More

    ಮನೋಲ್ಲಾಸ: ಸಾಧನೆಗೆ ಶ್ರದ್ಧೆಯೇ ಸೋಪಾನ

    ಮನೋಲ್ಲಾಸ: ಸಾಧನೆಗೆ ಶ್ರದ್ಧೆಯೇ ಸೋಪಾನ|ಕಾಂತೇಶಾಚಾರ್ಯ ಕದರಮಂಡಲಗಿ

    ಮಹಾಭಾರತದ ರೋಚಕ ಪ್ರಸಂಗ. ಅವನು ಪರೀಕ್ಷಿತ. ಉತ್ತರೆಯ ಗರ್ಭಸಂಭೂತ. ಪಾಂಡವರಿಗೆ ಪ್ರೀತಿಯ ಮೊಮ್ಮಗ. ಮಹಾನ್ ಚಕ್ರವರ್ತಿ. ಪರಮಧಾರ್ವಿುಕ. ಆತ ಒಮ್ಮೆ ಬೇಟೆಯಾಡಲು ಹೊರಟ. ಕಾಡಿನಲ್ಲಿ ಹಿಂಸ್ರಮೃಗಗಳ ಬೇಟೆಯಾಡಿದ. ಬಹಳ ಬಾಯಾರಿಕೆ. ನೀರನ್ನು ಹುಡುಕುತ್ತ ಮಹರ್ಷಿಗಳಾದ ಶಮೀಕರ ಆಶ್ರಮಕ್ಕೆ ಬಂದು, ನೀರು ಕೇಳಿದ. ಆದರೆ ಮಹರ್ಷಿ ಶಮೀಕರು ಧ್ಯಾನದಲ್ಲಿ ಕುಳಿತಿದ್ದರು. ಅದು ಅಸಂಪ್ರಜ್ಞಾತಸಮಾಧಿ. ಅತ್ತ ಒಳಗೆ ಭಗವಂತನನ್ನು ಕಾಣುತ್ತಿದ್ದರೆ, ಇತ್ತ ಬಾಹ್ಯ ಜಗತ್ತಿನ ಎಚ್ಚರವೇ ಇರುವುದಿಲ್ಲ.

    ರಾಜ ಬಂದದ್ದು, ನೀರು ಕೇಳಿದ್ದು ಇದಾವುದೂ ಅವರಿಗೆ ಗೊತ್ತಿಲ್ಲ. ಎಷ್ಟು ಕೇಳಿದರೂ ಉತ್ತರಿಸುತ್ತಿಲ್ಲ ಎಂದು ಪರೀಕ್ಷಿತ ಕೋಪಗೊಂಡ. ಅಲ್ಲಿಯೇ ಸತ್ತುಬಿದ್ದಿದ್ದ ಹಾವನ್ನು ಬಿಲ್ಲಿನಿಂದ ಎತ್ತಿ ಶಮೀಕರ ಕೊರಳಿಗೆ ಹಾಕಿ ನಡೆದುಬಿಟ್ಟ.ಶಮೀಕರ ಮಗ ಶೃಂಗಿ. ಏಳುವರ್ಷದ ಪುಟ್ಟ ಬಾಲಕ. ಮಿತ್ರರೊಡನೆ ಆಟವಾಡಿ ಬಂದ ಶೃಂಗಿಗೆ ತಂದೆಯ ಕೊರಳಿನಲ್ಲಿ ಸತ್ತ ಹಾವು ಬಿದ್ದಿರುವುದನ್ನು ನೋಡಿ ಕೋಪ ಉಕ್ಕೇರಿತು. ‘ತಂದೆಯನ್ನು ಅವಮಾನಿಸಿದ ಪರೀಕ್ಷಿತನಿಗೆ ಇನ್ನು ಏಳು ದಿನಗಳಲ್ಲಿ ತಕ್ಷಕ ಬಂದು ಕಚ್ಚಿ ಮರಣ ಬರಲಿ’ ಎಂದು ಕೂಡಲೇ ಶಾಪ ನೀಡಿದ. ಶಾಸ್ತ್ರ ಹೇಳುತ್ತದೆ- ‘ಋಷೀಣಾಂ ಪುನರಾದ್ಯಾನಾಂ ವಾಚಮಥೋಧಿನುಧಾವತಿ’ ಅಂದರೆ, ‘ಯಾವಾಗಲೂ ಸತ್ಯವನ್ನೇ ನುಡಿಯುವ ಮಹಾತ್ಮರು ಏನು ಮಾತನಾಡುತ್ತಾರೆ ಆಡಿದ ಎಲ್ಲವೂ ಸತ್ಯವಾಗುತ್ತದೆ’. ಪುಟ್ಟಬಾಲಕ ಶೃಂಗಿ ನೀಡಿದ ಶಾಪದಂತೆ ಏಳನೇ ದಿನ ತಕ್ಷಕನಿಂದ ಪರೀಕ್ಷಿತನಿಗೆ ಮರಣ ಬಂತು. ಈ ಕಥೆ ಕೇಳಿದಾಗ ಮೈರೋಮಾಂಚನವಾಗುತ್ತದೆ. ಜೊತೆಗೆ ಒಂದು ಪ್ರಶ್ನೆಯೂ ಮೂಡುತ್ತದೆ.

    ಶೃಂಗಿ ಪುಟ್ಟಬಾಲಕ. ಏಳನೇ ವಯಸ್ಸಿನಲ್ಲಿ ಸಣ್ಣಪುಟ್ಟ ಮಂತ್ರಗಳನ್ನೂ ಸರಿಯಾಗಿ ಹೇಳಲು ಬರುವುದಿಲ್ಲ. ಅಂದಮೇಲೆ ಬಾಲಕ ಶೃಂಗಿ ಆಡಿದ ಮಾತು ಸತ್ಯವಾಗಬೇಕಾದರೆ ಅವನಲ್ಲಿ ಏನಿತ್ತು ಅಂತಹ ತಪಸ್ಸು?ಮಹಾಭಾರತ ಹೇಳುತ್ತದೆ, ‘ಬೆಂಕಿ-ಚಳಿ-ಮಳೆಗಳಲ್ಲಿ ನಿಂತು ತಪಸ್ಸು ಮಾಡಿದವನಲ್ಲ. ಒಂದು ಕಾಲಿನಲ್ಲಿ ನೂರಾರುವರ್ಷ ಘೊರತಪಸ್ಸು ಮಾಡಿರಲಿಲ್ಲ. ಅವನಲ್ಲಿ ಬೇರಾವ ತಪಸ್ಸು ಇರಲಿಲ್ಲ. ಇದ್ದ ತಪಸ್ಸು ಒಂದೇ- ಅದು ಗಾಯತ್ರೀಮಂತ್ರದ ತಪಸ್ಸು. ಉಪನಯನಸಂಸ್ಕಾರವಾಗಿ ತಂದೆ ಗಾಯತ್ರೀಮಂತ್ರದ ಉಪದೇಶ ಕೊಟ್ಟಾಗಿನಿಂದ ಪ್ರತಿನಿತ್ಯ ಗಾಯತ್ರೀಮಂತ್ರದ ಜಪವನ್ನು ಶ್ರದ್ಧೆಯಿಂದ ಅನುಷ್ಠಾನ ಮಾಡುತ್ತಿದ್ದ ಶೃಂಗಿ. ಹಾಗಾಗಿ ಗಾಯತ್ರೀಮಂತ್ರದ ಸಿದ್ಧಿ ಅವನಲ್ಲಿತ್ತು. ಕಲಿಯುಗದ ಇಂದಿನ ಕಾಲದಲ್ಲಿ ನೀರು-ಆಹಾರ ಬಿಟ್ಟು ಘೊರ ತಪಸ್ಸು ಮಾಡುವ ಶಕ್ತಿ-ಯೋಗ್ಯತೆ ನಮ್ಮಲ್ಲಿಲ್ಲ, ನಿಜ. ಆದರೆ ನಮಗೆ ವಿಹಿತವಾದ ಕರ್ಮಗಳನ್ನು ಶ್ರದ್ಧಾ-ಭಕ್ತಿಗಳಿಂದ ಮಾಡಿದರೆ ಅದೇ ದೊಡ್ಡ ತಪಸ್ಸು. ವೇದ ಅದನ್ನು ತಿಳಿಸುತ್ತದೆ- ‘ಯದೇವ ವಿದ್ಯಯಾ ಕರೋತಿ ಶ್ರದ್ಧಯಾ ಉಪನಿಷದಾ ತದೇವ ವೀರ್ಯವತ್ತರಂ ಭವತಿ’ ‘ನಮಗೆ ಯೋಗ್ಯವಾದ ಕೆಲಸವನ್ನೇ ಮಾಡುವುದಾದರೂ, ಮಾಡುವ ಕೆಲಸವನ್ನೇ ಶ್ರದ್ಧೆಯಿಂದ ಮಾಡಿದರೆ ಅದ್ಭುತವಾದ ಫಲ ಪಡೆಯುತ್ತೇವೆ’. ಆ ನಂಬಿಕೆ ಇರಬೇಕಷ್ಟೇ. ಮಾಡುವ ಕೆಲಸವನ್ನೇ ಶ್ರದ್ಧೆಯಿಂದ ಮಾಡಿ ಸಾಧನೆ ಮಾಡಿದ ಅನೇಕ ಸಾಧಕರನ್ನು ಇತಿಹಾಸದಲ್ಲಿ ಕಾಣುತ್ತೇವೆ. ಕೆಲಸ ಸಣ್ಣದೇ ಇರಲಿ, ದೊಡ್ಡದೇ ಇರಲಿ, ಅದರಲ್ಲಿ ಶ್ರದ್ಧೆ ಇದ್ದಲ್ಲಿ ಯಶಸ್ಸು ಸಾಧ್ಯ.
    (ಲೇಖಕರು ಸಂಸ್ಕೃತ ವಿದ್ವಾಂಸರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts