More

    ಕುಕ್ಕೆ ಸುಬ್ರಹ್ಮಣ್ಯ, ಬಪ್ಪನಾಡು ಕ್ಷೇತ್ರಗಳಲ್ಲಿ ಸಪ್ತಪದಿ ತುಳಿದ ಆರು ಜೋಡಿಗಳು

    ಸುಬ್ರಹ್ಮಣ್ಯ/ಮೂಲ್ಕಿ: ರಾಜ್ಯ ಸರ್ಕಾರದ ವತಿಯಿಂದ ಬಡವರ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಬಹುನಿರೀಕ್ಷಿತ ‘ಸಪ್ತಪದಿ’ ಯೋಜನೆ ಕೊನೆಗೂ ಚಾಲನೆ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎರಡು ದೇವಸ್ಥಾನಗಳಲ್ಲಿ ಆರು ಜೋಡಿಗಳ ಸಾಮೂಹಿಕ ವಿವಾಹ ಗುರುವಾರ ಸರಳವಾಗಿ ನೆರವೇರಿದೆ.

    ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಸಾಮೂಹಿಕ ವಿವಾಹಕ್ಕೆ ಹಲವರು ನೋಂದಾಯಿಸಿದ್ದರು. ಕರೊನಾ ಹಿನ್ನೆಲೆಯಲ್ಲಿ ಯೋಜನೆ ಮುಂದೂಡಲ್ಪಟ್ಟಿದ್ದು, ಇದೀಗ ಚಾಲನೆ ಪಡೆದುಕೊಂಡಿದೆ. ಆದರೆ ಬೆರಳೆಣಿಕೆ ಮಂದಿ ಮಾತ್ರ ಈ ವೇದಿಕೆಯಲ್ಲಿ ವಿವಾಹಕ್ಕೆ ಮುಂದಾಗಿದ್ದಾರೆ.
    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಲ್ಕು ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಪುರೋಹಿತ ಮಧುಸೂಧನ ಕಲ್ಲೂರಾಯ ಧಾರ್ಮಿಕ ವಿಧಿ ನೆರವೇರಿಸಿದರು. ಕೋಡಿಂಬಾಳದ ಹರೀಶ್ – ಐವರ್ನಾಡಿನ ಕೆ.ದಿವ್ಯಾ, ಎ.ನವೀನ್ ಕುಮಾರ್ ಆಲೆಟ್ಟಿ – ಗೀತಾ ಎಂ.ಅಮರಪಡ್ನೂರು, ಶಿವರಾಮ ಐನೆಕಿದು -ಪುಷ್ಪಾ ದೇವರಗದ್ದೆ, ಆನಂದ -ಕೆ.ಶೋಭಾ ಸತಿಪತಿಗಳಾದರು.

    ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್‌ರಾಮ್ ಸುಳ್ಳಿ, ಪ್ರಸನ್ನ ದರ್ಬೆ, ವನಜಾ ವಿ.ಭಟ್, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಟಾಚಾರ ವಿಭಾಗದ ಕೆ.ಎಂ.ಗೋಪಿನಾಥ್, ಹರೀಶ್, ನವೀನ್, ಪದ್ಮನಾಭ ಶೆಟ್ಟಿಗಾರ್, ಎ.ವಿ.ನಾಗೇಶ್, ಶಿವಸುಬ್ರಹ್ಮಣ್ಯ ಭಟ್, ಯೋಗೀಶ್ ವಿಟ್ಲ, ಬಾಲಕೃಷ್ಣ ಆರ್., ಅಶೋಕ್, ಹೂವಪ್ಪ, ಎನ್.ಸಿ.ಸುಬ್ಬಪ್ಪ, ಷಣ್ಮುಖ ಉಪರ್ಣ, ಶಿವರಾಮ ಮಾನಾಡು, ಶ್ರೀಕೃಷ್ಣ ಬಿಲದ್ವಾರ, ಎಲ್ಲಪ್ಪ ಸೇರಿದಂತೆ ವಧು ವರರ ಸಂಬಂಧಿಕರು ಮತ್ತು ಭಕ್ತರು ಉಪಸ್ಥಿತರಿದ್ದರು.

    ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಎರಡು ಜೋಡಿಗಳ ವಿವಾಹ ಅರ್ಚಕ ಶ್ರೀಪತಿ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನಡೆಯಿತು. ಹೆಜಮಾಡಿಯ ಸುನೀಲ್ ಬಂಗೇರ- ಹೊಸಂಗಡಿ ಪೆರಿಂಜೆಯ ತಾರಾ, ಎರ್ಮಾಳು ಪೂಂದಾಡುವಿನ ಸುರೇಶ್ – ಎಲ್ಲೂರು ಬಳಿಯ ಕೆಮುಂಡೇಲು ಉಳ್ಳೂರಿನ ವನಿತಾ ಸತಿಪತಿಗಳಾದರು.

    ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಸಪ್ತಪದಿ ನೋಡಲ್ ಅಧಿಕಾರಿ ಹಾಗೂ ಧಾರ್ಮಿಕ ದತ್ತಿ ಇಲಾಖಾ ಸಹಾಯಕ ಆಯುಕ್ತ ವೆಂಕಟೇಶ್ ಜಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಭುವನಭಿರಾಮ ಉಡುಪ, ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು, ಬಪ್ಪನಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಶಿವಶಂಕರ್ ವರ್ಮ, ಮೂಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ದಯಾವತಿ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

    ದೇವಸ್ಥಾನದಿಂದ ವ್ಯವಸ್ಥೆ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ವರನಿಗೆ 5 ಸಾವಿರ ರೂ. ಹಾಗೂ ವಧುವಿಗೆ 10 ಸಾವಿರ ರೂ. ನಗದು, 8 ಗ್ರಾಂ. ತೂಕದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಒದಗಿಸಲಾಯಿತು. ಕಂದಾಯ ಇಲಾಖೆ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ 10 ಸಾವಿರ ರೂ. ನಿಶ್ಚಿತ ಠೇವಣಿ ಸೌಲಭ್ಯ ನೀಡಲಾಯಿತು. ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ. ಒದಗಿಸಲಾಯಿತು. ಬಪ್ಪನಾಡು ಕ್ಷೇತ್ರದಲ್ಲಿ ಪ್ರತಿ ಜೋಡಿಗೆ ತಲಾ 8 ಗ್ರಾಂ ಚಿನ್ನ, ವಧುವಿಗೆ ತಲಾ 10,000 ರೂ. ಮತ್ತು ವರರಿಗೆ ತಲಾ 5000 ರೂ. ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts