More

    ಉದಾಸೀನದಿಂದ ಮತದಾನ ಕಡಿಮೆ

    ಚಿಕ್ಕಮಗಳೂರು: ವಿದ್ಯಾವಂತರು, ಜಾಗೃತ ಸಮುದಾಯ ಹೆಚ್ಚಿರುವ ಕಡೆಗಳಲ್ಲಿ ಉದಾಸೀನ ಮನಸ್ಥಿತಿಯಿಂದ ಮತದಾನ ಕಡಿಮೆಯಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೇಸರ ವ್ಯಕ್ತಪಡಿಸಿದರು.

    ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಹಳ್ಳಿಗಳಲ್ಲಿ ಸಂಘಟಿತ ಸಮುದಾಯದಿಂದ ರಾಜಕೀಯ ಜಾಗೃತಿ ಹೆಚ್ಚಿರುತ್ತದೆ. ನಮ್ಮವರು, ತಮ್ಮವರು ಎಂಬ ಭಾವನೆ ಇರುತ್ತದೆ. ನಗರ ಪ್ರದೇಶಗಳಲ್ಲಿ ರಾಜಕೀಯ ಜಾಗೃತಿ ಬಹಳ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇರುತ್ತದೆ. ವ್ಯವಸ್ಥಿತ ವಲಯದಲ್ಲಿ ಉದಾಸೀನ ಮನಸ್ಥಿತಿಯಲ್ಲಿದ್ದು ಇವರ ಭಾವನೆಗಳನ್ನೆಲ್ಲ ವಾಟ್ಸ್​ಆಪ್, ಫೇಸ್​ಬುಕ್, ಇ-ಮೇಲ್ ಮೂಲಕ ತೋಡಿಕೊಳ್ಳುತ್ತಾರೆ. ಮತದಾನ ನಮ್ಮ ಕರ್ತವ್ಯ ಎಂಬ ಭಾವನೆ ವಿದ್ಯಾವಂತರಲ್ಲಿ ಹೆಚ್ಚಿರಬೇಕಿತ್ತು ಎಂದು ಹೇಳಿದರು.

    ಕಡಿಮೆ ಮತದಾನವಾದರೂ ಈಗಿನ ಲೆಕ್ಕಾಚಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಮಸ್ಯೆಯಾಗುವುದಿಲ್ಲ. ಹೆಚ್ಚು ಮತದಾನವಾಗಿದ್ದರೆ ಹೆಚ್ಚು ಅಂತರದಲ್ಲಿ ಗೆಲ್ಲುತ್ತಿದ್ದೆವು. ಈಗ ಲೀಡ್ ಪ್ರಮಾಣ ಕಡಿಮೆಯಾಗಬಹುದು ಎಂದರು.

    ನಗರ ಪ್ರದೇಶದಲ್ಲಿ ಬಹಳ ಬೇಗ ಮನೆಗಳನ್ನು ಬದಲಾಯಿಸುತ್ತಾರೆ. ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ಉಳಿದಿರುತ್ತದೆ. ಕೆಲವೊಂದು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುತ್ತದೆ, ಮತದಾರ ಇರುವುದಿಲ್ಲ. ಕರೊನಾ ಕಾರಣಕ್ಕೆ ವರ್ಕ್ ಫ್ರಂ ಹೋಮ್ ಎಂದು ಬಹಳಷ್ಟು ಮಂದಿ ಸ್ವಂತ ಊರುಗಳಿಗೆ ಬಂದಿದ್ದಾರೆ ಹಾಗಾಗಿ ಮತದಾನ ಕಡಿಮೆಯಾಗಿದೆ ಎಂದರು.

    ವಿದ್ಯಾವಂತರು, ಆರ್ಥಿಕ ಸ್ಥಿತಿವಂತರಾಗಿ ಕಂಫರ್ಟ್ ಜೋನ್​ನಲ್ಲಿರುವವರು ತೊಂದರೆ ತೆಗೆದುಕೊಂಡು ಮತದಾನ ಮಾಡಬೇಕೆಂಬ ಸ್ವಭಾವ ಹೊಂದಿರುವುದಿಲ್ಲ ಎಂದರು. ಬಿಹಾರದಲ್ಲಿ ಮೊದಲ ಹಾಗೂ ಎರಡನೇ ಹಂತದ ಚುನಾವಣೆ ಪೂರ್ಣಗೊಂಡಿದ್ದು ಬಿಜೆಪಿಗೆ ಉತ್ತಮ ಸ್ಥಿತಿಯಿದೆ ಎಂದು ಆಂತರಿಕ ವರದಿ ಹೇಳುತ್ತಿದೆ. ಮೂರನೇ ಹಂತದ ಮತದಾನದ ನಂತರ ನೋಡಬೇಕೆಂದರು.

    ಎರಡೂ ಕ್ಷೇತ್ರದಲ್ಲಿ ಗೆಲುವು ನಮ್ಮದೇ: ಚಿಕ್ಕಮಗಳೂರು: ಶಿರಾ ಮತ್ತು ಆರ್.ಆರ್.ನಗರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸುವುದು ಖಚಿತ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪಕ್ಷಕ್ಕೆ ಕಠಿಣ ಎನಿಸಿದ್ದ ಶಿರಾ ಕ್ಷೇತ್ರದಲ್ಲಿ ಮೂರ್ನಾಲ್ಕು ತಿಂಗಳ ಹಿಂದಿನಿಂದಲೇ ಪಕ್ಷದ ಮುಖಂಡರು ಬೂತ್ ಮಟ್ಟದ ಸಮಿತಿ ರಚಿಸಿ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಹೊಸಬರನ್ನು ಸೇರಿಸಿ ಸಂಘಟನೆ ಬಲಪಡಿಸಿದ್ದರು. ಪ್ರತಿ ವಾರ್ಡ್​ನಲ್ಲೂ ಇದರಿಂದ ಯುವಕರ ತಂಡ ನಿರ್ವಣಗೊಂಡು ನಮಗೆ ಹೆಚ್ಚು ಬಲ ತಂದುಕೊಟ್ಟಿತು ಎಂದು ಸುದ್ದಿಗಾರರಿಗೆ ತಿಳಿಸಿದರು.

    ಆರ್.ಆರ್.ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಕರೊನಾ, ಬೇರೆ ಬೇರೆ ಕಾರಣಕ್ಕೆ ಕಡಿಮೆಯಾಗಿದೆ. ಆದರೂ ಎರಡೂ ಕ್ಷೇತ್ರದಲ್ಲೂ ಗೆದ್ದು ನಮ್ಮ ಬಲಕ್ಕೆ ಮತ್ತೆರಡು ಸಂಖ್ಯೆಗಳು ಸೇರ್ಪಡೆಯಾಗಲಿವೆ. ಎರಡೂ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ಸಂದರ್ಭ ಜನರು ಬಿಜೆಪಿ ಪರ ಇದ್ದಾರೆ ಎನ್ನುವುದು ಖಾತ್ರಿಯಾಗಿದೆ ಎಂದು ಹೇಳಿದರು.

    ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಅವರ ಅತ್ತೆ ಮತ ಯಾಚಿಸಿದ್ದಾರೆ ಎನ್ನುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ ಎಂಬ ಮಾತುಗಳು ಕೇಳಿ ಬಂದಿವೆ. ಇದು ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮವೂ ಬೀರದು. ಬೇರೆ ಬೇರೆ ಚುನಾವಣೆಯಲ್ಲಿದ್ದಂತೆ ಈ ಬಾರಿ ಆರ್.ಆರ್.ನಗರದಲ್ಲಿ ಅನುಕಂಪದ ಅಲೆ ಕಾಣಲಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts