More

    ಪ್ರಧಾನಿ ಹುದ್ದೆಗೆ ಇನ್ನೊಂದು ‘ಕಣ್ಣು’? ಹೊಸ ಪಕ್ಷದ ಹೆಸರು ಘೋಷಿಸಿದ ಕೆಸಿಆರ್​: ಕುಮಾರಸ್ವಾಮಿಯೂ ಸಾಥ್​…

    ಹೈದರಾಬಾದ್(ತೆಲಂಗಾಣ): 2024ರಲ್ಲಿ ನಡೆಯುವ ಚುನಾವಣೆಯ ಮೇಲೆ ಎಲ್ಲಾ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿವೆ. ಅದರಲ್ಲಿಯೂ ಪ್ರಧಾನಿಯ ಹುದ್ದೆಗೆ ಆಕಾಂಕ್ಷಿಗಳಾಗುವವರ ಪಟ್ಟಿ ದಿನೇ ದಿನೇ ಏರುತ್ತಲೇ ಇದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಇದಾಗಲೇ ಈ ಹುದ್ದೆಯ ಮೇಲೆ ತಮಗಿರುವ ಆಕಾಂಕ್ಷೆಯ ಕುರಿತು ಹೇಳಿದ್ದಾರೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ​ರಾವ್​ (ಕೆಸಿಆರ್​)!

    ರಾಷ್ಟ್ರ ರಾಜಕಾರಣದ ಮೇಲೆ ಕಣ್ಣಿಟ್ಟಿರುವ ಕೆ. ಚಂದ್ರಶೇಖರ್ ​ರಾವ್​ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್)​ ಎಂದಿದ್ದ ತಮ್ಮ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್​) ಎಂದು ಮರುನಾಮಕರಣ ಮಾಡಿದ್ದು, ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುವ ಎಲ್ಲಾ ಸಾಧ್ಯತೆಗಳನ್ನೂ ತೆರೆದಿಟ್ಟಿದ್ದಾರೆ. ಈ ಹೊಸ ಹೆಸರಿನ ಕುರಿತು ಸ್ಪಷ್ಟನೆ ನೀಡಿರುವ ಕೆಸಿಆರ್​. ತೆಲುಗು, ಹಿಂದಿಯಲ್ಲಿ ಸರಳವಾಗಿ ಹೇಳಬಹುದಾದ ಪದ ಇದಾಗಿದ್ದು, ಹಾಗಾಗಿ ಪಕ್ಷಕ್ಕೆ ಭಾರತ್​ ರಾಷ್ಟ್ರ ಸಮಿತಿ ಎಂದು ಹೆಸರಿಸಲಾಗಿದೆ. ಈ ಹೆಸರು ಈಗಾಗಲೇ ದೇಶಾದ್ಯಂತ ಜನರಿಗೆ ಮುಟ್ಟಿದೆ ಎಂದಿದ್ದಾರೆ.

    ಅಂತಿಮಗೊಳಿಸಿದ ಪಕ್ಷದ ಹೆಸರ ನಿರ್ಣಯಕ್ಕೆ ಅನುಮೋದನೆ ಪಡೆಯಲು ನಾಳೆ ಟಿಆರ್​ಎಸ್​ ನಿಯೋಗ ದೆಹಲಿಗೆ ತೆರಳಲಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಅಫಿಡವಿಟ್​ ಸಲ್ಲಿಸಲಾಗುತ್ತದೆ. ಬಳಿಕ ಆಯೋಗ ಈ ಕುರಿತು ಅಧಿಸೂಚನೆ ಹೊರಡಿಸಲಿದೆ. ಪಕ್ಷದ ಹೆಸರಿನ ಮೇಲೆ ಆಕ್ಷೇಪಣೆ ಸಲ್ಲಿಸಲು 1 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.

    ಇದಾಗಲೇ ಕುತೂಹಲ ಘಟ್ಟದಲ್ಲಿ ನಿನ್ನೆ (ಮಂಗಳವಾರ) ಕರ್ನಾಟಕದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿಯವರು 20 ಜನ ಶಾಸಕರನ್ನು ಸೇರಿಸಿಕೊಂಡು ತೆಲಂಗಾಣಕ್ಕೆ ಧಾವಿಸಿದ್ದರು. ಇಂದು ಕೆಸಿಆರ್​ ಅವರ ಹೊಸ ಪಕ್ಷದ ಘೋಷಣೆ ಸಂದರ್ಭದಲ್ಲಿ ಅವರು ಕೂಡ ಹಾಜರು ಇದ್ದುದು ರಾಜಕೀಯ ವಲಯದಲ್ಲಿ ಹಲವಾರು ರೀತಿಯ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

    ಅದೇ ಇನ್ನೊಂದೆಡೆ, ಹೊಸ ಪಕ್ಷದ ಹೆಸರು ಇಂದು ಮಧ್ಯಾಹ್ನ ನಡೆಯುವ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕಿದೆ. ಈ ಸಭೆಯಲ್ಲಿ ಕೂಡ ಎಚ್​.ಡಿ. ಕುಮಾರಸ್ವಾಮಿ, ತಮಿಳುನಾಡು ವಿಸಿಕೆ ಪಕ್ಷದ ಅಧ್ಯಕ್ಷ, ಸಂಸದ ತಿರುಮಾವಲವನ್ ಮತ್ತಿತರರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ 100 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಇದು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬಹುದು. ಕೆಲವು ರಾಜಕೀಯ ಪಕ್ಷಗಳು ಬಿಆರ್‌ಎಸ್‍ನೊಂದಿಗೆ ವಿಲೀನಗೊಳ್ಳಬಹುದು ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಆರ್‌ಎಸ್‍ನೊಂದಿಗೆ ಕೆಲಸ ಮಾಡಲು ಸಿದ್ಧರಿರುವ ಇತರ ನಾಯಕರೂ ಪಕ್ಷ ಸೇರಬಹುದು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಪಿಎಫ್​ಐ ಜತೆ 873 ಪೊಲೀಸ್​ ಅಧಿಕಾರಿಗಳ ನಂಟು! ಆತಂಕಕಾರಿ ವಿಷಯ ಎನ್​ಐಎ ತನಿಖೆಯಿಂದ ಬಯಲು

    ಸಂಭ್ರಮದ ಹಿಂದೆಯೇ ಬಂದೆರಗಿದ ಸಾವು! ಬಾಲ್ಯದ ಕನಸು ನನಸಾದ ಖುಷಿಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts