VIDEO: ಕರ್ತವ್ಯದ ಸಮಯದಲ್ಲಿ ಹೊರಗಿದ್ದ ಸರ್ಕಾರಿ ನೌಕರರು: ಕಡತಗಳನ್ನು ಕಚ್ಚಿಕೊಂಡು ಹೋದ ಮೇಕೆ! ವಿಡಿಯೋ ವೈರಲ್‌

goat
Published on

ಕಾನ್ಪುರ: ಇಲ್ಲಿಯ ಚೌಬೆಪುರ್‌ ಬ್ಲಾಕ್‌ನ ಪಂಚಾಯತ್‌ ಕಾರ್ಯದರ್ಶಿಯ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಮೇಕೆಯೊಂದು ಅಲ್ಲಿರುವ ಫೈಲ್‌ ಒಂದನ್ನು ಕಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಅದೃಷ್ಟಕ್ಕೆ ಅದನ್ನು ಹೊರಗಡೆ ಇರುವ ಸಿಬ್ಬಂದಿ ನೋಡಿದ್ದು, ಮೇಕೆಯ ಹಿಂದೆ ಓಡಿದ್ದಾರೆ. ಕಡತ ಕೊಡು ಎಂದು ಮೇಕೆಗೆ ಕೂಗುತ್ತಾ ಹೇಳುತ್ತಲೇ ಅದರ ಹಿಂದೆ ಓಡೋಡಿ ಹೋಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಕೊನೆಗೂ ಮೇಕೆ ಅದನ್ನು ಹರಿದು ತಿನ್ನುವ ಮೊದಲೇ ಅದನ್ನು ಹಿಡಿದು ಕಡತ ವಾಪಸ್‌ ಪಡೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದು ಮಹತ್ವದ ಕಡತವಾಗಿತ್ತು. ಒಂದು ವೇಳೆ ಮೇಕೆಯೇನಾದರೂ ಅದನ್ನು ತಿಂದುಬಿಟ್ಟಿದ್ದರೆ ಭಾರಿ ಅನಾಹುತವಾಗುತ್ತಿತ್ತು ಎಂದಿದ್ದಾರೆ ಅಲ್ಲಿರುವ ಕೆಲ ಪ್ರತ್ಯಕ್ಷದರ್ಶಿಗಳು.

ಜಾಲತಾಣದಲ್ಲಿ ಈ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದು ಸರ್ಕಾರಿ ನೌಕರರ ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಅಷ್ಟೆಲ್ಲಾ ಕಡತಗಳು ಇರುವಾಗ ಎಲ್ಲರೂ ಒಟ್ಟಿಗೇ ಹೊರಗಡೆ ಹೋಗಿದ್ದು ಏಕೆ ಎಂದು ಅನೇಕ ಮಂದಿ ಟ್ವೀಟ್‌ ಮಾಡಿದ್ದಾರೆ. ಕರ್ತವ್ಯದ ಸಮಯದಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಈ ರೀತಿಯಾಗಿ ಹೊರಗಡೆ ಕುಳಿತಿರುವುದು ಸರ್ಕಾರಿ ನೌಕರರ ದಕ್ಷತೆಯನ್ನು ತೋರಿಸುತ್ತದೆ ಎಂದು ಇನ್ನು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ವೈರಲ್‌ ಆಗುತ್ತಿದ್ದಂತೆಯೇ, ಇದರಲ್ಲಿ ತಮ್ಮ ತಪ್ಪೇನೂ ಇಲ್ಲ ಎಂಬಂತೆ ಸ್ಪಷ್ಟನೆ ನೀಡಿರುವ ಚೌಬೆಪುರ್‌ ಬ್ಲಾಕ್‌ ಅಭಿವೃದ್ಧಿ ಅಧಿಕಾರಿ ಮನುಲಾಲ್‌ ಯಾದವ್‌, ಇದೇನೂ ಮಹತ್ವದ ಕಡತಗಳು ಆಗಿರಲಿಲ್ಲ. ಅಲ್ಲಿರುವ ತ್ಯಾಜ್ಯ ಪೇಪರ್‌ ಅನ್ನು ಮೇಕೆ ಕೊಂಡೊಯ್ದಿದೆ ಅಷ್ಟೇ ಎಂದು ಘಟನೆಯನ್ನು ತಣ್ಣಗೆ ಮಾಡಲು ನೋಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net