More

    ಸದಾಶಿವ ತೀರ್ಥ ಕೆರೆ ಅಭಿವೃದ್ಧಿ

    ವಿಜಯವಾಣಿ ಸುದ್ದಿಜಾಲ ಪುತ್ತೂರು

    ಪುತ್ತೂರು- ಉಪ್ಪಿನಂಗಡಿ ರಸ್ತೆಯಿಂದ ಒಂದು ಕಿ.ಮೀ. ದೂರದಲ್ಲಿ ಸೇಡಿಯಾಪು ಸಮೀಪದ ಸದಾಶಿವ ತೀರ್ಥ ಕೆರೆಗೆ ಅಭಿವೃದ್ಧಿ ಭಾಗ್ಯ ದೊರಕಿದೆ.

    ಸ್ವಾತಂತ್ರೃಪೂರ್ವದಲ್ಲಿ ಕೃಷಿ ಪ್ರಧಾನವಾಗಿದ್ದ ಸೇಡಿಯಾಪು ವ್ಯಾಪ್ತಿಗೆ ಸದಾಶಿವ ತೀರ್ಥ ಕೆರೆಯಿಂದ ನೀರು ಪೂರೈಕೆಯಾಗುತ್ತಿತ್ತು. ಕಾಲಾಂತರದಲ್ಲಿ ಕೆರೆ ಹೂಳು ತುಂಬಿ ಬಾವಿಯಾಕಾರದಲ್ಲಿ ಮೂಡಿಬಂದಿದೆ. ಪ್ರಸ್ತುತ ಕೃಷಿ ಚಟುವಟಿಕೆ, ಪಶು, ಪಕ್ಷಿ, ಪ್ರಾಣಿಗಳಿಗೆ ನೀರುಣಿಸುವ ಜತೆಗೆ ನೀರಿನ ಅಭಾವ ತಲೆದೋರಬಾರದು ಎಂಬ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುತುವರ್ಜಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯರ ಸಹಕಾರದಲ್ಲಿ ಕೆರೆ ಅಭಿವೃದ್ಧಿಗೆ ಮುಂದಡಿ ಇಡಲಾಗಿದೆ.

    ನೀರನ್ನು ಹಿಡಿದಿಟ್ಟುಕೊಳ್ಳಲು ವ್ಯವಸ್ಥೆ: ಸದಾಶಿವ ತೀರ್ಥ ಕೆರೆಯನ್ನು ವಿಸ್ತಾರವಾಗಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿ ಸಮೀಪದ ಗುಡ್ಡ, ಪೊದೆಗಳಿಂದ ಆವೃತವಾದ ಒಂದು ಎಕರೆ ಜಾಗವನ್ನು ಸಮತಟ್ಟು ಮಾಡಿ ಈ ಚಿಕ್ಕದಾದ ಕೆರೆಯನ್ನು ಬೃಹತ್ ಕೆರೆಯನ್ನಾಗಿ ನಿರ್ಮಿಸಲು ಭೂಮಿಪೂಜೆ ಮೂಲಕ ಚಾಲನೆ ನೀಡಲಾಗಿದೆ. ಕೆರೆ ಸುತ್ತಮುತ್ತ 100 ಎಕರೆ ಕಾಡುಪ್ರದೇಶ ಹೊಂದಿದ್ದು, ಮಳೆಗಾಲದ ನೀರನ್ನು ಹಿಡಿದಿಟ್ಟುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

    ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯ: ಬನ್ನೂರು ಗ್ರಾಪಂನ ಸೇಡಿಯಾಪು ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಅಡಕೆ, ತೆಂಗು ತೋಟ ಸಹಿತ ಇನ್ನಿತರ ಬಳಕೆಗೆ ಕೆರೆಯ ಅವಶ್ಯಕತೆಯನ್ನು ಮನಗಂಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಪುತ್ತೂರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಬನ್ನೂರು ಗ್ರಾಪಂ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸ್ಥಳೀಯ ಯೋಜನೆಯ ಒಕ್ಕೂಟದ ಸಹಕಾರದಲ್ಲಿ ಪುತ್ತೂರು ಶಾಸಕರು, ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲಿಸಿ ಕೆರೆಯನ್ನು ಹೇಗೆ ನಿರ್ಮಿಸಬಹುದು ಎಂಬ ಚರ್ಚೆಗಳು ನಡೆದಿವೆ.

    6 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ: ಗ್ರಾಮಾಭಿವೃದ್ಧಿ ಯೋಜನೆ ಕೆರೆ ನಿರ್ಮಾಣಕ್ಕೆ 6 ಲಕ್ಷ ರೂ. ಖರ್ಚು ಮಾಡಿದೆ. ಕೆರೆಯ ಸುತ್ತಲೂ ತಡೆಗೋಡೆ ನಿರ್ಮಿಸಿ ಸೌಂದರ್ಯ ಹೆಚ್ಚಿಸಬಹುದು. ಆದರೆ ಸ್ಥಳೀಯ ಗ್ರಾಪಂನಲ್ಲಿ ಬಜೆಟ್‌ನ ಕೊರತೆಯಿದೆ ಎಂದು ಗ್ರಾಪಂ ತಿಳಿಸಿದೆ. ಮುಂದಿನ ದಿನಗಳಲ್ಲಿ ಹಣದ ಸಹಕಾರ ದೊರೆತಲ್ಲಿ ಕೆರೆಯ ಸೌಂದರ್ಯವನ್ನು ಹೆಚ್ಚಿಸಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

    ಪುತ್ತೂರು- ಉಪ್ಪಿನಂಗಡಿ ರಸ್ತೆಯಿಂದ ಸೇಡಿಯಾಪು ಎಂಬಲ್ಲಿ ಒಂದು ಕಿ.ಮೀ ಒಳರಸ್ತೆಯಲ್ಲಿ ಸದಾಶಿವ ತೀರ್ಥ ಕೆರೆ ಅಭಿವೃದ್ಧಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಫೂರ್ಣ ಸಾಥ್ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಕೆರೆಯನ್ನು ಜಲಸಂರಕ್ಷಣೆ ಜತೆ ಪ್ರವಾಸೋದ್ಯಮ ಕೇಂದ್ರವಾಗಿಸಲು ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ತೆಗೆಸಿಕೊಡುವ ಪ್ರಯತ್ನ ಮಾಡಲಾಗುವುದು.
    -ಸಂಜೀವ ಮಠಂದೂರು, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts