More

    ವಿಚ್ಛೇದನಕ್ಕೆ ಗಂಡ-ಹೆಂಡತಿ ಒಪ್ಪಿಗೆ ನೀಡಿದರೂ ಆರು ತಿಂಗಳು ಕಾಯಲೇಬೇಕಾ? ಕಾನೂನು ಹೇಳೋದೇನು?

    ವಿಚ್ಛೇದನಕ್ಕೆ ಗಂಡ-ಹೆಂಡತಿ ಒಪ್ಪಿಗೆ ನೀಡಿದರೂ ಆರು ತಿಂಗಳು ಕಾಯಲೇಬೇಕಾ? ಕಾನೂನು ಹೇಳೋದೇನು?ಪ್ರಶ್ನೆ: ನಮಗೆ ಮದುವೆಯಾಗಿ ಹತ್ತು ವರ್ಷಗಳಾಗಿವೆ. ನಾವು ಹಿಂದೂ ಜನಾಂಗದವರು. ಇಬ್ಬರಿಗೂ ಈ ಮದುವೆಯಿಂದ ಸಾಕು ಸಾಕಾಗಿದೆ. ಒಬ್ಬರ ಮೇಲೆ ಒಬ್ಬರಿಗೆ ಅಸಹ್ಯ ಹುಟ್ಟಿದೆ. ನಾವಿಬ್ಬರೂ ವಿದ್ಯಾವಂತರು ಮತ್ತು ಒಳ್ಳೆಯ ಕೆಲಸದಲ್ಲೂ ಇದ್ದೇವೆ. ಈಗ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಬೇಕೆಂದು ನಿರ್ಧಾರ ಮಾಡಿಕೊಂಡಿದ್ದೇವೆ. ನಾವು ವಿಚ್ಛೇದನದ ಆದೇಶ ಪಡೆಯಲು ಆರುತಿಂಗಳು ಕಾಯಲೇ ಬೇಕೆ? ಬೇರೆ ದಾರಿಯೇ ಇಲ್ಲವೇ?

    ಉತ್ತರ: ಹಿಂದೂ ವಿವಾಹ ಕಾಯ್ದೆಯ ಕಲಂ13(ಬಿ)ರ ಅಡಿಯಲ್ಲಿ ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಹಾಗೆ ಸಲ್ಲಿಸಿದಾಗ ನೀವು ಅರ್ಜಿ ಸಲ್ಲಿಸಿದ ದಿನಾಂಕದಿಂದ ಆರು ತಿಂಗಳ ನಂತರ ಹದಿನೆಂಟು ತಿಂಗಳ ಒಳಗೆ ವಿಚ್ಛೇದನದ ಆದೇಶವನ್ನು ನ್ಯಾಯಾಲಯ ಕೊಡುತ್ತದೆ.

    ಪ್ರಕರಣ ದಾಖಲಿಸಿದ ಆರು ತಿಂಗಳ ಒಳಗೆ ವಿಚ್ಛೇದನ ಕೊಡುವ ಅವಕಾಶ ಸಾಮಾನ್ಯವಾಗಿ ಇರುವುದಿಲ್ಲ. ಈ ಆರು ತಿಂಗಳನ್ನು ಕೂಲಿಂಗ್ ಪೀರಿಯಡ್ ಅಥವಾ ವೇಟಿಂಗ್ ಪೀರಿಯಡ್ ಎಂದು ಕರೆಯಲಾಗುತ್ತದೆ. ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದ್ದಾಗಲೂ ಈ ಆರು ತಿಂಗಳ ಕಾಯುವಿಕೆಯ ಸಮಯದಲ್ಲಿ ದಂಪತಿ ಮನಸ್ಸನ್ನು ಪರಿವರ್ತಿಸಿಕೊಂಡು ಮತ್ತೆ ದಂಪತಿಗಳಾಗಿಯೇ ಮುಂದುವರೆಯಲು ಸಾಧ್ಯವಾಗಬಹುದು, ಪ್ರಕರಣವನ್ನು ಹಿಂದೆ ಪಡೆಯ ಬಹುದು ಎನ್ನುವ ಉದ್ದೇಶದಿಂದ ಈ ಆರು ತಿಂಗಳ ಕಾಯುವಿಕೆಯ ಸಮಯವನ್ನು ಕಾನೂನಿನಲ್ಲಿ ನಮೂದಿಸಲಾಗಿದೆ.

    ಆದರೂ ನಮ್ಮ ಸುಪ್ರೀಂಕೋರ್ಟ್​ ಅಮರ್ ದೀಪ್ ಸಿಂಗ್ ವಿರುದ್ಧ ಹರ್ವೀನ್ ಕೌರ್ ಪ್ರಕರಣದಲ್ಲಿ( ಸಿವಿಲ್ ಅಪೀಲು ಸಂಖ್ಯೆ 11158 /2017) ಈ ಕೆಳಗಿನ ಸಂದರ್ಭಗಳಲ್ಲಿ ಆರು ತಿಂಗಳ ಕಾಯುವಿಕೆಯ ಸಮಯವನ್ನು ಮನ್ನಾ ಮಾಡಬಹುದೆಂದು ತಿಳಿಸಿದೆ.

    (1) ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮುಂಚೆಯೇ ಕಲಂ 13(ಬಿ)(2) ರಲ್ಲಿ ತಿಳಿಸಿರುವ ಆರು ತಿಂಗಳ ಸಮಯ ಮತ್ತು 13(ಬಿ) (1)ಎಲ್ಲಿ ತಿಳಿಸಿರುವ ಒಂದು ವರ್ಷದ ಸಮಯ ಆಗಿಹೋಗಿರಬೇಕು. ಅಂದರೆ ಪ್ರಕರಣ ದಾಖಲಿಸುವುದಕ್ಕಿಂತ ಒಂದೂವರೆ ವರ್ಷಕ್ಕೂ ಮೇಲಾಗಿ ದಂಪತಿಯಲ್ಲಿ ವೈವಾಹಿಕ ಸಂಬಂಧ ಇಲ್ಲದೇ ಅವರಿಬ್ಬರೂ ಒಬ್ಬರಿಂದ ಒಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿರಬೇಕು.

    (2) ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ ಮತ್ತು , ಸಿವಿಲ್ ಪ್ರೋಸಿಜರ್ ಕೋಡ್ ನ ಕಲಂ 89ರ ಕೆಳಗೆ ಸೂಚಿಸಿರುವಂತೆ ಮಧ್ಯಸ್ಥಿಕೆ/ಸಂಧಾನ ಇವುಗಳ ಪ್ರಯತ್ನದ ನಂತರವೂ ದಂಪತಿಗಳಲ್ಲಿರುವ ಭಿನ್ನಾಭಿಪ್ರಾಯವನ್ನು ದೂರ ಮಾಡಲು ವಿಫಲವಾಗಿರ ಬೇಕು.

    (3) ದಂಪತಿ ನಡುವೆ ಆಲಿಮೊನಿ/ಶಾಶ್ವತ ಜೀವನಾಂಶ ಮತ್ತು ಮಕ್ಕಳ ಕಸ್ಟಡಿಯ ವಿಷಯದಲ್ಲಿ ಭಿನ್ನಾಭಿಪ್ರಾಯ ತೀರ್ಮಾನವಾಗಿರಬೇಕು.

    (4) ಆರು ತಿಂಗಳ ಕಾಯುವಿಕೆಯ ಸಮಯದಿಂದ ದಂಪತಿ ತಮ್ಮ ಜೀವನವನ್ನು ಪುನರ್ ರೂಪಿಸಿಕೊಳ್ಳಲು ತೊಡಕುಗಳು ಹೆಚ್ಚಾಗುತ್ತದೆ ಎನ್ನುವ ಅಂಶವಿರಬೇಕು.

    ಈ ಹಿನ್ನೆಲೆಯಲ್ಲಿ ನೋಡಿದಾಗ ನೀವು ಬೇಕಿದ್ದರೆ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಪ್ರಕರಣ ದಾಖಲಿಸಿ ಅದರ ಜೊತೆಗೆ ಆರು ತಿಂಗಳ ಕಾಯುವಿಕೆಯ ಸಮಯವನ್ನು ಮನ್ನಾ ಮಾಡಲು ಅರ್ಜಿ ಸಲ್ಲಿಸಬಹುದು. ನಿಮ್ಮ ಪ್ರಮಾಣ ಪತ್ರದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯ ಸೂಚಿಸಿರುವ ಎಲ್ಲ ಅಂಶಗಳೂ ಇದ್ದರೆ , ಕೌಟುಂಬಿಕ ನ್ಯಾಯಾಲಯ ಆರು ತಿಂಗಳ ಕಾಯುವಿಕೆಯ ಸಮಯವನ್ನು ಮನ್ನಾ ಮಾಡಬಹುದು. ಏನೇ ಆಗಲಿ ಸಾಮಾನ್ಯವಾಗಿ ಕೌಟುಂಬಿಕ ನ್ಯಾಯಾಲಯ ಒಮ್ಮೆ ನಿಮ್ಮ ಪ್ರಕರಣವನ್ನು ಮಧ್ಯಸ್ಥಿಕೆ ಅಥವಾ ಸಂಧಾನಕ್ಕೆ ನ್ಯಾಯಾಲಯದ ಮೂಲಕವೂ ಕಳಿಸಿಕೊಡುತ್ತದೆ. ಅದರ ನಂತರವೂ ದಂಪತಿ ನಿಲವು ಬದಲಾಗದಿದ್ದರೆ ವಿಚ್ಛೇದನದ ಆದೇಶವನ್ನು ಮಾಡುತ್ತದೆ.

    ನಾವೆಲ್ಲಾ ಸುರಕ್ಷಿತವಾಗಿದ್ದೇವೆ- ಸಿಎಂ ಜತೆ ಮಾತುಕತೆ ನಡೆಸಿದ ಯೂಕ್ರೇನ್​ನಲ್ಲಿರುವ ಕನ್ನಡಿಗರು

    ಕೇಂದ್ರಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯುತ್ತಿಲ್ಲ ಎನ್ನುತ್ತಲೇ ಪರಿಹಾರಿ ನಿಧಿಗೆ ಧನ ಸಹಾಯ ಮಾಡಿದ ಅಪ್ಪ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts