More

    ರೈತರ ಜಮೀನಿನ ಹಳೇ ದಾಖಲೆ ರಕ್ಷಣೆಗೆ ಆಗ್ರಹ

    ಸವಣೂರ: ಪಟ್ಟಣದ ಕಂದಾಯ ಇಲಾಖೆಯಲ್ಲಿ ರೈತರ ಜಮೀನಿನ ಹಳೇ ದಾಖಲೆಗಳು ಸುಟ್ಟಿಲ್ಲ. ಆದರೆ, ಅಧಿಕಾರಿಗಳು ಸುಟ್ಟಿವೆ ಎಂದು ಹೇಳಿ ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ. ತಕ್ಷಣವೇ ಕಂದಾಯ ಇಲಾಖೆ ಸಚಿವರು ಸೂಕ್ತ ಕ್ರಮ ಕೈಗೊಂಡು ರೈತರ ದಾಖಲೆಗಳನ್ನು ಸರಿಪಡಿಬೇಕು ಎಂದು ರೈತ ಮುಖಂಡ ಪ್ರಕಾಶ ಬಾರ್ಕಿ ಆಗ್ರಹಿಸಿದರು.
    ಪಟ್ಟಣದ ಕಂದಾಯ ಇಲಾಖೆಯ ಗೋದಾಮಿನಲ್ಲಿ ಮಂಗಳವಾರ ಸಂಜೆ ರೈತರಿಗೆ ಪತ್ತೆಯಾದ ಹಳೆಯ ದಾಖಲೆಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು.
    2000ರಲ್ಲಿ ಸವಣೂರಿನಲ್ಲಿ ನಡೆದ ಕುಡಿಯುವ ನೀರಿನ ಹೋರಾಟದಲ್ಲಿ ಕಂದಾಯ ಇಲಾಖೆಯ ದಾಖಲೆಗಳು ಸಂಪೂರ್ಣ ಸುಟ್ಟು ನಾಶವಾಗಿವೆ ಎಂದು ಅಧಿಕಾರಿಗಳು 20 ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ ಎಂದರು.
    ರೈತರು ದಾಖಲೆಗಳನ್ನು ಕೇಳಿದರೆ, 20 ವರ್ಷಗಳಿಂದ ಸುಟ್ಟು ಹೋಗಿವೆ. ನಮ್ಮ ಬಳಿ ಇಲ್ಲ ಎಂದು ದಾಖಲೆ ನೀಡುತ್ತಿದ್ದಾರೆ. ಒಂದೊಂದು ದಾಖಲೆಗಳೂ ಮಹತ್ವದ್ದಾಗಿವೆ. ಆದರೆ, ಕಂದಾಯ ಇಲಾಖೆ ಆವರಣದಲ್ಲಿನ ಗೋದಾಮಿನಲ್ಲಿ ಅಧಿಕಾರಿಗಳ ನಿರ್ಲಕ್ಷೃದಿಂದ ಮಹತ್ವದ ದಾಖಲೆಗಳು ಗೆದ್ದಲು ಹಿಡಿದಿವೆ. ಇನ್ನು ಕೆಲವು ದಾಖಲೆಗಳು ಹರಿದು ಹೋಗಿವೆ. ಮಹತ್ವದ ದಾಖಲೆಗಳನ್ನು ಸಂಗ್ರಹ ಮಾಡಬೇಕು. ತಪ್ಪು ಮಾಡಿದ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ದಾಖಲೆಗಳು ಸರಿಯಾಗಿ ಲಭ್ಯವಾಗದ್ದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಸಂಬಂಧಿಸಿದ ದಾಖಲೆಗಳೆಲ್ಲ ಗುಜರಿ ಸೇರುತ್ತಿವೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
    ವಿಷಯ ತಿಳಿಯುತ್ತಿದ್ದಂತೆ ಸವಣೂರ ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ದಾಖಲೆಗಳನ್ನು ಸಂಗ್ರಹಿಸಿ ರಕ್ಷಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
    ರೈತ ಸಂಘದ ಪದಾಧಿಕಾರಿಗಳಾದ ಚನ್ನಪ್ಪ ಮರಡೂರ, ನೂರಅಹ್ಮದ ಮುಲ್ಲಾ, ಬಸವರಾಜ ದೇವಗೇರಿ, ಈಶ್ವರಗೌಡ ಅರಳಿಹಳ್ಳಿ, ಚಂದ್ರು ಬಂಡಿವಡ್ಡರ, ಫಕೀರೇಶ ಹರಿಜನ, ಅಫ್ಜಲ್‌ಖಾನ್ ವಕೀಲ, ಸಂದೀಪ ಬಾಬನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts