More

    ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿ

    ಬೆಳಗಾವಿ: ವೈದ್ಯಕೀಯ ಶಿಕ್ಷಣ ಮುಗಿಸಿ ವೈದ್ಯ ವೃತ್ತಿಯಲ್ಲಿ ತೊಡಗುವ ಯುವ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ಸಲಹೆ ನೀಡಿದರು.

    ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಜಿಎನ್‌ಎಂಸಿ ಆವರಣದಲ್ಲಿರುವ ಕೆಎಲ್‌ಇ ಸೆಂಟೇನರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಕೆಎಲ್‌ಇ ಸ್ವಾಯತ್ತ ವಿವಿ)ನ 10ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಆನ್‌ಲೈನ್ ಮೂಲಕ ಭಾಷಣ ಮಾಡಿದರು.

    ನಗರ ಪ್ರದೇಶದಲ್ಲಿ ಶೇ. 30 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ. 70ರಷ್ಟು ಜನರು ವಾಸಿಸುತ್ತಿದ್ದಾರೆ. ಅದರಲ್ಲಿ ಕೃಷಿ ಚಟುವಟಿಕೆ ಸೇರಿ ಇನ್ನಿತರ ವೃತ್ತಿ ನಂಬಿಕೊಂಡು ಬದುಕು ಸಾಗಿಸುತ್ತಿರುವ ಹಳ್ಳಿಗರು ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ವೈದ್ಯಕೀಯ ಪದವಿ ಮುಗಿಸಿದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಲು ಮುಂದಾಗಬೇಕು ಎಂದರು.

    ಚಿಕ್ಕದಾಗಿ ಪ್ರಾರಂಭವಾದ ಕೆಎಲ್‌ಇ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅವರ ಮುಂದಾಳತ್ವದಲ್ಲಿ ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಹೆಸರು ಗಳಿಸಿದೆ. ಅದಕ್ಕಾಗಿ ಆ ಸಪ್ತರ್ಷಿಗಳಿಗೆ ತಲೆಬಾಗಿ ನಮಿಸುವೆ ಎಂದರು.

    ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜ್: ವಿಶ್ವವಿದ್ಯಾಲಯದ ಕುಲಪತಿ ಡಾ. ವಿವೇಕ ಸಾವೋಜಿ ಮಾತನಾಡಿ, ವಿಶ್ವವಿದ್ಯಾಲಯವು ರಾಜ್ಯದಲ್ಲಿ ದ್ವಿತೀಯ ರ‌್ಯಾಂಕ್ ಪಡೆದಿದ್ದು, ರಾಷ್ಟ್ರಮಟ್ಟದಲ್ಲೂ ಕೂಡ ಖ್ಯಾತಿ ಗಳಿಸಿದೆ. ಪ್ರತಿವರ್ಷ ಅಮೆರಿಕದ ಜೆಫರಸನ್ ವಿಶ್ವವಿದ್ಯಾಲಯದಿಂದ 10 ವಿದ್ಯಾರ್ಥಿಗಳು ಇಲ್ಲಿ ಅಭ್ಯಸಿಸಲು ಬರುತ್ತಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ 150 ವಿದ್ಯಾರ್ಥಿಗಳೊಂದಿಗೆ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭವಾಗಲಿದೆ. ಅಸ್ಟರ್ ಗ್ರೂಪ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಬೆಂಗಳೂರು ಮತ್ತು ಪುಣೆಯಲ್ಲಿ ಆಸ್ಪತ್ರೆ ಪ್ರಾರಂಭಿಸಲಾಗುತ್ತಿದೆ. ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರೋಗ್ಯ ಸೇವೆ ಕಲ್ಪಿಸಲಿದೆ ಎಂದು ತಿಳಿಸಿದರು.

    ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಹಾಗೂ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಡಾ .ವಿ.ಎಸ್. ಸಾಧುನವರ, ಕಾರ್ಯದರ್ಶಿ ಡಾ. ಬಿ.ಜಿ. ದೇಸಾಯಿ, ಕುಲಸಚಿವ ಡಾ. ವಿ.ಎ. ಕೋಠಿವಾಲೆ, ಡಾ. ಸುನೀಲ ಜಲಾಲಪುರೆ, ಡಾ. ವಿ.ಡಿ. ಪಾಟೀಲ, ಡಾ. ಎಂ.ವಿ. ಜಾಲಿ, ಡಾ. ಎನ್.ಎಸ್. ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಡಾ.ಶ್ರೀನಿವಾಸಪ್ರಸಾದ, ಡಾ. ಆರ್.ಎಸ್. ಮುಧೋಳ, ಸುಧಾ ರೆಡ್ಡಿ, ಎಂ.ಎಸ್. ಗಣಾಚಾರಿ ಇದ್ದರು.

    1,398 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 1, 398 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, ಒಟ್ಟು 44 ವಿದ್ಯಾರ್ಥಿಗಳು ಸುವರ್ಣ ಪದಕ ಗಳಿಸಿದ್ದಾರೆ. 12 ವಿದ್ಯಾರ್ಥಿಗಳು ಪಿಎಚ್.ಡಿ., 9 ಪೋಸ್ಟ್ ಡಾಕ್ಟರಲ್, 400 ಸ್ನಾತಕೋತ್ತರ, 886 ಪದವಿ, 51 ಪೋಸ್ಟ್ ಗ್ರ್ಯಾಜ್ಯುಯೇಟ್ ಡಿಪ್ಲೊಮಾ, 10 ಫೆಲೋಶಿಪ್ ಹಾಗೂ 16 ಡಿಪ್ಲೊಮಾ ಪದವಿ ಗಳಿಸಿದ್ದಾರೆ.

    ಎಂಬಿಬಿಎಸ್‌ನಲ್ಲಿ ಡಾ.ಸಂದೇಶ ಜೋಶಿ ಮೂರು ಚಿನ್ನದ ಪದಕ ಗಳಿಸಿದರೆ, ಡಾ.ಶಿವಾನಿ ಮರೆಗುದ್ದಿ, ಡಾ. ವಿಶಾಲ ಶಶಿಕಾಂತ ಕುಲಗೋಡ ತಲಾ ಒಂದು ಪದಕ ಗಳಿಸಿದ್ದಾರೆ. ಬಿಡಿಎಸ್‌ನಲ್ಲಿ ಡಾ. ನಿಹಾರಿಕಾ ಸಬರವಾಲ, ಡಾ.ರೋಶನ್ ರಂಗ್ನೇಕರ, ಬಿ-ಫಾರ್ಮಾದಲ್ಲಿ ರೇವತಿ ಭಾಪ್ಕರ, ಬಿಎಸ್ಸಿ ನರ್ಸಿಂಗ್‌ನಲ್ಲಿ ಸಾವಿತ್ರಿ ಪಾಟೀಲ, ಫರ್ನಾಂಡಿಸ್ ಕ್ವಿನ್ಸಿ, ಫಿಸಿಯೋಥೆರಪಿಯಲ್ಲಿ ಮಾನಸಿ ಕಾರ್ಣಿಕ್ ಹಾಗೂ ಆಯುರ್ವೇದದಲ್ಲಿ ಡಾ. ಮಾಧುರಿ ರೊಡ್ಡ ಅವರು ತಲಾ 4 ಹಾಗೂ ಡಾ. ಭೀಮರೆಡ್ಡಿ ಮ್ಯಾಕಲ 3 ಚಿನ್ನದ ಪದಕ ಗಳಿಸಿದ್ದಾರೆ.

    ಕೋವಿಡ್-19 ಎದುರಿಸುವುದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸವಾಲಾಗಿ ಪರಿಣಮಿಸಿದೆ. ಇಂಥ ಕ್ಲಿಷ್ಟಕರವಾದ ಸಂದರ್ಭದಲ್ಲಿ ವೈದ್ಯ ವೃಂದ ಮತ್ತು ಆರೋಗ್ಯ ಸಿಬ್ಬಂದಿ ಸರ್ಕಾರದೊಂದಿಗೆ ಕೈಜೋಡಿಸಬೇಕು.
    | ಡಾ. ಕೆ.ಸುಧಾಕರ ವೈದ್ಯಕೀಯ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts