More

    ‘ನೀನೆಷ್ಟು ಸುಂದರಿ, ಗಿಫ್ಟ್‌ ಕೊಡ್ಲಾ?’ ಕೇಳಿದ ಲಂಡನ್ ಚೆಲುವ, ಹೂಂ ಎಂದಳೀಕೆ- ಮುಂದಾದದ್ದು ದುರಂತ!

    ರಾಯ್‌ಬರೇಲಿ (ಉತ್ತರ ಪ್ರದೇಶ): ಸೈಬರ್‌ ವಂಚಕರ ಬಗ್ಗೆ ದಿನನಿತ್ಯ ಹತ್ತಾರು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದರೂ, ಜನರು ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಗಿಫ್ಟ್‌ ಆಸೆಗೆ ಅಥವಾ ಸುಂದರ, ಸುಂದರಿಯರನ್ನು ನೋಡಿ ಅಂದಕ್ಕೆ ಮರುಳಾಗಿಯೋ ಲಕ್ಷ, ಕೋಟಿ ಹಣವನ್ನು ಕಳೆದುಕೊಳ್ಳುವವರ ಬಗ್ಗೆ ವರದಿಯಾಗುತ್ತಲೇ ಇದೆ. ಇಲ್ಲಿದೆ ಅಂಥದ್ದೇ ಒಂದು ಕೇಸ್‌.

    ಇದು, ಉತ್ತರಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ನಡೆದಿರುವ ಪ್ರಕರಣ. ಚೆಲುವನೊಬ್ಬನ ಅಂದಕ್ಕೆ ಮರುಳಾಗಿ ಅವನು ಹೇಳಿದಂತೆ ಕೇಳಿ 32 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ ಒಬ್ಬಳು ಯುವತಿ. ಈ ಯುವತಿಗೆ ಇನ್‍ಸ್ಟಾಗ್ರಾಮ‌ನಲ್ಲಿ ಕಳೆದ ತಿಂಗಳಷ್ಟೇ ಯುವಕನೊಬ್ಬನ ಪರಿಯಚಯವಾಗಿದೆ. ತಾನು ಲಂಡನ್‌ನಲ್ಲಿ ವಾಸವಾಗಿರುವುದಾಗಿ ಆತ ಪರಿಚಯ ಮಾಡಿಕೊಂಡಿದ್ದಾನೆ.

    ವಿದೇಶಿಗ, ಅದರಲ್ಲಿಯೂ ಚೆಲುವ ಎಂದು ಅಂದುಕೊಂಡ ಈ ಯುವತಿ ಇನ್‌ಸ್ಟಾಗ್ರಾಮ್‌ ಮೂಲಕವೇ ಆತನ ಪರಿಚಯ ಮಾಡಿಕೊಂಡು, ವಿದೇಶಕ್ಕೆ ಹಾರುವ ಕನಸು ಕಂಡಿದ್ದಾಳೆ. ಈ ನಡುವೆಯೇ, ಈಕೆ ಸಾಕಷ್ಟು ಸ್ಥಿತಿವಂತಳು ಎಂಬುದನ್ನು ಇವಳ ಬಾಯಲ್ಲೇ ಕೇಳಿ ತಿಳಿದುಕೊಂಡಿದ್ದಾನೆ ಆ ‘ಚೆಲುವ’! ಅದಕ್ಕಾಗಿಯೇ ಯುವತಿಯ ಅಂದಚೆಂದವನ್ನೆಲ್ಲಾ ಬಣ್ಣಿಸಿ, ನೀನೆಷ್ಟು ಸುಂದರಿ ಎಂದೆಲ್ಲಾ ಹೊಗಳಿದ ಆ ಯುವಕ ನಂತರ ನಮ್ಮ ಪರಿಚಯವಾದದ್ದು ತುಂಬಾ ಖುಷಿಯಾಗಿದೆ. ನಿನಗೊಂದು ಗಿಫ್ಟ್‌ ಕೊಡಬೇಕು ಎಂಬ ಆಸೆಯಿದೆ, ಕಳಿಸ್ಲಾ ಎಂದು ಕೇಳಿದ್ದಾನೆ.

    ಅನಾಯಾಸವಾಗಿ ತನಗೆ ಲಂಡನ್‌ನಿಂದ ಗಿಫ್ಟ್‌ ಬರುತ್ತದೆ ಎಂದು ಖುಷಿಯಲ್ಲಿ ತೇಲಾಡಿದ ಯುವತಿ ನಾಚುತ್ತಲೇ ಹೂಂ ಎಂದಿದ್ದಾಳೆ. ಇಷ್ಟು ಸಿಕ್ಕಿದ್ದೇ ತಡ, ಯುವಕ ನಾನು ಕಳುಹಿಸುತ್ತಿರುವ ಉಡುಗೊರೆ ಸುಮಾರು 45 ಲಕ್ಷ ರೂಪಾಯಿದ್ದು. ಅದಕ್ಕೆ ಕನಿಷ್ಠ 32 ಲಕ್ಷ ರೂಪಾಯಿ ಟ್ಯಾಕ್ಸ್ ಕಟ್ಟಬೇಕು, ಅದನ್ನು ಭಾರತದಿಂದ ಕಟ್ಟಿದರೆ ನನಗೆ ಗಿಫ್ಟ್‌ ಕಳುಹಿಸಲು ಸುಲಭವಾಗುತ್ತದೆ ಎಂದು ಹೇಳಿದ್ದಾನೆ. ಹಿಂದೆ ಮುಂದೆ ಯೋಚಿಸದ ಯುವತಿ ಅದಕ್ಕೆ ಒಪ್ಪಿ ಅವನು ಹೇಳಿದ್ದಲ್ಲಿಯೇ ದುಡ್ಡು ಕಳುಹಿಸಿದ್ದಾಳೆ.

    ದುಡ್ಡು ಕಳುಹಿಸಿದ ನಂತರ ಯುವಕ ನಾಪತ್ತೆ. ದುಡ್ಡೂ ಇಲ್ಲ, ಗಿಫ್ಟೂ ಇಲ್ಲ. ಇನ್‌ಸ್ಟಾಗ್ರಾಮೂ ಕ್ಲೋಸ್‌. ಆಗಲೇ ತಿಳಿದದ್ದು ಈ ಯುವತಿಗೆ ತಾನು ಮೋಸ ಹೋಗಿದ್ದೇನೆ ಎಂದು. ಈಗ ಪೊಲೀಸರಿಗೆ ದೂರು ನೀಡಿದ್ದು ತನಗೆ ನ್ಯಾಯ ಕೊಡಿಸಿ ಎಂದು ಕೋರಿದ್ದಾಳೆ. ಸದ್ಯ ಸೈಬರ್‌ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts