More

    ತಾಲಿಬಾನಿ ಹಾರಿಸಿದ ಗುಂಡಿನ ನೋವು ಇಂದಿಗೂ ಮಾಯಲಿಲ್ಲ- ಅಂದು ಅನುಭವಿಸಿದ ಯಾತನೆ ಬಿಚ್ಚಿಟ್ಟ ಮಲಾಲ

    ಇಸ್ಲಾಮಾಬಾದ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಕ್ರೌರ್ಯ ಮರೆಯುತ್ತಿರುವ ಬೆನ್ನಲ್ಲೇ, ಒಂಬತ್ತು ವರ್ಷಗಳ ಹಿಂದಕ್ಕೆ ಜಾರಿದ್ದಾರೆ ನೋಬಲ್‌ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಮಲಾಲ ಯೂಸುಫ್‌ಝಾಯ್‌. ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಹೋರಾಟಕ್ಕಾಗಿ ತಾಲೀಬಾನಿ ರಕ್ಕಸರ ಗುಂಡೇಟಿಗೆ ಬಲಿಯಾಗುವುದರಿಂದ ಸ್ವಲ್ಪದಲ್ಲಿಯೇ ತಪ್ಪಿಸಿಕೊಂಡಿದ್ದ ಮಲಾಲ, ಈಗ ಮತ್ತೆ ಆ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.

    ತಾವು ಅಂದು ಅನುಭವಿಸಿರುವ ಭಯಾನಕ ನೋವಿನ ಕಥನವನ್ನು ಅವರು ಹೀಲಿಂಗ್ ಫ್ರಮ್ ಒನ್ ತಾಲಿಬಾನ್ ಬುಲೆಟ್’ನಲ್ಲಿ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ.
    2012ರಲ್ಲಿ ಆಫ್ಘನ್ ಹೆಣ್ಣುಮಕ್ಕಳ ಪರವಾಗಿ ನಿಂತು, ತಾಲಿಬಾನಿಗಳ ಷರಿಯಾ ಕಾನೂನು ಹೆಸರಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದು ಮಲಾಲ. ಇದೇ ಕಾರಣಕ್ಕೆ 2012ರ ಅಕ್ಟೋಬರ್‌ನಲ್ಲಿ ತಾಲಿಬಾನ್ ವಕ್ತಾರ ಎಹ್ಸಾನುಲ್ಲಾ ಎಹ್ಸಾನ್, ಮಲಾಲ ಇದ್ದ ಶಾಲಾ ಮಕ್ಕಳ ಬಸ್‍ಗೆ ಹತ್ತಿದ್ದ. ಸೀದಾ ಮಲಾಲಳ ತಲೆಗೆ ಗುಂಡಿಕ್ಕಿ ಪರಾರಿಯಾಗಿದ್ದ.


    ’ಒಂದು ಬುಲೆಟ್‌ ನನ್ನ ಜೀವನದ ಮೇಲೆ ಅಗಾಧವಾದ ಪರಿಣಾಮ ಬೀರಿದೆ. ಇಂದಿಗೂ ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ, ಕಳೆದ ನಾಲ್ಕು ದಶಕಗಳಲ್ಲಿ ಅಫ್ಘಾನಿಸ್ತಾನದ ಲಕ್ಷಾಂತರ ಜನರು ಗುಂಡಿನ ದಾಳಿಗೀಡಾಗಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಇದನ್ನು ನೆನೆದರೆ ಮನಸ್ಸಿಗೆ ಖೇದವೆನಿಸುತ್ತದೆ’ ಎಂದಿದ್ದಾರೆ.


    “ನನ್ನ ಮೇಲೆ ಗುಂಡಿನ ದಾಳಿಯಾಯಿತು. ತಲೆಗೆ ಗುಂಡು ತಾಗಿದ ಕಾರಣ ನನಗೆ ಎಲ್ಲವೂ ಮಂಜುಮಂಜಾಗಿ ಕಾಣಿಸಲು ಆರಂಭವಾಯಿತು. ಹಲವು ದಿನ ನಾನು ಆಸ್ಪತ್ರೆಯ ಹಾಸಿಗೆ ಮೇಲೆಯೇ ಕಾಲ ಕಳೆಯಬೇಕಾಯಿತು. ಒಂಬತ್ತು ವರ್ಷಗಳ ಹಿಂದೆ ದಾಳಿ ನಡೆದರೂ, ಇಂದಿಗೂ ಅಂದು ತಾಗಿದ ಬುಲೆಟ್‌ ನೋವು ಕಾಡುತ್ತಿರುತ್ತದೆ. ಹಾಗೆಯೇ ನೆನಪುಗಳು ಸಹ ಕಾಡುತ್ತವೆ,” ಎಂದು ಅವರು ಹೇಳಿದ್ದಾರೆ.


    ಮಲಾಲ ಮೇಲೆ ಗುಂಡು ಹಾರಿಸಿದವನಿಗೆ ಜೈಲು ಶಿಕ್ಷೆಯಾಗಿತ್ತು. ಆದರೆ ಜೈಲಿನಿಂದ ಬಿಡುಗಡೆಯಾಗುತ್ತಲೇ ಭಯೋತ್ಪಾದಕನಿಂದ ಮಲಾಲಾಗೆ ಮತ್ತೆ ಬೆದರಿಕೆ ಹಾಕಲಾಗಿತ್ತು. ಮಲಾಲಳ ಮುಖದ ನರಗಳು, ಕಿವಿಗೂಡು, ಹಲ್ಲಿನ ದವಡೆಗಳು ಸೀಳಿ ತುಂಡಾಗಿ ಗಂಭೀರ ಸ್ಥಿತಿಯಲ್ಲಿ ನರಳಾಡಿದ್ದಳು. ಆಕೆಗೆ ಮೊದಲು ಪೆಶಾವರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಆಕೆ ಸರಿಯಾಗಿ ಚೇತರಿಸಿಕೊಂಡಿರಲಿಲ್ಲ. ನಂತರ ಬರ್ಮಿಂಗ್‍ಹ್ಯಾಮ್‍ನ ಕ್ವೀನ್ ಎಲಿಜಬತ್ ಆಸ್ಪತ್ರೆಯಲ್ಲಿ ನೆರವಿನ ಹಸ್ತವಾಗಿ ಆರು ಬಾರಿ ಉಚಿತ ಶಸ್ತ್ರಚಿಕಿತ್ಸೆ ನಡೆಸಿ, ಬದುಕಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts