More

    ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ; ಐಎನ್‌ಟಿಯುಸಿ ಪ್ರತಿಭಟನೆ

    ಶಿವಮೊಗ್ಗ: ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರುತ್ತಿರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಐಎನ್‌ಟಿಯುಸಿ(ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್) ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ಬುಧವಾರ ಶಿವಮೊಗ್ಗ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಚಾಲನಾ ಪರವಾನಗಿ, ಆರ್‌ಸಿ, ಸ್ಮಾಟ್‌ಕಾರ್ಡ್, ಅಂಚೆ ಮುಖಾಂತರ ರವಾನೆ ಮಾಡಬೇಕೆಂದು ಆದೇಶವಿದ್ದರೂ ಕೆಲವು ಅಧಿಕಾರಿಗಳು ಇದನ್ನು ಪಾಲನೆ ಮಾಡುತ್ತಿಲ್ಲ. ಕಚೇರಿಯಲ್ಲಿ ಸಕಾಲ ಯೋಜನೆಯೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.
    ಡಿಸಿ ಕಚೇರಿ ಅಣತಿ ದೂರದ ಆರ್‌ಟಿಒ ಕಚೇರಿ ಆವರಣ ಪ್ರವೇಶಿಸುತ್ತಿದ್ದಂತೆ ಮಧ್ಯವರ್ತಿಗಳು ನೊಣಗಳಂತೆ ಮುತ್ತಿಕೊಳ್ಳುತ್ತಾರೆ. ಕಚೇರಿಯೊಳಗೆ ಪ್ರವೇಶಿಸಲೂ ಬಿಡದೇ ವಿದ್ಯಾರ್ಥಿಗಳು, ಅಮಾಯಕರು ಹಾಗೂ ಗ್ರಾಮೀಣ ಭಾಗದಿಂದ ಬರುವ ಜನರಿಗೆ ಸುಳ್ಳು ಹೇಳಿ ಅವರ ಹಾದಿ ತಪ್ಪಿಸುತ್ತಾರೆ. ಒಳಗೆ ತೆರಳಿದರೆ ಕಚೇರಿಯಿಂದ ಕಚೇರಿಗೆ ಸುತ್ತಬೇಕು. ನಾವೇ ಎಲ್ಲ ಮಾಡಿಕೊಡುತ್ತೇವೆಂದು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
    ಕೆಲ ಮಧ್ಯವರ್ತಿಗಳು, ತಾವೇ ಆರ್‌ಟಿಒ ಕಚೇರಿ ಸಿಬ್ಬಂದಿ ಎಂದು ಸುಳ್ಳು ಹೇಳುತ್ತಿದ್ದಾರೆ. ಜನರು ಏಕಾಂಗಿಯಾಗಿ ಆರ್‌ಟಿಒ ಕಚೇರಿಗೆ ತೆರಳಿ ಸೇವೆ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಸಾರ್ವಜನಿಕರೇ ನೇರವಾಗಿ ಹೋದರೆ ಡಿಎಲ್, ಆರ್‌ಸಿ ಕಾರ್ಡ್ ಹಾಗೂ ಇನ್ನಿತರೆ ಸೌಲಭ್ಯ ಕೈಗೆಟುಕುವುದು ಮೂರ್ನಾಲ್ಕು ತಿಂಗಳು ಆಗುತ್ತಿದೆ. ಆದರೆ ಮಧ್ಯವರ್ತಿಗಳಿಗೆ ಒಂದು ತಿಂಗಳವೊಳಗೆ ಆರ್‌ಸಿ, ಡಿಎಲ್ ಕಾರ್ಡ್ ಕೈ ಸೇರುತ್ತಿದೆ. ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅಕ್ರಮ ಎಲ್ಲ ಹಂತದ ಸಿಬ್ಬಂದಿಗೆ ಗೊತ್ತಿದೆ. ಆದರೆ, ಪುಡಿಗಾಸಿನ ಆಸೆಗೆ ಬಿದ್ದಿರುವ ಸಿಬ್ಬಂದಿ ಪರೋಕ್ಷವಾಗಿ ಮಧ್ಯವರ್ತಿಗಳ ಹಾವಳಿಗೆ ಕುಮ್ಮಕ್ಕು ನೀಡಿದ್ದಾರೆ. ಅವರ ನೇತೃತ್ವದಲ್ಲೇ ಅಕ್ರಮ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಚೇರಿ ಆವರಣದಲ್ಲಿ ಜನರಿಗಿಂತಲೂ ಏಜೆಂಟರೇ ಇರುತ್ತಾರೆ ಎಂದು ಕಿಡಿಕಾಡಿದರು.
    ಕಳೆದ ವರ್ಷ ಮೋಟರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಆರ್‌ಟಿಒ ಕಚೇರಿಯ 25ಕ್ಕೂ ಅಧಿಕ ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಯಿತು. ಅದಕ್ಕಾಗಿ ಸಾರಥಿ ವೆಬ್‌ತಾಣ ರೂಪಿಸಲಾಯಿತು. ಪ್ರತಿ ಸೇವೆಗೂ ಸಕಾಲ ನಿಗದಿ ಮಾಡಲಾಗಿದ್ದರೂ ಆರ್‌ಟಿಒ ಕಚೇರಿ ಆವರಣದಲ್ಲಿರುವ ಮಧ್ಯವರ್ತಿಗಳನ್ನು ನೇರವಾಗಿ ಸೇವೆ ಪಡೆಯಲು ಬಿಡುತ್ತಿಲ್ಲ. ಈ ಹಿಂದೆ ಕಾಲೇಜುಗಳಿಗೆ ತೆರಳಿ ಕ್ಯಾಂಪ್ ನಡೆಸಿ ವಿದ್ಯಾರ್ಥಿಗಳಿಗೆ ಪರವಾಗಿ ನೀಡಲಾಗುತ್ತಿತ್ತು. ಈಗ ಅದನ್ನು ಸ್ಥಗಿಸಗೊಳ್ಳಲಾಗಿದೆ. ಈ ಸೇವೆಯನ್ನು ಪುನಾರಂಭಿಸಬೇಕು. ಆರ್‌ಟಿಒ ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಆರ್‌ಟಿಒ ಗಂಗಾಧರ್ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆ ಮುಖಂಡರಾದ ವಿ.ವಿನಯ್, ಹೇಮಂತ್‌ಕುಮಾರ್, ಜಿ.ಮಧುಕುಮಾರ್, ಗಿರೀಶ್ ಸ್ವರೂಪ್, ಸಂದೀಪ್, ವಿಜಯ್, ನಿಹಾಲ್, ಸಂದೇಶ್, ಲೋಹಿತ್, ರಂಗನಾಥ, ಕಿರಣ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts