More

    ಈ ವರ್ಷ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು ರೂ 49 ಲಕ್ಷ ಕೋಟಿ: ಜನ ಮುಗಿಬಿದ್ದು ಹಣ ತೊಡಗಿಸುತ್ತಿರುವುದೇಕೆ?

    ಮುಂಬೈ: ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ನಿರ್ವಹಣೆಯಲ್ಲಿರುವ ಆಸ್ತಿಗಳು ನವೆಂಬರ್‌ನಲ್ಲಿ 49 ಲಕ್ಷ ಕೋಟಿ ರೂಪಾಯಿಯ ಹೊಸ ಗರಿಷ್ಠ ಮಟ್ಟಕ್ಕೆ ಏರಿದೆ. ಅಂದರೆ, ದೇಶದ ಎಲ್ಲ ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡಿದ ಮೊತ್ತ ಇದಾಗಿದೆ. ಮ್ಯೂಚುವಲ್ ಫಂಡ್​ಗಳಲ್ಲಿ ಸಾರ್ವಜನಿಕರು ಹೂಡಿಕೆಯ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಇದಕ್ಕೆ ಪ್ರಮುಖ ಕಾರಣ, ಬಹುತೇಕ ಫಂಡ್​ಗಳು ಹೂಡಿಕೆದಾರರಿಗೆ ಸಾಕಷ್ಟು ಲಾಭ ತಂದುಕೊಟ್ಟಿರುವುದು.

    ಭಾರತೀಯ ಷೇರುಗಳು 2023 ರಲ್ಲಿ ಪ್ರಕ್ಷುಬ್ಧ ಸವಾರಿಯನ್ನು ಅನುಭವಿಸಿದವು, ಅಂದರೆ, ಏರಿಳಿತವನ್ನು ಕಂಡವು. ವರ್ಷದ ದ್ವಿತೀಯಾರ್ಧದಲ್ಲಿ ಷೇರು ಮಾರುಕಟ್ಟೆಯು ಉತ್ತುಂಗ ತಲುಪಿತು. ಆದರೆ, ಈ ವರ್ಷದಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುವುದನ್ನು ಮುಂದುವರಿಸಿದವು. ಅಂದರೆ, ವರ್ಷಪೂತಿ ಸ್ಥಿರತೆಯನ್ನು ಪ್ರದರ್ಶಿಸಿ ಉತ್ತಮ ಆದಾಯ ತಂದುಕೊಟ್ಟವು.

    ಸ್ಥಿರವಾದ ಬೆಳವಣಿಗೆ ಮತ್ತು ವ್ಯವಸ್ಥಿತ ಹೂಡಿಕೆ ಯೋಜನೆಗಳ ಕಾರಣದಿಂದಾಗಿ ಹೂಡಿಕೆದಾರರ ವಿಶ್ವಾಸ ಹೆಚ್ಚಿತು. ಇದರಿಂದಾಗಿ ಹೆಚ್ಚಿನ ಹೂಡಿಕೆ ಕಂಡುಬಂದಿದೆ.

    ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣೆಯಲ್ಲಿರುವ ಆಸ್ತಿಗಳು ನವೆಂಬರ್‌ನಲ್ಲಿ 49 ಲಕ್ಷ ಕೋಟಿ ರೂಪಾಯಿಯ ಹೊಸ ಗರಿಷ್ಠ ಮಟ್ಟಕ್ಕೆ ಏರಿತು. ಅಂದರೆ, ಈ ಫಂಡ್​ಗಳಲ್ಲಿನ ಒಟ್ಟಾರೆ ಹೂಡಿಕೆಯ ಮೊತ್ತ. ಕಳೆದ ನವೆಂಬರ್‌ನಲ್ಲಿ ಈಕ್ವಿಟಿ ಫಂಡ್​ಗಳಲ್ಲಿ ಹೂಡಿಕೆಯು ಹಿಂದಿನ ವರ್ಷಕ್ಕಿಂತ 32.3% ಹೆಚ್ಚಾಗಿದೆ.

    ಕಳೆದ ಜನವರಿಯಿಂದ ಇದುವರೆಗೆ ಈಕ್ವಿಟಿ ಫಂಡ್​ ಯೋಜನೆಗಳು 1.4 ಲಕ್ಷ ಕೋಟಿ ರೂಪಾಯಿ ನಿವ್ವಳ ಹೂಡಿಕೆ ಬಂದಿದೆ. ಆದರೆ, ಕಳೆದ ವರ್ಷದ ಇದೇ ಅವಧಿಗಿಂತ ಈ ಹೂಡಿಕೆ ಸ್ವಲ್ಪ ಕಡಿಮೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಿತ್ತು.

    ಸುಲಭ ರೀತಿಯ ಹೂಡಿಕೆ ಮತ್ತು ಕಡಿಮೆ ವೆಚ್ಚದ ಕಾರಣಕ್ಕಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

    ಎಸ್​ಐಪಿ ಶಕ್ತಿ:

    ಇನ್ನು SIP (ಸಿಸ್ಟಮೆಟಿಕ್​ ಇನ್ವೆಸ್ಟ್​ಮೆಂಟ್​ ಪ್ಲ್ಯಾನ್​. ವ್ಯವಸ್ಥಿತ ಹೂಡಿಕೆ ಯೋಜನೆ. ಅಂದರೆ, ಪ್ರತಿ ತಿಂಗಳು ಅಥವಾ ತ್ರೈಮಾಸಿಕ ಇಲ್ಲವೇ ವಾರ್ಷಿಕವಾಗಿ ನಿಗದಿತ ಹಣವನ್ನು ಹೂಡಿಕೆ ಮಾಡುವುದು) ಮೂಲಕ ಹೂಡಿಕೆ ಪ್ರಮಾಣವು ಹೆಚ್ಚುತ್ತಿದೆ.

    ಸಿಪ್​ನಲ್ಲಿ ಹೂಡಿಕೆಗಳು ಹಿಂದಿನ ಐದು ತಿಂಗಳುಗಳಲ್ಲಿ ಸ್ಥಿರವಾಗಿ ಬೆಳೆದಿದ್ದು, ನವೆಂಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 17,073 ಕೋಟಿ ರೂಪಾಯಿ ತಲುಪಿದೆ. 2023ರಲ್ಲಿ ಇಲ್ಲಿಯವರೆಗೆ ಸಿಪ್​ಗಳ ಮೂಲಕ 1.7 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ.

    ನವೆಂಬರ್‌ನಲ್ಲಿ ಸಿಪ್​ ಮೂಲಕ ವರ್ಷದಿಂದ ವರ್ಷಕ್ಕೆ 36.2% ಬೆಳವಣಿಗೆಯನ್ನು ದಾಖಲಿಸಲಾಗಿದೆ, ಇದುವರೆಗೆ ವರ್ಷದಲ್ಲಿ 3.11 ಕೋಟಿ ಹೊಸ ಸಿಪ್​ ಖಾತೆಗಳನ್ನು ನೋಂದಾಯಿಸಲಾಗಿದೆ. ತಿಂಗಳಿಗೆ ಸರಾಸರಿಯಾಗಿ 30 ಲಕ್ಷ ಹೊಸ ಸಿಪ್​ ಖಾತೆಗಳನ್ನು ನೋಂದಾಯಿಸಲಾಗಿದೆ. 2022 ರಲ್ಲಿ ಇದು ತಿಂಗಳಿಗೆ ಸರಾಸರಿ 22 ಲಕ್ಷ ಇತ್ತು.

    “ವರ್ಷಗಳಲ್ಲಿ ಹೂಡಿಕೆದಾರರು ವಿವಿಧ ಮಾರುಕಟ್ಟೆ ಚಕ್ರಗಳನ್ನು ನೋಡಿದ್ದಾರೆ. ಪ್ರಾಯಶಃ ಹೂಡಿಕೆಯಲ್ಲಿ ಮುಂದುವರಿಯು ಪ್ರಾಮುಖ್ಯತೆ ಗುರುತಿಸಿದ್ದಾರೆ. ಬಹುತೇಕವಾಗಿ ಹೂಡಿಕೆ ಮಾಡಲು ವ್ಯವಸ್ಥಿತ ವಿಧಾನವನ್ನು ಬಳಸುತ್ತಾರೆ” ಎಂದು ಪರಿಣತರು ಹೇಳುತ್ತಾರೆ.

    ಚಿಲ್ಲರೆ ಹೂಡಿಕೆದಾರರ ಹೆಚ್ಚುತ್ತಿರುವ ಭಾಗವಹಿಸುವಿಕೆಯು ಮ್ಯೂಚುವಲ್ ಫಂಡ್ ಉದ್ಯಮವನ್ನು ಉತ್ತೇಜಿಸುವಲ್ಲಿ ಪ್ರಮುಖವಾಗಿದೆ.

    ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ (Amfi- ಅಂಫಿ) ತ್ರೈಮಾಸಿಕ ವಿವರಗಳ ಪ್ರಕಾರ, ಚಿಲ್ಲರೆ ಹೂಡಿಕೆದಾರರು ಮ್ಯೂಚುಯಲ್ ಫಂಡ್​ ಸ್ವತ್ತುಗಳಲ್ಲಿ 25% ಕ್ಕಿಂತ ಸ್ವಲ್ಪ ಹೆಚ್ಚು ಪಾಲನ್ನು ಹೊಂದಿದ್ದಾರೆ. ಶ್ರೀಮಂತ ವ್ಯಕ್ತಿಗಳು ಅಂದಾಜು 61% ಪಾಲನ್ನು ಹೊಂದಿದ್ದಾರೆ.

    ನವೆಂಬರ್ 2022 ಮತ್ತು ನವೆಂಬರ್ 2023 ರ ನಡುವೆ, ಶ್ರೀಮಂತ ಹೂಡಿಕೆದಾರರು ಮತ್ತು ವೈಯಕ್ತಿಕ ಹೂಡಿಕೆದಾರರು ಹೊಂದಿರುವ ಆಸ್ತಿಗಳ ಮೌಲ್ಯವು ಮ್ಯೂಚುವಲ್ ಫಂಡ್‌ಗಳಲ್ಲಿ ಅಂದಾಜು 24% ಹೆಚ್ಚಾಗಿದೆ. ಈ ಹೂಡಿಕೆಗಳು 55% ವಿತರಕರು ತಂದ ಅಗ್ರ 30 ನಗರಗಳಿಂದ ಬಂದಿದೆ ಎಂದು ಅಂಫಿ ಹೇಳಿದೆ. ನೇರ ಹೂಡಿಕೆಗಳ (ಸ್ವತಂತ್ರವಾಗಿ ಖರೀದಿಸಿದವು ಮತ್ತು ವಿತರಕರ ಮೂಲಕ ಅಲ್ಲ) ಪಾಲು ಶೇಕಡಾ 24% ರಷ್ಟಿದೆ. ಈಕ್ವಿಟಿ-ಆಧಾರಿತ ಫಂಡ್​ ಯೋಜನೆಗಳಲ್ಲಿ ಶೇಕಡಾ 89% ರಷ್ಟು ಹೂಡಿಕೆ ಮಾಡಲಾಗಿದೆ.

    ಚಿಕ್ಕದು ಆಯಿತು ದೊಡ್ಡದು:

    ಈ ವರ್ಷ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಮತ್ತೊಂದು ಉದಯೋನ್ಮುಖ ಪ್ರವೃತ್ತಿಯೆಂದರೆ ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಫಂಡ್‌ಗಳಂತಹ ವರ್ಗಗಳಲ್ಲಿ ಹೆಚ್ಚಿನ ಹೂಡಿಕೆ ಆಗಿರುವುದು.

    ಕಳೆದ ಒಂದು ವರ್ಷದಲ್ಲಿ ಈಕ್ವಿಟಿ-ಆಧಾರಿತ ಯೋಜನೆಗಳ ಹೂಡಿಕೆ ಪೈಕಿ ಸ್ಮಾಲ್-ಕ್ಯಾಪ್ ಫಂಡ್‌ಗಳಲ್ಲಿ ಶೇಕಡಾ 25ರಷ್ಟು ಹೂಡಿಕೆ ಮಾಡಲಾಗಿದೆ. ನಂತರ ಮಿಡ್‌ಕ್ಯಾಪ್​ ಫಂಡ್​ಗಳಲ್ಲಿ 16% ಹಾಗೂ “ಲಾರ್ಜ್- ಮಿಡ್-ಕ್ಯಾಪ್” ಫಂಡ್‌ಗಳಲ್ಲಿ 12% ರಷ್ಟು ಹೂಡಿಕೆ ಮಾಡಲಾಗಿದೆ.

    ಇದಲ್ಲದೆ, ಒಂದು-ವರ್ಷ, ಮೂರು-ವರ್ಷ, ಐದು-ವರ್ಷ ಮತ್ತು 10-ವರ್ಷದ ಅವಧಿಗಳಲ್ಲಿ ಲಾರ್ಜ್​-ಕ್ಯಾಪ್ ಫಂಡ್‌ಗಳಿಗಿಂತ ಹೆಚ್ಚಿನ ಆದಾಯವನ್ನು ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಫಂಡ್‌ಗಳು ಗಳಿಸಿವೆ.

    ಮುಂದಿನ ವರ್ಷ ದೇಶಾದ್ಯಂತ 24x 27 ವಿದ್ಯುತ್​ ಪೂರೈಕೆ; ಈಗ ದಿನಕ್ಕೆ ಎಷ್ಟು ಸಮಯ ಸರಬರಾಜು ಇದೆ?

    ಹೊಸ ವರ್ಷದಲ್ಲಿ ಷೇರು ಮಾರುಕಟ್ಟೆ ಏನಾಗಲಿದೆ? 10 ಷೇರುಗಳ ಖರೀದಿಗೆ ಶಿಫಾರಸು ಮಾಡಿದ ಮೋತಿಲಾಲ್​ ಓಸ್ವಾಲ್​

    ಮಧ್ಯಪ್ರದೇಶದಲ್ಲಿ 28 ಸಚಿವರ ಪ್ರಮಾಣವಚನ: ಒಬಿಸಿ ವರ್ಗಕ್ಕೆ ಆದ್ಯತೆ, ಐವರು ಮಾತ್ರ ಮಹಿಳೆಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts