More

    ಜಾಲತಾಣ, ಒಟಿಟಿ, ಸುದ್ದಿ ಪೋರ್ಟಲ್‌ ನಿಯಂತ್ರಣ: ದೂರುಗಳಿಗಾಗಿ ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ

    ಬೆಂಗಳೂರು: ಸಾಮಾಜಿಕ ಜಾಲತಾಣಗಳು, ಒಟಿಟಿ ವೇದಿಕೆಗಳು ಮತ್ತು ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುವ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ-2021 ಅನ್ನು ರೂಪಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಂ ಸಹಾಯ್ ಹೇಳಿದ್ದಾರೆ.

    ಮಾಧ್ಯಮಗಳ ದುರ್ಬಳಕೆ ಬಗ್ಗೆ ಸರ್ಕಾರಕ್ಕೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಕುಂದುಕೊರತೆ ನಿವಾರಿಸಲು ನಿಯಂತ್ರಣದ ನಿಯಮ ರೂಪಿಸಲಾಗಿದೆ. ಈ ನಿಯಮಗಳಿಂದ ಈ ಎಲ್ಲಾ ಮಾಧ್ಯಮಗಳ ಕಾರ್ಯನಿರ್ವಹಣೆಯಲ್ಲಿ ಗಣನೀಯ ಬದಲಾವಣೆ ಆಗುವುದು. ಬಳಕೆದಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದಕ್ಕೆ ವೇದಿಕೆ ಒದಗಿಸುವುದು ಇದರ ಕೆಲಸ ಎಂದು ಅವರು ಹೇಳಿದರು.

    ದಕ್ಷಿಣ ರಾಜ್ಯಗಳ ಚಲನಚಿತ್ರ ಉದ್ಯಮ, ಒಟಿಟಿ ವೇದಿಕೆಗಳು, ಡಿಜಿಟಲ್ ಸುದ್ದಿ ಪ್ರಕಟಣಾ ಸಂಸ್ಥೆಗಳು ಮತ್ತು ಶೈಕ್ಷಣಿಕ ವಲಯದ ಪ್ರತಿನಿಧಿಗಳ ಜತೆ ವರ್ಚುವಲ್ ಸಂವಾದ ಉದ್ದೇಶಿಸಿ ಅವರು ಮಾತನಾಡಿದರು. ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ-2021, ಭಾಗ-3ರಲ್ಲಿ ತಿಳಿಸಿರುವ ಅಂಶಗಳ ಕುರಿತು ಮಾತನಾಡಿದ ಸಹಾಯ್‌, ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಸುದ್ದಿ, ಸಿನಿಮಾ ಮತ್ತು ಇತರ ವಿಷಯಗಳ ಪ್ರಸಾರದಲ್ಲಿ ಅತಿವೇಗದಲ್ಲಿ ಬೆಳವಣಿಗೆ ಕಾಣಲಾಗುತ್ತಿದೆ. ಇದರಿಂದಾಗಿ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿತ್ತು. ಸಾಂಪ್ರದಾಯಿಕ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳ ನಡುವೆ ಸಮಾನ ವಾತಾವರಣ ಇದರಿಂದ ಸೃಷ್ಟಿಯಾಗಲಿದೆ ಎಂದು ಹೇಳಿದರು.

    ಡಿಜಿಟಲ್ ಮಾಧ್ಯಮದಲ್ಲಿ ನೀತಿ ಸಂಹಿತೆ ಪಾಲನೆ ಬಗ್ಗೆ ಸಣ್ಣ ಸಂಸ್ಥೆಗಳ ಆತಂಕಗಳನ್ನು ಕುರಿತು ಮಾತನಾಡಿದ ಅವರು, ಸಣ್ಣ ಸಂಸ್ಥೆಗಳು ಹಾಲಿ ರಾಷ್ಟ್ರೀಯ ನಿಯಂತ್ರಣ ಸಂಸ್ಥೆಗಳ ಜತೆ ಸೇರ್ಪಡೆಯಾಗುವ ಬದಲು ಅವುಗಳೇ ಒಗ್ಗೂಡಿ ಹೊಸ ಸ್ವಯಂ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಿಕೊಳ್ಳುವುದು ಒಳ್ಳೆಯದು. ಈಗಾಗಲೇ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅಂತಹ ಹಲವು ಮನವಿಗಳನ್ನು ಸ್ವೀಕರಿಸಿದೆ. ಹೊಸ ಸಂಹಿತೆಗೆ ಸಂಬಂಧಿಸಿದಂತೆ ಉದ್ಯಮದ ಎಲ್ಲ ಭಯ ಮತ್ತು ಆತಂಕವನ್ನು ನಿವಾರಿಸಲು ಸರ್ಕಾರ ಮುಕ್ತವಾಗಿದೆ ಎಂದರು.

    ’ಪ್ರಕಾಶಕರು ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರೀಕ್ಷಿಸಲಾಗುತ್ತಿದೆ, ಅವರು ಆದಷ್ಟು ಶೀಘ್ರ ನಿಗದಿತ ನಮೂನೆಯಲ್ಲಿ ಸಚಿವಾಲಯಕ್ಕೆ ಮಾಹಿತಿಯನ್ನು ಒದಗಿಸಬೇಕು ಮತ್ತು ಪರಸ್ಪರ ಸಮಾಲೋಚನೆ ಮೂಲಕ ಸ್ವಯಂ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಿಕೊಳ್ಳಬೇಕು ಮತ್ತು ಇದಾಗಲೇ ವಿಲೇವಾರಿ ಮಾಡಿರುವ ಕುಂದುಕೊರತೆಗಳನ್ನು ಬಹಿರಂಗ ಮಾಡಬೇಕು’ ಎಂದು ಸಹಾಯ್ ಹೇಳಿದರು. ಈಗಾಗಲೇ 1500 ಪ್ರಕಾಶಕರು ತಮ್ಮ ಮಾಹಿತಿಯನ್ನು ಸಲ್ಲಿಸಿದ್ದಾರೆ ಎಂದೂ ಮಾಹಿತಿ ನೀಡಿದರು.

    ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಆನ್ ಲೈನ್ ಮಾಧ್ಯಮ, ಒಟಿಟಿ ವೇದಿಕೆಗಳು, ಚಲನಚಿತ್ರ ಉದ್ಯಮ, ಚಿತ್ರ ನಿರ್ಮಾಣ ಸಂಸ್ಥೆಗಳು ಮತ್ತು ಚಿತ್ರ ಮಂದಿರಗಳ ಮಾಲಿಕರು ಸೇರಿದಂತೆ 240ಕ್ಕೂ ಅಧಿಕ ಪ್ರತಿನಿಧಿಗಳು ವರ್ಚುವಲ್ ಸಂವಾದದಲ್ಲಿ ಭಾಗವಹಿಸಿದ್ದರು. ಸುಳ್ಳು ಸುದ್ದಿ(ಫೇಕ್ ನ್ಯೂಸ್) ತಡೆ, ವಿಷಯದ ಸತ್ಯಾಸತ್ಯತೆ, ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವ ಸಿನಿಮಾಗಳ ಸೆನ್ಸಾರ್ ಶಿಪ್ ಮತ್ತು ಒಟಿಟಿ ವೇದಿಕೆಗಳ ಸ್ವಯಂ ನಿಯಂತ್ರಣ, ಪೈರಸಿ ಮತ್ತಿತರ ವಿಷಯಗಳ ಕುರಿತು ವೆಬಿನಾರ್ ನಲ್ಲಿ ಸುಮಾರು 2 ಗಂಟೆ ಕಾಲ ಚರ್ಚಿಸಲಾಯಿತು.

    ತಮ್ಮ ಕ್ಷೇತ್ರದ ಸಂತ್ರಸ್ತರಿಗೆ ನೆರವು ನೀಡದೇ, ಈಗ ಮೊಸಳೆ ಕಣ್ಣೀರು ಹಾಕ್ತಾರೆ- ಕ್ಯಾಪ್ಟನ್ ಕಾರ್ಣಿಕ್ ಕಿಡಿ

    ಮೊಬೈಲ್‌ ಖರೀದಿಗೆ ಬಾಲಕಿ ಮಾರಿದಳು 12 ಮಾವಿನಹಣ್ಣು – ಸಿಕ್ಕಿದ್ದು 1.20 ಲಕ್ಷ ರೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts