More

    ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!

    | ಸುರೇಶ್ ಮರಕಾಲ ಸಾಯ್ಬರಕಟ್ಟೆ

    ನಿನ್ನೆ ಪ್ರಪಂಚದಲ್ಲೇ ಅತ್ಯಂತ ಉದ್ದನೆಯ ಏಡಿಯಾದ ಜಪಾನಿನ ಜೇಡಏಡಿಯನ್ನು ತಿಳಿದುಕೊಂಡೆವು. ಎರಡಾಳು ಉದ್ದದ ಈ ಜೇಡಏಡಿಗಳು ತಮ್ಮ ಉದ್ದನೆಯ ಲಂಬೂ ಕಾಲುಗಳ ಮೂಲಕ ಪ್ರಸಿದ್ಧವಾಗಿರುವುವು! ಇಂದಿನ ಹಣತೆಯಲ್ಲಿ ಮತ್ತೊಂದು ಏಡಿಯಿದೆ. ಇದು ಜೇಡಏಡಿಯಂತೆ ಉದ್ದನೆಯ ಕಾಲುಗಳನ್ನು ಹೊಂದಿಲ್ಲ. ಆದರೆ ಇದರ ಗಾತ್ರ ಎಷ್ಟಿದೆಯೆಂದರೆ, ಸದಾ ತೆಂಗಿನ ಮರದಲ್ಲೇ ಇರುವ ಈ ಏಡಿ ಅಪ್ಪಿತಪ್ಪಿ ಏನಾದರೂ ಮರದಿಂದ ನಮ್ಮ ಕಾಲಮೇಲೆ ಬಿದ್ದರೆ ಅದರ ಭಾರಕ್ಕೆ ಕಾಲ್ಬೆರಳುಗಳೇ ಮುರಿದು ಹೋದಾವು!! ಇನ್ನು ತಲೆಯ ಮೇಲೇನಾದರೂ ಬಿದ್ದರೆ, ಸೀದಾ ಹೊಗೆಯೇ!! ತೆಂಗಿನಕಾಯಿ ತಲೆಯ ಮೇಲೆ ಬಿದ್ದು ಬದುಕುವುದುಂಟೇ?! ತೆಂಗಿನಕಾಯಿಯಷ್ಟೇ ದೊಡ್ಡದಾದ ಈ ಏಡಿಗಳು ತಲೆಯ ಮೇಲೆ ಬಿದ್ದರೂ, ನಮ್ಮ ಕಥೆ ಅಷ್ಟೇ!! ಆದರೆ ಚಿಂತಿಸಬೇಕಾಗಿಲ್ಲ!, ಏಕೆಂದರೆ ತೆಂಗಿನ ಮರವೇರಿದ್ದಾಗ ಅವುಗಳ ಅತ್ಯಂತ ಶಕ್ತಿಯುತವಾದ ದಪ್ಪನೆಯ ಕೊಂಬುಕಾಲುಗಳ ಹಿಡಿತ ಎಷ್ಟು ಗಟ್ಟಿಯಾಗಿರುತ್ತದೆಂದರೆ, ಸ್ವತಃ ತೆಂಗಿನ ಮರವೇ ಬಿದ್ದರೂ, ಈ ಏಡಿಗಳು ಕೆಳ ಬೀಳಲಾರವು!!

    ತನ್ನ ಪ್ರಧಾನ ಆಹಾರವಾಗಿ ತೆಂಗಿನಕಾಯಿಯನ್ನು ಬಳಸುವುದರಿಂದ ಮತ್ತು ಸಿಪ್ಪೆ ಸುಲಿಯದ ತೆಂಗಿನಕಾಯಿಗಿAತ ದೊಡ್ಡದಿರುವುದರಿಂದ ಅವುಗಳನ್ನು ‘ತೆಂಗಿನಕಾಯಿ ಏಡಿ’ ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ಭೂಮಿ ಮೇಲೆ ವಾಸಿಸುವ ಸಂಧಿಪದಿಗಳಲ್ಲೇ ಅತೀ ದೊಡ್ಡದು! ಹಿಂದೂ ಮಹಾಸಾಗರ ಹಾಗೂ ಶಾಂತಸಾಗರದ ತೀರಗಳಲ್ಲಿ ವಾಸಿಸುವ ಇವುಗಳು, ಮನುಷ್ಯ ವಾಸವಿರುವ ಆಸ್ಟ್ರೇಲಿಯಾ ಮತ್ತು ಮಡಗಾಸ್ಕರ್ ದ್ವೀಪಗಳಲ್ಲೂ ಕಾಣಸಿಗುತ್ತವೆ. ಚಿಕ್ಕ ಮರಿ ಏಡಿಗಳ ದೇಹ ಅತ್ಯಂತ ಮೃದುವಾಗಿರುತ್ತದೆ. ಹೀಗಾಗಿ ಮರಿಗಳು ಯಾವಾಗಲೂ ಖಾಲಿಯಾದ ಶಂಕು ಚಿಪ್ಪುವಿನೊಳಗೆ ಆಶ್ರಯ ಪಡೆದಿರುತ್ತವೆ! ವಯಸ್ಸಾಗುತ್ತಾ ಹೋದಂತೆ ಏಡಿಗಳು ಗಡುಸಾದ ಹೊರ ಚಿಪ್ಪನ್ನು ಪಡೆಯುವುದರಿಂದ, ಏಡಿ ಬೆಳೆಯುತ್ತಾ ಹೋದಂತೆ ಶಂಕುಚಿಪ್ಪುಗಳ ಆಶ್ರಯವನ್ನು ಬಿಟ್ಟುಬಿಡುತ್ತವೆ. ಆದರೆ ಒಮ್ಮೆ ಬೆಳೆದವೋ, ಈ ವಯಸ್ಕ ಏಡಿಗಳ ಹೊರಚಿಪ್ಪು ಸಾಧಾರಣ ಹೊಡೆತಕ್ಕೂ ಒಡೆಯದಷ್ಟು ಗಟ್ಟಿಯಾಗುತ್ತವೆ! ತೆಂಗಿನಕಾಯಿ ಏಡಿಗಳು ಹಣ್ಣುಗಳನ್ನು, ಬೀಜಗಳನ್ನು, ಕಾಯಿಗಳನ್ನು ತಿನ್ನುತ್ತವಾದರೂ, ಪ್ರಧಾನವಾಗಿ ತೆಂಗಿನ ಮರ ಏರಿ ತೆಂಗಿನ ಕಾಯಿ ಕೊಯ್ದು ಅದರ ತಿರುಳನ್ನು ‘ಕದ್ದು’ ತಿನ್ನುವುದರಿಂದ, ಇವುಗಳಿಗೆ “ಕಾಯಿಕಳ್ಳ ಏಡಿ” ಎಂಬ ಅಡ್ಡ ಹೆಸರೂ ಇದೆ!!

    ಇದನ್ನೂ ಓದಿ: ಶಾಂತಸಾಗರದ ತಳದ ಕೊಳಕು ಸ್ವಚ್ಛ ಮಾಡುವ ಮಹಾನ್ ಏಡಿ!

    ಜೇಡ ಏಡಿಯಾದರೋ ಆಳ ಸಮುದ್ರದಲ್ಲಿ ಬದುಕುತ್ತದೆ. ಆದರೆ ತೆಂಗಿನಕಾಯಿ ಏಡಿಗಳು ಹಾಗಲ್ಲವೇ ಅಲ್ಲ! ಈ ಏಡಿಗಳು ಪ್ರಧಾನವಾಗಿ ಮರಗಳ ಮೇಲೆ ಹಾಗೂ ನೆಲದ ಮೇಲೆ ವಾಸಮಾಡುವವು. ಮೊಟ್ಟೆಯೊಡೆದು ಬರುವ ಲಾರ್ವಾಗಳೇನೋ ನೀರಿನಲ್ಲಿದ್ದುಕೊಂಡು ಚೆನ್ನಾಗಿ ಈಜಬಲ್ಲವು. ಆದರೆ ವಯಸ್ಕ ಏಡಿಗಳು ನೀರಿನಲ್ಲಿ ಈಜಲಾರವು! ಹೆಚ್ಚೇಕೆ?!, ಒಂದು ಗಂಟೆಗಿAತ ಹೆಚ್ಚು ಕಾಲ ಇವುಗಳನ್ನು ನೀರಿನಲ್ಲೆ ಬಿಟ್ಟರೆ ಈಜಲಾರದೆ ಉಸಿರುಗಟ್ಟಿ ಸತ್ತೇ ಹೋಗುತ್ತವೆ!! ತೆಂಗಿನಕಾಯಿ ಏಡಿಗಳು- ಜೇಡ ಏಡಿಗಳಿಗೆ ಹೋಲಿಸಿದರೆ ತುಂಬಾ ಬುದ್ಧಿವಂತ ಏಡಿ!. ಈ ಏಡಿಗಳು ನೆಲದಲ್ಲಿ ಗುಂಡಿ ತೋಡಿ ವಾಸಿಸುತ್ತವೆ. ಸದಾ ತೆಂಗಿನ ಕಾಯಿಯ ರುಚಿಯನ್ನು ಅನುಭವಿಸಿದ ಮೇಲೆ ಕೇಳಬೇಕೇ?! ಮನುಷ್ಯರ ಹಾಗೆ ಇವುಗಳೂ ತೆಂಗಿನ ಮರಗಳು ‘ಕಲ್ಪವೃಕ್ಷ’ ಎಂಬುದನ್ನು ಅರಿತಿರಬೇಕು..!! ಹೀಗಾಗಿ ತಾವು ವಾಸಿಸುವ ಗುಂಡಿಗಳಲ್ಲಿ ತೆಂಗಿನಕಾಯಿ ಸಿಪ್ಪೆಯ ನಾರುಗಳನ್ನು ಬಳಸಿ ತಮಗಾಗಿ ಮೆತ್ತನೆಯ ಹಾಸಿಗೆಯನ್ನೂ ನಿರ್ಮಿಸಿಕೊಳ್ಳುತ್ತವೆ! ಒಂದು ರೀತಿಯಲ್ಲಿ ಏಡಿಗಳ ‘ಕರ್ಲಾನ್ ಬೆಡ್’ ಎನ್ನಿ!! ಮರಳಿನ ತೀರದಲ್ಲಿ ಮಣ್ಣಿನೊಳಗೆ ಮಾಡಿದ ಗುಂಡಿ ಎಂದ ಮೇಲೆ ಭೂಮಿಯ ಶಾಖವಂತೂ ಇದ್ದೇ ಇರುತ್ತದೆ. ಇದರಿಂದ ಗುಂಡಿಯ ಒಳಗೆ ವಿಪರೀತ ಉಷ್ಣತೆ ಹೆಚ್ಚಾಗುವ ಕಾರಣದಿಂದ, ಒಳಗಿನ ವಾತಾವರಣವನ್ನು ತಂಪಾಗಿಸುವುದಕ್ಕಾಗಿ- ಹೊರಗಿನ ಬಿಸಿಲು ಒಳಬಾರದಂತೆ- ಗುಂಡಿಯೊಳಗೆ ತನ್ನ ಕೊಂಬನ್ನು ಗುಂಡಿಯ ಬಾಯಿಗೆ ಮುಚ್ಚಿ, ಉಸಿರಾಡಲು ಬೇಕಾದಷ್ಟು ಗಾಳಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತವೆ!! ನ್ಯಾಚುರಲ್ ಎ.ಸಿ!!

    ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!

    ತೆಂಗಿನಕಾಯಿ ಏಡಿಗಳು -ಹೆಸರೇ ಸೂಚಿಸುವಂತೆ- ಸಿಪ್ಪೆ ಸುಲಿಯದ ತೆಂಗಿನ ಕಾಯಿಗಿಂತ ದೊಡ್ಡದಾಗಿ ಬೆಳೆಯುತ್ತದೆ. ಹೀಗಾಗಿ ಅವುಗಳ ಕೊಂಬು ಎಷ್ಟು ದೊಡ್ಡದಿರಬಹುದು ಕಲ್ಪಿಸಿ! ನಿನ್ನೆಯ ಲೇಖನದಲ್ಲಿ ಮಳೆಗಾಲದ ಆರಂಭದ ಒಗೆಮೀನು ಅಥವಾ ಹತ್ತು ಮೀನು ಹಿಡಿಯುವುದರ ಬಗ್ಗೆ ಹೇಳಿದ್ದೆ. ಬೇಸಿಗೆಯ ನಾಲ್ಕೆöÊದು ತಿಂಗಳುಗಳ ಸೆಖೆಗೆ ಹೈರಾಣಾಗಿ, ಯಾವಾಗ ಮಳೆ ಬರುತ್ತದಪ್ಪಾ ಎಂದು ಕಾದು ಕುಳಿರುತ್ತವೋ ಎಂಬಂತೆ, ಮೊದಲ ಮಳೆ ಗದ್ದೆ ತೋಡುಗಳಲ್ಲಿ ನೀರು ಹರಿಯಲು ಶುರುವಾಯ್ತೆನ್ನುವಷ್ಟರಲ್ಲೇ, ನಾವು ಸೆಖೆಗೆ ಶಾಪ ಹಾಕಿ ಮಳೆ ನೀರಿಗಿಳಿಯುವಂತೆ, ಈ ಏಡಿಗಳೂ ತಮ್ಮ ‘ಜೈತ್ರಯಾತ್ರೆ’ ಶೂರುಮಾಡಿಕೊಳ್ಳುತ್ತವೆ..!! ಹತ್ತುಮೀನಿನ ಬೇಟೆಗೆ ಹೋಗುವವರಿಗೆ ಸಣ್ಣಗೆ ನೀರು ಹರಿಯುವಲ್ಲಿ, ಸೂಡಿ ಬೆಳಕಿಗೋ, ಟಾರ್ಚ್ನ ಬೆಳಕಿಗೋ ಗದ್ದೆ ಏಡಿಗಳು ಎರಡೂ ಕೊಂಬು ಕಾಲುಗಳನ್ನು ಎತ್ತಿಕೊಂಡು ಕತ್ತಿಮಸೆಯುತ್ತಾ “ನನ್ನ ಹತ್ತಿರ ಬಂದಿರೋ ಜೋಕೆ!” ಎಂಬಂತೆ ತಮ್ಮ ಹತ್ತು ಕಾಲುಗಳನ್ನು ತುಪುತುಪುನೆ ಹಾಕುತ್ತಾ ಓಡುವುದೂ, “ಬಿಟ್ಟರೆ ಕೆಟ್ಟೇವು” ಎಂದು ಆತುರಾತುರದಲ್ಲಿ ಸಾಲಾಗಿ ಓಡಾಡುವ ಅವುಗಳನ್ನು ಹಿಡಿದು ಚೀಲಕ್ಕೆ ತುಂಬಿಸಿಕೊಳ್ಳುವುದೂ, ಹಿಡಿವ ಗಡಿಬಿಡಿಯಲ್ಲಿ ಕೈ ಕಚ್ಚಿಸಿಕೊಂಡು ರಕ್ತ ಒಸರುವ ಬೆರಳನ್ನು “ಆಯ್” ಎನ್ನುತ್ತಾ, ಸಿಟ್ಟಿನಲ್ಲಿ ಬೆರಳನ್ನು ಬಾಯಿಗೆ ಇಟ್ಟುಕೊಳ್ಳುವುದು ತೀರಾ ಎಂದರೆ ತೀರಾ ಸಾಮಾನ್ಯ! ನೂರು-ನೂರೈವತ್ತು ಗ್ರಾಂ ತೂಗುವ ಗದ್ದೆ ಏಡಿಯ ಕೊಂಬಿಗೇ ಅಷ್ಟೊಂದು ಶಕ್ತಿ ಇರುವುದಾದರೆ, ನಾಲ್ಕು ಕೆ.ಜಿ. ತೂಗುವ ಈ ದೈತ್ಯನ ಕೊಂಬಿನೊಳಕ್ಕೆ ಕೈ ಸಿಕ್ಕಿಬಿದ್ದರೆ ಕತೆ ಏನಾಗಬಹುದು?! ನಿನ್ನೆ ನೋಡಿದ ಜೇಡಏಡಿಗಳು ನೋಡಲು ದೈತ್ಯನಾದರೂ, ಬಹಳ ಸೌಮ್ಯ ಸ್ವಭಾವದವು. ಆದರೆ ತೆಂಗಿನಕಾಯಿ ಏಡಿಗಳು ಹಾಗಲ್ಲವೇ ಅಲ್ಲ!! ಇವುಗಳ ಇಕ್ಕಳದ ಕೊಂಬಿನೊಳಗೆ ಕೈ ಸಿಕ್ಕಿಬಿದ್ದರೆ, ಜಪ್ಪಯ್ಯ ಎಂದರೂ ಅದು ಬಿಡುವುದಿಲ್ಲ! ಕೊನೆಗೆ ಬಲ ಹಾಕಿ, ಅದರ ಕೊಂಬನ್ನು ತುಂಡು ಮಾಡಿದರೂ, ಕಚ್ಚಿಕೊಂಡ ಹಿಡಿತ ಬಿಡಿಸಲಾರದಂತೆ ಹಾಗೇ ಇರುತ್ತದೆ! ಹೆಚ್ಚೆಂದರೆ, ನಾವು ಸುಮ್ಮನೆ ಬಾಯಿಬಾಯಿ ಬಡಿದುಕೊಂಡು ಬೊಬ್ಬೆ ಹಾಕಿ ಉರುಳು ಸೇವೆ ಮಾಡಬಹದು ಅಷ್ಟೆ! ಅದಕ್ಕಾಗಿ ತೆಂಗಿನಕಾಯಿ ಏಡಿಗಳನ್ನು ಹಿಡಿಯುವವರು ಒಂದು ಉಪಾಯ ಮಾಡುತ್ತಾರೆ. ಅಪ್ಪಿತಪ್ಪಿ ತೆಂಗಿನಕಾಯಿ ಏಡಿಯ ಬಲವಾದ ಕೊಂಬಿನಲ್ಲಿ ಕೈ-ಕಾಲು ಸಿಕ್ಕಿಕೊಂಡಿತೆಂದರೆ, ತಕ್ಷಣ ಏಡಿಯ ಹೊಟ್ಟೆಯ ಅಡಿ ಭಾಗಕ್ಕೆ ಸುಮ್ಮನೆ ಕಚಕುಳಿ ಮಾಡುತ್ತಾರೆ! ತಗೊಳ್ಳಿ!! “ನನ್ನನ್ನು ಕೊಂದರೂ ನನ್ನ ಪಟ್ಟು ಹಾಗೂ ನಿನ್ನ ಕೈ – ಎರಡನ್ನೂ- ಬಿಡಲಾರೆ” ಎಂದು ಪಟ್ಟು ಹಿಡಿದುಕೊಂಡಿದ್ದ ಏಡಿ, ಕಚಕುಳಿ ಮಾಡಿದ ತಕ್ಷಣ- ಕಾದುಕುಳಿತ ನಲ್ಲೆಗೆ ನಲ್ಲ ಸಿಕ್ಕಿದ ಹಾಗೆ- ಬೆಣ್ಣೆಯಂತೆ ಕರಗಿ ತನ್ನ ಹಿಡಿತ ಬಿಡುತ್ತದೆ! ಆದರೆ ಮುಂದಿನ ಕ್ಷಣದಲ್ಲಿ- ತಾನು ಮಾಡಿದ ತಪ್ಪಿನ ಅರಿವಾಗುವುದರೊಳಗೆ- ತನ್ನೆರಡೂ ಕೊಂಬುಗಳನ್ನು ಮುರಿಸಿಕೊಂಡು, ಏಡಿ ಹಿಡಿಯುವವರ ಚೀಲ ಸೇರಿಬಿಡುತ್ತದೆ!!

    ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!

    ತೆಂಗಿನಕಾಯಿ ಏಡಿಗಳ ವಿಶೇಷತೆ ಇರುವುದು ಅವುಗಳ ಆಕಾರದಲ್ಲಿ. ಜೇಡಏಡಿಗಳು ಬಹಳ ಚೆಂದದ ಕಿತ್ತಳೆ ಬಣ್ಣದಿಂದ ಆಕರ್ಷಕವಾಗಿರುತ್ತವೆ. ಆದರೆ ತೆಂಗಿನಕಾಯಿ ಏಡಿಗಳು ಇನ್ನೂ ಆಕರ್ಷಕವಾಗಿ ನಯನ ಮನೋಹರವಾಗಿರುತ್ತವೆ! ಕಣ್ಣಿಗೆ ಹೊಳೆಯುವ ಕಡು ನೀಲಿ, ಕೇಸರಿ, ಕೆಂಪು ಹಾಗೂ ನೇರಳೆ ಬಣ್ಣದಲ್ಲಿ – ‘ಓಡಾಡುವ ಹೂವಿನಂತೆ’ ಕಾಣಿಸುವ ಇವು ನೋಡುಗರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತವೆ! ಕಣ್ಣಿಗೆ ಮಾತ್ರವಲ್ಲ, ಏಡಿ ಪ್ರಿಯರ ನಾಲಗೆಗೂ ರುಚಿಯ ಆಹಾರವಾಗಿವೆ! ಆದರೆ, ಕೆಲವೇ ಕೆಲವು ಏಡಿಗಳಂತೆ, ತೆಂಗಿನ ಕಾಯಿ ಏಡಿಗಳು ಕೂಡಾ ಮನುಷ್ಯನ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ತೆಂಗಿನಕಾಯಿ ಏಡಿಯನ್ನು ಪ್ರತಿನಿತ್ಯ ಆಹಾರವಾಗಿ ಬಳಸುತ್ತಿದ್ದರೆ, ಹೃದಯ ಸಂಬAಧಿ ಕಾಯಿಲೆಗಳು ಬರುವ ಸಾಧ್ಯತೆಗಳು ಅಧಿಕ ಎಂದು ವೈದ್ಯರು ಹೇಳುತ್ತಾರೆ. ಆದರೆ ಜನರ ನಾಲಗೆಯ ಚಪಲ ಎಷ್ಟು ಹೆಚ್ಚಾಗಿದೆಯೆಂದರೆ, ಮನುಷ್ಯ ವಾಸವಿರುವ ಸ್ಥಳಗಳಲ್ಲಿ ತೆಂಗಿನಕಾಯಿ ಏಡಿಯ ಸಂಖ್ಯೆ ಗಣನೀಯವಾಗಿ ಕುಸಿದಿದೆ! ಅನೇಕ ಕಡೆಗಳಲ್ಲಿ ಇವು ಸಂಪೂರ್ಣ ಕಣ್ಮರೆಯಾಗಿವೆ!! “ತಿನ್ನದೇ ಸಾಯೋದಕ್ಕಿಂತ ತಿಂದು ಸಾಯೋಣ…!” ಹೀಗೆ ಏನೇನೋ ತರ್ಕಗಳ, ವಾದಗಳ ಮೂಲಕ ಮನುಷ್ಯ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ. ನರಮನುಷ್ಯನ ಒಂದೂವರೆ ಇಂಚಿನ ನಾಲಗೆ ಚಪಲದ ರಾಕ್ಷಸ ಶಕ್ತಿಯೆದುರು ಎಲ್ಲವೂ ಸಾಧುವಾಗುತ್ತದೆ!! ಆದರೆ ಕೊನೆಗೆ ಬಲಿಪಶುವಾಗುವುದು ಮಾತ್ರ ತೆಂಗಿನಕಾಯಿ ಏಡಿಗಳಂತಹಾ ಜೀವಿಗಳು!!

    ಬರೀ ಮುಟ್ಟಿದರೇ ಹೊಗೆ ಹಾಕಿಸಬಲ್ಲ ಕಪ್ಪೆಗಳು!!

    ಗಾಳಿಯಲ್ಲೇ ನಿಂತು ಮಕರಂದ ಹೀರುವ ಪಕ್ಷಿ ಪ್ರಪಂಚದ ಪುಟಾಣಿ ಅದ್ಭುತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts