More

    ಸಾಸ್ತಾನದಲ್ಲಿ 22ರವರೆಗೆ ಯಥಾಸ್ಥಿತಿ

    ಕೋಟ: ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೆ.22 ರಂದು ನಡೆಯಲಿರುವ ದಿಶಾ ಸಭೆಯ ತನಕ ಸಾಸ್ತಾನ ಟೋಲ್‌ಗೇಟ್‌ನಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ನವಯುಗ ಕಂಪನಿ ಒಪ್ಪಿದ್ದರಿಂದ ಬುಧವಾರದ ಪ್ರತಿಭಟನೆ ಕೈ ಬಿಡಲಾಯಿತು.
    ಸ್ಥಳೀಯ ವಾಹನಗಳಿಗೆ ವಿನಾಯಿತಿ ವಿಚಾರದಲ್ಲಿ ತಹಸೀಲ್ದಾರ್‌ಗೆ ನೀಡಿದ್ದ 24 ಗಂಟೆಗಳ ಗಡುವಿನಲ್ಲಿ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಶಿವಕೃಪಾದಲ್ಲಿ ಸಭೆ ನಡೆಸಿದ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಟೋಲ್‌ಗೇಟ್ ತನಕ ಪಾದಯಾತ್ರೆ ನಡೆಸಿತು. ಪಾದಯಾತ್ರೆ ಟೋಲ್‌ಗೇಟ್ ಸಮೀಪಿಸುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪೊಲೀಸರು ಬ್ರಹ್ಮಾವ ತಹಸೀಲ್ದಾರ್ ಕಿರಣ್ ಗೌರಯ್ಯ ಹಾಗೂ ನವಯುಗ ಟೋಲ್ ಕಂಪನಿ ಮ್ಯಾನೇಜರ್ ಶಿವಪ್ರಸಾದ್‌ರನ್ನು ಸ್ಥಳಕ್ಕೆ ಕರೆಸಿಕೊಂಡರು. ಈ ಸಂದರ್ಭ ದಿಶಾ ಸಭೆ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನವಯುಗ ಕಂಪನಿಗೆ ತಹಸೀಲ್ದಾರರು ಸೂಚಿಸಿದರು, ಇದಕ್ಕೆ ಕಂಪನಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
    22ಕ್ಕೆ ಬೃಹತ್ ಪ್ರತಿಭಟನೆ, ಬಂದ್: ಸ್ಥಳೀಯ ಜಿ.ಪಂ ವ್ಯಾಪ್ತಿಯ ವಾಹನಗಳಿಗೆ ರಿಯಾಯಿತಿ ಆಗ್ರಹಿಸಿ ಫೆ.22ಕ್ಕೆ ಟೋಲ್ ಬಳಿ ಬೃಹತ್ ಪ್ರತಿಭಟನೆ ಹಾಗೂ ಕೋಟ ಜಿ.ಪಂ ವ್ಯಾಪ್ತಿಯ ಅಂಗಡಿ ಮುಂಗಟ್ಟು ಬಂದ್ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಂದು ಸುಮಾರು 5 ಸಾವಿರ ಜನ ಸೇರಿಸುವ ಹಾಗೂ ಹೋರಾಟದ ರೂಪು ರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.
    ಜಾಗೃತಿ ಸಮಿತಿಯ ಶ್ಯಾಮಸುಂದರ್ ನಾಯಿರಿ, ಪ್ರತಾಪ್ ಶೆಟ್ಟಿ, ವಿಠಲ್ ಪೂಜಾರಿ ಐರೋಡಿ, ಅಲ್ವಿನ್ ಅಂದ್ರಾದೆ, ಕಾರ್ಕಡ ರಾಜು ಪೂಜಾರಿ, ವಿನಯ್ ಕಬ್ಯಾಡಿ, ಪ್ರಶಾಂತ್ ಶೆಟ್ಟಿ, ರಾಜೇಶ್, ದಿನೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ಡಿವೈಎಸ್ಪಿ ಸದಾನಂದ ನಾಯಕ್, ಬ್ರಹ್ಮಾವರ ವೃತ್ತನಿರೀಕ್ಷಕ ಅನಂತ ಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಹಾದಿಮನಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts