More

    ಮೈದಾನದಲ್ಲೇ ಮಣ್ಣು ರಾಶಿ

    ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಗೆ ಸಂಬಂಧಿಸಿದ ತ್ಯಾಜ್ಯ ಮಣ್ಣನ್ನು ಕರಾವಳಿ ಉತ್ಸವ ಮೈದಾನದಲ್ಲಿ ಸುರಿಯುವ ಮೂಲಕ ಮೈದಾನ ಬಳಸುತ್ತಿದ್ದವರಿಗೆ ಅಡ್ಡಿಪಡಿಸಲಾಗಿದೆ.

    ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ತ್ಯಾಜ್ಯ ವಿಲೇವಾರಿ ಮಾಡಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಗವಿಲ್ಲ. ನದಿ ತೀರ, ರಸ್ತೆ ಬದಿ ತೆಗೆದುಕೊಂಡು ಹೋಗಿ ಹಾಕಿದವರಿಗೆ ಪಾಲಿಕೆ ದಂಡ ವಿಧಿಸಿದೆ. ಪ್ರಸಕ್ತ ಸ್ವತಃ ಸ್ಮಾರ್ಟ್ ಸಿಟಿ ಸಂಸ್ಥೆಗೇ ಇಂಥದೊಂದು ಸಮಸ್ಯೆ ಎದುರಾಗಿದೆ. ರಥಬೀದಿಯಲ್ಲಿ ರಸ್ತೆ ಕಾಂಕ್ರೀಟ್ ಹಾಗೂ ಒಳಚರಂಡಿ ಕಾಮಗಾರಿಗೆ ಅಗೆದು ಹಾಕಲಾದ ಮಣ್ಣನ್ನು ಮೈದಾನದ ಒಳಗೆ ತಂದು ಸುರಿಯಲಾಗಿದೆ.
    ಕರಾವಳಿ ಉತ್ಸವ ಮೈದಾನವನ್ನು ಮಧ್ಯದಲ್ಲಿ ಬೇಲಿ ಹಾಕಿ ಎರಡು ಭಾಗಗಳಾಗಿ ಮಾಡಲಾಗಿದ್ದು, ವಸ್ತುಪ್ರದರ್ಶನ ನಡೆಯುವ ಭಾಗದಲ್ಲಿ ಮಣ್ಣು ಸುರಿಯಲಾಗಿದೆ. ಇದರಿಂದ ಪ್ರತಿನಿತ್ಯ ವಾಕಿಂಗ್, ಜಾಗಿಂಗ್ ಮಾಡುವವರಿಗೆ, ಮೈದಾನದಲ್ಲಿ ಆಡುತ್ತಿದ್ದವರಿಗೆ ಸಮಸ್ಯೆಯಾಗಿದೆ. ಲಘು ವಾಹನ ಕಲಿಯುವವರೂ ಈ ಮೈದಾನವನ್ನು ಅಭ್ಯಾಸಕ್ಕೆ ಬಳಸುತ್ತಿದ್ದರು. ಇವರೆಲ್ಲರಿಗೂ ಸದ್ಯ ಜಾಗವಿಲ್ಲದಂತಾಗಿದೆ. ಜತೆಗೆ ತ್ಯಾಜ್ಯ ವಿಲೇವಾರಿ ಸಂಬಂಧಿಸಿದ ವಾಹನಗಳನ್ನೂ ಇಲ್ಲೇ ನಿಲ್ಲಿಸಲಾಗುತ್ತಿದ್ದು, ಇದರಿಂದಲೂ ಜಾಗದ ಸಮಸ್ಯೆಯಾಗಿದೆ.

    ಶೀಘ್ರ ತೆರವು ಭರವಸೆ: ಕಾಮಗಾರಿ ನಡೆಯುವ ಸಮೀಪದಲ್ಲಿ ಮಣ್ಣು ಸಂಗ್ರಹ ಮಾಡಲು ಜಾಗ ಇಲ್ಲದಿರುವುದರಿಂದ ಕ್ರೀಡಾ ಇಲಾಖೆ ಅನುಮತಿ ಮೇರೆಗೆ ತಾತ್ಕಾಲಿಕವಾಗಿ ಕರಾವಳಿ ಉತ್ಸವ ಮೈದಾನದಲ್ಲಿ ಮಣ್ಣು ಸುರಿಯಲಾಗಿದೆ. ಕಾಮಗಾರಿಗೆ ಮತ್ತೆ ಮಣ್ಣಿನ ಅವಶ್ಯಕತೆಯಿದ್ದು, ಅದೇ ಮಣ್ಣು ಬಳಸಲಾಗುವುದು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ. ಮೈದಾನದಲ್ಲಿ ಕ್ರೀಡಾ ಇಲಾಖೆಗೆ ಸಂಬಂಧಿಸಿದ ಮಣ್ಣು ಕೂಡಾ ಹಾಕಲಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಸಮತಟ್ಟು ಗೊಳಿಸಲಾಗುವುದು ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಮಾರ್ಟ್ ಸಿಟಿ ಕಾಮಗಾರಿಗೆ ಸಂಬಂಧಿಸಿದ ಮಣ್ಣನ್ನು ತಾತ್ಕಾಲಿಕವಾಗಿ ಕರಾವಳಿ ಉತ್ಸವ ಮೈದಾನದಲ್ಲಿ ಹಾಕಿದ್ದಾರೆ. ಈ ವಾರದಲ್ಲಿ ತೆರವುಗೊಳಿಸುವುದಾಗಿ ಸಂಸ್ಥೆಯವರು ತಿಳಿದ್ದಾರೆ. ಸದ್ಯ ಯಾವುದೇ ಪ್ರದರ್ಶನಗಳು ಆಯೋಜನೆಗೊಳ್ಳದಿರುವುದರಿಂದ ಅನುಮತಿ ನೀಡಲಾಗಿದೆ.
    ಪ್ರದೀಪ್ ಡಿಸೋಜ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts