More

    ಇಷ್ಟ ಚಿಕ್ಕ ವಯಸ್ಸಲ್ಲಿ ಆತ್ಮಹತ್ಯೆ ಯೋಚ್ನೆ ಬಂದಿದ್ಯಾ? ಹೀಗೆ ಮಾಡು ಕಂದಾ… ಏನೂ ಆಗಲ್ಲ…

    ಇಷ್ಟ ಚಿಕ್ಕ ವಯಸ್ಸಲ್ಲಿ ಆತ್ಮಹತ್ಯೆ ಯೋಚ್ನೆ ಬಂದಿದ್ಯಾ? ಹೀಗೆ ಮಾಡು ಕಂದಾ... ಏನೂ ಆಗಲ್ಲ...ನನಗೀಗ 16 ವರ್ಷ. ಯಾಕೋ ಗೊತ್ತಿಲ್ಲ. ನಮ್ಮ ಮನೆಯಲ್ಲಿ ನನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ. ನಾನು ಏನು ಮಾಡಿದರೂ ನನ್ನದೇ ತಪ್ಪು ಅನ್ನುತ್ತಾರೆ. ನನಗೆ ದೊಡ್ಡವಳಾದ ಮೇಲೆ ಏನಾದರೂ ಸಾಧಿಸ ಬೇಕೆನ್ನುವ ಆಸೆ. ಆದರೆ ಹೀಗೆ ಎಲ್ಲರೂ ಬಯ್ಯುವುದು ನೋಡಿ ನನಗೆ ಸಾಯಬೇಕೆಂದು ಅನ್ನಿಸುತ್ತದೆ. ನಾವು ಶ್ರೀಮಂತರಲ್ಲ. ನನ್ನ ಎಲ್ಲ ಕಷ್ಟಗಳಿಗೆ ಸಾವೊಂದೇ ಪರಿಹಾರವೇ? ನನಗೆ ನಮ್ಮ ಮನೆಯಲ್ಲಿ ಯಾರಾದರೂ ಬೈದರೆ ಸಿಟ್ಟು ಬರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತದೆ. ನನಗೆ ಸಾಯಲು ಮನಸ್ಸಿಲ್ಲ ನನ್ನ ಪತ್ರ ನಿಮಗೆ ಸ್ಪಷ್ಟವಾಗಿ ಅರ್ಥವಾಗಿಲ್ಲವೆನಿಸುತ್ತದೆ. ನನ್ನ ಕಷ್ಟ ಹೇಗೆ ಹೇಳಲೋ ಗೊತ್ತಾಗ್ತಿಲ್ಲ. ಆದರೂ ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ ಆಂಟಿ… ನನಗೆ ಸಾಯಬೇಕೆನಿಸಿದರೂ ಒಂದೊಂದು ಬಾರಿ ಭಯವಾಗುತ್ತದೆ. ಮನಸ್ಸಿಗೆ ತುಂಬಾ ನೋವಾಗುತ್ತದೆ. ಏನು ಮಾಡಲಿ ತಿಳಿಸಿ.

    ಉತ್ತರ: ಮಗೂ ಈಗ ಏನು ಮಾಡಬೇಕು ಅಂತ ನಾನು ತಿಳಿಸುತ್ತೇನೆ. ತಪ್ಪದೇ ಮಾಡುವಿಯಾ? ಈ ನಿನ್ನ ಸಿಟ್ಟು ಭಯ ಕೋಪ ಎಲ್ಲವೂ ತಾನಾಗಿಯೇ ಹೊರಟುಹೋಗುತ್ತದೆ. ಕನ್ನಡಿಯಲ್ಲಿ ನಿನ್ನನ್ನು ನೀನು ನೋಡಿಕೋ. ನಿನ್ನ ಕಣ್ಣುಗಳು ನಿನ್ನ ಪ್ರತಿಬಿಂಬವನ್ನು ನೋಡುತ್ತಿದೆಯಲ್ಲವೇ? ನಿನ್ನ ಕಣ್ಣಿನಲ್ಲಿರುವ ಬೆಳಕನ್ನು ನೋಡು. ನಿನ್ನ ಕಣ್ಣುಗಳು ಫಳಫಳನೆ ಹೊಳೆಯುತ್ತಿದೆಯಲ್ಲವೇ? ಈಗ ನಿನ್ನ ಎರಡು ಹಸ್ತಗಳನ್ನು ನಿನ್ನ ಮುಖದ ಮುಂದೆ ಹಿಡಿದುಕೋ. ಬೆರಳುಗಳನ್ನು ಮುಚ್ಚು ತೆಗೆ . ಹೀಗೆ ಐದು ಸಲ ಮಾಡು. ನಿನ್ನ ಬೆರಳುಗಳು ನೀಳವಾಗಿ ಸುಂದರವಾಗಿ ಕಾಣುತ್ತಿದೆಯಲ್ಲವೇ? ಸುಲಭವಾಗಿ ಮುಚ್ಚಿ ತೆಗೆದು ಮಾಡಲು ಆಗುತ್ತದೆಯಲ್ಲವೇ? ಈಗ ನಿನ್ನ ಕಿವಿಗಳನ್ನು ನಿನ್ನ ಕಿರು ಬೆರಳಿನಿಂದ ಗಟ್ಟಿಯಾಗಿ ಮುಚ್ಚಿಕೊಂಡು ಕೇಳಿಸದಂತೆ ಮಾಡಿಕೋ..ನಿನ್ನ ಹೆಸರನ್ನು ಹೇಳಿಕೋ. ಕೇಳಿಸಲಿಲ್ಲ ಅಲ್ಲವೇ? ಈಗ ಬೆರಳನ್ನು ತೆಗೆ, ಹೆಸರನ್ನು ಪಿಸುಮಾತಿನಲ್ಲಿ ಹೇಳು. ಕೇಳಿಸಿತಲ್ಲವೇ? ಇದಾದನಂತರ ಕನ್ನಡಿಯನ್ನು ಬಿಟ್ಟು, ನಿನ್ನ ಕಾಲುಗಳನ್ನು ನೋಡಿಕೋ. ಒಂದೆರಡು ಹೆಜ್ಜೆ ನಡೆದಾಡು. ಖುಷಿಯಲ್ಲಿ ಒಮ್ಮೆ ಕುಣಿ. ಒಂಟಿ ಕಾಲಿನಲ್ಲಿ ಕುಂಟೇಬಿಲ್ಲೆಯಾಡು.

    ಈಗ ಐದು ನಿಮಿಷ ಕಣ್ಣು ಮುಚ್ಚಿ ದೇವರ ಸ್ಮರಣೆ ಮಾಡಿ. ನಂತರ ಕಣ್ಣುಮುಚ್ಚಿಕೊಂಡೇ ನಿನ್ನನ್ನು ನೀನು ಕೇಳಿಕೋ. ” ಭಗವಂತ ನನಗೆ ಸುಂದರವಾದ ಕಣ್ಣುಗಳನ್ನು ಕೊಟ್ಟಿದ್ದಾನೆ. ಅವು ನಕ್ಷತ್ರದಂತೆ ಹೊಳೆಯುತ್ತಿವೆ. ಇದು ದೇವರ ಉಡುಗೊರೆ. ನಾನು ಸತ್ತರೆ ದೇವರ ಉಡುಗೊರೆಯನ್ನು ತಿರಸ್ಕರಿಸಿದಂತೆ ಆಗುತ್ತದೆ. ಕಣ್ಣು ನಾಶವಾಗುತ್ತದೆ. ದೇವರಿಗೆ ಬೇಸರವಾಗುತ್ತದೆ. ನನ್ನ ಕೈ ಬೆರಳುಗಳು ಎಷ್ಟು ಚೆನ್ನಾಗಿ ಮುಚ್ಚಿ ತೆಗೆಯುತ್ತವೆ. ಇದರಿಂದ ನಾನು ಬೇಕಾದಷ್ಟು ಕೆಲಸ ಮಾಡಲಿ ಎಂದು ದೇವರು ಚೆನ್ನಾಗಿರುವ ಕೈಗಳನ್ನು ಕೊಟ್ಟಿದ್ದಾನೆ. ನಾನು ಕಣ್ಣುಗಳಿಂದ ಓದಿ, ಕೈಗಳಿಂದ ಬರೆದು ಅವನಿಗೆ ಧನ್ಯವಾದಗಳನ್ನು ಅರ್ಪಿಸಬೇಕು. ನನ್ನ ಕಾಲುಗಳು ಬಲಿಷ್ಠವಾಗಿವೆ. ಓಡಬಲ್ಲೆ ಕುಣಿಯಬಲ್ಲೆ. ಇದು ಭಗವಂತ ಕೊಟ್ಟಿರುವ ವರ. ಇದನ್ನು ಉಪಯೋಗಿಸುತ್ತಾ ದೇವಾಲಯದಲ್ಲಿ ಪ್ರದಕ್ಷಿಣೆ ಬಂದು ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.” ಈಗ ಕಣ್ಣು ಬಿಡು. ಸುತ್ತಲಿನ ಜಗತ್ತನ್ನು ನೋಡು. ಯೋಚನೆ ಮಾಡು. ನಿನಗೆ ಆರೋಗ್ಯಕರವಾದ ಶರೀರವಿದೆ. ಕಣ್ಣುಗಳಿವೆ.ಕೈಕಾಲುಕಿವಿಗಳಿವೆ. ಈಗ ಇವೆಲ್ಲವೂ ನಿನ್ನ ಅರಿವಿಗೆ ಬಂತಲ್ಲವೇ?

    ಎಷ್ಟೋ ಜನಕ್ಕೆ ಕಣ್ಣೀರುವುದಿಲ್ಲ. ಆದರೂ ಅವರು ಶಾಲೆಗೆ ಹೋಗುತ್ತಾರೆ. ತರಗತಿಯಲ್ಲಿ ತನ್ಮಯತೆಯಿಂದ ಪಾಠ ಕೇಳುತ್ತಾರೆ. ಪರೀಕ್ಷೆಯಲ್ಲಿ ಉತ್ತರಗಳನ್ನು ಬಾಯಿಂದ ಹೇಳುತ್ತಾ ಯಾರಿಂದಲೋ ಬರೆಸುತ್ತಾರೆ. ಹೀಗೇ ಗುರಿ ಸಾಧಿಸಿ ಐ.ಎ.ಎಸ್ ಮಾಡಿದ ಧೀರರಿದ್ದಾರೆ. ನಿನಗೆ ಕಣ್ಣೂಗಳು ಚೆನ್ನಾಗಿವೆ. ಒಂದು ಪದವಿಯನ್ನಾದರೂ ಪಡೆಯ ಬೇಕಲ್ಲವೇ? ಎಷ್ಟೋ ಜನಕ್ಕೆ ಕೈಗಳೇ ಇರುವುದಿಲ್ಲ. ಅವರು ಕಾಲಿನಿಂದ ಬರೆದು ಪರೀಕ್ಷೆಗಳನ್ನು ಪಾಸು ಮಾಡಿ, ವೀಲ್ ಛೇರಿನಲ್ಲಿ ಓಡಾಡುತ್ತಾ ಉನ್ನತ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ನಿನಗೆ ಕೈಗಳಿವೆ ಕಾಲುಗಳಿವೆ ಅವನ್ನೆಲ್ಲಾ ನಿಷ್ಪ್ರಯೋಜವನ್ನಾಗಿಸುತ್ತೀಯಾ? ನೀನೇ ಯೋಚಿಸು. ನಾವು ಶ್ರೀಮಂತರಲ್ಲ ಎಂದು ಬರೆದಿದ್ದೀಯೆ. ಶ್ರೀಮಂತಿಕೆಯೆಂದರೆ ಏನು? ಕೇವಲ ಹಣದಿಂದ ಮಾತ್ರ ಶ್ರೀಮಂತಿಕೆ ಬರುತ್ತದೆಯೇ? ಕಣ್ಣು ಕೈಕಾಲು ಇಲ್ಲದವರಿಗೆ ಇವೆಲ್ಲಾ ಇರುವವರೇ ಶ್ರೀಮಂತರಾಗಿ ಅದೃಷ್ಟವಂತರಾಗಿ ಕಾಣಿಸುತ್ತಾರೆ. ಅವರಿಗಿಂತಾ ನೀನು ಶ್ರೀಮಂತೆಯಲ್ಲವೇ? ಕೆಟ್ಟಗುಣಗಳಿರುವವರಿಗಿಂತಾ ಒಳ್ಳೆಯ ಗುಣವಿರುವವರು ಹೆಚ್ಚು ಶ್ರೀಮಂತರಲ್ಲವೇ? ಮನೆಯವರು ಬಯ್ಯುವುದು ಮಕ್ಕಳು ಬುದ್ಧಿ ಕಲಿಯಲಿ ಎಂದು ಅವರೇನು ನಿನ್ನ ಶತೃಗಳಲ್ಲವಲ್ಲ? ಅವರು ಬಯ್ಗಳ ನಿನಗೆ ಆಶೀರ್ವಾದವಿದ್ದಂತೆ. ನನ್ನ ಒಳ್ಳೆಯದಕ್ಕೇ ಬಯ್ಯುತ್ತಿದ್ದಾರೆಂದು ಭಾವಿಸು. ಆಗ ನಿನಗೆ ನೋವಾಗುವುದೇಇಲ್ಲ. ಹರಿದಾಸರು ಹೇಳಿರುವ ಒಂದು ಮಾತನ್ನು ನೀವು ಶಾಲೆಯ ಪುಸ್ತಕದಲ್ಲಿ ಓದಿದ್ದೀಯೆಂದು ಭಾವಿಸುತ್ತೇನೆ. ” ಈಸಬೇಕು ಇದ್ದು ಜೈಸಬೇಕು” !! ಈ ಬದುಕು ಎನ್ನುವುದು ಒಂದು ಸಮುದ್ರದಂತೆ ಇದರಲ್ಲಿ ಈಜಿ ದಡಸೇರಬೇಕು. ಆಗಲೇ ಗೆದ್ದಂತೆ.

    ನೀನು ಏನಾದರೂ ಸಾಧಿಸಬೇಕೆಂದು ಆಸೆ ಎಂದು ಬರೆದಿದ್ದೀಯೆ. ಸಾಧಿಸುವುದು ಎಂದರೇನು? ಕಷ್ಟಗಳನ್ನು ಎದುರಿಸಿ ಬದುಕುವುದೇ ದೊಡ್ಡ ಸಾಧನೆ. ಅದನ್ನೇ ಬಿಟ್ಟು ಸಾಯುತ್ತೇನೆ ಎಂದರೆ ಏನನ್ನು ಸಾಧಿಸಿದ ಹಾಗಾಯಿತು? ತಪ್ಪಿಲ್ಲದ ನಿನ್ನ ಅಕ್ಷರಗಳನ್ನು ನೋಡಿ ಖುಷಿಯಾಯಿತು. ನಿನ್ನ ಪತ್ರ ಸ್ಪಷ್ಟವಾಗಿ ಅರ್ಥವಾಗಿರುವುದಷ್ಟೇ ಅಲ್ಲ, ನಿನ್ನ ಮನಸ್ಸೂ ಅರ್ಥವಾಯಿತು. ಜಾಣೆ ನೀನು. ಖುಷಿಯಾಗಿರುವುದನ್ನು ಕಲಿತುಕೋ.

    ಈ ಹೋರಿಗೆ ಕೋಟಿ ರೂ, ಒಂದು ಡೋಸ್‌ ವೀರ್ಯಕ್ಕೆ ಸಾವಿರಾರು ರೂ! ಕೃಷಿ ಮೇಳದಲ್ಲಿ ಹೋರಿ, ಹೋತಗಳ ಅಚ್ಚರಿ…

    ಪ್ರಯಾಣಿಕರು ಮೊಬೈಲ್‌ನಲ್ಲಿ ಹಾಡು, ವಾರ್ತೆ ಜೋರಾಗಿ ಹಾಕಿದ್ರೆ ಅರ್ಧದಲ್ಲೇ ಇಳಿಯಬೇಕಾಗತ್ತೆ ಹುಷಾರ್‌! ಇಂದಿನಿಂದಲೇ ಹೊಸ ರೂಲ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts