More

    ಹಿಂದೂ ಜೀವನವೆಂದರೆ ಮುಕ್ತಿಮಾರ್ಗದ ವಿಜ್ಞಾನ

    ಹಿಂದೂ ಜೀವನವೆಂದರೆ ಮುಕ್ತಿಮಾರ್ಗದ ವಿಜ್ಞಾನಭಾರತ ಅನ್ವೇಷಕರ ದೇಶವಾಗಿದೆ. ಅದು ಐಶ್ವರ್ಯ ಮತ್ತು ಸುಖ-ಸಂತೋಷದ ಅನ್ವೇಷಣೆಯಲ್ಲ, ವಿಮೋಚನೆಯ ಅನ್ವೇಷಣೆ. ಆರ್ಥಿಕ ಅಥವಾ ರಾಜಕೀಯದ್ದಲ್ಲ, ಉತ್ಕೃಷ್ಠ ಮುಕ್ತಿಯ ಅನ್ವೇಷಣೆ. ಇಲ್ಲಿನ ಜನರು ಜ್ಞಾನಕ್ಕಾಗಿ ಅನ್ವೇಷಿಸುತ್ತಿದ್ದರು. ಅವರು ಕೇವಲ ತಮ್ಮ ನಂಬಿಕೆಯೇ ಸರಿಯೆಂದು ಸಾಧಿಸಲು ಪ್ರಯತ್ನಿಸಲಿಲ್ಲ.

    ಹಿಂದೂ ನಾಗರಿಕತೆ ಸಿಂಧು ನದಿಯ ತೀರದಲ್ಲಿ ಹುಟ್ಟಿಕೊಂಡಿತು. ಅದನ್ನು ಆಂಗ್ಲದಲ್ಲಿ ‘ಇಂಡಸ್’ ಎಂದು ಕರೆದರು. ಪರ್ಷಿಯನ್ನರು ಬಂದಾಗ ‘ಹಿಂದೂ’ ಎಂಬ ಪದ ಬಳಸಿದರು. ಸಿಂಧು ನದಿಯಾಚೆ ನೆಲೆಸಿದವರನ್ನು ಸೂಚಿಸಲು ಸಂಸ್ಕೃತ ಮೂಲದ ‘ಸಿಂಧು’ ಹಿಂದೂ ಎಂದಾಯಿತು. ಮೂಲಭೂತವಾಗಿ, ಹಿಂದೂ ಎನ್ನುವುದು ಭೌಗೋಳಿಕ ಹಾಗೂ ಸಂಸ್ಕೃತಿಯ ಗುರುತಷ್ಟೆ. ಅದನ್ನು ಪ್ರತ್ಯೇಕವಾಗಿ ಸಂಘಟಿಸುವ ಉದ್ದೇಶ ಎಂದಿಗೂ ಇರಲಿಲ್ಲ. ಮೂಲಭೂತವಾಗಿ ಈ ಪರಿಪೂರ್ಣ ಸಂಸ್ಕೃತಿ ವ್ಯಕ್ತಿಯ ಪೂರ್ಣ ಸಾಮರ್ಥ್ಯವನ್ನು ಅರಿಯುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟಿತು.

    ಹಿಂದೂ, ಎಂದಿಗೂ ‘ಇಸಂ’ ಆಗಿರಲಿಲ್ಲ. ಈ ಭೌಗೋಳಿಕ ಹಾಗೂ ಸಂಸ್ಕೃತಿಯ ಅನನ್ಯತೆಯನ್ನು ಧರ್ಮವನ್ನಾಗಿ ಸಂಘಟಿಸುವ ಪ್ರಯತ್ನ ಇದುವರೆಗೂ ಫಲಕಾರಿಯಾಗಿಲ್ಲ. ಏಕೆಂದರೆ, ಸನಾತನ ಧರ್ಮವೆಂದು ಕರೆಯುವ ಹಿಂದೂ ಪದ್ಧತಿಯ ಜೀವನ ಅಥವಾ ಸಾರ್ವತ್ರಿಕ ನಿಯಮ ಎಲ್ಲ ಗುಣಗಳನ್ನೂ ಒಳಗೊಂಡಿದೆ. ಹಿಂದೂ ಜೀವನವು ಮುಕ್ತಿಮಾರ್ಗದ ವಿಜ್ಞಾನವಾಗಿದೆ.

    ಪ್ರಪಂಚದ ಘರ್ಷಣೆಗಳನ್ನು ಸದಾ ಒಳ್ಳೆಯದರ ವಿರುದ್ಧ ಕೆಟ್ಟದ್ದು ಎಂದು ಬಿಂಬಿಸಲಾಗಿದೆ. ವಾಸ್ತವದಲ್ಲಿ ಈ ಘರ್ಷಣೆ- ಒಬ್ಬನ ನಂಬಿಕೆ ವಿರುದ್ಧ ಇನ್ನೊಬ್ಬನ ನಂಬಿಕೆಯಾಗಿದೆ. ಆದರೆ ಈ ಸಂಸ್ಕೃತಿಯಲ್ಲಿ ಪುರೋಹಿತಶಾಹಿ, ದೇವಪ್ರಭುತ್ವವಾದಿ ರಾಜ್ಯಗಳಿರಲಿಲ್ಲ. ಆಳುವವನಿಗೆ ಅವನದೇ ಆದ ಧರ್ಮವಿದ್ದರೆ, ಪ್ರಜೆಗಳು ತಮ್ಮ ಆಯ್ಕೆಯ ಧರ್ಮವನ್ನು ಅನುಸರಿಸಬಹುದಾಗಿತ್ತು. ಅಲ್ಲಿ ಘರ್ಷಣೆಯೇ ಇರಲಿಲ್ಲ. ಜನರು ಧರ್ಮವನ್ನು ಸಂಘಟಿತ ಪ್ರಕ್ರಿಯೆಯಾಗಿ ನೋಡಲಿಲ್ಲ.

    ಪ್ರಪಂಚದ ಇತರ ಸಂಸ್ಕೃತಿಗಳಲ್ಲಿ, ಆ ಕಾಲದಲ್ಲಿ ಪ್ರಸ್ತುತದಲ್ಲಿದ್ದ ಯಾವುದೇ ಸಂಘಟಿತ ಧರ್ಮದ ವಿರುದ್ಧ ಮಾತನಾಡಿದರೆ, ಜನರ ಮೊದಲ ಪ್ರತಿಕ್ರಿಯೆ, ‘ಸಾಯಿಸಿ!’ ಎಂದಾಗಿತ್ತು. ಸಾಕ್ರಟೀಸ್, ಮನ್ಸೂರ್ ಅಥವಾ ಜೀಸಸ್-ಮುಂತಾದ ಪ್ರಸಿದ್ಧ ಪುರುಷರಂತಹ ಲಕ್ಷಾಂತರ ಜನರನ್ನು ಇದೇ ಕಾರಣಕ್ಕಾಗಿಯೇ ಕೊಂದರು. ಪ್ರಪಂಚದ ಪಾಶ್ಚಾತ್ಯ ಭಾಗಗಳಲ್ಲಿ ಸಾಧಕರು ಬುದ್ಧಿವಂತಿಕೆಯಿಂದ ಮೌನವಾಗಿದ್ದು, ಸಾಧನೆಯಲ್ಲಿ ತೊಡಗಿರುತ್ತಿದ್ದರು. ಜೋರಾಗಿ ಮಾತನಾಡಿದರೆ ಮರಣಶಿಕ್ಷೆ. ಯುರೋಪಿನಲ್ಲಿ ಎರಡು ಮಿಲಿಯನ್ ಸ್ತ್ರೀಯರನ್ನು ಸುಟ್ಟು ಹಾಕಲಾಯಿತು, ಏಕೆಂದರೆ ಸಂಘಟಿತ ಧರ್ಮದ ವಿರುದ್ಧ ಅವರ ಪ್ರದರ್ಶನವು ಒಂದು ಬೆದರಿಕೆ ಎಂದು ಪರಿಗಣಿಸಲಾಯಿತು.

    ಜೀಸಸ್ ಬಂಡಾಯವಾಗುವಂಥದೇನನ್ನೂ ಮಾಡಲಿಲ್ಲ. ಪೂಜಾಮಂದಿರ ಗಳನನ್ನು ಕೆಡವಲು ಹೇಳಲಿಲ್ಲ, ದೇವರುಗಳನ್ನು ಸ್ಥಾನಪಲ್ಲಟಗೊಳಿಸಿ ಅಥವಾ ಧರ್ಮವನ್ನು ಬದಲಾಯಸಿ ಎಂದಾಗಲಿ ಕರೆ ನೀಡಲಿಲ್ಲ. ಜೀಸಸ್ ‘ಕೇವಲ ದೇವಮಂದಿರದಾಚೆ ನಿಮ್ಮ ವ್ಯವಹಾರಗಳನ್ನು ಮಾಡಿ’ ಎಂದ. ಅದಕ್ಕಾಗಿ ಘೊರ ಶಿಕ್ಷೆ ನೀಡಲಾಯಿತು. ಜೀಸಸ್​ಗಿಂತಲೂ ಐನೂರು ವರ್ಷಗಳ ಹಿಂದೆ ಗೌತಮಬುದ್ಧನು ಹಿಂದೂ ದೇವರುಗಳನ್ನು ಪರಿಹಾಸ್ಯ ಮಾಡಿ, ‘ನೀವು ಸರ್ಪಗಳು, ಮರಗಳು, ಗೋವುಗಳ ಆರಾಧಕರಾಗಿದ್ದೀರಿ, ನಿಮಗೆ ದೇವರೆಂದರೆ ಏನೆಂಬುದೇ ತಿಳಿದಿಲ್ಲ’ ಎಂದ. ಅದಕ್ಕೆ ಉತ್ತರವಾಗಿ ಜನರು- ‘ಒಬ್ಬನೇ ದೇವನೆಂಬುದು ನಮಗೂ ತಿಳಿದಿದೆ, ಆದರೆ ನಾವು ವಿಭಿನ್ನತೆಯನ್ನು ಆನಂದಿಸುತ್ತೇವೆ’ ಎಂದರು. ಮುಂದುವರಿದು ಗೌತಮನು, ‘ದೇವರೇ ಇಲ್ಲ’ ಎಂದ. ಹಿಂದೂಗಳು ಉಪನಿಷತ್ತುಗಳ ಮೊರೆ ಹೊಕ್ಕರು, ‘ನಮ್ಮ ಉಪನಿಷತ್ತುಗಳು ದೇವರಿಲ್ಲವೆಂದು ಹೇಳುತ್ತವೆಯಾದರೂ, ಆತ್ಮ ಎಂಬುದಿದೆ ಹಾಗೂ ಸಾರ್ವತ್ರಿಕ ಆತ್ಮವಾದ ಪರಮಾತ್ಮ ಇದೆ ಎಂದು ಸಾರುತ್ತದೆ’ ಎಂದರು. ಗೌತಮಬುದ್ಧ, ‘ಆತ್ಮವೂ ಇಲ್ಲ, ಪರಮಾತ್ಮವೂ ಇಲ್ಲ, ನೀವು ಅನಾತ್ಮ’ ಎಂದ.

    ಹೀಗೆ ಆತನು ಎಲ್ಲವನ್ನೂ ವಿರೋಧಿಸಿ ಪರಿಹಾಸ್ಯ ಮಾಡಿದರೂ ಅವನಿಗೆ ಯಾರೂ ಕಲ್ಲು ಹೊಡೆಯಲಿಲ್ಲ. ವಿಷ ಉಣಿಸಲಿಲ್ಲ ಅಥವಾ ಶಿಲುಬೆಗೇರಿಸಲಿಲ್ಲ. ಬದಲಿಗೆ, ಅವನೊಡನೆ ವಾದಿಸಿದರು. ತಿಂಗಳಾನುಗಟ್ಟಲೆ ವಾದ-ವಿವಾದ ನಡೆದು ವಾದದಲ್ಲಿ ಸೋತಾಗ ಅವನ ಶಿಷ್ಯರಾದರು! ಏಕೆಂದರೆ ಅನ್ವೇಷಣೆ ಸತ್ಯವಾದುದು. ಜನರು ಕುಳಿತು ನಾವು ತಿಳಿದುಕೊಂಡಿರುವುದು ಸರಿಯೋ ಅಥವಾ ಅವರ ವಾದ ಸರಿಯೋ ಎಂದು ಸಮಾಲೋಚಿಸುತ್ತಿದ್ದರು. ಅದೊಂದು ವಿಭಿನ್ನ ರೀತಿಯ ಪರಿಶೋಧನೆ. ಜನರು ಜ್ಞಾನಕ್ಕಾಗಿ ಅನ್ವೇಷಿಸುತ್ತಿದ್ದರು. ಅವರು ಕೇವಲ ತಮ್ಮ ನಂಬಿಕೆಯೇ ಸರಿಯೆಂದು ಸಾಧಿಸಲು ಪ್ರಯತ್ನಿಸಲಿಲ್ಲ. ಹಿಂದೂಗಳ ಜೀವನಶೈಲಿ ನಂಬಿಕೆಯದಲ್ಲ. ಕೆಲವರು ದೇವರನ್ನು ನಂಬಿದರೆ ಮತ್ತೆ ಕೆಲವರು ದೇವರಿಲ್ಲವೆಂಬ ಆಯ್ಕೆಯನ್ನೂ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆರಾಧನೆಯ ಮಾರ್ಗವಿದೆ, ಮುಕ್ತಿಯ ಮಾರ್ಗವಿದೆ. ಒಂದೇ ಕುಟುಂಬದಲ್ಲಿ ಪ್ರತಿಯೊಬ್ಬರೂ ತಮ್ಮ ಇಚ್ಛೆಯ ದೇವರುಗಳನ್ನು ಪೂಜಿಸಬಹುದು, ಪೂಜಿಸದೆಯೂ ಒಳ್ಳೆಯ ಹಿಂದೂವಾಗಬಹುದು.

    ನಮ್ಮ ಸಂಸ್ಕೃತಿಯಲ್ಲಿ ಮಾನವ ಜೀವನದ ಏಕಮಾತ್ರ ಗುರಿಯೆಂದರೆ ಮುಕ್ತಿ, ಸೀಮಿತವನ್ನು ಮೀರಿ ಹೋಗುವುದು. ಈ ಸಂಸ್ಕೃತಿಯಲ್ಲಿ ದೇವರೇ ಅಂತಿಮವೆಂದು ಪರಿಗಣಿಸುವುದಿಲ್ಲ. ಜಗತ್ತಿನಲ್ಲಿ ಹಿಂದೂಗಳು ಮಾತ್ರ- ದೇವರಿಲ್ಲದ ಕಲ್ಪನೆಗೂ ಮಾನ್ಯತೆ ನೀಡಿದ್ದಾರೆ. ನೀವೊಂದು ಕಲ್ಲನ್ನಾಗಲಿ, ಗೋವನ್ನಾಗಲಿ, ನಿಮ್ಮ ತಾಯಿಯನ್ನಾಗಲಿ ಪೂಜಿಸಬಹುದು- ನಿಮಗಿಷ್ಟವಾದುದನ್ನು ಪೂಜಿಸಬಹುದು. ಬೇರೆಲ್ಲ ಕಡೆ ದೇವರು ನಮ್ಮನ್ನು ಸೃಷ್ಟಿಸಿದ ಎಂದು ಜನರು ನಂಬುತ್ತಾರೆ. ಭಾರತದಲ್ಲಿ ನಾವು ದೇವರನ್ನು ಸೃಷ್ಟಿಸಿದೆವೆಂದು, ನಮಗೆ ತಿಳಿದಿದೆ. ಅದಕ್ಕಾಗಿಯೇ ನಮಗೆ ಯಾವ ರೀತಿಯ ದೇವರನ್ನಾದರೂ ಸೃಷ್ಟಿಸಲು ಸ್ವಾತಂತ್ರ್ಯವಿದೆ.

    ಪೂರ್ವದ ದೇಶಗಳಲ್ಲಿ ಆಧ್ಯಾತ್ಮಿಕತೆ ಹಾಗೂ ಧರ್ಮ ಇವೆರಡೂ ಎಂದಿಗೂ ಸಂಘಟಿತ ಪ್ರಕ್ರಿಯೆಯಾಗಿರಲಿಲ್ಲ- ಕೇವಲ ಎಲ್ಲರಿಗೂ ಆಧ್ಯಾತ್ಮಿಕತೆ ದೊರೆಯುವಂತೆ ಮಾಡುವುದಾಗಿತ್ತು. ಗೆಲವು ಸಾಧಿಸುವುದಕ್ಕಲ್ಲ. ರೈತನು ನೇಗಿಲನ್ನು ಪೂಜಿಸಿದರೆ, ಮೀನುಗಾರ ದೋಣಿಯನ್ನು ಪೂಜಿಸಿದ; ಜನರು ತಮ್ಮ ಜೀವನದ ಪ್ರಮುಖ ವಿಷಯಕ್ಕೆ ಸಂಬಂಧ ಕಲ್ಪಿಸಿ ಅದನ್ನು ಪೂಜಿಸಲು ಮೊದಲಾದರು. ಅದು ಒಳ್ಳೆಯದೇ, ಮೂಲಭೂತವಾಗಿ, ಪೂರ್ವದ ದೇಶಗಳಲ್ಲಿ ಧರ್ಮವು ನಮ್ಮನ್ನು ಕುರಿತದ್ದೇ ಹೊರತು ದೇವರನ್ನು ಕುರಿತದ್ದಲ್ಲ. ಧರ್ಮ ಮುಕ್ತಿಯ ಕುರಿತದ್ದಾಗಿದೆ. ದೇವರು ಮತ್ತೊಂದು ಮುನ್ನಡೆಯ ಸೋಪಾನವಷ್ಟೇ- ಅದನ್ನು ಅಂತಿಮ ಮುಕ್ತಿಗೆ ಉಪಯೋಗಿಸಬಹುದು ಅಥವಾ ಬಿಡಬಹುದು. ಈ ಸಂಸ್ಕೃತಿಯಲ್ಲಿ ದೇವರ ಪ್ರಾಮುಖ್ಯತೆಗಿಂತಲೂ, ಮಾನವನ ಯೋಗಕ್ಷೇಮ ಮತ್ತು ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಲಾಗಿದೆ.

    ನಮ್ಮದೊಂದು ದೇವ-ರಹಿತ ಆದರೆ ಭಕ್ತಿಯುತ ದೇಶ. ದೇವ-ರಹಿತ ಎನ್ನುವುದರರ್ಥ, ಮಾನವರು ದೇವರುಗಳ ಆಯ್ಕೆಯನ್ನು ಮಾಡಿಕೊಳ್ಳುವುದೇ ಅಲ್ಲದೆ, ಅವರಿಗೆ ಸಂಬಂಧಿಸಿದ ದೇವರನ್ನು ಸೃಷ್ಟಿಸಿಕೊಳ್ಳಬಹುದಾದ ಸ್ವಾತಂತ್ರ್ಯವಿದೆ. ಆದ್ದರಿಂದ ದೇವರನ್ನು ಮಾಡುವ ವಿಜ್ಞಾನ-ತಂತ್ರಜ್ಞಾನವನ್ನು ವಿಕಸಿತಗೊಳಿಸಿ ನಾನಾ ರೀತಿಯ ರೂಪ, ಶಕ್ತಿರೂಪ ಹಾಗೂ ಕ್ಷೇತ್ರಗಳನ್ನು ಪವಿತ್ರಗೊಳಿಸಲಾಗಿದೆ.

    ದೇವರಿನ ಕಲ್ಪನೆಯ ಮೂಲೋದ್ದೇಶವೆಂದರೆ, ವ್ಯಕ್ತಿಯಲ್ಲಿ ಭಕ್ತಿ, ಪೂಜ್ಯಭಾವನೆಯನ್ನು ಸೃಷ್ಟಿಸುವುದು. ಏನನ್ನು ಆರಾಧಿಸುತ್ತೀರೆಂಬುದು ಮುಖ್ಯವಲ್ಲ. ಒಂದನ್ನು ಇಷ್ಟಪಟ್ಟು ಮತ್ತೊಂದನ್ನು ಇಷ್ಟಪಡದೇ ಇರುವುದಲ್ಲ. ಜೀವನದ ಗುಣಮಟ್ಟವನ್ನು ಭಕ್ತಿಭಾವನೆಯಿಂದ ಯೋಜಿಸಿಕೊಂಡಾಗ ಜೀವನಕ್ಕೆ ಹೆಚ್ಚು ಸ್ಪಂದಿಸುವಿರಿ ಅಥವಾ ಜೀವನವನ್ನು ಗ್ರಹಿಸುವಿರಿ. ಜೀವನವು ಮಹತ್ತರವಾಗಿರುತ್ತದೆ. ಹಿಂದೂ ಎಂಬ ಈ ಪೂರ್ಣ ಸಂಸ್ಕೃತಿ ಪ್ರತಿವ್ಯಕ್ತಿ ತನ್ನ ಜೀವನದ ಮೂಲಗುರಿಯಾಗಿ, ಪೂರ್ಣಮುಕ್ತಿಯನ್ನು ಪಡೆಯುವತ್ತ ಶ್ರಮಿಸುವ ಆಧ್ಯಾತ್ಮಿಕ ವಿಶಿಷ್ಟ ಲಕ್ಷಣವಾಗಿದೆ. ಭಾರತದ ಅಧ್ಯಾತ್ಮವನ್ನು ಪರಿಶೋಧಿಸಿದರೆ, ಅದು ಅಚ್ಚರಿಗೊಳಿಸುವಂತಹುದು. ಇದು ನಂಬಿಕೆ ಪದ್ಧತಿಯಿಂದ ಬಂದದ್ದಲ್ಲ, ಆದರೆ ಭೌತಿಕವನ್ನೂ ಮೀರಿದ ಆಯಾಮಗಳ ಪರಿಶೋಧನೆಯ ವೈಜ್ಞಾನಿಕ ಸಾಧನೆಗಳ ಮೂಲಕ ಸಂಭವಿಸಿರುವುದು. ಭಾರತ ಅನೇಕ ಸಂಸ್ಕೃತಿ, ಜನಾಂಗ, ಧರ್ಮ ಹಾಗೂ ಭಾಷೆಗಳ ದೇಶ. ಇವೆಲ್ಲವನ್ನೂ ಒಂದೇ ಅನ್ವೇಷಣೆಯ ದಾರದಿಂದ ಬಂಧಿಸಲಾಗಿದೆ. ಮಹತ್ತರವಾದ ಮುಕ್ತಿಯ ಹಂಬಲವನ್ನು ದೇಶದ ಜನರಲ್ಲಿ ಪೋಷಿಸಲಾಗಿದೆ.

    ಭಾರತವನ್ನು ಅಧ್ಯಯನ ಮಾಡಲಾಗುವುದಿಲ್ಲ, ಆದರೆ ವ್ಯಕ್ತಿ ಭಾರತದ ಭಕ್ತಿಯಲ್ಲಿ ನೆನೆಯಬೇಕು, ಹಾಗೆಯೇ ಕರಗಿ ಹೋಗಬೇಕು. ಇದೊಂದೇ ಮಾರ್ಗ. ಅದರ ಅಧ್ಯಯನ ಅಸಾಧ್ಯ. ಭಾರತವನ್ನು ಕುರಿತ ಪಾಶ್ಚಾತ್ಯ ದೇಶಗಳ ವಿಶ್ಲೇಷಣೆ ಇನ್ನೂ ಪ್ರಾರಂಭಾವಸ್ಥೆಯಲ್ಲಿದೆ. ಭಾರತದ ಸಂಸ್ಕೃತಿ ಅವ್ಯವಸ್ಥಿತವಾಗಿ ವರ್ಧಿಸುತ್ತಿದ್ದರೂ ಅದು ಸುಸಂಘಟಿತ ಹಾಗೂ ಸಮೃದ್ಧವಾಗಿದೆ.

    ಭೂಮಿ ಮೇಲಿನ ಈ ಪ್ರಾಚೀನ ದೇಶ, ಇದರ ಪ್ರಖ್ಯಾತ ಪೌರರ ಆಧಾರ ತತ್ತ್ವಗಳ ಮೇಲಾಗಲಿ ಅಥವಾ ನಂಬಿಕೆಗಳ ಮೇಲಾಗಲಿ ಅಥವಾ ಅವರ ಮಹತ್ವಾಕಾಂಕ್ಷೆಗಳ ಮೇಲಾಗಲಿ ನಿರ್ವಿುತವಾಗಿಲ್ಲ. ಇದು ಅನ್ವೇಷಕರ ದೇಶವಾಗಿದೆ, ಐಶ್ವರ್ಯ ಮತ್ತು ಸುಖ-ಸಂತೋಷದ ಅನ್ವೇಷಣೆಯಲ್ಲ, ವಿಮೋಚನೆಯ ಅನ್ವೇಷಣೆ. ಆರ್ಥಿಕ ಅಥವಾ ರಾಜಕೀಯದ್ದಲ್ಲ, ಉತ್ಕ ೃ್ಟ ಮುಕ್ತಿಯ ಅನ್ವೇಷಣೆ.

    ಜ್ಞಾನೋದಯಕ್ಕೆ ಎಷ್ಟು ಮಾರ್ಗಗಳಿವೆ ಎಂದು ಆದಿಯೋಗಿಯನ್ನು ಕೇಳಿದಾಗ, ‘ನೀವು ನಿಮ್ಮ ಶಾರೀರಿಕ ವ್ಯವಸ್ಥೆಯ ಕ್ಷೇತ್ರದಲ್ಲಿರುವಾಗ 112 ಮಾರ್ಗಗಳಿವೆ, ಆದರೆ ಭೌತಿಕವನ್ನು ಮೀರಿದಾಗ ವಿಶ್ವದಲ್ಲಿನ ಪ್ರತಿಯೊಂದು ಅಣುವೂ ಒಂದು ಬಾಗಿಲ ದಾರಿಯಾಗುತ್ತದೆ’ ಎಂದನು. ಭಾರತ ಆಧ್ಯಾತ್ಮಿಕ ಸಾಧ್ಯತೆ, ವೈವಿಧ್ಯತೆಗಳ ಸಂಗಮವಾಗಿದೆ, ಸಂಯೋಜನೆಯಾಗಿದೆ. ಮಹಾಕುಂಭದಲ್ಲಿ ಭಾಗವಹಿಸಿದ್ದರೆ ಇದರ ಪ್ರದರ್ಶನವನ್ನು ಕಾಣಬಹುದು. ಮಾರ್ಕ್​ಟ್ವೈನ್​ ಹೇಳಿರುವಂತೆ, ‘ನನ್ನ ಅಭಿಪ್ರಾಯದಂತೆ, ಮಾನವರಿಂದಾಗಲಿ ಅಥವಾ ಪ್ರಕೃತಿಯಿಂದಾಗಲಿ ಭಾರತವನ್ನು ಹೆಚ್ಚು ಅಸಾಧಾರಣ ದೇಶವನ್ನಾಗಿ ಮಾಡಲು ಎಲ್ಲ ಕಾರ್ಯಗಳನ್ನೂ ಮಾಡಲಾಗಿದೆ. ಯಾವುದನ್ನೂ ಮರೆತಿಲ್ಲ. ಯಾವುದನ್ನೂ ಉದಾಸೀನ ಮಾಡಿಲ್ಲ’.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts