More

    ಭಾರತ ಏಕೀಕರಣದ ರೂವಾರಿ ಸರ್ದಾರ್ ಪಟೇಲ್

    ವಿಜಯಪುರ: ರಾಜಪ್ರಭುತ್ವದ ರಾಜ್ಯಗಳ ಆಡಳಿತಗಾರರನ್ನು ಒಗ್ಗೂಡಿಸಿ ಏಕ ಭಾರತ ನಿರ್ಮಾಣ ಮಾಡಿದ ಕೀರ್ತಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಸಲ್ಲುತ್ತದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸ್ವಾತಂತ್ರ್ಯ ನಂತರ ದಿವಂಗತ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಅವರು ದೂರದ ಪ್ರದೇಶಗಳು ಮತ್ತು ಗಡಿ ಪ್ರದೇಶಗಳಿಗೆ ಪ್ರಯಾಣಿಸುವ ಮೂಲಕ ಅಷ್ಟೇ ಅಲ್ಲದೆ ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ, ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ಜಾರಿಗೆ ತಂದರು. ಭಾರತ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದ ಹಿರಿಮೆ ಪಟೇಲರದ್ದು, ಅವರ ಆದರ್ಶಗಳನ್ನು ನಾವೂ ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ ಎಂದು ಹೇಳಿದರು.

    ಹೀಗೆ ಅನೇಕ ಮಹತ್ಕಾರ್ಯಗಳನ್ನು ಮಾಡಿದ ಪಟೇಲ್ ಅವರಿಗೆ ಗೌರವಾರ್ಥವಾಗಿ ಪ್ರತಿ ವರ್ಷ ಅ.31 ರಂದು ಅವರ ಜನ್ಮ ದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿವಸವನ್ನು ಆಚರಿಸಲಾಗುತ್ತದೆ ಎಂದರು.

    ಜಾಗೃತಿ ಅರಿವು ಸಪ್ತಾಹ
    ಇದೇ ವೇಳೆ ಜಾಗೃತಿ ಅರಿವು ಸಪ್ತಾಹ-2022 ಅನ್ನು ಆಚರಿಸಲಾಯಿತು. ಸಾರ್ವಜನಿಕ ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅವುಗಳನ್ನು ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಪಟ್ಟವರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವುದು ಈ ಸಪ್ತಾಹದ ಉದ್ದೇಶವಾಗಿದೆ ಎಂದು ಸಿಇಒ ರಾಹುಲ್ ಶಿಂಧೆ ಹೇಳಿದರು.

    ಶಿಕ್ಷೆ ಮತ್ತು ತ್ವರಿತ ದಂಡನೆ ಕ್ರಮಗಳು ಭ್ರಷ್ಟಾಚಾರವನ್ನು ತಡೆಯಲು ಪರಿಣಾಮಕಾರಿಯಾಗಿದ್ದರೂ, ಧಾರ್ಮಿಕತೆ ಮತ್ತು ಪ್ರಾಮಾಣಿಕತೆಯೊಂದಿಗೆ ಜೀವನ ನಡೆಸುವಂತೆ ಯುವ ಪೀಳಿಗೆಗೆ ಸ್ಫೂರ್ತಿ ತುಂಬುವುದರ ಮೂಲಕ ಬಹಳಷ್ಟು ಪ್ರಗತಿಯನ್ನು ಸಾಧಿಸಬಹುದೆಂದು ಕೇಂದ್ರ ವಿಚಕ್ಷಣಾ ಆಯೋಗವು ತಿಳಿಸಿರುತ್ತದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

    ಜಿಪಂ ಉಪ ಕಾರ್ಯದರ್ಶಿ ವಿಜಯ ಕುಮಾರ ಆಜೂರ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಪಂಚಾಯಿತಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts