More

    ಹೋರಾಟದ ಅರ್ಥವಂತಿಕೆ ಕ್ಷೀಣ: ಸಾಹಿತಿ ಡಾ. ಹಂಪನಾ

    ಬೆಂಗಳೂರು: ಪ್ರಸ್ತುತ ಮುಷ್ಕರ ಹಾಗೂ ಪ್ರತಿಭಟನೆಗಳನ್ನು ಗಮನಿಸಿದರೆ, ಆ ದಿನಗಳ ಹೋರಾಟದ ಅರ್ಥವಂತಿಕೆ ಕಳೆದುಕೊಂಡಂತಿದೆ. ಆದಷ್ಟು ಬೇಗ ಒಳ್ಳೆಯ ದಿನಗಳನ್ನು ಕಾಣುವಂತಾಗಲಿ ಎಂದು ಸಾಹಿತಿ ಡಾ. ಹಂಪ ನಾಗರಾಜಯ್ಯ ಆಶಿಸಿದರು.

    ನಗರದ ಸಪ್ನ ಬುಕ್‌ಹೌಸ್‌ನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

    ಸ್ವಾತಂತ್ರ್ಯ ಪಡೆಯುವ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಗಾಂಧೀಜಿ ಒಂದು ಕೂಗು ಹಾಕಿದರೆ ಕೋಟಿ ಕೋಟಿ ಕಂಠಗಳು ಅದಕ್ಕೆ ದನಿಗೂಡಿಸುತ್ತಿದ್ದವು. ಸ್ವಾತಂತ್ರೃಕ್ಕಾಗಿ ಮಡದಿ, ಮಕ್ಕಳು, ಕುಟುಂಬವನ್ನು ತೊರೆದು ಹೋರಾಟದಲ್ಲಿ ಪಾಲ್ಗೊಂಡು ಪ್ರಾಣ ತೆತ್ತವರು ಅದೆಷ್ಟೋ ಮಂದಿ. ಆದರೆ, ಇಂದಿನ ಹೋರಾಟದಲ್ಲಿ ಹಿಂದಿನ ಅರ್ಥವಂತಿಕೆ ಕಾಣೆಯಾಗಿದೆ. ಪ್ರಧಾನಿ ಅವರು ಹೇಳುವಂತೆ ಆದಷ್ಟು ಬೇಗ ಅಚ್ಚೇ ದಿನ್ ಬರಲಿ ಎಂದರು.

    ಬಾಲಕನಾಗಿ ಕಂಡ ಹೋರಾಟದ ನೆನಪು: ನಾನು ಹನ್ನೊಂದು ವರ್ಷದ ಬಾಲಕನಾಗಿದ್ದೆ. ಆಗ ಮಂಡ್ಯದಲ್ಲಿನ ಕಸ್ತೂರಿ ಬಾ ಉದ್ಯಾನದ ನಟ್ಟ ನಡುವಿನ ಕಲ್ಲಿನ ಮಂಪಟದಲ್ಲಿ ಹೋರಾಟಗಾರರ ಭಾಷಣ ಕೇಳಿ ಚಪ್ಪಾಳೆ ತಟ್ಟುತ್ತಿದ್ದೆ. ಆಗ ನನಗೆ ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿದಿರಲಿಲ್ಲ. 1945ರಿಂದ 1947ರಲ್ಲಿ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ, ವೀರಪ್ಪಗೌಡರು, ಜವರಪ್ಪ ಗೌಡರು ಸೇರಿ ಹಲವು ಹೋರಾಟಗಾರರು ದೇಶಪ್ರೇಮದ ಕುರಿತು ಮಾತನಾಡುತ್ತಿದ್ದರು. ಲಾರಿಗಳಲ್ಲಿ ಸ್ಥಳೀಯರನ್ನು ತುಂಬಿ ಬಾವುಟ ಹಿಡಿದುಕೊಂಡು ಹೋಗುತ್ತಿದ್ದಾಗ ನಾವೂ ಅವರನ್ನು ಹಿಂಬಾಲಿಸುತ್ತಿದ್ದೆವು. ಆಗ ಪೊಲೀಸರು ನಮ್ಮನ್ನು ಅಡಗಟ್ಟಿ ಕೆಳಗೆ ಇಳಿಸಿ ಕಳಿಸುತ್ತಿದ್ದರು ಎಂದು ಸ್ವಾತಂತ್ರ್ಯ ಪೂರ್ವದ ದಿನಗಳನ್ನು ಮೆಲುಕು ಹಾಕಿದರು.

    ಲೇಖಕ ಡಾ.ಡಿ.ವಿ. ಗುರುಪ್ರಸಾದ್ ಮಾತನಾಡಿ, ರಾಮಾಯಣ ಕಾಲದಲ್ಲಿ ಜನರು ಭಾರತದಿಂದ ಮೆಕ್ಸಿಕೋಗೆ ವಲಸೆ ಹೋದರು. ಇಂದ್ರಪ್ರಸ್ಥ ಕಟ್ಟಿದ ಮಾಯನ್ ಕಡೆಯವರು ಮೆಕ್ಸಿಕೋಗೆ ಹೋಗಿ ಅಲ್ಲಿ ಭಾರತದ ಸಂಸ್ಕೃತಿ ತಂದಿದ್ದಾರೆ. ಹಿಂದೂ ಸಂಸ್ಕೃತಿಗೂ-ಮೆಕ್ಸಿಕೋದ ಸಂಸ್ಕೃತಿಗೂ ಇರುವ ಸಾಮ್ಯತೆಗಳನ್ನು ನಾನು ‘ಮಾಯನ್ನರ ಮಾಯಾನಗರಿ’ ಕೃತಿಯಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.

    ಸಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮತ್ತಿತರರು ಉಪಸ್ಥಿತರಿದ್ದರು.

    ಪುಸ್ತಕಗಳು ಎಂದರೆ ಕಾದಂಬರಿ, ಕಥೆಗಳು ಹಾಗೂ ಕವನಗಳಿಗೆ ಮಾತ್ರ ಸೀಮಿತ ಎಂದಾಗಿತ್ತು. ಆದರಿಂದು ಕನ್ನಡಿಗರು ಭಾಷೆ ಎಂದರೆ ಸಾಹಿತ್ಯ ಮಾತ್ರವಲ್ಲ, ಎಲ್ಲ್ಲ ಕ್ಷೇತ್ರಗಳನ್ನು ಒಳಗೊಳ್ಳುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಯಬೇಕು ಎಂಬುದನ್ನು ನಿರೂಪಿಸಿದ್ದಾರೆ.
    ರಾ.ನಂ. ಚಂದ್ರಶೇಖರ್, ಕನ್ನಡ ಪರಿಚಾರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts