More

    ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ ಕಣ್ಣೀರು ಹಾಕಿದ್ದರಂತೆ…! ಏಕೆ ಎಂದು ತಿಳಿಯಲು ಮುಂದೆ ಓದಿ…

    ಲಂಡನ್​: ಭಾರತೀಯರು ಅಷ್ಟೇ ಏಕೆ, ಕ್ರಿಕೆಟ್​ ವಿಶ್ವದಲ್ಲಿ ಕ್ರಿಕೆಟ್​ ದೇವರು ಎಂದು ಆರಾಧಿಸಲ್ಪಡುವ ಸಚಿನ್​ ತೆಂಡುಲ್ಕರ್​ ನಿವೃತ್ತಿ ವೇಳೆಗೆ ಯಾರೂ ಅಳಿಸಲಾಗದ ಹಲವು ದಾಖಲೆಗಳನ್ನು ಬರೆದಿದ್ದಾರೆ. ಆದರೆ, ಮೊದಲ ಟೆಸ್ಟ್​ ಪಂದ್ಯದಲ್ಲಿ ಅವರು ಕಣ್ಣೀರು ಸುರಿಸಿದ್ದರಂತೆ…! ಏಕೆ?

    ಅದು 1989ರಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದ ಸಂದರ್ಭ. ಕರಾಚಿಯಲ್ಲಿ ನಿಗದಿಯಾಗಿದ್ದ ಟೆಸ್ಟ್​ ಪಂದ್ಯಕ್ಕೆ ನಾನು ಆಯ್ಕೆಯಾಗಿದ್ದೆ. ಅದು ನನ್ನ ವೃತ್ತಿಜೀವನದ ಮೊದಲ ಟೆಸ್ಟ್​ ಪಂದ್ಯ. ಆ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡಲು ಮೈದಾನಕ್ಕೆ ಇಳಿದಾಗ ಏನು ಮಾಡಬೇಕು ಎಂಬುದು ತಿಳಿಯದ ಅಯೋಮಯ ಸ್ಥಿತಿಯಲ್ಲಿ ನಾನಿದ್ದೆ ಎಂದು 31 ವರ್ಷಗಳ ಬಳಿಕ ಸಚಿನ್​ ತೆಂಡುಲ್ಕರ್​ ನೆನಪಿಸಿಕೊಂಡಿದ್ದಾರೆ.

    ನಾಸೀರ್​ ಮೀಟ್ಸ್​ ಸಚಿನ್​ ಎಂಬ ಕಾರ್ಯಕ್ರಮದಲ್ಲಿ ಮಾಜಿ ಆಟಗಾರ ನಾಸೀರ್​ ಹುಸೇನ್​ ಸ್ಕೈಸ್ಪೋರ್ಟ್ಸ್​ಗಾಗಿ ಸಿದ್ಧಪಡಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಸಚಿನ್​ ತಮ್ಮ ಚೊಚ್ಚಲ ಟೆಸ್ಟ್​ ಪಂದ್ಯದ ಅನುಭವ ಹಂಚಿಕೊಂಡಿದ್ದಾರೆ. ಆ ಪಂದ್ಯದಲ್ಲಿ ತಾವು ಶಾಲಾ ಮಟ್ಟದ ಪಂದ್ಯದಲ್ಲಿ ಆಡುವ ರೀತಿ ಆಡಿದ್ದಾಗಿ ಹೇಳಿಕೊಂಡಿದ್ದಾರೆ.

    ವಾಸೀಂ ಅಕ್ರಂ ಮತ್ತು ವಕಾರ್​ ಯೂನಿಸ್​ ತುಂಬಾ ವೇಗವಾಗಿ ಬೌಲಿಂಗ್​ ಮಾಡುತ್ತಿದ್ದರು. ನಾನು ಕ್ರೀಸ್​ಗೆ ಆಗಮಿಸಿದಾಗ ನನ್ನನ್ನು ಬೆದರಿಸಲು ಶಾರ್ಟ್​ಪಿಚ್​ ಎಸೆತಗಳ ಜತೆಗೆ ಇನ್ನೂ ಏನೇನೋ ತಂತ್ರಗಳನ್ನು ಮಾಡುತ್ತಿದ್ದರು. ನಾನು ಅದುವರೆಗೂ ಆ ರೀತಿಯ ಬೌಲಿಂಗ್​ ಅನ್ನು ಎದುರಿಸಿರಲಿಲ್ಲ. ಹಾಗಾಗಿ ನನ್ನ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನ ಬ್ಯಾಟಿಂಗ್​ ಅನುಭವ ಹಿತವಾಗಿರಲಿಲ್ಲ ಎಂದು ಹೇಳಿದ್ದಾರೆ.

    ಆಗಾಗ ನಾನು ಪೇಸ್​ ಮತ್ತು ಬೌನ್ಸ್​ನಿಂದಾಗಿ ಬೀಟ್​ ಆಗುತ್ತಿದ್ದೆ. ನಾನು 15 ರನ್​ ಗಳಿಸಿ ಔಟಾಗಿ, ಡ್ರೆಸ್ಸಿಂಗ್​ ರೂಂಗೆ ಮರಳುವಾಗ ನನಗೆ ತುಂಬಾ ಮುಜುಗರವಾಗಿತ್ತು ಎಂದು ತಿಳಿಸಿದ್ದಾರೆ.

    ಏನು ಮಾಡಿದೆ ನೀನು, ಹಾಗೆ ಏಕೆ ಆಡಿದೆ ನೀನು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಾ ಡ್ರೆಸ್ಸಿಂಗ್​ ರೂಂಗೆ ತೆರಳಿದೆ. ಡ್ರೆಸ್ಸಿಂಗ್​ ರೂಂ ತಲುಪುತ್ತಲೇ ಶೌಚಗೃಹಕ್ಕೆ ಹೋದ ನಾನು ಕಣ್ಣೀರಿಟ್ಟಿದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ.

    ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ನಾನು ಅಸಮರ್ಥ ಎಂಬ ಭಾವನೆ ಮೂಡಿತ್ತು. ಹಾಗಾಗಿ ಇದುವೇ ನನ್ನ ವೃತ್ತಿಜೀವನದ ಮೊದಲ ಹಾಗೂ ಕೊನೆಯ ಟೆಸ್ಟ್​ ಪಂದ್ಯ ಆಗಲಿದೆ ಎಂದೇ ಭಾವಿಸಿದ್ದೆ. ನನ್ನ ಆತ್ಮವಿಶ್ವಾಸ ಸಂಪೂರ್ಣ ಕುಸಿದು ಹೋಗಿತ್ತು ಎಂದು ತಿಳಿಸಿದ್ದಾರೆ.

    ಆಗ ಭಾರತ ಕ್ರಿಕೆಟ್​ ತಂಡದಲ್ಲಿದ್ದ ರವಿಶಾಸ್ತ್ರಿ ಅವರ ಜತೆ ನಾನು ಮಾತನಾಡಿದೆ. ಅವರು ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್​ಗುಡುತ್ತಿವೆ. ಆ ಪಂದ್ಯದಲ್ಲಿ ನಾನು ಶಾಲಾ ಪಂದ್ಯದಲ್ಲಿ ಆಡಿದಂತೆ ಆಡಿದೆ ಎಂದು ಹೇಳಿದರು. ನೀನು ವಿಶ್ವಶ್ರೇಷ್ಠ ಬೌಲರ್​ಗಳ ಎಸೆತಗಳನ್ನು ಎದುರಿಸುತ್ತಿರುವೆ ಎಂಬುದನ್ನು ಮರೆಯಬೇಡ. ಹಾಗಾಗಿ ಅವರ ಎಸೆತಗಳಿಗೆ ತಕ್ಕ ಗೌರವ ಕೊಡುವುದನ್ನು ಕಲಿ. ಆಗ ನಾನು ಅವರ ಪೇಸ್​ನಿಂದಾಗಿ ಹಲವು ಬಾರಿ ಬೀಟ್​ ಆಗಿದ್ದನ್ನು ಪ್ರಸ್ತಾಪಿಸಿದೆ. ಅದಕ್ಕೆ ಅವರು, ಎಲ್ಲರಿಗೂ ಹೀಗೆ ಆಗುತ್ತದೆ. ಕ್ರೀಸ್​ಗೆ ಹೋದ ಬಳಿಕ ಅರ್ಧಗಂಟೆ ಸಮಯ ಕಳಿ. ಆಗ ನೀನು ಬೌಲರ್​ಗಳ ಪೇಸ್​ಗೆ ಹೊಂದಿಕೊಳ್ಳುತ್ತೀಯ. ಆನಂತರದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿ ಹುರಿದುಂಬಿಸಿದರು ಎಂದು ಹೇಳಿದ್ದಾರೆ.

    ಅದರಂತೆ ಫೈಸಲಾಬಾದ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯಕ್ಕೆ ನಾನು ಆಯ್ಕೆಯಾಗಿದ್ದೆ. ಆಗ ನಾನು ಸ್ಕೋರ್​ಬೋರ್ಡ್​ ಕಡೆ ನೋಡದೆ ಗಡಿಯಾರದತ್ತ ಮಾತ್ರ ನೋಡಿಕೊಂಡು ಆಡಬೇಕು ಎಂದು ನಿರ್ಧರಿಸಿದ್ದೆ. ಅದರಂತೆ ನಾನು ಆ ಪಂದ್ಯದಲ್ಲಿ ಗಡಿಯಾರ ನೋಡಿಕೊಂಡು ಆಡಿದೆ. ಅರ್ಧ ಗಂಟೆ ಕ್ರೀಸ್​ನಲ್ಲಿ ಕಳೆದ ಬಳಿಕ ಪೇಸ್​ಗೆ ಹೊಂದಿಕೊಂಡಿದ್ದೆ. ಆ ಪಂದ್ಯದಲ್ಲಿ ನಾನು 59 ರನ್​ ಗಳಿಸಿ ಔಟಾಗಿದ್ದೆ. ಅದುವೇ ನನ್ನ ಚೊಚ್ಚಲ ಅರ್ಧಶತಕವಾಗಿತ್ತು. ಆನಂತರದಲ್ಲಿ ಎಲ್ಲವೂ ಬದಲಾಗಲಾರಂಭಿಸಿತು ಎಂದು ತಿಳಿಸಿದ್ದಾರೆ.

    ಸಿನಿಕಾರ್ಮಿಕರಿಗೆ ನೆರವಾಗುವ ಮಾನವೀಯತೆ; ವೆಬ್​ ಮೂಲಕ ಸಿನಿಮಾ ಬಿಡುಗಡೆಗೆ ಮುಂದಾದ ಬಾಲಿವುಡ್​ ಮಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts