More

    ಸಾಲ ನೀಡಲು ವಿಳಂಬ ಬೇಡ ; ಬ್ಯಾಂಕ್‌ಗಳಿಗೆ ಮೇಯರ್ ಫರೀದಾ ಬೇಗಂ ಸಲಹೆ

    ತುಮಕೂರು: ಸಾಲಕ್ಕಾಗಿ ಬಡ, ಹಿಂದುಳಿದ ವರ್ಗದವರೇ ಹೆಚ್ಚು ಅರ್ಜಿ ಸಲ್ಲಿಸುವುದರಿಂದ ಅನಗತ್ಯ ವಿಳಂಬ ಬೇಡ, ದಾಖಲೆಗಳಿಲ್ಲದ ಅರ್ಜಿಗಳು ಸಲ್ಲಿಕೆಯಾದಲ್ಲಿ ಪಾಲಿಕೆ ಹಂತದಲ್ಲೇ ಕೈ ಬಿಡಬೇಕು ಎಂದು ಮೇಯರ್ ಫರೀದಾ ಬೇಗಂ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದರು.

    ಪಾಲಿಕೆ ಸಭಾಂಗಣದಲ್ಲಿ ಸೋಮವಾರ ರಾಜ್ಯ, ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ಮೂಲಕ ಅನುಷ್ಠಾನವಾಗುವ ರಾಜ್ಯ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಅಗತ್ಯ ದಾಖಲೆಗಳ ಕೊರತೆ, ಮತ್ತಿತರ ಕಾರಣವನ್ನು ಹೇಳಿ ಹಿಂದಿರುಗಿಸಬಾರದು ಎಂದರು.

    ಸಾಲ ಪಡೆದವರು ನಿಗದಿತ ಅವಧಿಯೊಳಗೆ ಹಿಂದಿರುಗಿಸಬೇಕು, ನಿಗದಿತ ಕಾಲಾವಧಿಯೊಳಗೆ ಸಾಲವನ್ನು ಹಿಂದಿರುಗಿಸಿದಲ್ಲಿ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ಪಡೆಯಲು ಸಾಧ್ಯವಿದೆ ಎಂದು ಫಲಾನುಭವಿಗಳಿಗೆ ಅರಿವು ಮೂಡಿಸಬೇಕು ಎಂದರು.
    ಪಾಲಿಕೆ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಸಾಲವನ್ನು ಮಂಜೂರು ಮಾಡುವಾಗ ಆಯಾ ವಾರ್ಡಿನ ಪಾಲಿಕೆ ಸದಸ್ಯರ ಸಲಹೆ ಪಡೆಯಬೇಕು, ಇದರಿಂದ ನಿಗಧಿತ ಅವಧಿಯೊಳಗೆ ಸಾಲ ವಸೂಲಾತಿ ಮಾಡಲು ಅನುಕೂಲವಾಗುತ್ತದೆಯಲ್ಲದೆ, ಬ್ಯಾಂಕ್ ಮತ್ತು ಫಲಾನುಭವಿಗಳ ನಡುವೆ ಸೇತುವೆಯಾಗಿ ಸಹಕಾರ ದೊರೆಯಲಿದೆ ಎಂದು ಹೇಳಿದರು.

    ಸಭೆಯಲ್ಲಿ ಉಪಮೇಯರ್ ಶಶಿಕಲಾ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಲೀಡ್‌ಬ್ಯಾಂಕ್ ಮ್ಯಾನೇಜರ್ ನಾರಾಯಣಸ್ವಾಮಿ ಮತ್ತಿತರ ಬ್ಯಾಂಕಿನ ಅಧಿಕಾರಿಗಳು ಇದ್ದರು.  ಆತ್ಮನಿರ್ಭಾರ್ ಯೋಜನೆಗೆ ಶ್ರಮಿಸುತ್ತಿರುವ ರಾಮಾಂಜಿನಪ್ಪ, ಶಿವಪ್ರಸಾದ್, ಅಂಜನಮೂರ್ತಿ, ನಾಗರಾಜಯ್ಯ, ರೇವಣ್ಣ, ಸವಿತಾ, ಪುಷ್ಪಲತಾ, ಸುವರ್ಣ, ಗೌರಿ, ರಾಜಲಕ್ಷ್ಮೀ, ದೊಡ್ಡವಲ್ಲಪ್ಪ, ಭಾಗ್ಯಮ್ಮ ಅವರನ್ನು ಸನ್ಮಾನಿಸಲಾಯಿತು.

    ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ:ದಾಖಲೆಗಳ ಅವಶ್ಯಕತೆ ಇದ್ದಲ್ಲಿ ಫಲಾನುಭವಿಗಳೊಂದಿಗೆ ಬ್ಯಾಂಕಿಗೆ ಭೇಟಿ ನೀಡಿ ಸಾಲ ಅರ್ಜಿಯನ್ನು ಅನುಸರಣೆ ಮಾಡಬೇಕು, ಅನುಷ್ಠಾನಾಧಿಕಾರಿಗಳು ಅಗತ್ಯ ದಾಖಲೆಗಳನ್ನು ಪೂರೈಕೆ ಮಾಡಿದ ನಂತರ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು, ಸಾಲ ಮಂಜೂರು ಮಾಡುವಾಗ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು. ಪಾಲಿಕೆ ಅನುಷ್ಠಾನ ಮಾಡುವ ಡೇ-ನಲ್ಮ್ ಯೋಜನೆಯಡಿ 125(ವೈಯಕ್ತಿಕ ಸಾಲ) ಫಲಾನುಭವಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದ್ದು, ಅರ್ಜಿಗಳನ್ನು ಸಾಲ ಮಂಜೂರಾತಿಗಾಗಿ ಬ್ಯಾಂಕಿಗೆ ಸಲ್ಲಿಸಲಾಗಿದೆ. ಈ ಪೈಕಿ 10 ಅರ್ಜಿಗಳಿಗೆ ಬ್ಯಾಂಕಿನವರು ಸಾಲ ಮಂಜೂರು ಮಾಡಿದ್ದು, 115 ಅರ್ಜಿಗಳು ಬಾಕಿ ಇವೆ ಎಂದು ವಿವರಿಸಿದರು. ಅದೇರೀತಿ ಗುಂಪು ಸಾಲದಡಿ ಸಲ್ಲಿಸಿರುವ 12 ಅರ್ಜಿಗಳ ಪೈಕಿ 2 ಅರ್ಜಿಗಳಿಗೆ ಮಾತ್ರ ಸಾಲ ಮಂಜೂರಾಗಿದ್ದು, ಉಳಿದ 10 ಅರ್ಜಿಗಳು ಬಾಕಿ ಹಾಗೂ ಬ್ಯಾಂಕ್ ಲಿಂಕೇಜ್ ಸಾಲದಡಿ ಸಲ್ಲಿಸಿರುವ 62 ಅರ್ಜಿಗಳ ಪೈಕಿ 3 ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು, 59 ಅರ್ಜಿಗಳು ಬಾಕಿಯಿರುವುದರಿಂದ ಬ್ಯಾಂಕುಗಳು ಮಾರ್ಚ್ 15ರೊಳಗೆ ಎಲ್ಲಾ ಅರ್ಜಿ ವಿಲೇವಾರಿ ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts