More

    ಸುಸ್ಥಿರ ಗ್ರಾಮಾಭಿವೃದ್ಧಿ ಕನಸು

    ಅನ್ಸಾರ್ ಇನೋಳಿ ಉಳ್ಳಾಲ
    ಪ್ರತಿ ಮನೆಯ ಆವರಣವೂ ಹಸಿರು, ಸ್ವಚ್ಛ, ಸುಂದರ, ಇಂಗುಗುಂಡಿ, ದ್ರವತ್ಯಾಜ್ಯ ಗುಂಡಿ, ಹಸಿ-ಒಣಕಸ ವಿಂಗಡಣೆ, ಪರಿಸರಸ್ನೇಹಿ, ಸ್ವ ಉದ್ಯೋಗ. ಇದು ಸುಸ್ಥಿರ ಗ್ರಾಮದ ಸಂಕೇತ. ಬಾಳೆಪುಣಿ ಗ್ರಾಮಸ್ಥರು ಇದಕ್ಕೆ ಪೂರಕ ಹೆಜ್ಜೆ ಇಡುತ್ತಿದ್ದಾರೆ.
    ಬಾಳೆಪುಣಿ ಗ್ರಾಮ ಒಂದು ಕಾಲದಲ್ಲಿ ಅತ್ಯಂತ ಕುಗ್ರಾಮ ಎನಿಸಿತ್ತು. ಆದರೆ ಇಂದು ಜಿಲ್ಲಾಮಟ್ಟದ ಅಧಿಕಾರಿ ವರ್ಗ, ಸಚಿವರು, ಶಾಸಕರು, ಮುಖಂಡರನ್ನು ಸೆಳೆಯುವಲ್ಲಿ ಸಫಲವಾಗಿದೆ. ಇದಕ್ಕೆ ಮುಖ್ಯ ಕಾರಣಕರ್ತರು ಗ್ರಾಮಸ್ಥರು.

    ಈ ಗ್ರಾಮದಲ್ಲೇ ಜನಶಿಕ್ಷಣ ಟ್ರಸ್ಟ್ ಕೂಡ ಇದ್ದು, ಇಲ್ಲಿಂದ ತರಬೇತಿ ಪಡೆದ ಗ್ರಾಮಸ್ಥರು ಟ್ರಸ್ಟ್ ಆಶಯದಂತೆ ಮುನ್ನಡೆಯುತ್ತಿದ್ದಾರೆ. ಅದರಲ್ಲೂ ಸುಸ್ಥಿರ ಗ್ರಾಮ ಕನಸಿನಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದು, ಗ್ರಾಮ ಪಂಚಾಯಿತಿಯ ಆಡಳಿತ, ಅಭಿವೃದ್ಧಿ ವರ್ಗವೂ ಸಹಕಾರ ನೀಡಿದೆ.

    ಇಂಗುಗುಂಡಿ, ಸೋಲಾರ್, ಸ್ವಚ್ಛ ಮನೆಗಳು: ಬಾಳೆಪುಣಿ ಗ್ರಾಮದಲ್ಲಿ ಸಾಕಷ್ಟು ಮನೆಗಳು ಸ್ವಚ್ಛ, ಸೋಲಾರ್ ಮನೆಗಳಾಗಿವೆ. ಮೂರು ಸೆಂಟ್ಸ್ ಜಾಗದಲ್ಲಿ ಮನೆ ಹೊಂದಿದವರೂ ಮನೆಯಂಗಳದಲ್ಲಿ ಬಚ್ಚಲು ಮನೆಯ ನೀರಿಂಗಿಸಲು ಸಿಮೆಂಟಿನ ರಿಂಗ್, ಕೆಂಪು ಕಲ್ಲು ಬಳಸಿ ಇಂಗುಗುಂಡಿ ನಿರ್ಮಿಸಿದ್ದಾರೆ. ಗ್ರಾಮಸ್ಥರ ಕನಸಿಗೆ ಉದ್ಯೋಗ ಖಾತ್ರಿ ಯೋಜನೆ ಬಲ ತುಂಬಿದ್ದು, ಪಂಚಾಯಿತಿ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ.
    ‘ನಮ್ಮ ತ್ಯಾಜ್ಯ ನಮ್ಮ ಹೊಣೆ’ ಧ್ಯೇಯವಾಕ್ಯದಂತೆ ಮನೆಗಳಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಮನೆಯಂಗಳದಲ್ಲೇ ಸಾವಯವ ಗೊಬ್ಬರವಾಗಿಸುವ ವ್ಯವಸ್ಥೆ, ದ್ರವತ್ಯಾಜ್ಯ ನಿರ್ವಹಣೆ, ಹಸಿರು ಮನೆಯಂಗಳ ಸಾಕಷ್ಟು ಮನೆಗಳಲ್ಲಿ ಕಾಣಲು ಸಿಗುತ್ತದೆ. ಮನೆಯಂಗಳದಲ್ಲೇ ವಿವಿಧ ಸಭೆಗಳೂ ನಡೆಯುತ್ತವೆ. ಈ ವಿಷಯದಲ್ಲಿ ಇಸ್ಮಾಯಿಲ್ ಎಂಬುವರು ಒಂದು ಹೆಜ್ಜೆ ಮುಂದಿದ್ದು ಇವರ ಮನೆಯಂಗಳದಲ್ಲಿ ಗುಜರಿ ವಸ್ತುಗಳೇ ಶೃಂಗಾರವಾಗಿವೆ. ಇಂಗುಗುಂಡಿ, ಸ್ವಚ್ಛ, ಸೋಲಾರ್, ಹಸಿರು ಮನೆ, ಒಣ ಕಸ ನಿರ್ವಹಣೆ ವ್ಯವಸ್ಥೆ ಮಾತ್ರವಲ್ಲದೆ ತೆರೆದ ಬಾವಿ ನಿರ್ಮಾಣವೂ ಆಗಿದೆ. ಗುಜರಿ ವ್ಯಾಪಾರಿಯಾಗಿರುವ ಇವರು ಇಲ್ಲಿಗೆ ಬರುವ ಪುಸ್ತಗಳು, ಇತರ ವಸ್ತುಗಳನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರಿಗೆ ಸ್ವಚ್ಛತೆ, ಸುಸ್ಥಿರ ಗ್ರಾಮ ನಿರ್ಮಾಣದ ಪಾಠ ಮಾಡುತ್ತಾರೆ. ಬಡವರ ಮನೆಗೆ ಸೋಲಾರ್ ದೀಪದ ವ್ಯವಸ್ಥೆಗೆ ದಾನಿಗಳು, ಪಂಚಾಯಿತಿ ಪ್ರತಿನಿಧಿಗಳು ಹಣಕಾಸಿನ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.

    ಒಣ ಕಸ ಘಟಕ, ಮಾದರಿ ಅಂಗನವಾಡಿಗಳು!: ಬಾಳೆಪುಣಿ ಪಂಚಾಯಿತಿ ಆವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 250 ಇಂಗುಗುಂಡಿ ನಿರ್ಮಿಸಲಾಗಿದೆ. ಇಲ್ಲಿನ ಐವರು ಮಹಿಳೆಯರು ವಂಡ್ಸೆಯಲ್ಲಿ ಘನತ್ಯಾಜ್ಯ ನಿರ್ವಹಣೆ ತರಬೇತಿ ಪಡೆದ ಬಳಿಕ ಪಂಚಾಯಿತಿ ಆವರಣದಲ್ಲೇ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲಾಗಿದ್ದು, ಇದನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಇಲ್ಲಿರುವ ಹಸಿರು, ಡಿಜಿಟಲ್ ಅಂಗನವಾಡಿಗಳು ಗ್ರಾಮಕ್ಕೆ ಮುಕುಟವಿದ್ದಂತೆ. ಹೆಚ್ಚಿನ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದು ವಿದ್ಯುತ್ ಬದಲು ಪರಿಸರ ಸ್ನೇಹಿ ಸೋಲಾರ್ ಬಳಸುತ್ತಿದ್ದಾರೆ. ಮೂವರು ಹೊಲಿಗೆ ಯಂತ್ರ, ತಲಾ ಇಬ್ಬರು ಹಾಲು ಕರೆಯುವ ಹಾಗೂ ಜೆರಾಕ್ಸೃ್ ಯಂತ್ರ, ಒಂದು ಕಬ್ಬಿನ ಹಾಲು ತೆಗೆಯುವ ಯಂತ್ರ ಮತ್ತು ಕಮ್ಮಾರರೊಬ್ಬರು ಗಾಳಿಗೆ ಸೋಲಾರ್ ಯಂತ್ರ ಬಳಸುತ್ತಿದ್ದಾರೆ. ಇವೆಲ್ಲ ಬೆಳವಣಿಗೆಯಿಂದ ಕೆಲವೇ ಸಮಯದಲ್ಲಿ ಬಾಳೆಪುಣಿ ಸಂಪೂರ್ಣ ಸುಸ್ಥಿರ, ಸೋಲಾರ್, ಸ್ವಚ್ಛ, ಹಸಿರು ಗ್ರಾಮವಾಗುವತ್ತ ಹೆಜ್ಜೆ ಇಟ್ಟಿದೆ.

    ಬಾಳೆಪುಣಿ ಮತ್ತು ಕೈರಂಗಳ ಒಂದೇ ಪಂಚಾಯಿತಿಯಾಗಿದ್ದು, ಈ ಎರಡೂ ಗ್ರಾಮಗಳನ್ನು ಮಾದರಿಯಾಗಿಸುವ ಪಣ ತೊಟ್ಟಿದ್ದೇವೆ. ಇದಕ್ಕಾಗಿ ಯಾವುದಾದರೂ ಮೂಲದಿಂದ ಅನುದಾನ ತರುತ್ತೇವೆ. ಗ್ರಾಮದ ಎಲ್ಲರೂ ಸಹಕಾರ ನೀಡಿದರೆ ಕೆಲವೇ ತಿಂಗಳಲ್ಲಿ ನಮ್ಮ ಕನಸು ಈಡೇರಬಹುದು.
    ಹೈದರ್ ಕೈರಂಗಳ ತಾಲೂಕು ಪಂಚಾಯಿತಿ ಸದಸ್ಯ

    ಬಾಳೆಪುಣಿ ಗ್ರಾಮವನ್ನು ರಾಜ್ಯದಲ್ಲೇ ಮಾದರಿಯಾಗಿಸಬೇಕು ಎಂಬ ನೆಲೆಯಲ್ಲಿ, ಜನಶಿಕ್ಷಣ ಟ್ರಸ್ಟ್ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿದ್ದೇವೆ. ಇದಕ್ಕೆ ಪಂಚಾಯಿತಿ, ಅಧಿಕಾರಿ ವರ್ಗದಿಂದಲೂ ಉತ್ತಮ ಸಹಕಾರ ಸಿಗುತ್ತಿದೆ.
    ಇಸ್ಮಾಯಿಲ್ ಬಾಳೆಪುಣಿ ಸುಸ್ಥಿರ ಗ್ರಾಮಾಭಿವೃದ್ಧಿ ಪ್ರೇರಕ

    ಪ್ರಧಾನಿಯವರ ಆತ್ಮ ನಿರ್ಭರ್ ಭಾರತ್ ಯೋಜನೆಯಂತೆ ಬಾಳೆಪುಣಿಯಲ್ಲಿ ಸ್ವಚ್ಛ, ಸೋಲಾರ್, ಹಸಿರಿನ ಸುಸ್ಥಿರ ಗ್ರಾಮ ಪರಿಕಲ್ಪನೆಯಂತೆ ಕೆಲಸ ನಡೆಯುತ್ತಿದೆ. ಇದರಲ್ಲಿ ಗ್ರಾಮಸ್ಥರೂ ಪೂರಕವಾಗಿ ಸ್ಪಂದಿಸುತ್ತಿದ್ದು ಕೆಲವೇ ತಿಂಗಳಲ್ಲಿ ಗ್ರಾಮದಲ್ಲಿ ದೊಡ್ಡ ಮಟ್ಟದ ಕ್ರಾಂತಿಗೆ ಕಾರಣವಾಗಲಿದೆ.
    ಶೀನ ಶೆಟ್ಟಿ ಮಾಜಿ ಒಂಬುಡ್ಸ್ಮನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts