More

    ಇನ್ನೆರಡು ದಿನಗಳಲ್ಲಿ ಮರಳುಗಾರಿಕೆ, ಸಿಆರ್‌ಝಡ್ 7 ಲಕ್ಷ ಮೆಟ್ರಿಕ್ ಟನ್ ಮರಳು ಲಭ್ಯ

    – ಅವಿನ್ ಶೆಟ್ಟಿ ಉಡುಪಿ
    ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಕಾರ್ಯ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದೆ. ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಅನುಮೋದನೆ ಬಳಿಕ ಜಿಲ್ಲಾಧಿಕಾರಿ ಅಧ್ಯಕ್ಷತೆಯ 7 ಸದಸ್ಯರ ಸಮಿತಿ ಮರಳು ತೆರವು ಕಾರ್ಯಕ್ಕೆ ಅನುಮತಿಸಿದೆ.

    ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕು ವ್ಯಾಪ್ತಿಯಲ್ಲಿನ 13 ದಿಬ್ಬಗಳನ್ನು ಗುರುತಿಸಲಾಗಿದೆ. ಸ್ವರ್ಣಾ, ಸೀತಾ, ಪಾಪನಾಶಿನಿ ನದಿಗಳಲ್ಲಿ ಮರಳು ದಿಬ್ಬ ತೆರವು ಆರಂಭವಾಗಲಿದ್ದು, ಇಲ್ಲಿ 7,13,090 ಮೆಟ್ರಿಕ್ ಟನ್ ಮರಳು ಲಭ್ಯವಿದೆ. ಈಗಾಗಲೇ ಸಾಂಪ್ರದಾಯಿಕ ಮರಳು ದಿಬ್ಬ ತೆರವುಗೊಳಿಸುವ 130 ಮಂದಿ ಪರವಾನಗಿ ಪಡೆದುಕೊಂಡಿದ್ದಾರೆ. ಇನ್ನೂ ಪರವಾನಗಿ ವಿತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸಾರ್ವಜನಿಕರು ಮರಳು ಪಡೆಯಲು ಅನುಕೂಲವಾಗುವ ಇ ಸ್ಯಾಂಡ್ ವೆಬ್ ಪೋರ್ಟಲ್- ಆ್ಯಪ್ ತಂತ್ರಾಂಶದ ಕೆಲಸವು ಪ್ರಗತಿಯಲ್ಲಿದೆ ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ನಾನ್ ಸಿಆರ್‌ಝಡ್ ಟೆಂಡರ್ ಖನಿಜ ನಿಗಮಕ್ಕೆ: ರಾಜ್ಯ ಖನಿಜ ನಿಗಮ ಜಿಲ್ಲೆಯ ನಾನ್ ಸಿಆರ್‌ಝಡ್ ವ್ಯಾಪ್ತಿಯ ಮರಳು ತೆರವುಗೊಳಿಸಲು ಟೆಂಡರ್ ಪಡೆದುಕೊಂಡಿದೆ. ಸದ್ಯ ಬಿಟ್ಟುಬಿಟ್ಟು ಮಳೆ ಬರುತ್ತಿರುವುದು, ಮರಳು ತೆರವು ಮಾಡಲು ಮೂಲಸೌಲಭ್ಯಗಳ ತಯಾರಿ ಕಾರಣಕ್ಕಾಗಿ ನಾನ್ ಸಿಆರ್‌ಝಡ್ ಮರಳುಗಾರಿಕೆ ವಿಳಂಬವಾಗುವ ಸಾಧ್ಯದೆ ಇದೆ ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆ ನಾನ್‌ಸಿಆರ್‌ಝಡ್‌ನಲ್ಲಿ 22 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ನೂತನ ಮರಳು ನೀತಿಯಂತೆ ರಾಜ್ಯ ಮಟ್ಟದ ಸ್ಯಾಂಡ್ ಪೋರ್ಟಲ್ ಆ್ಯಪ್‌ನಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಿ ಮರಳು ವಿತರಿಸಲಾಗುತ್ತದೆ.

    ಕಾರ್ಮಿಕರ ಕೊರತೆ: ಮರಳು ದಿಬ್ಬ ತೆರವಿಗೆ ಟಿಪಿ ಪಡೆದ ದಕ್ಕೆಯ ಪರವಾನಗಿದಾರರಿಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕ ಕಾರ್ಮಿಕರು ಊರಿಗೆ ಮರಳಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರು ಇರುವುದರಿಂದ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ವಿಳಂಬವಾಗಬಹುದು. ಕಾರ್ಮಿಕರ ಕೊರತೆ ಪರಿಣಾಮ ಸದ್ಯಕ್ಕೆ ಕೆಲವು ದಕ್ಕೆಗಳು ಮಾತ್ರ ಮರಳು ದಿಬ್ಬ ತೆರವುಗೊಳಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಗಣಿ ಇಲಾಖೆಗೆ ದಂಡ ವಿಧಿಸುವ ಅಧಿಕಾರ: ಅಕ್ರಮ ಗಣಿಗಾರಿಕೆ, ಸಾಗಾಟಕ್ಕೆ ಕಡಿವಾಣ ಹಾಕಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಜ್ಯ ಸರ್ಕಾರ ಬಲ ನೀಡಿದ್ದು, ದಂಡ ವಿಧಿಸುವ ಅಧಿಕಾರವನ್ನು ನೀಡಿದೆ. 10 ಮೆಟ್ರಿಕ್ ಟನ್‌ಗೂ ಹೆಚ್ಚು ಸಾಮರ್ಥ್ಯವಿರುವ ವಾಹನಕ್ಕೆ 30 ಸಾವಿರ ರೂ., 10 ಮೆಟ್ರಿಕ್ ಟನ್ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ವಾಹನಕ್ಕೆ 20 ಸಾವಿರ, ಅದಕ್ಕಿಂತ ಕಡಿಮೆ ಮೆಟ್ರಿಕ್ ಟನ್ ಸಾಮರ್ಥ್ಯವಿರುವ ವಾಹನಗಳಿಗೆ 10, 5 ಸಾವಿರ ರೂ. ದಂಡ ವಿಧಿಸುವ ಅಧಿಕಾರವನ್ನು ಇಲಾಖೆಗೆ ನೀಡಲಾಗಿದೆ.

    ಜಿಲ್ಲೆಯಲ್ಲಿ ಇನ್ನೆರಡು ದಿನಗಳಲ್ಲಿ ಸಿಆರ್‌ಝಡ್ ವ್ಯಾಪ್ತಿ ಮರಳುದಿಬ್ಬ ತೆರವು ಆರಂಭವಾಗಲಿದೆ. ಈಗಾಗಲೇ ಬಹುತೇಕ ಪರವಾನಗಿದಾರರಿಗೆ ಅನುಮತಿ ನೀಡಲಾಗಿದೆ. ದಕ್ಕೆಯಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಸಾರ್ವಜನಿಕರಿಗೆ ಮರಳು ಲಭ್ಯತೆ ವಿಳಂಭವಾಗಬಹುದು. ಈ ಹಿಂದಿನ ಪ್ರಕ್ರಿಯೆಯಂತೆ ಉಡುಪಿ ಇ-ಸ್ಯಾಂಡ್ ಪೋರ್ಟಲ್‌ನಲ್ಲಿ ಸಾರ್ವಜನಿಕರು ಮರಳು ಪಡೆದುಕೊಳ್ಳಬಹುದು.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts