More

    ಸವದಿಗೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ವಿಚಾರ

    ಬೆಳಗಾವಿ: ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಬಿಟ್ಟ ವಿಚಾರ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಹೋಗುವುದಿಲ್ಲ ಎಂದು ಈಗಾಗಲೇ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಅವರು ಸಚಿವ ಸ್ಥಾನದ ಬೇಡಿಕೆಯಿಟ್ಟಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇದನ್ನೆಲ್ಲ ಪಕ್ಷದ ವರಿಷ್ಠರು ಗಮನಿಸುತ್ತಾರೆ ಎಂದರು.

    ಐದು ವರ್ಷಗಳ ಸರ್ಕಾರ ಬದಲಾವಣೆ ಸಂಬಂಧ ಚರ್ಚೆಗಳು, ಗಾಳಿ ಸುದ್ದಿಗಳು ಓಡಾಡುತ್ತವೆ. ನಾವು ಐದು ವರ್ಷ ಜಾಗೃತಿಯಿಂದ ಇರಬೇಕು ಎಂದು ಸರ್ಕಾರ ಬಂದ ದಿನವೇ ಹೇಳಿದ್ದೆ. ಇದೀಗ ಅವೆಲ್ಲವೂ ನಿಜ ಆಗುತ್ತಿವೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಅಲ್ಲಿ ಹೋಗುವವರು, ಇಲ್ಲಿ ಬರುವವರ ಇರುವರೇ. ಇಂತಹ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುವುದು ಅವಶ್ಯಕತೆ ಇಲ್ಲ. ಕಾಂಗ್ರೆಸ್‌ನಲ್ಲಿ ಯಾರೂ ಏಕನಾಥ ಶಿಂಧೆ, ಅಜಿತ್ ಪವಾರ್ ಇಲ್ಲವೇ ಇಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಅಭಿವೃದ್ಧಿ ವಿಷಯಗಳ ಕುರಿತಾಗಿ ಕೇಂದ್ರ ಸಚಿವರಾದ ನಿತಿನ ಗಡ್ಕರಿ, ಪ್ರಹ್ಲಾದ್ ಜೋಶಿ ಅವರನ್ನು ಐದು ಬಾರಿ ಭೇಟಿಯಾಗಿ ಚರ್ಚಿಸಿದ್ದೇನೆ. ಅಭಿವೃದ್ಧಿ ಕಾಮಗಾರಿಗಳ ಜತೆಗೆ ರಾಜಕೀಯ ವಿಷಯಗಳ ಚರ್ಚೆಗಳು ಆಗುವುದು ಸಾಮಾನ್ಯ. ಹಾಗಾಗಿ ಎಲ್ಲ ವಿಷಯಗಳನ್ನು ರಾಜಕೀಯವಾಗಿ ನೋಡುವುದರಿಂದ ಅನುಮಾನದ ಪ್ರಶ್ನೆಗಳು ಬರುತ್ತವೆ ಎಂದರು.

    ಲೋಕಸಭೆ ಚುನಾವಣೆ ಬಳಿಕ ಉಪಮುಖ್ಯಮಂತ್ರಿ ಸ್ಥಾನದ ವಿಷಯ ಮುನ್ನೆಲೆಗೆ ಬರಲಿದೆ. ಸದ್ಯ ಡಿಸಿಎಂ ಬೇಡಿಕೆ ಕುರಿತು ಚರ್ಚಿಸುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ ವಿನಾ ಶಕ್ತಿ ಪ್ರದರ್ಶನ ಅಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.
    ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಯೋಧ್ಯೆಗೆ ಹೋಗುತ್ತೇನೆ ಎಂದಿದ್ದಾರೆ. ನಾವು ಕೂಡ ಪ್ರತ್ಯೇಕವಾಗಿ ಅಯೋಧ್ಯೆಗೆ ಹೋಗಿ ಬರುತ್ತೇವೆ. ಬಿಜೆಪಿಯವರು ಜನರನ್ನು ಅಯೋಧ್ಯೆಗೆ ಕೆರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದರೆ ನಮ್ಮಲ್ಲೂ ಅಯೋಧ್ಯೆಗೆ ಹೋಗುವವರಿದ್ದಾರೆ. ಅವರ ಪಟ್ಟಿಯನ್ನು ಕೊಡುತ್ತೇವೆ ಎಂದು ಹೇಳಿದರು. ಶಾಸಕರಾದ ಆಸ್ೀ ಸೇಠ್, ಮಹೇಂದ್ರ ತಮ್ಮಣ್ಣವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts