More

    ಫೀಸು, ಬ್ಯಾಗು, ಹೋಮ್​ ವರ್ಕು ಎಲ್ಲದರಿಂದಲೂ ಮುಕ್ತ…ಮುಕ್ತ… ಈ ‘ಹೋಮ್ ಸ್ಕೂಲಿಂಗ್’​…

    ಲಕ್ಷಾಂತರ ರೂ. ಡೊನೇಷನ್ ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸುವುದು ಒಂದು ಸಾಹಸವಾದರೆ ನಂತರ ಅವರನ್ನು ಪ್ರತಿದಿನ ರೆಡಿ ಮಾಡಿ ಶಾಲೆಗೆ ಕಳಿಸುವುದು ಇನ್ನೊಂದು ದೊಡ್ಡ ಸಾಹಸ. ಈ ನಡುವೆ ಅವರ ಫೀಸು, ಸ್ಕೂಲ್ ವ್ಯಾನು, ಹೋಂ ವರ್ಕ, ಪ್ರಾಜೆಕ್ಟ್ ವರ್ಕ…. ಹೀಗೆ ಪಾಲಕರಿಗೆ ಮುಗಿಯಲಾರದಷ್ಟು ತಲೆನೋವುಗಳು. ಇದೆಲ್ಲಕ್ಕೂ ಪರಿಹಾರವೇನೋ ಎಂಬಂತೆ ಶುರುವಾಗಿರುವುದೇ ಹೋಂ ಸ್ಕೂಲಿಂಗ್. ಸಾಕಷ್ಟು ಸಮಯ ಇರುವ ಸುಶಿಕ್ಷಿತ ಪಾಲಕರಿಗಂತೂ ಇದೊಂದು ವರ. ಮಕ್ಕಳಿಸ್ಕೂಲು ಮನೇಲಲ್ವೇ ಲಕ್ಷಾಂತರ ರೂ. ಡೊನೇಷನ್ ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸುವುದು ಒಂದು ಸಾಹಸವಾದರೆ ನಂತರ ಅವರನ್ನು ಪ್ರತಿದಿನ ರೆಡಿ ಮಾಡಿ ಶಾಲೆಗೆ ಕಳಿಸುವುದು ಇನ್ನೊಂದು ದೊಡ್ಡ ಸಾಹಸ. ಈ ನಡುವೆ ಅವರ ಫೀಸು, ಸ್ಕೂಲ್ ವ್ಯಾನು, ಹೋಂ ವರ್ಕ, ಪ್ರಾಜೆಕ್ಟ್ ವರ್ಕ…. ಹೀಗೆ ಪಾಲಕರಿಗೆ ಮುಗಿಯಲಾರದಷ್ಟು ತಲೆನೋವುಗಳು. ಇದೆಲ್ಲಕ್ಕೂ ಪರಿಹಾರವೇನೋ ಎಂಬಂತೆ ಶುರುವಾಗಿರುವುದೇ ಹೋಂ ಸ್ಕೂಲಿಂಗ್. ಸಾಕಷ್ಟು ಸಮಯ ಇರುವ ಸುಶಿಕ್ಷಿತ ಪಾಲಕರಿಗಂತೂ ಇದೊಂದು ವರ.

    |ಹರಿಪ್ರಸಾದ್ ನಾಡಿಗ್

    ಒಂದು ದಿನ ಕಬ್ಬನ್ ರ್ಪಾನಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಒಂದೆಡೆ ಸೇರಿದ್ದರು. ಹೋಂ ಸ್ಕೂಲಿಂಗ್ ಮಾಡುತ್ತಿರುವ, ಅಂದರೆ ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿರುವ ಪೋಷಕರ ಸಮ್ಮಿಲನ ಅದು. ಬಹುಶಃ ಆಗಾಗ ಅವರೆಲ್ಲರೂ ಜತೆಗೂಡಿ ಮಾತನಾಡುತ್ತಿದ್ದರೆಂದು ಕಾಣುತ್ತದೆ. ಕೆಲವು ಮಕ್ಕಳು ದೂರದಿಂದಲೇ ಒಬ್ಬರಿನ್ನೊಬ್ಬರ ಹೆಸರು ಕೂಗಿಕೊಂಡು, ಕೈ ಹಿಡಿದು, ಆಡಲಿಕ್ಕೆಂದು ಹೊರಟುಬಿಟ್ಟಿದ್ದರು. ಅಲ್ಲಿ ಸೇರಿದ್ದ ಮಕ್ಕಳಲ್ಲೊಂದು ವಿಶೇಷವಿತ್ತು. ಸಾಧಾರಣ ಮಕ್ಕಳ ಮುಖದಲ್ಲಿರುವ ಒತ್ತಡ ಈ ಮಕ್ಕಳಲ್ಲಿ ಕಾಣುತ್ತಿರಲಿಲ್ಲ. ಮಹಾನಗರಗಳ ಮಕ್ಕಳಲ್ಲಿ ಕಾಣುವ ದುಗುಡ, ಅವಸರ ಇವರಲ್ಲಿರಲಿಲ್ಲ. ಒಂದು ರೀತಿಯ ನಿರಾಳ ಭಾವ ಇತ್ತು. ಪಾಲಕರೂ ನೆಮ್ಮದಿಯಿಂದ ಮಕ್ಕಳನ್ನು ಜೊತೆಗೆ ಆಡಲು ಬಿಟ್ಟು ಏನೂ ಒತ್ತಡವಿಲ್ಲದೆ ಆರಾಮದಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತ ಕುಳಿತಿದ್ದರು. ಪತ್ನಿ, ಮಕ್ಕಳ ಜತೆ ಅಲ್ಲಿಗೆ ಹೋಗಿದ್ದ ನನಗೆ, ಬೆಂಗಳೂರಿನಲ್ಲಿ ಮನೆಯಲ್ಲಿಯೇ ಪಾಠ ಹೇಳುತ್ತಿರುವ ಪಾಲಕರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ಸಂಗತಿ ಆ ದಿನ ತಿಳಿಯಿತು. ಅವರೊಡನೆ ಮಾತನಾಡಿದ ಮೇಲೆ ನಾವೂ ನಮ್ಮ ಮಕ್ಕಳಿಗೆ ಹೋಮ್ ಸ್ಕೂಲಿಂಗ್ ಮಾಡಬಹುದು ಎಂಬ ಧೈರ್ಯ ಹುಟ್ಟಿತು.

    ‘ಶಾಲೆಗೆ ಮಕ್ಕಳನ್ನು ಏಕೆ ಕಳುಹಿಸುತ್ತಿದ್ದೀರಿ?’ ಎಂಬ ಪ್ರಶ್ನೆಗೆ ಗೆಳೆಯರಿಂದ, ಸಂಬಂಧಿಕರಿಂದ ನನಗೆ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ‘ಅರೆರೆ, ಶಾಲೆಗೆ ಕಳುಹಿಸದಿದ್ದರೆ ಆಗುತ್ತದೆಯೇ?’ ಎಂದೋ, ‘ಮಕ್ಕಳನ್ನು ಮನೆಯಲ್ಲಿ ಯಾರು ನೋಡಿಕೊಳ್ಳುತ್ತಾರೆ? ಅವರಿಗೆ ನಾವು ಪಾಠ ಹೇಳುವುದು ಸಾಧ್ಯವೇ?’ ಎಂದೋ ಮರುಪ್ರಶ್ನೆ ಹಾಕುತ್ತಿದ್ದರು. ಶಾಲೆಗೆ ಕಳುಹಿಸದಿದ್ದರೆ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ ಮಕ್ಕಳ ಭವಿಷ್ಯ ರೂಪಿಸಲೆಂದು ನಾವು ಅವರನ್ನು ಕಳುಹಿಸುತ್ತಿರುವ ಶಾಲೆಗಳು ಯಾವ ರೀತಿಯಲ್ಲಿವೆ? ಅಲ್ಲಿ ಕಲಿಕೆ ಹೇಗಿದೆ? ಅಂತಹ ಶಾಲೆಗಳು ಮಕ್ಕಳಲ್ಲಿ ಬೆಳೆಸುತ್ತಿರುವ ಸಂಸ್ಕೃತಿ ಯಾವುದು? ಶಾಲೆಗಳು ಕಮರ್ಷಿಯಲ್ ಆಗಿವೆಯೇ? ಎಂದು ಒಮ್ಮೆ ನಮಗೇ ಕೇಳಿಕೊಳ್ಳುವ ಅಗತ್ಯ ಇದೆ.

    ಮೊದಲು ಮಕ್ಕಳ ಪುಸ್ತಕಗಳು, ಯೂನಿಫಾಮ್ರ್ ಮುಂತಾದವುಗಳನ್ನು ಶಾಲೆಯ ಮೂಲಕವೇ ಕೊಳ್ಳಬೇಕು ಎಂದು ಹೇಳುವ ಪರಿಪಾಠ ಇತ್ತು. ಈಗ ಬಸ್ಸು, ಊಟ, ತಿಂಡಿ, ಕಂಪ್ಯೂಟರು, ಲೈಬ್ರರಿ – ಹೀಗೆ ಹತ್ತು ಹಲವು ಸವಲತ್ತುಗಳನ್ನು ಪಟ್ಟಿ ಮಾಡಿ ಅದಕ್ಕೆ ಶಾಲೆಯೇ ಹಣ ತೆಗೆದುಕೊಳ್ಳುವ ಪ್ರಮೇಯ ಬಂದದ್ದು ಹೇಗೆ? ಅದನ್ನು ಅವಲೋಕಿಸಿ ನೋಡುವ ಗೋಜಿಗೆ ನಾವು ಹೋಗುವುದಿಲ್ಲ. ಮಕ್ಕಳಿಗಲ್ಲವೇ, ಕೊಟ್ಟರಾಯಿತು ಎಂದು ದುಡ್ಡು ಕೊಟ್ಟು ಸುಮ್ಮನಾಗಿಬಿಡುತ್ತೇವೆ. ಪರಿಚಿತರೊಬ್ಬರ ಮಗಳು ಮನೆಗೆ ಬಂದ ಮೇಲೆ ಮನೆಯಲ್ಲಿ ಊಟ ತಿಂಡಿ ಮಾಡುತ್ತಿರಲಿಲ್ಲವಂತೆ. ಯಾಕೆ ಹೀಗೆ ಎಂದು ಕೇಳಲಾಗಿ ‘ಶಾಲೆಯಲ್ಲಿಯೇ ಅವರಿಗೆ ಊಟ ತಿಂಡಿ ಕೊಡಲಾಗುತ್ತದೆ. ಶಾಲೆಯಲ್ಲಿ ನ್ಯೂಟ್ರಿಶನ್ ತಜ್ಞರು ಇದ್ದಾರೆ. ಅದ್ಯಾಕೋ ಅಲ್ಲಿನ ಆಹಾರ ಅಭ್ಯಾಸವಾದ ಮೇಲೆ ಮನೆಯಲ್ಲಿ ತಿನ್ನುವುದು ಕಡಿಮೆ’ ಎಂದು ಖುಷಿಯಿಂದಲೇ ಅವರು ಹೇಳಿದ್ದರು! ಅಲ್ಲಿಗೆ ಮನೆಯಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದ ಆಹಾರ ಸಂಸ್ಕೃತಿಗೆ ತೆರೆ ಬಿದ್ದಂತೆ. ಮನೆಯಲ್ಲಿ ಅಡುಗೆ ಮಾಡಬೇಕಾದ ತಲೆನೋವು ಕೂಡ ತಪ್ಪಿತು ಎಂದು ಪಾಲಕರು ಅಂದುಕೊಂಡರೆ ನಮ್ಮ ಸಂಸ್ಕೃತಿಯ ಬಹುಮುಖ್ಯ ಭಾಗವೊಂದನ್ನು ಕಳೆದುಕೊಂಡಂತೆ.

    ಪ್ರತಿನಿತ್ಯ ಶಾಲೆಯವರು ಮಕ್ಕಳೊಂದಿಗೆ ಕಳುಹಿಸಿಕೊಡುವ ಪುಸ್ತಕದಲ್ಲಿ ತಾಕೀತು ಮಾಡಿರುವಂತೆ ಹೋಂ ವರ್ಕ್, ಪ್ರಾಜೆಕ್ಟ್ ವರ್ಕ್ ಮಾಡುವುದು ಪಾಲಕರದೇ ಕೆಲಸ. ದಿನವೂ ತಲೆಕೆಡಿಸಿಕೊಂಡು ಕುಳಿತುಕೊಳ್ಳುವ ಅಂತಹ ಗೆಳೆಯರನ್ನು ನೋಡುವಾಗಲೆಲ್ಲ ನಮಗೇಕೆ ಈ ಪಾಡು ಅನಿಸುತ್ತಿತ್ತು. ಒತ್ತಡದ ಬದುಕು ನಮಗೇ ಬೇಡವೆನಿಸುವ ಸಮಯದಲ್ಲಿ ಮಕ್ಕಳಿಗೂ ಸಮಯವಿಲ್ಲದೆ ಅವರು ಒತ್ತಡದಲ್ಲಿ ಜೀವನ ನಡೆಸುವಂತೆ ಆಗಬಾರದು ಎಂದು ಹಲವು ಬಾರಿ ನಾವು ಚರ್ಚೆ ಮಾಡಿದ್ದುಂಟು. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಹೂಂಕರಿಸುತ್ತಿರುವ ವಾಹನಗಳ ನಡುವೆ ಅವರು ಕಳೆಯುವ ಒಂದೆರಡು ತಾಸು ಚಿತ್ರ ಬಿಡಿಸುತ್ತಲೋ ಅಥವ ಪದ್ಯ ಹಾಡುತ್ತಲೋ ಕಳೆದರೆ ಬಾಲ್ಯ ನಿಜಕ್ಕೂ ಬೇರೆಯೇ ಆದೀತು. ಮಕ್ಕಳ ಬಾಲ್ಯ ಹೋಂ ವರ್ಕ, ಪ್ರಾಜೆಕ್ಟ್ ವರ್ಕ ಮುಂತಾದವುಗಳಲ್ಲಿ ಮುಳುಗಿ ರೇಸ್ ಹಾಕಿದಂತೆ ಉಳಿದ ಮಕ್ಕಳೊಂದಿಗೆ ಪೈಪೋಟಿ ನಡೆಸುವುದರಲ್ಲಿ ಕಳೆದುಹೋದರೆ ಸುತ್ತಮುತ್ತಲಿನ ಪರಿಸರ ಅವರಿಗೆ ರುಚಿಸದು. ಅವರ ಗಮನ ಸುತ್ತ ಮುತ್ತ ನಡೆಯುತ್ತಿರುವುದರ ಕಡೆ ಹೆಚ್ಚು ಹೊರಳದು. ನಮ್ಮ ಜಗತ್ತಿನಲ್ಲಿರುವ ಸೂಕ್ಷ್ಮಗಳನ್ನು ಅರಿವಿಗೆ ಹಾಕಿಕೊಳ್ಳದೆಯೇ ಬೆಳೆಯುವ ಮಕ್ಕಳಿಗೆ ಅವುಗಳನ್ನು ನಂತರ ಕಲಿಸುವ ಕೆಲಸ ಕಷ್ಟಕರವಾದದ್ದು.

    ಹೋಂ ಸ್ಕೂಲಿಂಗ್ ಎನ್ನುವುದು ಹೊಸತೇನಲ್ಲ. ಮುಂಚಿನ ಕಾಲದಲ್ಲಿ ಮನೆಯಲ್ಲೇ ಹೇಳಿಕೊಡುವ ಪರಿಪಾಠ ಇತ್ತು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಆದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ಆಗಿರುವ ಬದಲಾವಣೆಗಳ ನಡುವೆ ಹೋಂ ಸ್ಕೂಲಿಂಗ್ ಮಾಡಿದರೆ ಏನೇನು ತೊಂದರೆಗಳಾಗಬಹುದೋ ಎಂಬ ಆತಂಕ ನಮಗಿತ್ತು. ಹೋಂ ಸ್ಕೂಲಿಂಗ್ ಮಾಡುವವರು ನಾವಿರುವ ಊರಿನಲ್ಲೇ ಬಹಳಷ್ಟು ಜನ ಇದ್ದಾರೆಂದು ನಮಗೆ ಆಗ ತಿಳಿದಿರಲಿಲ್ಲ. ನಾವು ನಮಗೆ ಪರಿಚಿತರಿದ್ದ ಹಲವು ಶಿಕ್ಷಕರ ಬಳಿ ಈ ವಿಚಾರವನ್ನು ಪ್ರಸ್ತಾಪ ಮಾಡಲು ಪ್ರಾರಂಭಿಸಿದೆವು. ಹೀಗೆಯೇ ಒಂದು ಕಾರ್ಯಕ್ರಮದಲ್ಲಿ ವಿದ್ಯಾಭಾರತಿಯ ಜಿ ಆರ್ ಜಗದೀಶ ಅವರ ಪರಿಚಯ ನಮಗಾಯಿತು. ಅವರೊಂದಿಗೆ ಈ ವಿಷಯ ಪ್ರಸ್ತಾಪಿಸಿದಾಗ ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡಿಸಲು ಹೊರಟ ನಮಗೆ ಪೋ›ತ್ಸಾಹ ನೀಡಿದ್ದಲ್ಲದೆ ತಮ್ಮ ಪರಿಚಯದಲ್ಲಿ ಹೀಗೆಯೇ ಮಾಡುತ್ತಿದ್ದ ಹಲವರನ್ನು ನಮಗೆ ಪರಿಚಯ ಮಾಡಿಕೊಟ್ಟರು. ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡಿ ಈಗ ಕೆಲಸ ಮಾಡುತ್ತಿರುವ ಕೆಲವರ ಪರಿಚಯ ನಮಗಾಯಿತು. ಅದರಲ್ಲಿ ವೇದ ವಿಜ್ಞಾನವನ್ನು ಕಲಿಸುತ್ತಿದ್ದ ಸುಧಾಕರ ಶರ್ಮರ ಮಗಳು ಒಬ್ಬರು. ಅವರನ್ನೆಲ್ಲ ಮಾತನಾಡಿಸಿ, ಅವರು ನಡೆದು ಬಂದ ದಾರಿ ತಿಳಿದ ಮೇಲೆ ನಮಗೆ ಈ ದಿಕ್ಕಿನಲ್ಲಿ ನಡೆಯುವ ಕುರಿತು ಯಾವುದೇ ಆತಂಕ ಉಳಿಯಲಿಲ್ಲ.

    ಈಗ ಮನೆಯಲ್ಲಿ ಮಕ್ಕಳು ಕನ್ನಡದ ಹಾಡುಗಳನ್ನು ಹಾಡುತ್ತಾರೆ. ಚಿತ್ರಗಳನ್ನು ಬಿಡಿಸುತ್ತ ಕುಳಿತ್ತಿರುತ್ತಾರೆ. ಜಿಎಸ್​ಎಸ್, ಕುವೆಂಪು, ಎಚ್​ಎಸ್​ವಿ ಮುಂತಾದವರ ಪದ್ಯಗಳನ್ನು ಹೇಳುತ್ತಿರುತ್ತಾರೆ. ಸಂಜೆಯ ವೇಳೆ ಹೊರಗೆ ನಡೆದು ಹೋಗುವಾಗ ಸಿಗುವ ಬೀಜಗಳನ್ನೆಲ್ಲ ಆಯ್ದು ಮರುದಿನ ಅದರಲ್ಲಿ ಕ್ರಾಫ್ಟ್ ಮಾಡುತ್ತಾರೆ. ಇಬ್ಬರೂ ಹುಡುಗಿಯರು ಜೊತೆಗೆ ಆಡಿಕೊಂಡು ಹಾಡಿಕೊಂಡು ಇರುತ್ತಾರೆ. ಕಲಿಕೆ ಎಂಬುದು ಮೋಜಿನ ಚಟುವಟಿಕೆಯಾಗಿದೆ. ನಾವು ಕಲಿಸದೆಯೇ ಎ ಬಿ ಸಿ ಡಿ ಕಲಿತುಕೊಂಡಿದ್ದಾರೆ. ಸಂಖ್ಯೆಗಳನ್ನು ಆಟದಲ್ಲಿ ಬಳಸಿ ಪರಿಚಯ ಮಾಡಿಕೊಳ್ಳುತ್ತಿದ್ದಾರೆ. ಕೈದೋಟದಲ್ಲಿರುವ ಗಿಡಗಳನ್ನು ಚೆನ್ನಾಗಿ ಗುರುತಿಸಬಲ್ಲವರಾಗಿದ್ದಾರೆ. ಚಿಟ್ಟೆಗಳು, ಹಕ್ಕಿಗಳು, ಅಳಿಲುಗಳು ಇವರಿಗೆ ಆಪ್ತರು. ಕಂಬಳಿ ಹುಳ ನೋಡಿದರೆ ಹೆದರದೆ ಅದು ಮುಂದೊಂದು ದಿನ ಚಿಟ್ಟೆಯಾಗಿ ವಾಪಸ್ ಇಲ್ಲಿಗೇ ಬರುತ್ತದೆ ಅಪ್ಪಾ ಎಂದು ಹೇಳುತ್ತಾರೆ. ಯಾವ ಬೀಜ ಯಾವ ಗಿಡದ್ದು ಎನ್ನುವುದನ್ನು ಹೇಳಬಲ್ಲರು. ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುತ್ತ ಗೊತ್ತಿಲ್ಲದ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತ, ಉತ್ತರ ತಿಳಿಯಲು ನಮ್ಮನ್ನು ಕಾಡುತ್ತ ನಮಗೂ ಹೊಸ ವಿಷಯಗಳನ್ನು ಕಲಿಸುತ್ತಿದ್ದಾರೆ.

    ಜೀವನಕ್ಕೊಂದು ಅಡಿಪಾಯ
    ಮಕ್ಕಳಿಗೆ ಬಾಲ್ಯ ಅಮೂಲ್ಯವಾದ ಸಮಯ. ಅದನ್ನು ಅವರು ಹೇಗೆ ಕಳೆಯುತ್ತಾರೆ ಎಂಬುದರಿಂದಲೇ ಅವರ ಜೀವನ ರೂಪುಗೊಳ್ಳುತ್ತದೆ. ಮಕ್ಕಳು ತಮ್ಮ ಸುತ್ತಮುತ್ತ ಕಾಣುವ ವಿಷಯಗಳನ್ನು ಬಹುಬೇಗ ಕಲಿಯುತ್ತಾರೆ. ಹೀಗಾಗಿ ತಮ್ಮ ನೆಲೆಯಲ್ಲಿಯೇ ಸೃಜನಶೀಲತೆಗೆ ಒಡ್ಡಿದರೆ ಮಕ್ಕಳೂ ಸೃಜನಶೀಲರಾಗಿ ಬೆಳೆಯುತ್ತಾರೆ.

    ಹೆಚ್ಚಿನ ಧೈರ್ಯ ಇರಬೇಕು
    ಮನೆಯಲ್ಲಿಯೇ ಪಾಠ ಹೇಳುವ ನಿರ್ಧಾರ ಸುಲಭದ್ದಲ್ಲ. ಗಂಡ – ಹೆಂಡತಿ ಇಬ್ಬರಿಗೂ ಮನಸ್ಸಿದ್ದರೆ ಮಾತ್ರ ಇದು ಸಾಧ್ಯ. ಒಟ್ಟಿಗೆ ನಿರ್ಧಾರ ತೆಗೆದುಕೊಂಡರೂ ನಂತರ ವೃತ್ತಿಯ ಅವಶ್ಯಕತೆಗಳಿಂದಾಗಿ ಮನಸ್ತಾಪ ಮೂಡಬಹುದು. ಅವುಗಳನ್ನು ಪರಿಹರಿಸಿಕೊಳ್ಳುವ ದಾರಿ ಹುಡುಕಿಕೊಳ್ಳಬೇಕು. ಅವರವರ ವೃತ್ತಿಗೆ ತಕ್ಕಂತೆ ಮನೆಯಲ್ಲಿ ಯಾರು ಮಕ್ಕಳಿಗೆ ಹೆಚ್ಚು ಸಮಯ ಕೊಡಬಹುದು ಎಂಬುದನ್ನು ಪರಿಗಣಿಸಿ ಮುಂದಡಿ ಇಡುವುದು ಒಳ್ಳೆಯದು. ಮಗು ಒಂದೇ ಇದ್ದರೆ ಏಕಾಂತ ಕಾಡೀತು. ಎರಡು ಮಕ್ಕಳಾದರೂ ಇದ್ದರೆ ಏಕಾಂತ ಎನಿಸುವುದಿಲ್ಲ. ಜತೆಗೆ ಆಡಿಕೊಂಡಿರುತ್ತಾರೆ. ಆಗಾಗ ಅಜ್ಜ, ಅಜ್ಜಿ ಅಥವಾ ಸಂಬಂಧಿಕರ ಬಳಿ ಬಿಡುವ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರೂ ‘ನೀವು ಮಕ್ಕಳನ್ನು ಶಾಲೆಗೆ ಕಳಿಸಲ್ವೇ? ಹಾಗೆ ಮಾಡಿದರೆ ಮಕ್ಕಳಿಗೆ ತೊಂದರೆ ಆಗಲ್ವೇ?’ ಎಂದು ಕೇಳುವ ಪ್ರಶ್ನೆಗಳಿಗೆ ವಿಚಲಿತರಾಗದಂತಿರಬೇಕು.

    ನಾವೂ ಕಲಿಯುತ್ತೇವೆ
    ಮಕ್ಕಳಿಗೆ ಹೊಸತೆನಿಸುವುದು ನಮಗೆ ಹೊಸತಲ್ಲದಿದ್ದರೂ ಅದನ್ನು ಅವರಿಗೆ ಹೇಳಿಕೊಡುವುದು ಸುಲಭವಲ್ಲ. ಕೆಲವೊಮ್ಮೆ ಹೇಳಿಕೊಡಬೇಕಿರುವುದರ ಬಗ್ಗೆ ನಮಗೇ ಸಂಪೂರ್ಣ ಗೊತ್ತಿರುವುದಿಲ್ಲ. ಆಗ ನಾವೂ ಅದರ ಬಗ್ಗೆ ಓದಿಕೊಳ್ಳಬೇಕಾಗುತ್ತದೆ. ಹೀಗೆ ನಾವೂ ಮಕ್ಕಳ ಜತೆ ಕಲಿಯುತ್ತೇವೆ. ಮಕ್ಕಳು ನಮಗೆ ತಾಳ್ಮೆಯನ್ನೂ ಕಲಿಸುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸುವಾಗ ನಮ್ಮ ಮನಸ್ಸಿನಲ್ಲಿ ಆಯಾ ವಿಷಯಗಳ ಬಗ್ಗೆ ಇರುವ ಚಿತ್ರಣಗಳು ಸ್ಪಷ್ಟವಾಗುತ್ತವೆ. ಹಾರುತ್ತಿರುವ ಚಿಟ್ಟೆ, ಅರಳುತ್ತಿರುವ ಹೂವು, ಅವುಗಳ ಬಣ್ಣ, ಚಿತ್ರಣ – ನಮ್ಮ ಬಾಲ್ಯದಲ್ಲಿ ಯಾವುದರ ಬಗ್ಗೆ ಹೆಚ್ಚು ಗಮನ ಕೊಡಲು ಅವಕಾಶ ಸಿಕ್ಕಿರಲಿಲ್ಲವೋ, ಅವೆಲ್ಲಕ್ಕೂ ಮತ್ತೊಮ್ಮೆ ಸಮಯ ಕೊಡುವ ಅವಕಾಶ ನಮ್ಮದಾಗಿರುತ್ತದೆ. ಹೀಗಾಗಿ ನಮಗೆ ಇನ್ನೊಂದು ಬಾಲ್ಯವೇ ಸಿಕ್ಕಂತೆ!

    ಪರೀಕ್ಷೆ ಹೇಗೆ?
    ಪರೀಕ್ಷೆ, ಸರ್ಟಿಫಿಕೇಟ್ ಇವೆಲ್ಲ ಇರದೆ ಓದಿದ ಮಕ್ಕಳು ಮುಂದೆ ಉದ್ಯಮಗಳಲ್ಲಿ ನೌಕರಿ ಪಡೆಯುವುದು ಹೇಗೆ ಎಂಬ ದುಗುಡ ಇರುವವರಿಗೆ ಭಾರತ ಸರಕಾರದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಓಪನ್ ಸ್ಟಡೀಸ್ ಮತ್ತು ಕೇಂಬ್ರಿಡ್ಜ್ ಹೋಂ ಸ್ಕೂಲಿಂಗ್ ಪ್ರೋಗ್ರಾಂಗಳು ಲಭ್ಯ. ಇವು ನಡೆಸುವ ಪರೀಕ್ಷೆಗಳನ್ನು ಮಕ್ಕಳು ಬರೆದು ಉತ್ತೀರ್ಣರಾಗಿ ಸರ್ಟಿಫಿಕೇಟ್​ಪಡೆಯಬಹುದು. ಒಂದರಿಂದ ಹತ್ತನೆ ಕ್ಲಾಸಿನವರೆಗೂ ಪರೀಕ್ಷೆಗಳಿವೆ. ಉತ್ತೀರ್ಣರಾದವರಿಗೆ ಸರ್ಕಾರದ ಹುದ್ದೆಗಳಿಗೂ ಪ್ರವೇಶವಿದೆ. ಹೆಚ್ಚಿನ ಮಾಹಿತಿಗೆ https://www.nios.ac.in ನೋಡಿ.

    ಸಂಸ್ಕೃತಿ, ಸಂಪ್ರದಾಯಗಳ ಉಳಿವು
    ಸಾಮಾನ್ಯವಾಗಿ ಎಲ್ಲರೂ ಶಾಲೆಯ ಜನಪ್ರಿಯತೆ, ಸವಲತ್ತುಗಳನ್ನು ನೋಡಿ ತಮ್ಮ ಮಕ್ಕಳನ್ನು ಆ ಶಾಲೆಗೆ ಕಳಿಸಲು ನಿರ್ಧರಿಸಿರುತ್ತಾರೆ. ಸ್ವಲ್ಪ ಹೆಚ್ಚು ಖರ್ಚಾದರೂ ಅತ್ಯುತ್ತಮ ಎನಿಸಿಕೊಂಡ ಶಾಲೆಗೆ ಮಕ್ಕಳನ್ನು ಸೇರಿಸುವುದು ಸಹಜ. ಆದರೆ ಆ ಶಾಲೆಯಲ್ಲಿ ಯಾವ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸಲಾಗುತ್ತಿದೆ ಎಂಬ ವಿಚಾರವನ್ನು ಬಹಳಷ್ಟು ಜನ ಗಣನೆಗೇ ತೆಗೆದುಕೊಳ್ಳುವುದಿಲ್ಲ. ತಮ್ಮ ಸಂಸ್ಕೃತಿ ಉಳಿಯಲಿ ಎಂಬ ಆಸಕ್ತಿ ಬಹಳಷ್ಟು ಪಾಲಕರಿಗೆ ಇರುತ್ತದೆ. ಹೀಗಿದ್ದಾಗ ತಮಗೆ ಸರಿ ಹೊಂದುವ ಶಾಲೆಯಲ್ಲಿ ಸೀಟು ಸಿಗದಿದ್ದರೆ ನಿರಾಶರಾಗಬೇಕಿಲ್ಲ. ಹೋಂ ಸ್ಕೂಲಿಂಗ್ ಕೂಡ ಒಂದು ಆಯ್ಕೆಯಾಗಬಹುದು. ಮನೆಯಲ್ಲಿ ಪಾಠ ಹೇಳಿದಾಗ ರೂಪುಗೊಳ್ಳುವ ಸಂಸ್ಕೃತಿಯಲ್ಲಿ ನಮ್ಮ ಪರಂಪರಾಗತ ಸಂಪ್ರದಾಯಗಳೂ ಉಳಿಯುತ್ತವೆ.

    ಹೋಂ ಸ್ಕೂಲಿಂಗ್ ಹೊಸತಲ್ಲ
    ಬೆಂಗಳೂರಿನ ನೂರಾರು ಕುಟುಂಬಗಳಲ್ಲಿ ಪೋಷಕರಿಂದ ಹೋಂ ಸ್ಕೂಲಿಂಗ್ ನಡೆಯುತ್ತಿದೆ. ಹೊರವಲಯಗಳಲ್ಲಿ ಫಾಮರ್್​ಹೌಸ್ ಇತ್ಯಾದಿ ಮಾಡಿಕೊಂಡ ಪೋಷಕರಲ್ಲದೆ ನಗರದ ಒಳಗೆ ಸ್ವಂತ ಉದ್ಯೋಗ ಮಾಡಿಕೊಂಡಿರುವ ಹಲವರು ಮನೆಯಲ್ಲಿಯೇ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.

    ಟ್ರಾಫಿಕ್ ಮತ್ತಿತರ ಕಾರಣಗಳಿಂದಾಗಿ ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಂ) ಮಾಡುವ ಅವಕಾಶ ಇತ್ತೀಚೆಗೆ ಹೆಚ್ಚುತ್ತಿದೆ. ಹಾಗಾಗಿ ಮನೆಯಲ್ಲಿ ಮಕ್ಕಳಿಗೆ ತಾವೇ ಶಿಕ್ಷಣ ನೀಡುವ ಸುಶಿಕ್ಷಿತ ಪೋಷಕರ ಸಂಖ್ಯೆಯೂ ಹೆಚ್ಚುತ್ತಿದೆ. ಸ್ವಂತ ಉದ್ಯೋಗದಲ್ಲಿರುವ ಪೋಷಕರ ನಡುವೆಯಂತೂ ಹೋಂ ಸ್ಕೂಲಿಂಗ್ ಹೆಚ್ಚು ಜನಪ್ರಿಯವಾಗುತ್ತಿದೆ.
    ಬೆಂಗಳೂರು ಮಾತ್ರವಲ್ಲದೇ ಹುಬ್ಬಳ್ಳಿ, ಮಡಿಕೇರಿ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವಾರು ಊರುಗಳಲ್ಲಿ ಹೋಮ್ ಸ್ಕೂಲಿಂಗ್ ಟ್ರೆಂಡ್ ಶುರುವಾಗಿದೆ.

    ಮಕ್ಕಳು ಬೆರೆಯುವುದು ಹೇಗೆ?
    ಉಳಿದ ಮಕ್ಕಳೊಂದಿಗೆ ನಮ್ಮ ಮಕ್ಕಳು ಆಡಬೇಕಲ್ಲವೇ, ಬೆರೆಯಬೇಕಲ್ಲವೇ, ಹೋಂ ಸ್ಕೂಲಿಂಗ್​ನಿಂದ ಆ ಅವಕಾಶ ತಪ್ಪುವುದಿಲ್ಲವೇ ಎಂಬ ಆಲೋಚನೆ ಬರುವುದು ಸಹಜ. ಆದರೆ ಶಾಲೆಯಲ್ಲಿ ಹೆಚ್ಚು ಮಕ್ಕಳೊಂದಿಗೆ ನಮ್ಮ ಮಕ್ಕಳು ಬೆರೆಯುತ್ತಾರೆ ಎಂದೇನಿಲ್ಲ. ಒಂದಿಬ್ಬರು ಹತ್ತಿರದ ಗೆಳೆಯರ ಗುಂಪಿರುತ್ತದೆ. ಶಾಲೆಯಲ್ಲಿ ಹೆಚ್ಚಿನ ವೇಳೆ ಪಾಠದಲ್ಲಿ ಮುಳುಗಿರುವ ಮಕ್ಕಳು ಆಟ ಹಾಗೂ ವಿರಾಮದ ಸಮಯದಲ್ಲಿ ಮಾತ್ರ ಬೆರೆಯಲು ಸಾಧ್ಯ. ಮಹಾನಗರಗಳಲ್ಲಿ ಮಕ್ಕಳು ಬಸ್ಸಿನಲ್ಲಿಯೇ ಬೆರೆಯುವುದು ಹೆಚ್ಚು. ಅಲ್ಲಿಯೂ ಜತೆಗೆ ಕೂರುವ, ಒಂದೇ ಕಾಲೋನಿಗೆ ಹೋಗುವ ಹುಡುಗರು ಹೆಚ್ಚು ಬೆರೆಯುತ್ತಾರೆ. ಹೋಂ ಸ್ಕೂಲಿಂಗ್ ಮಾಡುವ ಪಾಲಕರ ಬಳಿ ಸಮಯದ ಅನುಕೂಲವಿರುವ ಕಾರಣ ಮಕ್ಕಳಿರುವ ಗೆಳೆಯರ ಮನೆಗೆ ಭೇಟಿ ಕೊಟ್ಟು ಅಲ್ಲಿಯ ಮಕ್ಕಳೊಂದಿಗೆ ಬೆರೆಯುವ ಅವಕಾಶ ಕಲ್ಪಿಸಬಹುದು. ಇತ್ತೀಚೆಗೆ ಬೆಂಗಳೂರಿನಂಥ ನಗರಗಳಲ್ಲಿ ಆಲ್ಟರ್ನೆಟಿವ್ ಸ್ಕೂಲ್​ಗಳು ಆರಂಭವಾಗಿರುವುದರಿಂದ ಮಕ್ಕಳನ್ನು ಮೂರ್ನಾಲ್ಕು ತಿಂಗಳು ಮಾತ್ರ ಇಂತಹ ಶಾಲೆಗಳಿಗೆ ಕಳುಹಿಸುವ ಆಯ್ಕೆಯೂ ಲಭ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts