More

    ಸಾಹಿತಿಗಳಲ್ಲಿ ಸರ್ವಜ್ಞತ್ವ ಬೇಡ : ವಿಮರ್ಶಕ ಎಚ್‌ಎಸ್‌ಆರ್ ಸಲಹೆ

    ಬೆಂಗಳೂರು: ಕೆಲ ಸಾಹಿತಿಗಳಿಗೆ ಸರ್ವಜ್ಞತ್ವದ ಮಂಕು ಕವಿದಿರುತ್ತದೆ ಎಂದು ವಿಮರ್ಶಕ ಹಾಗೂ ಬರಹಗಾರ ಎಚ್.ಎಸ್. ರಾಘವೇಂದ್ರ ರಾವ್ ಹೇಳಿದ್ದಾರೆ.

    ಸಾಹಿತ್ಯ ಅಕಾಡೆಮಿ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಲೇಖಕರೊಂದಿಗೆ ಭೇಟಿ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ತಮ್ಮ ಜೀವನ- ಸಾಹಿತ್ಯ ಬಗ್ಗೆ ಮಾತನಾಡಿದರು.

    ಸಾಹಿತಿಯಾದವನು ಸಾಹಿತ್ಯವನ್ನಷ್ಟೇ ಓದಿಕೊಳ್ಳುತ್ತೇನೆ ಎಂದರೆ ಸರಿಯಲ್ಲ. ಎಲ್ಲವನ್ನೂ ಓದುವ, ಗ್ರಹಿಸುವ, ಯೋಚಿಸುವ ಅಭ್ಯಾಸ ಮತ್ತು ಆಸಕ್ತಿ ಹೊಂದಿರಬೇಕು. ತನಗೆ ಗೊತ್ತಿರುವ ವಿಷಯವೇ ಸರಿಯಾಗಿ ತಿಳಿಯದಿದ್ದಾಗ ಗೊತ್ತಿಲ್ಲದ ವಿಚಾರಗಳನ್ನು ಬರೆಯಲು ಹೋಗಬಾರದು. ಲೋಕದಲ್ಲಿನ ಕೌತುಕಗಳನ್ನು ತಿಳಿಯಬೇಕು. ಹಾಗೆಂದು ಅದನ್ನೆಲ್ಲ ಬರೆಯುತ್ತೇನೆ ಎನ್ನುವುದು ಸರಿಯಲ್ಲ. ಸ್ವಂತ ಅರಿವು ಬಹಳ ಮುಖ್ಯವಾಗುತ್ತದೆ ಎಂದರು.

    ತಿಳಿವಳಿಕೆ ಎಂಬುದು ಗುಣಸ್ವಭಾವದಲ್ಲಿದ್ದರೆ, ಅದು ಬರವಣಿಗೆಯಲ್ಲೂ ಅದು ಸಹಜವಾಗಿಯೇ ಬರುತ್ತದೆ. ಹಾಗಾಗಿ ನಾನು ಬರೆದದ್ದೇ ಸರಿ ಎಂದು ಹಠಕ್ಕೆ ಬೀಳುವ ಬದಲು, ಇಷ್ಟೊಂದು ಬರವಣಿಗೆಯಲ್ಲಿ ನನ್ನದೂ ಒಂದು ಎಂದುಕೊಳ್ಳುವುದು ಒಳ್ಳೆಯದು. ಕೇಳುವವರಿಗೆ, ಓದುವವರಿಗೆ ನಾವು ಹೇಳುವುದು ಇಷ್ಟವಾಗಬೇಕು. ವೈಚಾರಿಕ ಪ್ರೀತಿ ಇಲ್ಲದಿದ್ದರೆ ಒಳ್ಳೆಯ ಮೇಷ್ಟ್ರು, ವಿಮರ್ಶಕ, ಕಲಾವಿದ ಆಗಲು ಸಾಧ್ಯವಿಲ್ಲ. ಬದಲಿಗೆ ಅದು ಕಲೆಗೆ ಅಂಟಿದ ಅನಪೇಕ್ಷಿತ ‘ಕಲೆ’ ಆಗುತ್ತದೆ ಎಂದು ವಿಶ್ಲೇಷಿಸಿದರು.

    ತಮಗೆ ಅನುಭವನ ನೀಡಿದ ಹುಟ್ಟೂರು, ಪರಿಸರ, ಒಡನಾಡಿಗಳು, ಅನ್ನ, ಅಕ್ಷರ, ಆದರ್ಶ ಕೊಟ್ಟ ಡಾ.ಎಚ್. ನರಸಿಂಹಯ್ಯ, ಶಿಕ್ಷಣ ಕಲಿಸಿದ ಶಾಲೆ, ಉದ್ಯೋಗ ನೀಡಿದ ಕಾಲೇಜು, ಬರಹ ಒಳಗೊಂಡಂತೆ ತಮ್ಮ ಜೀವನಾನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಬರಹಗಾರರು, ಎಚ್‌ಎಸ್‌ಆರ್ ಶಿಷ್ಯ ವೃಂದ ಪಾಲ್ಗೊಂಡಿದ್ದರು.

    ಹಲವು ಬಣ್ಣಗಳು ವ್ಯಕ್ತಿತ್ವ: ಸೃಜನಶೀಲ ಬರವಣಿಗೆಗೆ ಹೆಸರಾದ ಎಚ್‌ಎಸ್‌ಆರ್ ಕನ್ನಡದ ಬಹುಮುಖ್ಯ ವಿಮರ್ಶಕರಲ್ಲಿ ಒಬ್ಬರು. ಯಾವುದೇ ಸೀಮಿತ ಸಿದ್ಧಾಂತಕ್ಕೆ ಬದ್ಧರಾದವರಲ್ಲ. ಅತ್ಯುತ್ತಮ ತಾತ್ವಿಕ ಆಯಾಮಗಳ ಕುರಿತು ಜೀವನಪರ ಕಲೆಯ ಸೌಭಾಗ್ಯ ವರ‌್ಸುವ ಎಲ್ಲ ತಾತ್ವಿಕ ಆಯಾಮಗಳನ್ನು ತಮ್ಮ ಚಿಂತನೆಯಲ್ಲಿ ಪಾಕವನ್ನಾಗಿ ಬಳಸಿದವರು. ಅವರ ವಿಮರ್ಶೆಯ ಚಿಂತನೆಯ ಬರಗಳಲ್ಲಿ ನೈತಿಕತೆ, ತತ್ವಶಾಸ ಮತ್ತು ಸೃಜನಶೀಲತೆಯ ಜತೆಗೆ ವಿಭಿನ್ನತೆಯ ಒಳಗೊಳ್ಳುವಿಕೆ ಕಾಣಬಹುದು. ಈ ಎಲ್ಲವೂ ಒಡಮೂಡಿದ ಹಲವು ಬಣ್ಣಗಳ ವ್ಯಕ್ತಿತ್ವವಾಗಿ ಎಚ್‌ಎಸ್‌ಆರ್ ನಮ್ಮ ನಡುವೆ ಕಂಗೊಳಿಸುತ್ತಿದ್ದಾರೆ ಎಂದು ಸಾಹಿತಿ ಬಸವರಾಜ ಕಲ್ಗುಡಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts