More

    ಬಿರುಗಾಳಿ ಎಬ್ಬಿಸಿದ್ದ ‘ಮೀ ಟೂ’ ಪ್ರಕರಣ: ಸಿಗಲಿಲ್ಲ ಸಾಕ್ಷ್ಯಾಧಾರ, ಆಕ್ಷೇಪ ಎತ್ತಲಿಲ್ಲ ನಟಿ- ಅರ್ಜುನ್‌ ಸರ್ಜಾಗೆ ರಿಲೀಫ್

    ಬೆಂಗಳೂರು: ಇಡೀ ಚಿತ್ರರಂಗ ಮಾತ್ರವಲ್ಲದೇ ಜಗತ್ತಿನಾದ್ಯಂತ ಭಾರಿ ಬಿರುಗಾಳಿ ಎಬ್ಬಿಸಿರೋ ‘ಮೀ ಟೂ’ (ME TOO) ಘಟನೆಗೆ ನಾಂದಿ ಹಾಡಿದ್ದು ನಟಿ ಶೃತಿ ಹರಿಹರನ್‌. ಇವರು ನಟ ಅರ್ಜುನ್ ಸರ್ಜಾ ವಿರುದ್ಧ 2018ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಅಲ್ಲಿಂದ ಇದು ಚಿತ್ರರಂಗ ಮಾತ್ರವಲ್ಲದೇ ಭಾರತವನ್ನೂ ದಾಟಿ ದೊಡ್ಡ ಚಳವಳಿಯನ್ನೇ ಆರಂಭಕ್ಕೆ ದಾರಿ ಮಾಡಿಕೊಟ್ಟಿತ್ತು.

    ಚಿತ್ರವೊಂದರ ಶೂಟಿಂಗ್‌ ವೇಳೆ ಅರ್ಜುನ್‌ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಶೃತಿ ಆರೋಪಿಸಿದ್ದರು. 2015 ರಲ್ಲಿ ನಡೆದಿದ್ದ ‘ವಿಸ್ಮಯ’ ಎಂಬ ಹೆಸರಿನ ಚಿತ್ರದ ಶೂಟಿಂಗ್‌ ವೇಳೆ ರೋಮ್ಯಾಂಟಿಕ್ ಸೀನ್ ರಿಹರ್ಸಲ್ ಸಂದರ್ಭದಲ್ಲಿ ಅರ್ಜುನ್ ಸರ್ಜಾರವರು ನನ್ನ ಖಾಸಗಿ ಅಂಗವನ್ನು ಮುಟ್ಟಿದ್ದರು. ಆಗ ತಾನೆ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿದ್ದ ನಟಿಯಾಗಿದ್ದರಿಂದ ನಾನು ಏನೂ ಮಾಡದೇ ಸುಮ್ಮನಾದೆ. ಪುನಃ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡು ನನ್ನ ಬೆನ್ನಿನ ಹಿಂಭಾಗದಲ್ಲೆಲ್ಲಾ ಕೈಯಾಡಿಸಿ ನಮ್ಮ ಡೈರೆಕ್ಟರ್ ಬಳಿ ದೃಶ್ಯವನ್ನು ಈ ರೀತಿ ಇನ್ನು ಸುಧಾರಣೆ ಮಾಡಿಕೊಳ್ಳಬಹುದಲ್ಲಾ ಎಂದು ಹೇಳಿದ್ದರು. ಇದು ನನಗೆ ತೀವ್ರ ಮುಜುಗರ ಉಂಟು ಮಾಡಿತ್ತು ಎಂದು ಮೂರು ವರ್ಷಗಳ ಬಳಿಕ ಅವರು ತಮಗಾಗಿರುವ ಅನ್ಯಾಯದ ಕುರಿತು ಅರ್ಜುನ್‌ ಸರ್ಜಾ ವಿರುದ್ಧ ಕೇಸ್‌ ದಾಖಲು ಮಾಡಿದ್ದರು.

    ಅಷ್ಟೇ ಅಲ್ಲದೇ, ಅರ್ಜುನ್ ಸರ್ಜಾ ನನ್ನನ್ನು ರೂಮ್‌ಗೆ ಕರೆದಿದ್ದರು. ಇದಕ್ಕೆ ನಿರಾಕರಿಸಿದಾಗ ಒಂದು ದಿನ ನೀನೇ ಬರುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದೂ ಅವರು ದೂರಿನಲ್ಲಿ ಅನ್ಯಾಯದ ಕುರಿತು ಹೇಳಿಕೊಂಡಿದ್ದರು.

    ಇದರ ನಂತರ ಹಲವಾರು ನಟಿಯರು ತಮಗಾಗಿರುವ ಕಹಿ ಅನುಭವಗಳನ್ನು ಹೇಳಿಕೊಳ್ಳಲು ಮುಂದೆ ಬಂದಿದ್ದರು. ನಟಿಯರು ಮಾತ್ರವಲ್ಲದೇ ಹಲವು ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ಮಹಿಳೆಯರು ಧೈರ್ಯದಿಂದ ಈ ಬಗ್ಗೆ ಹೇಳಿಕೊಂಡಿದ್ದರಿಂದ ‘ಮೀ ಟೂ’ ಚಳವಳಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿತ್ತು.

    ಶೃತಿ ಹರಿಹರನ್‌ ಮತ್ತು ಅರ್ಜುನ್‌ ಸರ್ಜಾ ಕೇಸ್‌ ದಾಖಲಾಗಿ ಇದೀಗ ಮೂರುವರೆ ವರ್ಷವಾಗಿದೆ. ಇಲ್ಲಿಯವರೆಗೆ ನಟಿಯ ಆರೋಪಕ್ಕೆ ಸಂಬಂಧಿಸಿದಂತೆ ಹಲವಾರು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದಿದ್ದಾರೆ ಪೊಲೀಸರು. ಎಲ್ಲಾ ರೀತಿಯಲ್ಲಿ ತನಿಖೆ ಮಾಡಿದರೂ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಕುರುಹುಗಳು ಇಲ್ಲ, ಸಾಕ್ಷ್ಯಾಧಾರಗಳೂ ಇಲ್ಲ ಎಂದು ಪೊಲೀಸರು ಕೋರ್ಟ್‌ಗೆ ‘ಬಿ ರಿಪೋರ್ಟ್‌’ ಸಲ್ಲಿಸಿದ್ದರು. ಈ ರಿಪೋರ್ಟ್‌ಗೆ ನಟಿ ಕೂಡ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಮೌನಕ್ಕೆ ಜಾರಿದ್ದಾರೆ.

    ಇದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯವು ಸಾಕ್ಷ್ಯಾಧಾರದ ಇಲ್ಲದ ಹಿನ್ನೆಲೆಯಲ್ಲಿ ಹಾಗೂ ಇದಕ್ಕೆ ಆಕ್ಷೇಪಣೆ ಇದ್ದರೆ ಸಲ್ಲಿಸುವಂತೆ ನಟಿಗೆ ನೀಡಿರುವ ನೋಟಿಸ್‌ಗೆ ಯಾವುದೇ ಉತ್ತರ ಬರದ ಕಾರಣ, ನಟ ಅರ್ಜುನ್‌ ಸರ್ಜಾ ಅವರನ್ನು ಈ ಆರೋಪದಿಂದ ಮುಕ್ತ ಮಾಡಿರುವುದಾಗಿ ಆದೇಶಿಸಿದ್ದಾರೆ.

    ಸೂಕ್ತ ಸಮಯಕ್ಕೆ ಕಾಯುತ್ತಿದ್ದ ಪೊಲೀಸರ ಕೈಗೆ ರೆಡ್‌ಹ್ಯಾಂಡ್‌ ಸಿಕ್ಕಿಬಿದ್ದರು ಉಡುಪಿಯ ‘ಭ್ರಷ್ಟ’ ಅಧಿಕಾರಿಗಳು!

    ಪೊಲೀಸರಿಗೆ ಬೇಕಾಗಿದ್ದ ‘ಮೋಸ್ಟ್‌ ವಾಂಟೆಡ್‌’ ಸಿದ್ದು ಪಕ್ಕ! ತಲೆಮರೆಸಿಕೊಂಡವ ಪಾದಯಾತ್ರೆಯಲ್ಲಿ ಪ್ರತ್ಯಕ್ಷ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts