More

    ಡ್ಯಾಂಗಳಿಂದ ಮರಳೆತ್ತಲು ತಡೆ

    ವೇಣುವಿನೋದ್ ಕೆ.ಎಸ್.ಮಂಗಳೂರು
    ಒಂದೆಡೆ ಸಿಆರ್‌ಜಡ್ ಹಾಗೂ ನಾನ್ ಸಿಆರ್‌ಜಡ್ ವಲಯದಿಂದ ಮರಳುಗಾರಿಕೆಗೆ ರಜೆ ಘೋಷಣೆಯಾಗಿದೆ, ಇನ್ನೊಂದೆಡೆ ಅಣೆಕಟ್ಟುಗಳಿಂದ ಮರಳು ತೆಗೆಯುವ ಕಾರ್ಯವೂ ಮುಂದುವರಿದಿಲ್ಲ. ಕೆಲವರು ಅಣೆಕಟ್ಟುಗಳಿಂದ ಮರಳು ತೆಗೆಯುವ ಪ್ರಕ್ರಿಯೆಗೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವೇ ಇದಕ್ಕೆ ಕಾರಣ.

    ಹೊಸ ಮರಳು ನೀತಿಯನ್ವಯ ಆದ್ಯಪಾಡಿ, ಶಂಭೂರು ಡ್ಯಾಂಗಳಿಂದ ಮರಳು ತೆಗೆಯಲು ಕರ್ನಾಟಕ ರಾಜ್ಯ ಖನಿಜ ನಿಗಮ ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆದಾರರನ್ನೂ ಅಂತಿಮಗೊಳಿಸಿತ್ತು. ಆದರೆ ಕೆಲ ದಿನಗಳಲ್ಲೇ ಹೈಕೋರ್ಟ್ ಮೆಟ್ಟಿಲೇರಿರುವ ಪೂವಪ್ಪ ಪೂಜಾರಿ ಹಾಗೂ ಇತರರು ತಡೆಯಾಜ್ಞೆ ತಂದರು. ಸಾಂಪ್ರದಾಯಿಕ ಮರಳುಗಾರಿಕೆಗೆ ಗುತ್ತಿಗೆ ನೀಡಬೇಕೇ ಹೊರತು ಬೇರೆಯವರಿಗೆ ಕೊಡಬಾರದು, ನೂತನ ಮರಳು ನೀತಿ ಅಂತಿಮವಾಗಿ ಜಾರಿಯಾಗುವ ಮೊದಲೇ ನಿಗಮಕ್ಕೆ ವಹಿಸಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದರು. ಅದನ್ನು ಮಾನ್ಯ ಮಾಡಿರುವ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ್ಯಪಾಡಿ ಡ್ಯಾಂ ಹಾಗೂ ಶಂಭೂರು ಡ್ಯಾಂ ಉಡುಪಿ ಜಿಲ್ಲೆಯ ಕುಂದಾಪುರದ ಸೌಪರ್ಣಿಕಾ ಮತ್ತು ಚಕ್ರಾ ಡ್ಯಾಂಗಳಿಂದ ಮರಳೆತ್ತಲು ಯೋಜನೆ ರೂಪಿಸಲಾಗಿತ್ತು. ಪಶ್ಚಿಮ ಘಟ್ಟದಿಂದ ಹರಿದು ಬರುವ ನದಿಯಾದ್ದರಿಂದ ಕರಾವಳಿ ಜಿಲ್ಲೆಗಳ ಡ್ಯಾಂಗಳಲ್ಲಿ ಸಾಕಷ್ಟು ಮರಳು, ಹೂಳು ತುಂಬಿಕೊಂಡಿದೆ. ಅವುಗಳನ್ನು ತೆರವು ಮಾಡದಿದ್ದರೆ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗುವುದಷ್ಟೇ ಅಲ್ಲ, ಡ್ಯಾಂಗಳಿಗೂ ಅಪಾಯ. ಈ ಕಾರಣದಿಂದ ಮರಳು ತೆರವು ಮಾಡಲು ಸರ್ಕಾರ ಉದ್ದೇಶಿಸಿತ್ತು.

    ಡ್ರೆಜ್ಜಿಂಗ್ ಕೈಬಿಟ್ಟ ಮಹಾನಗರ ಪಾಲಿಕೆ: ದ.ಕ ಜಿಲ್ಲೆಯಲ್ಲಿ ಆದ್ಯಪಾಡಿ ಡ್ಯಾಂ(ಫಲ್ಗುಣಿ ನದಿ), ಶಂಭೂರು ಡ್ಯಾಂ(ನೇತ್ರಾವತಿ) ಮತ್ತು ತುಂಬೆ ಡ್ಯಾಂ(ನೇತ್ರಾವತಿ)ಗಳ ಹೂಳೆತ್ತುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪವನ್ನು ಕಳುಹಿಸಲಾಗಿತ್ತು. ಅದರಲ್ಲಿ ತುಂಬೆ ಡ್ಯಾಂ ಅನ್ನು ಮಂಗಳೂರು ಮಹಾನಗರಪಾಲಿಕೆಗೆ ವಹಿಸಲಾಗಿತ್ತು. ಆದರೆ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಮರಳು ಡ್ರೆಜ್ಜಿಂಗ್ ಕೈ ಬಿಡಲಾಗಿದೆ. ದ.ಕ ಹಾಗೂ ಉಡುಪಿ ಜಿಲ್ಲೆಗಳ ನಾಲ್ಕು ಡ್ಯಾಂಗಳನ್ನು ಮಾತ್ರ ಖನಿಜ ನಿಗಮ ವಹಿಸಿಕೊಂಡಿದ್ದು, ಎಲ್ಲ ಡ್ಯಾಂಗಳಲ್ಲೂ ತಲಾ 1 ಲಕ್ಷ ಮೆಟ್ರಿಕ್ ಟನ್ ಮರಳು ಲಭ್ಯ ವಿರುವುದಾಗಿ ಅಂದಾಜಿಸಲಾಗಿದೆ.

    ಮಳೆಯಿಂದ ಡ್ಯಾಂ ಭರ್ತಿ, ಸದ್ಯಕ್ಕೆ ಕೆಲಸ ಕಷ್ಟ: ಮಳೆಗಾಲ ಶುರುವಾಗಿರುವುದರಿಂದ ಡ್ಯಾಂಗಳಲ್ಲಿ ನೀರು ಭರ್ತಿ ಇದ್ದು ಹೇಗೂ ಈಗ ಇನ್ನು ಡ್ರೆಜ್ಜಿಂಗ್ ಮಾಡುವುದು ಅಸಾಧ್ಯ. ಮಳೆಗಾಲ ಮುಗಿಯುವ ಮೊದಲು ಕೋರ್ಟ್‌ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿವರಣೆ ನೀಡಬೇಕಿದೆ. ಕರ್ನಾಟಕ ಮೈನರ್ ಮಿನರಲ್ ರೂಲ್ಸ್‌ಗೆ ತಂದಿರುವ ತಿದ್ದುಪಡಿಯನ್ನು ಅಂತಿಮಗೊಳಿಸಿ ಆದೇಶ ಮಾಡಬೇಕು. ಅಲ್ಲಿವರೆಗೆ ಡ್ರೆಜ್ಜಿಂಗ್ ಮಾಡುವಂತಿಲ್ಲ. ಸದ್ಯ ಕೋರ್ಟ್ ಕಲಾಪ ಕೋವಿಡ್‌ನಿಂದಾಗಿ ವಿಳಂಬವಾಗಿದೆ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ನಿರಂಜನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts