More

    ಉದ್ಘಾಟನೆಯಾದ 9 ತಿಂಗಳಲ್ಲೇ ಸಂತೆ ಮಾರುಕಟ್ಟೆ ಸೋರಿಕೆ

    ಹಿರೇಕೆರೂರ: ಪಟ್ಟಣದಲ್ಲಿರುವ ಮಾದರಿ ದುರ್ಗಾದೇವಿ ಸಂತೆ ಮಾರುಕಟ್ಟೆ ಉದ್ಘಾಟನೆಗೊಂಡು 9 ತಿಂಗಳಲ್ಲೇ ಮೇಲ್ಛಾವಣಿ ಸೋರುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ನೀರು ನಿಂತುಕೊಂಡಿದ್ದು, ವ್ಯಾಪಾರಸ್ಥರಿಗೆ, ರೈತರಿಗೆ ಮತ್ತು ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ.
    ಈ ಹಿಂದೆ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ದುರ್ಗಾದೇವಿ ಸಂತೆ ಮೈದಾನವನ್ನು ಅಭಿವೃದ್ಧಿ ಪಡಿಸಲು ಪಟ್ಟಣ ಪಂಚಾಯಿತಿ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ನಂತರ ಈ ಹಿಂದೆ ಕೃಷಿ ಸಚಿವರಾಗಿದ್ದ ಶಾಸಕ ಬಿ.ಸಿ. ಪಾಟೀಲರು, ಸಿಂಜೆಂಟಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ನಬಾರ್ಡ್ ಅನುದಾನದಲ್ಲಿ ಮಾರುಕಟ್ಟೆಯನ್ನು 2.65 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದರು. ಅದರಂತೆ, ಇಲ್ಲಿ 85 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 12 ಪ್ಲಾಟ್‌ಫಾರ್ಮ್, 68 ಸಾವಿರ ಚದರ ಅಡಿ ಮೇಲ್ಛಾವಣಿ, 7 ಶೆಡ್, 16 ಸೋಲಾರ್ ದೀಪಗಳು, 21 ರೂಫ್ ವೆಂಟಿಲೇಟರ್, ಮಳೆ ನೀರು ಕೊಯ್ಲು ಘಟಕದ ಮೂಲಕ ಹತ್ತಿರದ ಕೆರೆಗೆ ನೀರು ಬಿಡುವ ವ್ಯವಸ್ಥೆ ಒಳಗೊಂಡ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿತ್ತು. ತನ್ಮೂಲಕ ಜಿಲ್ಲೆಯಲ್ಲಿಯೇ ಅತ್ಯಂತ ಸುಸಜ್ಜಿತ ಮಾದರಿ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
    ಆದರೆ, ಈಗ ಸಂತೆ ಮಾರುಕಟ್ಟೆ ನಿರ್ಮಾಣಗೊಂಡ 9 ತಿಂಗಳಲ್ಲೇ ಎಲ್ಲೆಂದರಲ್ಲಿ ಸೋರುತ್ತಿದೆ. ಮಳೆ ರಭಸವಾಗಿ ಬಂದರೆ ಸುತ್ತಲೂ ನೀರು ನುಗ್ಗುತ್ತಿದ್ದು, ವ್ಯಾಪಾರಸ್ಥರ ಅಂಗಡಿಗಳಿಗೆ, ಗ್ರಾಹಕರಿಗೆ, ರೈತರಿಗೆ ಬಹಳ ತೊಂದರೆಯಾಗುತ್ತಿದೆ. ಈ ಮೊದಲು ಬೇಸಿಗೆಯಲ್ಲಿ ಧೂಳಿನಿಂದ ತೊಂದರೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಪಪಂನವರು ಸ್ವಚ್ಛ ಮಾಡುವ ಮೂಲಕ ಸಮಸ್ಯೆಯನ್ನು ಕೊಂಚಮಟ್ಟಿಗೆ ದೂರ ಮಾಡಿದ್ದರು.
    ವಾರಕ್ಮೊಮ್ಮೆ ಸೋಮವಾರ ನಡೆಯುವ ಸಂತೆ ತಾಲೂಕಿನ ಸುತ್ತಮುತ್ತ ಪ್ರಸಿದ್ಧಿ ಪಡೆದಿದೆ. ಇಲ್ಲಿಂದ ದೂರದ ಶಿರಾಳಕೊಪ್ಪ, ಸೊರಬ, ಸಾಗರ, ಸಿದ್ದಾಪುರ, ಶಿರಸಿ, ಕಾರವಾರ, ಹೊನ್ನಾವರ, ಗೋವಾ ಸೇರಿದಂತೆ ಹಲವು ಪಟ್ಟಣಗಳಿಗೆ ತರಕಾರಿ, ದವಸ ಧಾನ್ಯಗಳು ಇಲ್ಲಿಂದಲೇ ರಫ್ತಾಗುತ್ತವೆ. ಹೀಗೆ ಸಾವಿರಾರು ಜನ ಸೇರುವ ಮಾರುಕಟ್ಟೆಯ ಮೇಲ್ಛಾವಣಿಯನ್ನು ಪಟ್ಟಣ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಯವರು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ.

    ವಾರಕ್ಮೊಮ್ಮೆ ನಡೆಯುವ ಸಂತೆಯಲ್ಲಿ ಚೆನ್ನಾಗಿ ವ್ಯಾಪಾರ ಆದರೆ ಮಾತ್ರ ನಮಗೆ ಜೀವನ ನಡೆಸಲು ಸಾಧ್ಯ. ಒಂದು ವೇಳೆ ವ್ಯಾಪಾರ ಆಗದೆ ಇದ್ದಲ್ಲಿ ನಮ್ಮ ಗೋಳು ಹೇಳತೀರದು. ಸಂತೆ ಮಾರುಕಟ್ಟೆ ಉತ್ತಮವಾಗಿ ನಿರ್ಮಾಣವಾಗಿದೆ. ಆದರೆ, ಎಲ್ಲೆಂದರಲ್ಲಿ ನೀರು ಸೋರುತ್ತಿದ್ದು, ನಾಲ್ಕು ಭಾಗದಲ್ಲಿ ನೀರು ಅಂಗಡಿಗಳಿಗೆ ನುಗ್ಗುತ್ತಿದೆ. ಅಪಾರ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ನೀರು ಸಂಗ್ರಹವಾಗುವುದರಿಂದ ಗ್ರಾಹಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಪಪಂ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
    ಉಮೇಶ ಹಳಕಟ್ಟಿ, ತೆಂಗಿನಕಾಯಿ ವ್ಯಾಪಾರಸ್ಥ

    ಸಂತೆ ಮಾರುಕಟ್ಟೆ ನಿರ್ಮಿಸಿದ ಸಿಂಜೆಂಟಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ನಬಾರ್ಡ್‌ನವರು ಇಲ್ಲಿಯವರೆಗೆ ನಮಗೆ ಮಾರುಕಟ್ಟೆಯನ್ನು ಹಸ್ತಾತರಿಸಿಲ್ಲ. ಮಾರುಕಟ್ಟೆ ಸೋರುವ ಬಗ್ಗೆ ಗಮನಕ್ಕೆ ಬಂದಿದೆ. ಸಾಧ್ಯವಾದರೆ ಅಭಿವೃದ್ಧಿ ಪಡಿಸಿದ ಕಂಪನಿಯವರ ಗಮನಕ್ಕೆ ತರಲಾಗುವುದು. ಅವರು ಸರಿಪಡಿಸಿದರೆ ಸರಿ, ಇಲ್ಲದಿದ್ದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ತಿಳಿಸಿ, ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲಾಗುವುದು.
    ಪಂಪಾಪತಿ ನಾಯ್ಕ, ಪಪಂ ಮುಖ್ಯಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts