ್ವಹಣೆಗಾಗಿ 5 ಕೋಟಿ ರೂ., ತ್ಯಾಗರಾಜ ಮಾರುಕಟ್ಟೆ ಮತ್ತು ಮಾಂಸದ ಮಾರುಕಟ್ಟೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಮಳಿಗೆಗಳನ್ನು ನಿರ್ಮಿಸಲು 9 ಕೋಟಿ ರೂ., ವಿದ್ಯುತ್ ಕಂಬಗಳ ಅಳವಡಿಕೆ, ದುರಸ್ತಿಗಾಗಿ 5 ಕೋಟಿ ರೂ. ಮೀಸಲಿಡಲಾಗಿದೆ.

    ಸಾರ್ವಜನಿಕ ಶೌಚಗೃಹ ನಿರ್ಮಾಣ, ಸ್ವಚ್ಛತೆ ನಿರ್ವಹಣೆಗೆ ವಾಹನಗಳ ಖರೀದಿ, ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಸ ವಿಂಗಡಣೆಗಾಗಿ ವಿಲೇವಾರಿ ಮಾಡಲು ಯಂತ್ರಗಳ ಅಳವಡಿಕೆ, ಮುಕ್ತಿವಾಹನ ಖರೀದಿ, ಸ್ಮಶಾನಗಳ ಅಭಿವೃದ್ಧಿಗಾಗಿ 10 ಕೋಟಿ ರೂ., ಹಾಳಾಗಿರುವ ರಸ್ತೆ, ಚರಂಡಿಗಳ ಅಭಿವೃದ್ಧಿಗೆ 5 ಕೋಟಿ ರೂ., ಎಸ್ಸಿ, ಎಸ್ಟಿ ಕಲ್ಯಾಣಾಭಿವೃದ್ಧಿಗೆ 1.30 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಜೆಟ್ ಮಂಡಿಸಿದ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ವಿವರಿಸಿದರು.
    ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ರೀದೇವಿ, ಪೌರಾಯುಕ್ತ ಸತೀಶ್‌ರೆಡ್ಡಿ ಇದ್ದರು.

    *ಮುಖ್ಯಾಂಶಗಳು*
    ಅಂಗವಿಕಲರ ಕಲ್ಯಾಣಾಭಿವೃದ್ಧಿಗೆ 40 ಲಕ್ಷ ರೂ.
    ಸಂಘ-ಸಂಸ್ಥೆಗಳಿಗೆ ತರಬೇತಿ, ಸಹಾಯಧನ ಪಾವತಿಗೆ 50 ಲಕ್ಷ ರೂ.

    *ಕೋಟ್
    ನಗರದ ಸೌಂದರ್ಯ ಕಾಪಾಡಲು ಸ್ವಚ್ಛತೆಗಾಗಿ ನಿತ್ಯ ಶ್ರಮಿಸುತ್ತಿರುವ ಪೌರಕಾರ್ಮಿಕ ಕುಟುಂಬದ ಮಕ್ಕಳ ವಿದ್ಯಾಭ್ಯಾಸ, ಸ್ವಯಂ ಉದ್ಯೋಗಕ್ಕೆ ಸಹಾಯಧನ, ಆರೋಗ್ಯ ತಪಾಸಣೆಗೆ ಕೇವಲ 12 ಲಕ್ಷ ರೂ. ಮೀಸಲಿರಿಸುವ ಮೂಲಕ ಕಡೆಗಣಿಸಲಾಗಿದೆ.
    ಮಂಜುನಾಥ್ ಗೊಪ್ಪೆ ಸದಸ್ಯ

    ನಿರೀಕ್ಷಿತ ಆದಾಯ 22.18 ಕೋಟಿ
    ಸ್ವಯಂ ಘೋಷಿತ ಆಸ್ತಿ ತೆರಿಗೆ 16 ಕೋಟಿ ರೂ., ನೀರಿನ ಕಂದಾಯ 4 ಕೋಟಿ ರೂ., ನೀರಿನ ಸಂಪರ್ಕ ಶುಲ್ಕ 20 ಲಕ್ಷ ರೂ., ವಾಣಿಜ್ಯ ಸಂಕೀರ್ಣಗಳ ಬಾಡಿಗೆ 70 ಲಕ್ಷ ರೂ., ಉದ್ಯಮ ಪರವಾನಗಿ ಶುಲ್ಕ 35 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕ 25 ಲಕ್ಷ ರೂ., ವಾರ್ಷಿಕ ಹರಾಜು ಬಾಬ್ತು 45 ಲಕ್ಷ ರೂ., ಜಾಹೀರಾತು ತೆರಿಗೆ 3 ಲಕ್ಷ ರೂ., ರಸ್ತೆ ಕಟ್ಟಿಂಗ್ ಶುಲ್ಕ 20 ಲಕ್ಷ ರೂ. ಸೇರಿ ನಗರಸಭೆಯ ನಿರೀಕ್ಷಿತ ಆದಾಯ 22.18 ಕೋಟಿ ರೂ. ಆಗಿದೆ.

    ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ
    ಎಸ್‌ಎಫ್‌ಸಿ 2.5 ಕೋಟಿ ರೂ., ಎಸ್‌ಎಫ್‌ಸಿ ವಿಶೇಷ 50 ಲಕ್ಷ ರೂ., 15ನೇ ಹಣಕಾಸು ಯೋಜನೆ 6.5 ಕೋಟಿ ರೂ., ಬರ ಪರಿಹಾರ 20 ಲಕ್ಷ ರೂ., ಎಸ್‌ಡಬ್ಲುೃಎಂ ಯೋಜನೆ 5 ಕೋಟಿ ರೂ., ಎಸ್‌ಎಫ್‌ಸಿ ವೇತನ ಮತ್ತು ವಿದ್ಯುತ್ 29 ಕೋಟಿ ರೂ., ಡೇ-ನಲ್ಮ್ ಯೋಜನೆಯಿಂದ 50 ಲಕ್ಷ ರೂ. ಸೇರಿ ಸರ್ಕಾರದಿಂದ 44.2 ಕೋಟಿ ರೂ. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.

    *ಬಾಕ್ಸ್* ಜಮಾ 122 ಕೋಟಿ, ಪಾವತಿ 121 ಕೋಟಿ ರೂ.
    ಪ್ರಾರಂಭಿಕ ಶಿಲ್ಕು 39.37 ಕೋಟಿ ರೂ., ರಾಜಸ್ವ ಜಮಾ 59.26 ಕೋಟಿ ರೂ., ಬಂಡವಾಳ ಜಮಾ 1.05 ಕೋಟಿ ರೂ., ಅಮಾನತ್ತು ಖಾತೆ ಜಮಾ 22.71 ಕೋಟಿ ರೂ. ಸೇರಿ 122.4 ಕೋಟಿ ರೂ. ಜಮಾ ಆಗಲಿದೆ. ರಾಜಸ್ವ ಪಾವತಿ 49.24 ಕೋಟಿ ರೂ., ಬಂಡವಾಳ ಪಾವತಿ 61.02 ಕೋಟಿ ರೂ., ಅಮಾನತ್ತು ಪಾವತಿಗೆ 11.16 ಕೋಟಿ ರೂ. ಸೇರಿ 121.42 ಕೋಟಿ ಪಾವತಿಯೊಂದಿಗೆ 97.85 ಲಕ್ಷ ರೂ. ಉಳಿತಾಯದ ಆಯವ್ಯಯ ಈ ಬಾರಿಯದ್ದಾಗಿದೆ.

    *ದತ್ತಿ ನಿಧಿ ಸ್ಥಾಪನೆ
    ಈಚೆಗೆ ನಿಧನ ಹೊಂದಿದ ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಬೇಕೆಂದು ನಸ್ರುಲ್ಲಾ ಸಲಹೆಗೆ ಸಭೆ ಒಪ್ಪಿಗೆ ನೀಡಿತು. ನಿಧಿಗೆ ಒಂದು ತಿಂಗಳ ಗೌರವಧನವನ್ನೂ ಕೊಡೋಣ. ಪೌರಕಾರ್ಮಿಕರ ಯೋಗಕ್ಷೇಮಕ್ಕೆ ಈ ನಿಧಿಯನ್ನು ಬಳಸೋಣ ಎಂದರು. ನಗರದ ಚಳ್ಳಕೆರೆ ರೋಡ್ ಶನೈಶ್ಚರ ದೇಗುಲದ ರಸ್ತೆಗೆ ಜೆ.ಟಿ.ಹನುಮಂತರಾಜು ಅವರ ಹೆಸರಿಡಲು, ಪೌರಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಮತ್ತಿತರ ವಿಷಯಗಳಿಗೆ ಸಭೆ ಒಪ್ಪಿಗೆ ಸೂಚಿಸಿತು.

    ಗದ್ದಲ ಸೃಷ್ಟಿಸಿದ ಮಾಹಿತಿ ಕೊಡದ ಆರೋಪ

    ಆಯವ್ಯಯ ಸಭೆ ಆರಂಭದಲ್ಲಿ ವಿಷಯ ಮಂಡನೆ ವೇಳೆ ಈ ಹಿಂದೆ ಕೇಳಿದ್ದ ಮಾಹಿತಿಗಳನ್ನು ಕೊಟ್ಟಿಲ್ಲವೆಂಬ ಪ್ರತಿಪಕ್ಷದವರ ಆರೋಪ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಜಟಾಪಟಿಗೆ ಕಾರಣವಾಯಿತು.

    ನಗರದ ಗಾಂಧಿ ವೃತ್ತದಲ್ಲಿ ರಸ್ತೆ ವಿಸ್ತರಣೆ ಕುರಿತಂತೆ ಕಳೆದ ಡಿಸೆಂಬರ್ ವೇಳೆ ತಾವು ಕೇಳಿದ್ದ ಮಾಹಿತಿಯನ್ನು ಈವರೆಗೂ ಕೊಟ್ಟಿಲ್ಲ. ಹೀಗಿದ್ದಾಗ ನವೆಂಬರ್ 24ರ ಸಾಮಾನ್ಯಸಭೆ ನಡವಳಿಯನ್ನು ಹೇಗೆ ದಾಖಲಿಸುತ್ತೀರಿ ಎಂದು ಮಂಜುನಾಥ್ ಗೊಪ್ಪೆ, ಆಕ್ಷೇಪ ವ್ಯಕ್ತಪಡಿಸಿದರು.

    ಇದಕ್ಕೆ ನಸ್ರುಲ್ಲಾ, ದೀಪಕ್, ಬಿ.ಎನ್.ಸುನೀತಾ, ಮೊಹಮ್ಮದ್‌ಅಹಮದ್ ಸರ್ದಾರ್ ಮತ್ತಿತರರು ದನಿಗೂಡಿಸಿದರು. ಕಾಂಗ್ರೆಸ್, ಬಿಜೆಪಿಯ ಶ್ರೀನಿವಾಸ್, ವೆಂಕಟೇಶ್ ಮತ್ತಿತರ ನಡುವೆ ಮಾತಿನ ಜಟಾಪಟಿಯೂ ನಡೆಯಿತು. ಹಲವರು ಸಭಾಧ್ಯಕ್ಷರ ವೇದಿಕೆ ಬಳಿ ಧಾವಿಸಿ ಏರಿದ ದನಿಯಲ್ಲಿ ಮಾತನಾಡಿದರು.

    ನಾವು ಯಾರಿಗೂ ಹೆದರಬೇಕಿಲ್ಲ. ನಾವು ಬಳೆ ತೊಟ್ಟುಕೊಂಡಿಲ್ಲ, ನಾವು ಗಂಡಸರೆ ಎಂಬಿತ್ಯಾದಿ ಮಾತುಗಳು ಕೇಳಿ ಬಂದಾಗ, ಮಧ್ಯೆ ಪ್ರವೇಶಿಸಿದ ಜಹೀರಾಬಾನು, ಮಹಿಳೆಯರ ಗೌರವಕ್ಕೆ ಧಕ್ಕೆಯಾಗದ ರೀತಿ ಮಾತನಾಡಿ ಎಂದು ಸಲಹೆ ನೀಡಿದರು. ಆಯುಕ್ತ ಸತೀಶ್‌ರೆಡ್ಡಿ ಸಭಾ ಘನತೆ ಕಾಪಾಡುವಂತೆ ಮನವಿ ಮಾಡಿದರು.

    ವಿಷಯ 13ರ ಮಂಡನೆ ವೇಳೆ ಮತ್ತೆ ಗದ್ದಲವಾಯಿತು. ಆಗ ಶ್ರೀನಿವಾಸ್ ಪರ-ವಿರೋಧ ದಾಖಲಿಸಿ ನಿರ್ಣಯ ಅಂಗೀಕರಿಸುವಂತೆ ಒತ್ತಾಯಿಸಿದರು. ಶಾಸಕರ ಅನುದಾನದಿಂದಾಗಿ ಸದಸ್ಯರ ಮರ್ಯಾದೆ ಉಳಿದಿದೆ ಎಂದು ಹೇಳಿದ ಮೊಹಮ್ಮದ್ ಜೈಲಾದ್ದೀನ್, ತಮ್ಮ ವಾರ್ಡ್‌ನಲ್ಲಿ ಕೊಳವೆ ಬಾವಿ ಕೊರೆಸದ ಅಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಅನುರಾಧ ರವಿಕುಮಾರ್, ಹರೀಶ್, ಡಿ.ಮಲ್ಲಿಕಾರ್ಜುನ್ ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಜಿ.ಎಸ್.ಶ್ರೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts