More

    ‘ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಮಸೂದೆ’ ಮಂಡಿಸಿದ ಸಚಿವೆ ಸ್ಮೃತಿ ಇರಾನಿ- ಲೋಕಸಭೆಯಲ್ಲಿ ಕೋಲಾಹಲ

    ನವದೆಹಲಿ: ಇತ್ತ ಕರ್ನಾಟಕದಲ್ಲಿ ಮತಾಂತರ ನಿಷೇಧ ವಿಧೇಯಕ ವಿಪಕ್ಷಗಳ ಕೋಲಾಹಲದ ನಡುವೆ ಮಂಡನೆಯಾದರೆ ಅತ್ತ ಲೋಕಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕ -2021 ಮಂಡನೆಯಾಗಿದೆ. ವಿರೋಧ ಪಕ್ಷಗಳ ಭಾರಿ ಗಲಾಟೆಯ ನಡುವೆಯೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಇದನ್ನು ಮಂಡಿಸಿದ್ದಾರೆ.

    ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಈಗಿರುವ 18 ವರ್ಷಗಳಿಂದ 21 ವರ್ಷಕ್ಕೆ ಏರಿಸುವ ಸಂಬಂಧದ ಮಸೂದೆ ಇದಾಗಿದೆ. ಈ ಮೂಲಕ ಮದುವೆಯ ವಯಸ್ಸು ಇನ್ನುಮುಂದೆ 21 ಎಂಬುದಾಗಿ ಕಾಯ್ದೆ ರೂಪುಗೊಂಡ ಜಾರಿಗೆ ಬರಲು ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ.

    ‘ನಮ್ಮ ದೇಶದಲ್ಲಿ ಮಹಿಳಾ ಸಮಾನತೆ ತರಬೇಕಾದ ಅವಶ್ಯಕತೆ ಇದೆ. ಇದೇ ದೃಷ್ಟಿಕೋನದಲ್ಲಿ ಈ ತಿದ್ದುಪಡಿಯನ್ನು ಕೂಡ ನೋಡಬೇಕಿದೆ. ವಿಭಿನ್ನ ನಂಬಿಕೆಗಳ ವಿಭಿನ್ನ ವಿವಾಹ ಕಾನೂನುಗಳು ಇರುವ ಹಿನ್ನೆಲೆಯಲ್ಲಿ ತಿದ್ದುಪಡಿಯನ್ನು ಪರಿಚಯಿಸಲು ಬಯಸುತ್ತಿದ್ದೇನೆ’ ಎಂದು ಸಚಿವೆ ಹೇಳಿದ್ದಾರೆ.

    ಇವರು ಇದನ್ನು ಮಂಡಿಸುತ್ತಿದ್ದಂತೆಯೇ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ತೃಣಮೂಲ ಕಾಂಗ್ರೆಸ್‌ನ ಸೌಗತ ರಾಯ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಇದರ ಕುರಿತು ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಿದ್ದುಪಡಿ ಪರಿಚಯಿಸುವ ಮೊದಲು ಸರ್ಕಾರವು ಯಾವುದೇ ಪ್ರಕ್ರಿಯೆಗಳನ್ನು ನಡೆಸಿಲ್ಲ, ಯಾರನ್ನೂ ಸಂಪರ್ಕಿಸಿಲ್ಲ. ಹೀಗಾಗಿ ಇದಕ್ಕೆ ನಮ್ಮ ವಿರೋಧ ಇದ್ದು, ಇದನ್ನು ಸ್ಥಾಯಿ ಸಮಿತಿಗೆ ಕಳುಹಿಸಲು ಒತ್ತಾಯಿಸುತ್ತಿರುವುದಾಗಿ ಹೇಳಿದರು.

    ಈ ವಿಧೇಯಕ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. 18 ವರ್ಷದ ಯುವಕ ಮತದಾನ ಮಾಡಬಹುದಾದರೆ ಮದುವೆಯಾಗಲು ಸಾಧ್ಯವಿಲ್ಲವೇ? ನಿಮ್ಮ ‘ಬೇಟಿ ಬಚಾವೋ ಕಾರ್ಯಕ್ರಮ ಎಲ್ಲಿಗೆ ಹೋಯ್ತು’ ಎಂದು ಅಸಾದುದ್ದೀನ ಓವೈಸಿ ಕಿಡಿ ಕಾರಿದರು.

    ಆದರೆ ಮಸೂದೆಯನ್ನು ಸಮರ್ಥಿಸಿಕೊಂಡ ಸಚಿವೆ ಸ್ಮೃತಿ ಇರಾನಿ, ಪ್ರಸ್ತುತ ನಾವು ಬಾಲ್ಯ ವಿವಾಹ ತಡೆಯುವ ಅಗತ್ಯತೆ ಇದೆ. ಅಪ್ರಾಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗುತ್ತಿದ್ದಾರೆ. ಹೀಗಾಗಿ ಹೊಸ ಕಾನೂನಿನ ಅಗತ್ಯ ಇದೆ ಎಂದು ಹೇಳಿದರು. ಪುರುಷ ಮತ್ತು ಮಹಿಳೆಯರಿಗೆ ವೈವಾಹಿಕ ಸಂಬಂಧದಲ್ಲಿ ಸಮಾನ ಹಕ್ಕುಗಳ ಅಗತ್ಯವಿದೆ. ಈ ತಿದ್ದುಪಡಿಯು 21ನೇ ವಯಸ್ಸಿನಲ್ಲಿ ಮದುವೆಯಾಗಲು ಅವಕಾಶ ನೀಡುತ್ತದೆ. ಈ ವೇಳೆ ಪುರುಷರು ಮತ್ತು ಮಹಿಳೆಯರಲ್ಲಿ ಭೇದ ಭಾವ ಮಾಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುವವರ ಬಾಯಿ ಮುಚ್ಚಿಸಿದರು.

    ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಹೇಗೆ? ಯಾವ್ಯಾವುದಕ್ಕೆ, ಎಷ್ಟು ದಿನ ಬ್ರೇಕ್‌? ಅಪಾರ್ಟ್‌ಮೆಂಟ್‌ಗಳಿಗೇನು ರೂಲ್ಸ್‌?

    ಮತ್ತೆ ಸದ್ದು ಮಾಡುತ್ತಿದೆ ಹೇಮಾಮಾಲಿನಿ ಕೆನ್ನೆ: ನಾನಿದನ್ನು ಸುರಕ್ಷಿತವಾಗಿಟ್ಟುಕೊಳ್ಳೋದು ಬೆಸ್ಟ್‌ ಎಂದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts