More

    ಶಾಖಾಹಾರಿ ಕನ್ನಡ ಸಿನಿಮಾ ಫೆ.16ರಂದು ತೆರೆಗೆ

    ಶಿವಮೊಗ್ಗ: ಟ್ರೇಲರ್ ಮೂಲಕವೇ ಸಾಕಷ್ಟು ಗಮನಸೆಳೆದಿರುವ ಶಾಖಾಹಾರಿ ಕನ್ನಡ ಸಿನಿಮಾ ಫೆ.16ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಹೀಗಾಗಿ ಚಿತ್ರದ ಪ್ರಮೋಷನ್‌ಗೆಂದು ಶಿವಮೊಗ್ಗಕ್ಕೆ ಬುಧವಾರ ಆಗಮಿಸಿದ್ದ ಚಿತ್ರತಂಡ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿತು. ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಇದೇ ಜಿಲ್ಲೆಯವರು ಎಂಬುದು ಚಿತ್ರದ ಮತ್ತೊಂದು ವಿಶೇಷವಾಗಿದೆ.

    ರಂಗಾಯಣ ರಘು ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಣ್ಣನೆಯ ಕ್ರೌರ್ಯ, ಒಂದಿಷ್ಟು ಕುತೂಹಲ, ಅಲ್ಲಲ್ಲಿ ಭಾವನಾತ್ಮಕ ಸನ್ನಿವೇಶ, ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ತೆರೆದಿಡುವ ಛಾಯಾಗ್ರಹಣ..ಹೀಗೆ ಸಿನಿಪ್ರಿಯರಿಗೆ ಇಷ್ಟವಾಗುವ ಎಲ್ಲ ಸಂಗತಿಗಳೂ ಚಿತ್ರದಲ್ಲಿ ಸಮ್ಮಿಲನಗೊಂಡಿವೆ.
    ಶಿವಮೊಗ್ಗದ ರಂಗಕರ್ಮಿ ಎಸ್.ಆರ್.ಗಿರೀಶ್ ಅವರ ನಾಟಕದ ತುಣುಕೊಂದನ್ನು ಆಧರಿಸಿ ಶಾಖಾಹಾರಿಯ ಚಿತ್ರಕತೆ ರಚನೆಯಾಗಿದೆ. ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಸುತ್ತಮುತ್ತಲೂ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತು ಶುರುವಿಟ್ಟುಕೊಂಡರು.
    ಚಿತ್ರ ಅದ್ಭುತವಾಗಿ ಮೂಡಿಬರುವಲ್ಲಿ ಇಡೀ ತಂಡ ಶ್ರಮವಹಿಸಿದೆ. ಚಿತ್ರದ ತಯಾರಿ, ಪ್ರಮೋಷನ್, ಮಾರ್ಕೇಟಿಂಗ್ ಎಲ್ಲವೂ ಅಂದುಕೊಂಡಂತೆಯೇ ಮಾಡಿದ್ದೇವೆ. ಶಿವಮೊಗ್ಗದವರು ಚಿತ್ರದ ಎಲ್ಲ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಉತ್ತಮ ಹಾಡುಗಳು, ಅತ್ಯುತ್ತಮ ಫೋಟೋಗ್ರಫಿ ಚಿತ್ರದ ಪ್ರಮುಖ ಅಂಶವಾಗಿದೆ ಎಂದರು.
    ಚಿತ್ರಕ್ಕೆ ಕಥೆಯೇ ನಾಯಕ. ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆಯಂತವರು ಚಿತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಸುಜಯ್ ಶಾಸಿ, ಪ್ರತಿಮಾ ನಾಯಕ್, ಹರಿಣಿ, ವಿನಯ್, ಶ್ರೀಹರ್ಷ ಗೋಭಟ್ಟ, ನಿಧಿ ಹೆಗಡೆ ಪಾತ್ರ ನಿರ್ವಹಿಸಿದ್ದಾರೆ ಎಂದು ವಿವರಿಸಿದರು.
    ನಿರ್ಮಾಪಕರಲ್ಲಿ ಒಬ್ಬರಾಗಿರುವ ರಾಜೇಶ್ ಕೀಳಂಬಿ ಮಾತನಾಡಿ, ಸಿನಿಮಾ ವೀಕ್ಷಕನಾಗಿದ್ದ ನಾನು ನಿರ್ಮಾಪಕನಾಗಿ ಮೊದಲ ಪ್ರಯತ್ನ ಮಾಡಿದ್ದೇನೆ. ನನ್ನೊಂದಿಗೆ ರಂಜಿನಿ ಪ್ರಸನ್ನ ಕೂಡ ನಿರ್ಮಾಪಕಿಯಾಗಿದ್ದಾರೆ. ಬೆಂಗಳೂರು ಕೇಂದ್ರಿತವಾಗಿರುವ ಚಿತ್ರೋದ್ಯಮವನ್ನು ಶಿವಮೊಗ್ಗದಂತಹ ಜಿಲ್ಲೆಗಳಿಗೂ ವಿಸ್ತರಿಸಬೇಕೆಂಬ ಉದ್ದೇಶದಿಂದ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂದರು.
    ಶಿವಮೊಗ್ಗದಂತಹ ಜಿಲ್ಲಾ ಕೇಂದ್ರದಲ್ಲಿ ಸಿನಿಮಾ ಉದ್ಯಮವಾಗಿ ಬೆಳೆಯುವುದರಿಂದ ಹಲವರಿಗೆ ಉದ್ಯೋಗ ದೊರೆಯುತ್ತದೆ. ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ. ಬರಹಗಾರರು, ತಂತ್ರಜ್ಞರನ್ನು ಬೆಳಕಿಗೆ ತರಲು ಅನುಕೂಲವಾಗುತ್ತದೆ ಎಂದು ತಮ್ಮ ಚಿಂತನೆಯನ್ನು ವಿವರಿಸಿದರು.
    ನಟ ಗೋಪಾಲಕೃಷ್ಣ ದೇಶಪಾಂಡೆ ಮಾತನಾಡಿ, ಇದೊಂದು ಅಪರೂಪದ ಸರಳವಾದ ಕಥೆ. ಇಲ್ಲಿ ಸ್ಥಳೀಯರು ಅಭಿನಯಿಸಿದ್ದಾರೆ. ಸ್ಥಳೀಯ ಸಂಸ್ಕೃತಿ ಇದೆ. ಚಿತ್ರ ಹೆಚ್ಚು ಜನರನ್ನು ತಲುಪುತ್ತದೆ ಎಂಬ ವಿಶ್ವಾಸವಿದೆ. ಈ ಚಿತ್ರ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts