More

    ವಿದ್ಯುತ್ ತಂತಿಗಳಿಗೆ ಹಾನಿ ಮಾಡುವ ಮರ ತೆರವು, ಮೆಸ್ಕಾಂ, ಅರಣ್ಯ ಇಲಾಖೆಗೆ ಸಂಜೀವ ಮಠಂದೂರು ಸೂಚನೆ

    ಪುತ್ತೂರು: ನಗರದ ಮುಖ್ಯರಸ್ತೆ ಮತ್ತು ಒಳರಸ್ತೆಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳ ತಂತಿಗಳಿಗೆ ಸವರುವ ಅಥವಾ ಕಂಬಗಳ ಮೇಲೆ ಬಿದ್ದು ಹಾನಿ ಮಾಡುವ ಸಾಧ್ಯತೆಗಳಿರುವ ಮರದ ರೆಂಬೆ ಮತ್ತು ಮರಗಳನ್ನು ತ್ವರಿತವಾಗಿ ತೆರವುಗೊಳಿಸುವಂತೆ ಶಾಸಕ ಸಂಜೀವ ಮಠಂದೂರು ಮೆಸ್ಕಾಂ ಮತ್ತು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

    ನಗರದ ಕೊಂಬೆಟ್ಟು ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ರೆಂಬೆಗಳು ಸವರುವ ಕಾರಣ ಪದೇಪದೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಇತರ ಕಡೆಗಳಲ್ಲೂ ಇದೇ ರೀತಿಯ ದೂರುಗಳಿದ್ದವು ಈ ಹಿನ್ನೆಲೆ ಪುತ್ತೂರು ನಗರಮಂಡಲ ಬಿಜೆಪಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ಮನವಿಯಂತೆ ಶಾಸಕ ಮಠಂದೂರು ಶುಕ್ರವಾರ ನಗರದ ಕೊಂಬೆಟ್ಟು ರಸ್ತೆಗೆ ಆಗಮಿಸಿ ಪರಿಶೀಲಿಸಿದರು.

    ಶಾಸಕರ ಸೂಚನೆಯಂತೆ ಪುತ್ತೂರು ಉಪವಿಭಾಗ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿಲ್ಪಾ ಶೆಟ್ಟಿ, ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಪರಿಸರ ಇಂಜಿನಿಯರ್ ಗುರುಪ್ರಸಾದ್ ಶೆಟ್ಟಿ, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಬಕೆಟ್ ಕ್ರೈನ್ ಮೂಲಕ ಕೊಂಬೆಟ್ಟು ರಸ್ತೆಯಲ್ಲಿರುವ ಮರದ ರೆಂಬೆಗಳನ್ನು ತೆರವುಗೊಳಿಸುವಂತೆ ಶಾಸಕರು ಸ್ಥಳದಲ್ಲಿಯೇ ಸೂಚನೆ ನೀಡಿ, ಮರ ತೆರವು ಕಾರ್ಯವಿದ್ದರೆ ಅರಣ್ಯ ಇಲಾಖೆಯವರು ನಿರ್ವಹಿಸಬೇಕು ಎಂದು ಹೇಳಿದರು.

    ನಗರಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್. ಶೆಟ್ಟಿ, ಬಿಜೆಪಿ ಹಿರಿಯ ಕಾರ್ಯಕರ್ತ ಸುರೇಶ್ ಆಳ್ವ, ಶಾಸಕರ ಆಪ್ತ ಸಹಾಯಕರಾದ ವಸಂತ ವೀರಮಂಗಲ, ಜೀವನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts