More

    ಪಂಜಾಬ್‌ ಸಿಎಂ ಸಹೋದರನಿಗೇ ಸಿಗಲಿಲ್ಲ ಟಿಕೆಟ್‌! ಪಕ್ಷೇತರನಾಗಿ ನಿಂತು ಕಿಡಿ ಕಾರಿದ ಚನ್ನಿ

    ಚಂಡೀಗಢ: ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ಗೆ ಹೋದಾಗ ಅಲ್ಲಿ ಭದ್ರತಾಲೋಪ ಎಸಗಿ ಭಾರಿ ಪೇಚಿಗೆ ಸಿಲುಕಿರುವ ಪಂಜಾಬ್‌ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಸಹೋದರನಿಗೆ ಕಾಂಗ್ರೆಸ್‌ನ ಟಿಕೆಟ್‌ ಕೊಡಿಸಬೇಕೆಂದು ಪರೋಕ್ಷವಾಗಿ ಹರಸಾಹಸ ಪಟ್ಟಿದ್ದರೂ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಅವರ ಸಹೋದರ ಮನೋಹರ್ ಸಿಂಗ್ ಚನ್ನಿ ಅವರಿಗೆ ಟಿಕೆಟ್‌ ಕೈತಪ್ಪಿ ಹೋಗಿದೆ.

    ಇದರಿಂದ ಅಸಮಾಧಾನಗೊಂಡಿರುವ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ತಮ್ಮ ಬದಲಿಗೆ ಈ ಕ್ಷೇತ್ರದಿಂದ ಶಾಸಕ ಗುರುಪ್ರೀತ್ ಸಿಂಗ್ ಜಿಪಿ ಅವರನ್ನು ಕಣಕ್ಕಿಳಿಸಿರುವ ಬಗ್ಗೆ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮನೋಹರ್ ಸಿಂಗ್ ಚನ್ನಿ ಇದು ಅನ್ಯಾಯದ ಪರಮಾವಧಿ. ಕ್ಷೇತ್ರದ ಜನತೆಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಕಿಡಿ ಕಾರಿದ್ದಾರೆ.

    “ಬಸ್ಸಿ ಪಠಾಣ ಪ್ರದೇಶದ ಜನತೆ ನಾನೇ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ನನಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಿಲ್ಲ. ಆದ್ದರಿಂದ ಅವರ ಅಣತಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ. ಹಲವು ಪ್ರಮುಖರು ಕೂಡ ನನಗೆ ಈ ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವ ಯಾವುದೇ ಅವಕಾಶವಿಲ್ಲ, ಚುನಾವಣೆಯಲ್ಲಿ ಹೋರಾಡುತ್ತೇನೆ ಎಂದು ಮನೋಹರ್ ಸಿಂಗ್ ಚನ್ನಿ ಹೇಳಿದ್ದಾರೆ.

    ತಮ್ಮ ಈ ನಿರ್ಧಾರವನ್ನು ಸಹೋದರ ಚರಣ್​​ಜಿತ್ ಸಿಂಗ್ ಚನ್ನಿಗೂ ತಿಳಿಸಿದ್ದೇನೆ. ಒಂದೇ ಕುಟುಂಬದವರಿಗೆ ಟಿಕೆಟ್‌ ನೀಡುವುದು ಉಚಿತವಲ್ಲ ಎಂದು ನನಗೆ ಹೇಳಲಾಗಿದೆ. ಆದರೆ ಇದರ ಹಿಂದಿನ ಉದ್ದೇಶ ಇನ್ನೇನೋ ಇದೆ ಎಂದಿರುವ ಮನೋಹರ್ ಸಿಂಗ್ ಚನ್ನಿ , ಜಲಂಧರ್‌ನ ಕಾಂಗ್ರೆಸ್‌ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಪುತ್ರ ವಿಕ್ರಮಜಿತ್ ಸಿಂಗ್ ಚೌಧರಿ ಹಾಗೂ ಫತೇಘರ್ ಸಾಹಿಬ್ ಸಂಸದ ಅಮರ್ ಸಿಂಗ್ ಅವರ ಪುತ್ರ ಕಮಿಲ್ ಅಮರ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ, ನನಗೆ ಮಾತ್ರ ಕುಟುಂಬ ರಾಜಕಾರಣ ಬೇಡ ಎಂದು ಹೇಳಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸರ್ಕಾರದ ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮನೋಹರ್ ಸಿಂಗ್ ಚನ್ನಿ, ಕಳೆದ ವರ್ಷ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಅರಿವಳಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಇವರು, ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಪಂಜಾಬ್ ಸಿವಿಲ್ ಮೆಡಿಕಲ್ ಸರ್ವಿಸಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

    ಉತ್ತರ ಪ್ರದೇಶದಲ್ಲಿ ಮತಪ್ರಚಾರಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ ಛತ್ತೀಸಗಢ ಸಿಎಂ: ಎಫ್‌ಐಆರ್ ದಾಖಲು

    VIDEO: ಕರೊನಾ ನಿಜಕ್ಕೂ ತೊಲಗಿ ಹೋಗುತ್ತಾ? ಅಮೆರಿಕದ ಪ್ರಸಿದ್ಧ ವೈರಾಲಜಿಸ್ಟ್‌ ನೀಡಿದ್ದಾರೆ ನೆಮ್ಮದಿಯ ಸುದ್ದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts