More

    ದೇವತಾ ವಿಗ್ರಹಗಳು; ಜ್ಞಾನಿಗಳು ನಮಗೆ ಕೊಟ್ಟು ಹೋದ ಬೊಂಬೆಗಳಂತೆ..

    ದೇವತಾ ವಿಗ್ರಹಗಳನ್ನು ಕಾಣಬೇಕಾದ ರೀತಿಯನ್ನು ಕುರಿತು ಶ್ರೀರಂಗ ಮಹಾಗುರುಗಳ ಅಭಿಪ್ರಾಯ ಹೀಗಿತ್ತು – ಜ್ಞಾನಿಗಳು ಆತ್ಮಯೋಗದಲ್ಲಿ ಕಂಡ ಸತ್ಯವನ್ನು ಶಿಲಾಯೋಗದಲ್ಲಿ ಸೇರಿಸಿದ್ದಾರೆ. ಮಕ್ಕಳು ಬೊಂಬೆಗಳನ್ನು ಇಟ್ಟು ಕೊಂಡು ಆಡುವಾಗ, ಅವುಗಳ ಬೊಂಬೆತನವನ್ನು ಮರೆತು ಇದು ತಾಯಿ, ಇದು ಮಗು ಎಂದೇ ವ್ಯವಹರಿಸುತ್ತವೆ. ಅದೇ ರೀತಿ ದೇವತಾ ಮೂರ್ತಿಗಳು ಸಹ, ಜ್ಞಾನಿಗಳು ನಮಗೆ ಕೊಟ್ಟು ಹೋದ ಬೊಂಬೆಗಳಂತೆ. ಇವುಗಳನ್ನು ಇಟ್ಟುಕೊಂಡು ಆಡುವಾಗಲೆಲ್ಲಾ ಅದರ ಹಿಂದಿನ ಅಮರ ಭಾವವು ನಮ್ಮ ಹೃನ್ಮನಗಳಲ್ಲಿ ಆಡಬೇಕು.

    | ಡಾ. ಮೋಹನ ರಾಘವನ್

    ರಾಮಪ್ಪಾಚಾರಿ ಹೆಸರಾಂತ ಸ್ಥಪತಿಗಳ ವಂಶದಲ್ಲಿ ಹುಟ್ಟಿದ ಕುಶಲ ಶಿಲ್ಪಿಯಾಗಿದ್ದ. ಆದರೆ ಅವನ ಕಲೆ-ಪ್ರತಿಭೆಗಳಿಗೆ ತಕ್ಕ ಕೀರ್ತಿ-ಪುರಸ್ಕಾರಗಳು ದೊರಕಿರಲಿಲ್ಲ. ಬಡತನದಲ್ಲಿ ನರಳುತ್ತಿದ್ದ. ದೇಶದ ರಾಜರೊಮ್ಮೆ ದಿಗ್ವಿಜಯದಿಂದ ಯಶಸ್ವಿಯಾಗಿ ಹಿಂತಿರುಗಿ ಕೃತಜ್ಞತಾಭಾವದಿಂದ ರಾಜಧಾನಿಯಲ್ಲಿ ದೊಡ್ಡ ಆಲಯವೊಂದನ್ನು ಕಟ್ಟುವುದಾಗಿ ನಿಶ್ಚಯಿಸಿದರು. ಈ ಕಾರ್ಯಕ್ಕಾಗಿ ಅತ್ಯಂತ ಪ್ರತಿಭಾವಂತ ಸ್ಥಪತಿಗಳನ್ನು ಹುಡುಕಬೇಕೆಂದು ಸ್ಪರ್ಧೆಯನ್ನು ಆಯೋಜಿಸಿದರು. ಅತ್ಯಂತ ಸುಂದರವೂ ಆಗಮೋಕ್ತವೂ ಆದ ವಿಷ್ಣುಮೂರ್ತಿಯನ್ನು ನಿರ್ವಿುಸುವವರಿಗೆ ದೇವಾಲಯದ ಬೃಹತ್ಕಾರ್ಯದ ಮುಖಂಡತ್ವವನ್ನು ವಹಿಸುವುದಾಗಿ ಘೊಷಣೆ ಮಾಡಿಸಿದರು. ಇದನ್ನು ಕೇಳಿ ರಾಮಪ್ಪನಲ್ಲಿ ಬಹಳ ಸಂತೋಷ-ಉತ್ಸಾಹಗಳು ತುಂಬಿದವು. ಕೆತ್ತನೆಯ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸಿದನು. ಅಹೋರಾತ್ರ ದುಡಿದು, ಭಕ್ತಿ-ಶ್ರದ್ಧೆಗಳಿಂದ ಅವನ ಇಷ್ಟ-ದೈವವಾಗಿದ್ದ ವಿಷ್ಣುವಿನ ಚತುರ್ಭಜ ಮೂರ್ತಿಯೊಂದನ್ನು ನಿರ್ವಿುಸಲಾರಂಭಿಸಿದ. ಅದೇ ಊರಿನ ಮಾದಾಚಾರಿಯೂ ಪ್ರತಿಭಾ-ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉದ್ಯುಕ್ತನಾದ. ಕೆಲವು ತಿಂಗಳ ನಂತರ ಇಬ್ಬರೂ ತಮ್ಮ ಮೂರ್ತಿಗಳನ್ನು ರಾಜಧಾನಿಯಲ್ಲಿ ಪ್ರಸ್ತುತಪಡಿಸಿದರು. ಉಳಿದ ಅನೇಕ ಪ್ರತಿಸ್ಪರ್ಧಿಗಳಿದ್ದರೂ ಇವರಿಬ್ಬರ ಶಿಲ್ಪಸೌಂದರ್ಯ ಎದ್ದುಕಾಣುವಂತಿದ್ದುದರಿಂದ ರಾಜರ ಹಾಗೂ ಕುಲಗುರುಗಳ ಮನಸ್ಸನ್ನು ಸೆಳೆದವು. ಕುಲಗುರುಗಳ ಜತೆ ಸಮಾಲೋಚಿಸಿ ರಾಜನು ಇವರಿಬ್ಬರ ಶಿಲ್ಪಗಳನ್ನು ರಾಜಧಾನಿಯ ಪ್ರಧಾನ ಚೌಕದಲ್ಲಿ ಪ್ರದರ್ಶಿಸುವಂತೆ ಆಜ್ಞಾಪಿಸಿದರು. ಸಮಸ್ತ ಪೌರರ ಹಾಗೂ ಗುರುಹಿರಿಯರ ಅಭಿಪ್ರಾಯಗಳನ್ನೂ ತೆಗೆದುಕೊಂಡು ಸ್ಪರ್ಧಾ ಫಲಿತಾಂಶವನ್ನು ಘೊಷಿಸುತ್ತೇವೆಂದರು. ಮರುದಿವಸ ರಾಮಪ್ಪ, ಮಾದಪ್ಪ ಹಾಗೂ ಇತರ ಶಿಲ್ಪಿಗಳು ಯಾರ ಶಿಲ್ಪವು ಆಯ್ಕೆಯಾಗಿದೆಯೆಂದು ನೋಡುವ ಕುತೂಹಲದಿಂದ ರಾಜಬೀದಿಗೆ ಹೋದರು. ಅಲ್ಲಿ ವಿಜೃಂಭಣೆಯಿಂದ ಅವರಿಬ್ಬರ ಶಿಲ್ಪಗಳು ಎತ್ತರವಾದ ಸ್ಥಾನ ಪಡೆದಿದ್ದವು. ಇಬ್ಬರ ಸಂತೋಷಕ್ಕೆ ಎಲ್ಲೆಯಿಲ್ಲದಂತಾಯಿತು. ಆದರೆ ಹತ್ತಿರ ನೋಡಿದಾಗ ಅವರ ಎದೆ ಕುಸಿಯುವ ದೃಶ್ಯ! ಅವರ ಅದ್ಭುತ ಶಿಲ್ಪಕಲಾಕೃತಿಗಳ ಕೆಳಗೆ ಆಸ್ಥಾನ ಸ್ಥಪತಿಗಳ ಹೆಸರನ್ನು ನಮೂದಿಸಲಾಗಿತ್ತು. ಅಲ್ಲಿಗೆ ಬಂದ ಆಸ್ಥಾನಸ್ಥಪತಿಗಳು ಕೃತಕವಾದ ವಿನಯದೊಂದಿಗೆ ಜನರ ಹೊಗಳಿಕೆಗಳನ್ನೂ ಅಭಿನಂದನೆಗಳನ್ನೂ ಸ್ವೀಕರಿಸುತ್ತಾ ಮೆರೆಯುತ್ತಿದ್ದರು. ಇದು ಆಸ್ಥಾನ ಸ್ಥಪತಿಗಳ ಪಿತೂರಿಯೆಂದು ತಿಳಿದರು. ರಾಮಪ್ಪನು ಆಶ್ಚರ್ಯಗೊಂಡರೂ ನಿಸ್ಪೃನಾಗಿ ಭಕ್ತಿಯಿಂದ ಕಣ್ಣೀರು ಸುರಿಸುತ್ತಾ ಪಕ್ಕದಲ್ಲಿದ್ದ ತುಳಸೀದಳವೊಂದನ್ನು ತನ್ನ ವಿಷ್ಣುಮೂರ್ತಿಯ ಪಾದಕ್ಕೆ ಅರ್ಪಿಸಿ ಬೀಳ್ಕೊಟ್ಟು, ನಡೆದುಬಿಟ್ಟನು. ಇಬ್ಬರೂ ತಂಗುದಾಣದಲ್ಲಿ ರಾತ್ರಿ ಕಳೆದು ಮರುದಿವಸವೇ ಹಳ್ಳಿಗೆ ಹಿಂದಿರುಗುವ ನಿಶ್ಚಯ ಮಾಡಿದರು, ಆದರೆ ಮಾದಪ್ಪನ ಮನಸ್ಸಲ್ಲಿ ಕೋಪದ ಬಿರುಗಾಳಿ ಬೀಸುತ್ತಿತ್ತು. ಕಪಟಿಗಳಾದ ಆಸ್ಥಾನ ಸ್ಥಪತಿಗಳಿಗೆ ಪಾಠ ಕಲಿಸಿಕೊಡಬೇಕೆಂದು ತೀರ್ವನಿಸಿದ. ರಾತ್ರಿಯ ಕತ್ತಲಲ್ಲಿ ರಾಜಮಾರ್ಗದಲ್ಲಿ ಇಟ್ಟಿದ್ದ ಶಿಲ್ಪಗಳನ್ನು ಸಮೀಪಿಸಿದ. ಎರಡು ಉಳಿಪೆಟ್ಟನ್ನು ಹಾಕಿ, ಮೂರ್ತಿಗಳ ಉದ್ದವಾದ ಮೂಗನ್ನು ವಿಕಾರಗೊಳಿಸಿ ಯಾರಿಗೂ ತಿಳಿಯದಂತೆ ಹಿಂತಿರುಗಿದ. ಬೆಳಗಾಗುತ್ತಲೇ ರಾಮಪ್ಪನು ಸ್ವಗ್ರಾಮಕ್ಕೆ ತೆರಳಿದ. ಆದರೆ ಮಾದಪ್ಪ ಶಿಲ್ಪಪ್ರದರ್ಶಿನಿಯ ಹತ್ತಿರ ಹೋಗಿ ಜನಗಳ ಗುಂಪಿನಲ್ಲಿ ಕಲೆತು ನಿಂತ. ಮಹಾರಾಜರು ಸ್ಪರ್ಧೆಯ ತೀರ್ಪನ್ನು ಹೇಳಲು ಆಗಮಿಸಿದರು. ರಾಜರ ತೀರ್ಪು ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿತು. ರಾಜನ ಭಟರು ರಾಮಪ್ಪನನ್ನುಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕರೆತಂದು ಸನ್ಮಾನಿಸಿ ಆಲಯ ನಿರ್ವಣಕ್ಕೆ ಪ್ರಧಾನ ಸ್ಥಪತಿಯನ್ನಾಗಿ ನೇಮಿಸಿ, ಆಸ್ಥಾನ ಸ್ಥಪತಿಗಳನ್ನು ಕಾರ್ಯನಿವೃತ್ತರನ್ನಾಗಿಸಿದರು. ಮಾದಪ್ಪನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು. ಆಶ್ಚರ್ಯವೆಂದರೆ, ಶಿಲ್ಪಗಳ ಕೆಳಗೆ ಆಸ್ಥಾನಸ್ಥಪತಿಗಳ ಹೆಸರನ್ನು ಹಾಕಿಸಿದ್ದೂ ರಾಜನೇ ಎಂದು ತಿಳಿಯಿತು. ರಾಜಗುರುಗಳೊಂದಿಗೆ ಆಲೋಚಿಸಿ ಕಲ್ಪಿಸಿದ ಪ್ರಾಮಾಣಿಕತೆ ಮತ್ತು ಭಕ್ತಿಯ ಪರೀಕ್ಷೆಯಾಗಿತ್ತದು. ಈ ಪರೀಕ್ಷೆಯಲ್ಲಿ ಉತ್ತೀರ್ಣನಾದ ರಾಮಪ್ಪನೋ, ತನ್ನ ಇಷ್ಟದೈವದ ಪಾದದಲ್ಲಿ ಕುಳಿತು ಆನಂದಬಾಷ್ಪ ಹರಿಸುತ್ತಿದ್ದ !

    ***

    ಶಿಲ್ಪಕಲೆಯು ಭಾರತದ ಪರಮಾದ್ಭುತ ಕಲೆಗಳಲ್ಲಿ ಒಂದು. ಕೆತ್ತನೆಯಲ್ಲಿ ಕೌಶಲ್ಯ ಅನೇಕ ದೇಶಗಳಲ್ಲಿ ಕಂಡುಬರುವುದೇ ಆದರೂ ಭಾರತದಲ್ಲಿ ಈ ಶಾಸ್ತ್ರವು ಬೆಳೆದುಬಂದ ಹಿನ್ನೆಲೆ, ಉದ್ದೇಶ್ಯ ಮತ್ತು ಮನೋಧರ್ಮಗಳು ತುಂಬಾ ವಿಶಿಷ್ಟವಾಗಿವೆ. ಶಿಲ್ಪಿಯನ್ನು ಸೃಷ್ಟಿಕರ್ತನಾದ ಬ್ರಹ್ಮನಿಗೆ ಹೋಲಿಸಿದ್ದಾರೆ. ದೇವಶಿಲ್ಪಿಯ ಹೆಸರೇ ವಿಶ್ವಕರ್ಮ. ಶಿಲ್ಪಿಯು ಬ್ರಹ್ಮನಂತೆ ಕಲ್ಲಿನಲ್ಲೋ ಮರದಲ್ಲೋ ತನ್ನದೇ ಆದ ಒಂದು ಪ್ರಪಂಚವನ್ನು ನಿರ್ವಿುಸಬಲ್ಲ. ಆದರೆ ಅವನು ಕಲ್ಪಿಸುವ ಪ್ರಪಂಚ ಯಾವುದು? ಇಲ್ಲಿ ಶಿಲ್ಪ ಎಂಬ ಪದವೇ ಸಮಾಧಿ ಎಂಬರ್ಥವನ್ನು ಸಾರುತ್ತಿದೆ. ಋಷಿಗಳು, ಜ್ಞಾನಿಗಳು ತಮ್ಮೊಳಗೆ ಕಂಡ ದೇವತಾ ರೂಪಗಳನ್ನು ಅಂತೆಯೇ ಶಿಲ್ಪಕ್ಕೆ ಇಳಿಯುವಂತೆ ಮಾಡಿದರೆ, ಆ ಶಿಲ್ಪಿಯು ಜ್ಞಾನಿಗಳ ಸಮಾಧಿಸಾಮ್ರಾಜ್ಯವನ್ನೂ, ದೈವೀ ಲೋಕದ ಸಮಾಚಾರವನ್ನೂ ಈ ಲೋಕದಲ್ಲಿ ನಿರ್ವಿುಸಿದ ವಿಶ್ವಕರ್ಮನಾಗುತ್ತಾನೆ. ಶಿಲ್ಪಿಯ ಈ ಸೃಷ್ಟಿಕಾರ್ಯ ನಡೆಯಬೇಕಾದರೆ ವಿಧಿ- ವಿಧಾನಗಳ ಒಂದು ಚೌಕಟ್ಟು ಬೇಕು. ಬ್ರಹ್ಮನಿಗೂ ವಿಧಿ ವಿಧಾನಗಳು ತಪ್ಪಿದ್ದಲ್ಲ. ಜಗನ್ಮಾತಾಪಿತೃಗಳಾದ ಲಕ್ಷ್ಮೀ-ನಾರಾಯಣರ ಸಂಕಲ್ಪದಂತೆ ಕಾರ್ಯವನ್ನು ನಡೆಸಬೇಕು. ಈ ವಿಧಿ – ವಿಧಾನಗಳು ಯಾರೊಬ್ಬರ ಇಷ್ಟ-ಅನಿಷ್ಟಗಳ ಪಟ್ಟಿಯಲ್ಲ. ಇವು ಸೃಷ್ಟಿಸಹಜವಾಗಿಯೇ ಇರುತ್ತವೆ. ಒಂದು ವೃಕ್ಷದ ಸೃಷ್ಟಿಯಾಗಬೇಕಾದರೆ, ಬೀಜ, ಅಂಕುರ, ಕಾಂಡ, ಶಾಖೆ, ಹೂವು, ಕಾಯಿ ಹಣ್ಣು ಮುಂತಾದ ಹಂತಗಳನ್ನು ತಾಳಿ ಹಣ್ಣಿನೊಳಗೆ ಪ್ರಾರಂಭದ ಬೀಜವೇ ಪುನಃ ಕಾಣಿಸಿಕೊಳ್ಳುತ್ತೆ.

    ಅಂತೆಯೇ ಶಿಲ್ಪದ ಬೀಜವು ಜ್ಞಾನಿಗಳ ಧ್ಯಾನ ಸಾಮ್ರಾಜ್ಯದಲ್ಲಿರುವುದು. ಅದು ಅಂಕುರ ಒಡೆಯುವುದು ಶಿಲ್ಪಿಯ ಅಮೃತಹಸ್ತದಿಂದ. ಒಳ ದರ್ಶನದ ದೇವತಾ ಮೂರ್ತಿಗಳ ಲಕ್ಷಣಗಳು, ಮುಖಭಾವಗಳು ಅಂತೆಯೇ ಕಲ್ಲಿನಲ್ಲಿ ಮುದ್ರಿತವಾಗಬೇಕು. ಹಾಗಾದರೆ ಅಂಕುರವು ವೃಕ್ಷವಾಗಿ ಬೆಳೆದು ಒಳ ಅನುಭವದ ಪ್ರತಿಕೃತಿಯಾಗಿ ದೇವತಾಮೂರ್ತಿಯ ರೂಪ ತಾಳುತ್ತದೆ. ದೇವತಾ ವಿಗ್ರಹದ ಅಳತೆಗಳು, ಅವುಗಳ ನಿಲುವು, ಭಂಗಿ, ಆಳವಾದ ದೃಷ್ಟಿ, ಕೈಯಲ್ಲಿನ ಆಯುಧಗಳು ಎಲ್ಲವೂ ದರ್ಶನಾರ್ಥಿಗಳ ಮನಸ್ಸನ್ನು ಒಳಸೆಳೆಯುವ ಸಾಧನಗಳಾಗಿವೆ. ದೀಪಜ್ಯೋತಿಯಲ್ಲಿ ಅದರ ದರ್ಶನ ಶಂಖ, ಘಂಟೆ ಮುಂತಾದುವುಗಳ ಶ್ರವಣ, ತುಳಸಿ ಮತ್ತು ಸುಗಂಧಿತ ಪುಷ್ಪಗಳ ಕಂಪು, ಹೃದಯದಲ್ಲಿ ಇಂಪು-ತಂಪುಗಳನ್ನು ಮೂಡಿಸುತ್ತವೆ. ಜ್ಞಾನಿಗಳ ಹೃದಯದಲ್ಲಿಂದ ಹೊರಟ ಒಂದು ಅನುಭವದ ಬೀಜದಿಂದ ಬೆಳೆದ ವೃಕ್ಷದ ಫಲವೆಂದರೆ ಭಕ್ತರ ಹೃದಯದಲ್ಲಿನ ಈ ತಂಪು. ಅಲ್ಲಿಗೆ ಒಂದು ವೃತ್ತವು ಪೂರ್ಣಗೊಂಡಂತೆ. ಈ ವೃತ್ತವು ಪೂರ್ಣಗೊಳ್ಳಬೇಕಾದರೆ, ಶಿಲ್ಪಕ್ಕೆ ತಕ್ಕ ಮನೋಧರ್ಮಗಳು ಬೇಕು. ಮೇಲಿನ ಕಥೆಯಲ್ಲಿ ರಾಜಗುರುವಿನ ನೇತೃತ್ವದಲ್ಲಿ ರಾಜರು ಪರಮಾನಂದಾನುಭವದ ಬೀಜದ ವ್ಯವಸಾಯವನ್ನೇ ಮಾಡುತ್ತಿದ್ದರು. ದೇವತಾ ಮೂರ್ತಿಗಳು ಒಳ್ಳೆಯ ಪ್ರತಿಕೃತಿಗಳಾಗಬೇಕಾದರೆ ಕಲಾ ಪ್ರಾವೀಣ್ಯವಂತೂ ಅತ್ಯಾವಶ್ಯಕ. ಆದರೆ ಬೆಳೆಯನ್ನು ಬೆಳೆಯುವವನು ಕಳೆಯನ್ನೂ ಬೆಳೆದರೆ ಅದು ಮಾರಕವಾಗುತ್ತದೆ. ಕಾಮ-ಕ್ರೋಧ-ಅಸೂಯೆಗಳು, ಕೀರ್ತಿಕಾಮನೆಗಳು ಕಲೆಯ ಬೆಳವಣಿಗೆಯಲ್ಲಿ ತೊಡಕಾದ ಕಳೆಗಳು. ಆಸ್ಥಾನ ಸ್ಥಪತಿಗಳಿಗೆ ಮೂರ್ತಿಗಳ ಕೆಳಗೆ ತಮ್ಮ ಹೆಸರು ನಮೂದಿಸಿದ್ದನ್ನು ನೋಡಿ ಆಶ್ಚರ್ಯವಾದರೂ ನಿಸ್ಸಂಕೋಚವಾಗಿ ಚಪ್ಪಾಳೆಗಳನ್ನು ಸ್ವೀಕರಿಸಿ ಮೆರೆದರು. ಇದು ಚೌರ್ಯವೇ ಸರಿ. ಇಂತಹ ಪ್ರವೃತ್ತಿಗಳು ಋಷಿಭಾವಕ್ಕೆ ವಿರುದ್ಧವಾದವುಗಳು. ಮಾದಪ್ಪನೋ ಕ್ರೋಧವಶನಾಗಿ ತನ್ನದೇ ಆದ ಸೃಷ್ಟಿಯನ್ನು ನಾಶ ಮಾಡಲು ಸಿದ್ಧನಾದ. ಮಾದಪ್ಪನು ಕೆತ್ತಿದ ಮೂರ್ತಿಯು ಜ್ಞಾನಿಗಳ ಹೃದಯದ ಶಿಲ್ಪವಲ್ಲ, ತನ್ನ ಕೀರ್ತಿಕಾಮನೆಯ ಸಾಧನವಾಗಿತ್ತು. ಆದ್ದರಿಂದಲೇ, ಕೀರ್ತಿಯು ತನ್ನ ಪಾಲಿಗೆ ಅಸಾಧ್ಯವೆಂದು ತಿಳಿದಾಗ ಆ ಮೂರ್ತಿಯು ಅವನಿಗೆ ಬರೀ ಕಗ್ಗಲ್ಲಿನಂತೆ ಕಂಡಿತು. ಆದರೆ ರಾಮಪ್ಪನಿಗೆ ಆ ಮೂರ್ತಿಯು ಪವಿತ್ರವಾದ ದೇವತೆಯ ಸಾಕ್ಷಾತ್ ಆವಿರ್ಭಾವವೇ ಆಗಿತ್ತು. ಅವನಿಗಾದ ಅನ್ಯಾಯದಿಂದ ಮೂರ್ತಿಯ ದೈವತ್ವ ಅವನ ಕಣ್ಣಿಂದ ಮರೆಯಾಗಲಿಲ್ಲ. ಅದನ್ನು ಕಲ್ಲಿನಂತೆ ಎಂದೂ ಭಾವಿಸಲಿಲ್ಲ. ಪೂರ್ವಜರಿಂದ ಕಲಿತ ಕಲೆಯ ಪ್ರಯೋಗದಿಂದ ಸೃಷ್ಟವಾದ ತನ್ನ ಇಷ್ಟದೈವವೆಂದೇ ಭಾವಿಸಿದ. ತುಳಸಿಯ ಒಂದು ದಳವನ್ನು ಸಮರ್ಪಿಸಿ ತನ್ನ ಇಷ್ಟದೈವಕ್ಕೂ, ಪೂರ್ವಜರಿಗೂ, ವಿಶ್ವಕರ್ಮನಿಗೂ, ಬ್ರಹ್ಮನಿಗೂ ಸಲ್ಲಬೇಕಾದ ಕಾಣಿಕೆಯನ್ನು ಸಲ್ಲಿಸಿಬಿಟ್ಟ. ಶಾಂತಿ-ನೆಮ್ಮದಿಗಳ ಆಗರವಾಗಿರಬೇಕಾದ ಮೂರ್ತಿಯನ್ನು ಕೆತ್ತಲು ಪ್ರೀತಿ-ಭಕ್ತಿ-ಸಂಯಮದಿಂದಲೇ ಸಾಧ್ಯ.

    (ಲೇಖಕರು ಆಧ್ಯಾತ್ಮಿಕ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts