More

    ಎಸ್‌ಎಸ್‌ವಿ ಪುರುಷತ್ವಕ್ಕೆ ಧಕ್ಕೆ ಇಲ್ಲದೆ ಶಸ್ತ್ರಚಿಕಿತ್ಸೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿಕೆ

    ಸಂಡೂರು: ಪುರುಷರ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯು ನೋವು, ಗಾಯ, ಹೊಲಿಗೆ ಇಲ್ಲದೆ ಕೇವಲ ಹತ್ತು ನಿಮಿಷದಲ್ಲಿ ಮುಗಿದು ಹೋಗುವ ಸರಳ ವಿಧಾನವೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು. ತಾಲೂಕಿನ ತಾಳೂರು ಗ್ರಾಮದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ನ.21ರಿಂದ ಡಿ.4ರವರೆಗೆ ಆಚರಿಸಲಾಗುವ ನೋ-ಸ್ಕಾಲ್ ಪೆಲ್ ವ್ಯಾಸೆಕ್ಟೆಮಿ ಪಾಕ್ಷಿಕ (ಎನ್‌ಎಸ್‌ವಿ) ಕುರಿತ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಸೋಮವಾರ ಮಾತನಾಡಿದರು.

    ಶಸ್ತ್ರ ಚಿಕಿತ್ಸೆಯಿಂದ ಪುರುಷತ್ವಕ್ಕೆ ಯಾವುದೇ ಧಕ್ಕೆ ಇರುವುದಿಲ್ಲ. ಇದರ ನಂತರ ಮಾಮೂಲಿಯಂತೆ ಎಲ್ಲ ಕೆಲಸಗಳನ್ನು ಮಾಡಬಹುದು. ಲೈಂಗಿಕ ಸಂಪರ್ಕ ಸಾಧಿಸುವಾಗ ಮೂರು ತಿಂಗಳು ಕಡ್ಡಾಯವಾಗಿ ನಿರೋಧ್ (ಕಾಂಡೋಮ್) ಬಳಸಬೇಕು. ಈ ಚಿಕಿತ್ಸೆಗೊಳಗಾದ ಪುರುಷರಿಗೆ ಸರ್ಕಾರದಿಂದ 1,100 ರೂ. ಪ್ರೋತ್ಸಾಹಧನ ಸಿಗಲಿದೆ ಎಂದು ತಿಳಿಸಿದರು.

    ಹದಿನೈದು ದಿನ ಜಾಗೃತಿ ಮೂಡಿಸಿ ಫಲಾನುಭವಿಗಳನ್ನು ಪತ್ತೆ ಹಚ್ಚಿದ ನಂತರ ಶಿಬಿರ ಆಯೋಜಿಸಿ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಮಹಿಳೆಯರ ಶಸ್ತ್ರಚಿಕಿತ್ಸೆಗಿಂತ ಸರಳ ಇರುವ ಈ ವಿಧಾನವನ್ನು ಪತಿ ಅಳವಡಿಸಿಕೊಂಡಲ್ಲಿ ಸ್ತ್ರೀಯರು ಮನೆಗೆಲಸ ಮಾಡುವಾಗ ಆಗುವ ತೊಂದರೆ ತಪ್ಪಿಸಬಹುದು. ಅಲ್ಲದೇ ಪತ್ನಿಗೆ ಬೊಜ್ಜು ಪದೇಪದೆ ಹೆರಿಗೆ ತೊಂದರೆಗಳು ಇದ್ದಲ್ಲಿ ಪತಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕುಟುಂಬ ನಿಯಂತ್ರಣ ಮಾಡುವುದು ಉತ್ತಮ. ಈಗಾಗಲೇ ಮಕ್ಕಳನ್ನು ಪಡೆದ ವಿವಾಹಿತ ಪುರುಷರು ತಮ್ಮ ಜವಾಬ್ದಾರಿ ಅರಿತು ನಡೆದರೆ ಜನಸಂಖ್ಯೆ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು.

    ತಾಳೂರು ಗ್ರಾಪಂ ಸದಸ್ಯರಾದ ಎಚ್. ಕನಕಪ್ಪ, ರುದ್ರಪ್ಪ, ಮುಖಂಡರಾದ ಅಳ್ಳದಪ್ಪ ನಾಡಿಗರು, ಸುರೇಶ್, ಬಿ.ನಾಗಪ್ಪ, ಮೂಕಣ್ಣ, ಕರಿಯಪ್ಪ, ವೀರೇಶಪ್ಪ, ಸಿದ್ದಪ್ಪ, ಕೋರಿ ಬಸವರಾಜ, ಮಲ್ಲಯ್ಯ ಅಕ್ಕಸಾಲಿ, ಬಸಯ್ಯಸ್ವಾಮಿ, ಕುಮಾರಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಚ್. ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts