More

    ಸಂಜೀವಿನಿ ಅಭಿಯಾನಕ್ಕೆ 670 ಕೋಟಿ ರೂ.: ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ

    ಬಿಡದಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಜೀವಿನಿ ಅಭಿಯಾನಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 670 ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿಯ ತಾಳಗುಪ್ಪ ಗ್ರಾಮದ ಅವಸರದಮ್ಮ ದೇವಾಲಯದ ಬಳಿ ಶುಕ್ರವಾರ ನಡೆದ ಎನ್‌ಎಲ್‌ಆರ್‌ಎಮ್‌ನಲ್ಲಿ ರಚಿತವಾಗಿರುವ ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರೊಂದಿಗಿನ ಸಂವಾದದಲ್ಲಿ ಮಾತನಾಡಿದರು.

    ರಾಜ್ಯಾದ್ಯಂತ 1.5 ಲಕ್ಷ ಸಂಜೀವಿನಿ ಸ್ವಸಹಾಯ ಸಂಘಗಳು ರಚನೆಯಾಗಿದ್ದು, ಗ್ರಾಮೀಣ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಸ್ವಉದ್ಯೋಗ ಕೈಗೊಂಡಿದ್ದಾರೆ. ಯೋಜನೆಯನ್ನು ಹೇಗೆ ಬಳಸಿಕೊಂಡಿದ್ದಾರೆ. ಎಷ್ಟು ಉಪಯುಕ್ತವಾಗಿದೆ ಎಂಬ ಮೌಲ್ಯಮಾಪನ ನಡೆಯುತ್ತಿದೆ. ಇವರು ತಯಾರಿಸುವ ಉತ್ಪನ್ನಗಳು ಮತ್ತು ಮಾದರಿಯಾಗಿ ಮಾಡುತ್ತಿರುವ ಕೆಲಸಗಳನ್ನು ಖುದ್ದು ಕಂಡು ಅವರ ಅನುಭವ ತಿಳಿದು ಮತ್ತಷ್ಟು ಸಂಘಗಳನ್ನು ಬಲಿಷ್ಠಗೊಳಿಸುವ ಗುರಿ ನಮ್ಮ ಮುಂದಿದೆ ಎಂದರು.

    ಸದಸ್ಯರಿಗೆ ತಾವು ಮಾಡುವ ಕೆಲಸದ ಬಗ್ಗೆ ವಿಶ್ವಾಸ ಮೂಡಿದರೆ ತಮ್ಮ ಆರ್ಥಿಕ ಮಟ್ಟ ವೃದ್ಧಿಯಾಗುವ ಜತೆಗೆ ಗ್ರಾಮ, ದೇಶ ಪ್ರಗತಿ ಹೊಂದುತ್ತದೆ. ತಂತ್ರಜ್ಞಾನ ಬೆಳೆದಿದ್ದು ನೀವು ಉತ್ಪಾದಿಸಿದ ಆಹಾರ ಪದಾರ್ಥಗಳಿಗೆ ನಿಮ್ಮ ಬಳಿಗೆ ಮಾರುಕಟ್ಟೆಯನ್ನು ಬರುವ ವಾತಾವರಣ ನಿರ್ಮಿಸುವ ಮಟ್ಟಕ್ಕೆ ದೊಡ್ಡ ಕ್ರಾಂತಿ ಮಾಡುವ ಅವಕಾಶಗಳಿವೆ ಎಂದು ಜಿಲ್ಲೆಯ ಸ್ವಸಹಾಯ ಸದಸ್ಯರ ಕಾರ್ಯವನ್ನು ಶ್ಲಾಘಿಸಿ ಆತ್ಮಸ್ಥೈರ್ಯ ತುಂಬಿದರು.

    ರಾಜ್ಯ ಸಂಜೀವಿನಿ ಅಭಿಯಾನದ ನಿರ್ದೇಶಕಿ ಡಾ. ಬಿ.ಆರ್. ಮಮತಾ ಮಾತನಾಡಿ, ಗ್ರಾಮೀಣ ಮಹಿಳೆಯರಲ್ಲಿ ಅರಿವಿನ ಮಟ್ಟ ವೃದ್ದಿಯಾಗುವ ಜತೆಗೆ ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳುವ ಕಲಿಕೆಯನ್ನು ಸಂಜೀವಿನಿ ಅಭಿಯಾನ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಇ-ಅಂಗಡಿ, ಎಲ್‌ಇಡಿ ನಿರ್ಮಾಣ ಮತ್ತು ಆಹಾರ ಪದಾರ್ಥಗಳ ತಯಾರಿಕೆ ಸೇರಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಪ್ರಭಾ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಧಾ, ಶಿಲ್ಪಾ, ವೀಣಾ ಮತ್ತು ಶಾಂತಕುಮಾರಿ ಅವರು ಸಚಿವರೊಂದಿಗೆ ಸಂವಾದ ನಡೆಸಿ ಅಭಿಪ್ರಾಯ ಹಂಚಿಕೊಂಡರು. ಇಒ ಶಿವಕುಮಾರ್, ತಹಸೀಲ್ದಾರ್ ನರಸಿಂಹಮೂರ್ತಿ, ಗ್ರೇಟರ್ ಬೆಂಗಳೂರು-ಬಿಡದಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ, ಗ್ರಾಪಂ ಸದಸ್ಯ ಮೂಡ್ಲಗಿರಿಯಪ್ಪ, ಪಿಡಿಒಗಳಾದ ಶಿವಕುಮಾರ್, ರಾಮಕೃಷ್ಣಯ್ಯ ಇದ್ದರು.

    ಜಿಲ್ಲೆಗೆ ಪರಿಷತ್ ಸ್ಥಾನ: ವಿಧಾನ ಪರಿಷತ್ ಟಿಕೆಟ್ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವ ಗೊಂದಲ ಇಲ್ಲ. ಪಕ್ಷ ಕಟ್ಟಿದವರು, ವಲಸೆ ಬಂದಿರುವವರು ಎಲ್ಲರಿಗೂ ಒಪ್ಪಿಗೆಯಾಗುವಂತಹ ಸ್ಪರ್ಧಿಗಳ ಪಟ್ಟಿ ಸಿದ್ಧವಾಗಲಿದೆ. ರಾಮನಗರ ಜಿಲ್ಲೆಗೆ ವಿಧಾನ ಪರಿಷತ್ ಸ್ಥಾನ ಶೇ. 100ರಷ್ಟು ಸಿಗುವ ಭರವಸೆ ಇದೆ ಎಂದು ಸಿ.ಪಿ.ಯೋಗೇಶ್ವರ್ ಹೆಸರನ್ನೇಳದೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಪರೋಕ್ಷವಾಗಿ ಸುಳಿವು ಕೊಟ್ಟರು.

    ಲಾಕ್‌ಡೌನ್ ನಂತರ ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿಯೂ ಜನರ ಓಡಾಟ ಹೆಚ್ಚಾಗುತ್ತಿದ್ದರೂ ಸೋಂಕು ನಿಯಂತ್ರಣದಲ್ಲಿದೆ. ತಾಲೂಕು ಮತ್ತು ಜಿಲ್ಲಾಸ್ಪತ್ರೆ, ಕೋವಿಡ್ 19 ಆಸ್ಪತ್ರೆಯಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಉತ್ತಮ ಅವಕಾಶವಿದೆ. ಇನ್ನೊಂದು ವಾರದಲ್ಲಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪತ್ತೆ ಪ್ರಯೋಗಾಲಯ ಸಿದ್ಧಗೊಳ್ಳಲಿದೆ.
    ಡಾ. ಸಿ.ಎನ್. ಅಶ್ವತ್ಥನಾರಾಯಣ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts