More

    ನೇತ್ರಾವತಿ ನದಿ ಕಿನಾರೆ ಕಲುಷಿತ

    ಉಳ್ಳಾಲ: ಫರಂಗಿಪೇಟೆ-ಇನೋಳಿ ನದಿ ತಟದಲ್ಲಿ ಮರಳು ಕಾರ್ಮಿಕರಿಂದಾಗಿ ಕಲುಷಿತವಾಗುತ್ತಿದ್ದು, ಕಪ್ಪೆಚಿಪ್ಪು ಹೆಕ್ಕುವವರ ಉತ್ಸಾಹಕ್ಕೂ ಕುತ್ತು ತಂದಿದೆ. ಇದು ಸ್ವಚ್ಛ ಭಾರತ ಕನಸಿನ ಅಣಕವಾಗಿದೆ ಎನ್ನುವ ಆಕ್ರೋಶ ಸ್ಥಳೀಯರದ್ದಾಗಿದೆ.

    ಹಲವು ತಿಂಗಳ ಗೊಂದಲದ ಬಳಿಕ ಮರಳುಗಾರಿಕೆ ಆರಂಭಗೊಂಡು ಮರಳು ಸಮಸ್ಯೆಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ.
    ಕಳೆದ ವರ್ಷದಂತೆ ಈ ವರ್ಷವೂ ಫರಂಗಿಪೇಟೆ-ಇನೋಳಿ ನದಿ ತಟದಲ್ಲಿ ಮರಳುಗಾರಿಕೆ ಆರಂಭಗೊಂಡಿದೆ. ಇಲ್ಲಿ ಹೊರ ರಾಜ್ಯದ ನೂರಾರು ಕಾರ್ಮಿಕರು ಈ ಕೆಲಸದಲ್ಲಿ ನಿರತರಾಗಿದ್ದಾರೆ. ಅಲ್ಲದೆ ಇಲ್ಲೇ ಟೆಂಟ್ ಹಾಕಿಕೊಂಡು ಠಿಕಾಣಿ ಹೂಡಿದ್ದಾರೆ. ಇವರಿಗೆ ದೈನಂದಿನ ಚಟುವಟಿಕೆಗಳಿಗಾಗಿ ಯಾವುದೇ ವ್ಯವಸ್ಥೆಯಿಲ್ಲದೆ ಬಯಲು ಶೌಚಕ್ಕೆ ಮೊರೆ ಹೋಗಿದ್ದು, ಇದಕ್ಕಾಗಿ ನದಿ ತಟವನ್ನೇ ಆಶ್ರಯಿಸಿದ್ದಾರೆ.

    ಇದರಿಂದಾಗಿ ನೇತ್ರಾವತಿ ತಟ ಮಲ-ಮೂತ್ರದಿಂದ ಕಲುಷಿತಗೊಂಡಿದೆ. ಪ್ರಸ್ತುತ ಕಪ್ಪೆ ಚಿಪ್ಪಿನ ಸೀಸನ್ ಆಗಿದ್ದು, ಇದನ್ನು ಹೆಕ್ಕಲೆಂದೇ ಉತ್ಸಾಹಿಗಳು ದೂರದೂರಿನಿಂದ ಬರುತ್ತಾರೆ. ಆದರೆ ಈ ಬಾರಿ ಒಂದೆಡೆ ಮರಳುಗಾರಿಕೆಯ ಅಬ್ಬರ, ಮತ್ತೊಂದೆಡೆ ನದಿನಟ ಮಲಿನದಿಂದಾಗಿ ಇಲ್ಲಿಗೆ ಬರುವ ಸಾರ್ವಜನಿಕರಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಅಲ್ಲದೆ ಹರೇಕಳದಲ್ಲಿ ಕುಡಿಯುವ ನೀರಿನ ಡ್ಯಾಂ ಆಗುತ್ತಿದ್ದು, ಮರಳು ಕಾರ್ಮಿಕರು ಇದೇ ರೀತಿ ಮುಂದುವರಿದರೆ ಮಲಯುಕ್ತ ನೀರನ್ನೇ ಜನ ಕುಡಿಯಬೇಕಾದ ಆತಂಕವೂ ಎದುರಾಗಿದೆ. ಬಯಲು ಶೌಚದಿಂದ ಜಲಚರಗಳಿಗೂ, ಪರಿಸರಕ್ಕೂ ಹಾನಿಯಾಗುತ್ತಿದೆ. ಸ್ವಚ್ಛ ಭಾರತದ ಕನಸು ಮರಳು ಕಾರ್ಮಿಕರಿಂದಾಗಿ ಮಣ್ಣುಪಾಲಾಗುತ್ತಿದೆ.

    ಹೊಣೆ ಯಾರು?: ನದಿತಟ ಕಲುಷಿತಗೊಳ್ಳಲು ಹೊರ ರಾಜ್ಯದ ಮರಳು ಕಾರ್ಮಿಕರೇ ಕಾರಣ ಎನ್ನುವುದು ಕಣ್ಣೆದುರು ಕಾಣುವ ಸತ್ಯ. ಹಾಗಾದರೆ ಇದಕ್ಕೆ ಹೊಣೆಗಾರರು ಯಾರು? ಎನ್ನುವುದು ಸಾರ್ವಜನಿಕರ ಪ್ರಶ್ನೆ.
    ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಮುಖಾಂತರ ಗಣಿ ಇಲಾಖೆ ಮರಳುಗಾರಿಕೆಗೆ ಅನುಮತಿ, ಪರವಾನಗಿ ನೀಡುತ್ತದೆ. ಮರಳುಗಾರಿಕೆಯಿಂದ ಸಾಕಷ್ಟು ಲಾಭ ಇದೆ ಎನ್ನುವ ನೆಲೆಯಲ್ಲಿ ಪರವಾನಗಿ ಪಡೆಯಲು ಭಾರಿ ಲಾಭಿಯೂ ನಡೆಯುತ್ತದೆ. ಹೀಗೆಲ್ಲಾ ಇರುವಾಗ ಕಾರ್ಮಿಕರಿಗೆ ವ್ಯವಸ್ಥೆ ಮಾಡಿಕೊಡಬೇಕಾದ ಜವಾಬ್ದಾರಿ ಯಾರದ್ದು? ಮರಳು ಮಾಲೀಕರಿಗೆ ಈ ಬಗ್ಗೆ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಸೂಚನೆ ನೀಡಲಾಗುವುದಿಲ್ಲವೇ? ಸ್ವಚ್ಛ ಭಾರತ ಪರಿಕಲ್ಪನೆ ಮರಳು ಕಾರ್ಮಿಕರು, ಮಾಲೀಕರ ವ್ಯಾಪ್ತಿಗೆ ಬರುವುದಿಲ್ಲವೇ ಎನ್ನುವ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುವಂತಾಗಿದೆ.

    ಮರಳುಗಾರಿಕೆಯಲ್ಲಿ ನಿರತವಾಗಿರುವ ಕಾರ್ಮಿಕರು ಯಾವ ಸ್ಥಿತಿಯಲ್ಲಿದ್ದಾರೆ. ಅವರಿಗೆ ಯಾವ ರೀತಿಯ ಸವಲತ್ತುಗಳನ್ನು ಕಲ್ಪಿಸಲಾಗಿದೆ ಎನ್ನುವುದನ್ನು ಪರಿಶೀಲಿಸಲು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸೌಕರ್ಯ ಒದಗಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
    ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ

    ಮರಳು ಕಾರ್ಮಿಕರಿಗೆ ಶೌಚಗೃಹದ ವ್ಯವಸ್ಥೆ ಮಾಡಿಕೊಡದ ಕಾರಣ ನದಿತಟ ಕಲುಷಿತವಾಗಿ ನಡೆದಾಡಲೂ ಅಸಹ್ಯವಾಗುತ್ತಿದೆ. ಹರೇಕಳದಲ್ಲಿ ಡ್ಯಾಂ ನಿರ್ಮಾಣಕ್ಕೆ ಮೊದಲು ಸರ್ಕಾರದ ಬಯಲುಮುಕ್ತ ಶೌಚ ಪಾಲನೆಗೆ ತರಲು ಅಧಿಕಾರಿಗಳು ಮುಂದಾಗಲಿ.
    ವಿನ್ಸೆಂಟ್ ಡಿಸೋಜ, ಮಾಜಿ ಸದಸ್ಯ, ಬೋಳಿಯಾರ್ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts