More

    ನೂರು ದೇವಳಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ

    ಮಂಗಳೂರು: ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ಏ.26 ಮತ್ತು ಮೇ 24ರಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ 100 ದೇವಳಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲ ಜಿಲ್ಲೆಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ವಿಚಾರ ಸಂಕಿರಣವನ್ನು ಭಾನುವಾರ ಉದ್ಘಾಟಿಸಿ, ಯೋಜನೆಯಲ್ಲಿ ವರನಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ಮತ್ತು ವಧುವಿಗೆ 10 ಸಾವಿರ ರೂ. ಪ್ರೋತ್ಸಾಹಧನ ಹಾಗೂ 8 ಗ್ರಾಂ ತೂಕದ ಚಿನ್ನದ ತಾಳಿ, 40 ಸಾವಿರ ರೂ. ಮೌಲ್ಯದ 2 ಚಿನ್ನದ ಗುಂಡು ನೀಡಲಾಗುವುದು. ಪೂರಕವಾಗಿ ಕಂದಾಯ ಇಲಾಖೆಯ ಆದರ್ಶ ವಿವಾಹ ಯೋಜನೆಯಡಿ 2 ವರ್ಷದ 10 ಸಾವಿರ ರೂ. ಬಾಂಡ್, ಪ.ಜಾ, ಪ.ಪಂ ಮದುಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಸಾವಿರ ರೂ. ನಗದು ದೊರೆಯಲಿದೆ ಎಂದರು.

    ದ.ಕ. 20 ದೇವಾಲಯ: ವಿವಾಹ ಕುರಿತಂತೆ ಸರ್ಕಾರದಿಂದ ಹೆಚ್ಚು ಪ್ರಚಾರಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಮಠಾಧಿಪತಿಗಳು, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಬೆಂಬಲ ನೀಡಿದ್ದಾರೆ. ಜಿಲ್ಲೆಯ 20 ದೇವಾಲಯಗಳಲ್ಲಿ ಮದುವೆ ಕಾರ್ಯಕ್ರಮ ಜರುಗಲಿದ್ದು, ಶಾಸಕರು, ಅಧಿಕಾರಿಗಳು ತಮ್ಮ ಕುಟುಂಬದ ವಿವಾಹದಂತೆ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದು ಸೂಚಿಸಿದರು.
    ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಡಾ.ಮಹರ್ಷಿ ಆನಂದ ಗುರೂಜಿ ಉಪನ್ಯಾಸ ನೀಡಿದರು. ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಸಂಜೀವ ಮಠಂದೂರು, ಉಮಾನಾಥ ಎ.ಕೋಟ್ಯಾನ್, ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಸಿದ್ದಲಿಂಗಪ್ರಭು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಉಪಸ್ಥಿತರಿದ್ದರು.
    ಅಪರ ಜಿಲ್ಲಾಧಿಕಾರಿ ಎಂ.ರೂಪಾ ಸ್ವಾಗತಿಸಿದರು. ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

    ಆಡಂಬರದ ಮದುವೆಗಳು ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ಸಮಾಜದ ಪರಿವರ್ತೆನೆಗೆ ಕ್ರಾಂತಿಕಾರಿ ಹೆಜ್ಜೆಯೇ ಸಪ್ತಪದಿ. ದೇವಳಗಳು ಕೇವಲ ಧಾರ್ಮಿಕ ಕೇಂದ್ರಗಳಾಗದೆ ಸಮಾಜದ ಪರಿವರ್ತನೆಯ ಕೇಂದ್ರಗಳಾಗಬೇಕು. ದೇವಸ್ಥಾನದಲ್ಲಿ ರಾಷ್ಟ್ರ ಮಾತೆಯನ್ನು ಆರಾಧನೆ ಮಾಡುವ ಮೂಲಕ ರಾಷ್ಟ್ರ ಜಾಗೃತಿ ಮೂಡಿಸುವ ಕೆಲಸವಾಗಬೇಕು.
    – ನಳಿನ್ ಕುಮಾರ್ ಕಟೀಲ್, ದ.ಕ. ಸಂಸದ

    ಸರ್ಕಾರದ ವತಿಯಿಂದಲೇ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿರುವುದು ಮುಖ್ಯವಾಗಿ ಬಡವರ ಪಾಲಿಗೆ ಒಂದು ಉತ್ತಮ ಯೋಜನೆಯಾಗಿದೆ. ಗಂಡು-ಹೆಣ್ಣಿನ ಸಂಬಂಧವನ್ನು ಗಟ್ಟಿಗೊಳಿಸಬೇಕಾದ ಮದುವೆ ಇಂದು ಅರ್ಧದಲ್ಲೇ ಬಿರುಕುಗೊಳ್ಳುತ್ತಿವೆ. ಮದುವೆ ಕುರಿತ ಸಂಸ್ಕೃತಿ ಸಂಪ್ರದಾಯವನ್ನು ಮಕ್ಕಳಿಗೆ ತಿಳಿಸುವ ಕೆಲಸ ಹೆತ್ತವರಿಂದಾಗಬೇಕು.
    – ಡಾ.ಮಹರ್ಷಿ ಆನಂದ ಗುರೂಜಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts