More

    ಗೂಗಲ್‌ ನೋಡಿ ದರೋಡೆ ಕಲಿತ ಬೆಂಗಳೂರಿನ ಇಂಜಿನಿಯರ್‌! ಆದ್ರೆ ಉಳಿದದ್ದು ಗೊತ್ತಾಗದೇ ಸಿಕ್ಕಿಬಿದ್ದ

    ಬೆಂಗಳೂರು: ಮಡಿವಾಳದ ಎಸ್‌ಬಿಐ ಬ್ಯಾಂಕ್‌ಗೆ ನುಗ್ಗಿ ದರೋಡೆ ಮಾಡಿದ್ದ ಮೆಕ್ಯಾನಿಕಲ್ ಇಂಜಿನಿಯರ್ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ ಚಿನ್ನಾಭರಣ ಸೇರಿ 85 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಕಾಮಾಕ್ಷಿಪಾಳ್ಯದ ನಿವಾಸಿ ಎಸ್.ಧೀರಜ್ (28) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ 1 ಕೆಜಿ 805 ಗ್ರಾಂ ಚಿನ್ನಾಭರಣ, 6.5 ಲಕ್ಷ ರೂ., 1 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಚೂರಿ ಸೇರಿ 85,38,320 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಆರೋಪಿ ಧೀರಜ್ ಖಾಸಗಿ ಕಂಪನಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈ ನಡುವೆ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸಿ ಶ್ರೀಮಂತನಾಗುವ ಕನಸು ಕಂಡಿದ್ದ. ಆನ್‌ಲೈನ್ ಒಲಿಂಪಿ ಟ್ರೇಡಿಂಗ್‌ನಲ್ಲಿ ಲಕ್ಷಾಂತರ ರೂ. ಹಣ ತೊಡಗಿಸಿ ಸಂಪೂರ್ಣ ನಷ್ಟಮಾಡಿಕೊಂಡಿದ್ದ. ಒಲಿಂಪಿ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಲು ಸ್ನೇಹಿತರು, ಬಜಾಜ್ ಫೈನ್ಯಾನ್ಸ್‌ನಿಂದ ಒಟ್ಟು 35 ಲಕ್ಷ ರೂ. ಸಾಲ ಮಾಡಿದ್ದ. ಧೀರಜ್‌ಗೆ ತಿಂಗಳಿಗೆ ಬರುತ್ತಿದ್ದ 30 ಸಾವಿರ ರೂ. ವೇತನದಲ್ಲಿ ಸಾಲ ಹಿಂತಿರುಗಿಸಲು ಸಾಧ್ಯವಾಗಿರಲಿಲ್ಲ. ಸಾಲಗಾರರು ಹಣ ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದರು.

    ಹಣ ಹೊಂದಿಸಲು ಏನು ಮಾಡಬೇಕೆಂದು ದೋಚದೆ ಬ್ಯಾಂಕ್ ದರೋಡೆ ಮಾಡಲು ಮುಂದಾಗಿದ್ದ. ಇದೇ ಮೊದಲ ಬಾರಿ ದರೋಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಹೇಗೆ ದರೋಡೆ ಮಾಡಬೇಕು ? ಎಂಬುದು ಧೀರಜ್‌ಗೆ ಗೊತ್ತಿರಲಿಲ್ಲ. ಇದಕ್ಕಾಗಿ ಗೂಗಲ್‌ನಲ್ಲಿ ಬ್ಯಾಂಕ್ ದರೋಡೆ ಮಾಡುವುದು ಹೇಗೆ ಎಂಬುದನ್ನು ಪರಿಶೀಲಿಸಿದ್ದ. ಈ ಹಿಂದೆ ಬ್ಯಾಂಕ್‌ಗಳಲ್ಲಿ ನಡೆದ ದರೋಡೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದ. ನಂತರ ಒಂದು ವಾರಗಳ ಕಾಲ ನಗರದೆಲ್ಲೆಡೆ ಸುತ್ತಾಡಿ 20ಕ್ಕೂ ಹೆಚ್ಚಿನ ಬ್ಯಾಂಕ್‌ಗಳಿಗೆ ಹೋಗಿ, ಸೆಕ್ಯೂರಿಟಿಗಾರ್ಡ್‌ಗಳು ಇಲ್ಲದಿರುವುದು, ಯಾವ ಸಮಯದಲ್ಲಿ ಜನ ಕಡಿಮೆ ಇರುತ್ತಾರೆ ಎಂಬುದನ್ನು ಗಮನಿಸುತ್ತಿದ್ದ. ನಂತರ ಮಡಿವಾಳದಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ ಮಾಡಲು ಸಂಚು ರೂಪಿಸಿದ್ದ.

    ಲಾಕರ್‌ನಲ್ಲಿದ್ದ ಹಣ ದೋಚಿದ್ದ ಆರೋಪಿ:
    ಜ.14ರಂದು ಸಂಜೆ 5.40ಕ್ಕೆ ಮಡಿವಾಳದ ಎಸ್‌ಬಿಐ ಬ್ಯಾಂಕಿನ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಹೋಗಿದ್ದರು. ಆದರೆ, ಬ್ಯಾಂಕ್‌ನ ಇಬ್ಬರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇದೇ ಸರಿಯಾದ ಸಮಯ ಎಂದುಕೊಂಡ ಧೀರಜ್, ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬ್ಯಾಂಕ್‌ನೊಳಗೆ ಎಂಟ್ರಿ ಕೊಟ್ಟಿದ್ದ. ಬ್ಯಾಂಕಿನ ಮುಖ್ಯದ್ವಾರದ ಬಾಗಿಲು ಹಾಕುತ್ತಿದ್ದ ಸಿಬ್ಬಂದಿ ಬಳಿ ಬಂದು ಆತನ ಕತ್ತಿನ ಬಳಿ ಚೂರಿಯನ್ನಿಟ್ಟು ಬ್ಯಾಂಕಿನ ಬಾಗಿಲು ತೆರೆಸಿ ಬ್ಯಾಂಕ್‌ನಲ್ಲಿರುವ ಹಣ ಕೊಡುವಂತೆ ಬೆದರಿಸಿದ್ದ. ಇದರಿಂದ ಆತಂಕಗೊಂಡ ಬ್ಯಾಂಕ್ ಸಿಬ್ಬಂದಿ, ಆರೋಪಿ ಧೀರಜ್‌ನ್ನು ಸ್ಟ್ರಾಂಗ್‌ರೂಂ ಬಳಿ ಕರೆದುಕೊಂಡು ಹೋಗಿ ಲಾಕರ್ ಓಪನ್ ಮಾಡಿದ್ದರು. ನಂತರ ಆರೋಪಿ ಲಾಕರ್‌ನಲ್ಲಿದ್ದ 3,76,960 ರೂ. ನಗದು ಹಾಗೂ 16 ಪ್ಯಾಕೆಟ್‌ಗಳಲ್ಲಿಟ್ಟಿದ್ದ 1 ಕೆಜಿ 805 ಗ್ರಾಂ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ.

    ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ ?
    ಇತ್ತ ಬ್ಯಾಂಕ್ ಮ್ಯಾನೇಜರ್ ಹರೀಶ್ ಮಡಿವಾಳ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೃತ್ಯ ನಡೆದ ಬ್ಯಾಂಕ್‌ನಲ್ಲಿ ಅಳವಡಿಸಿದ್ದ ಸಿಸಿಕ್ಯಾಮರಾ ಪರಿಶೀಲಿಸಿದಾಗ ಆರೋಪಿ ಮುಖಚಹರೆ ಪತ್ತೆಯಾಗಿತ್ತು. ಜತೆಗೆ ಸಿಡಿಆರ್ ಮೂಲಕ ಆರೋಪಿಯ ಮೊಬೈಲ್ ನಂಬರ್ ಪತ್ತೆ ಹಚ್ಚಿ ತಾಂತ್ರಿಕ ಕಾರ್ಯಾಚರಣೆ ನಡೆಸಿದ್ದರು. ಆ ವೇಳೆ ಆರೋಪಿ ಕಾಮಾಕ್ಷಿಪಾಳ್ಯದಲ್ಲಿರುವುದು ಪತ್ತೆಯಾಗಿತ್ತು. ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿಯು ದರೋಡೆ ಮಾಡಿದ ಬಳಿಕ ಚಿಕ್ಕಬಳ್ಳಾಪುರ, ಅನಂತಪುರ, ಬಳ್ಳಾರಿ ಸೇರಿ ವಿವಿಧ ಕಡೆ ಸುತ್ತಾಡಿಕೊಂಡಿದ್ದ. ಕೆಲ ಸಾಲಗಾರರಿಗೆ ಹಣ ಹಿಂತಿರುಗಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪೊಲೀಸರಿಗೆ ತಲೆನೋವಾಗಿ ಟೆಕ್ಕಿ-ಶಿಕ್ಷಕಿ ಸಾವಿನ ರಹಸ್ಯ: ಸತ್ತ ಮೇಲೂ ಸಾಕ್ಷ್ಯ ಸಿಗದಂತೆ ಎಲ್ಲವೂ ಸರ್ವನಾಶ!

    ಆಕೆಯ ಜತೆ ದೈಹಿಕ ಸಂಪರ್ಕ ಮಾಡುವಾಗ ತಾಯಿ ನೆನಪಾಗಲಿಲ್ಲವೆ? ಈಗ ಮದುವೆಗೆ ಹಿಂದೇಟು ಹಾಕಿದ್ರೆ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts