More

    ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಿ

    ಮೂಡಿಗೆರೆ: ಮೂಡಿಗೆರೆ ಪಟ್ಟಣದಿಂದ ಚಿಕ್ಕಮಗಳೂರು, ಬೇಲೂರು, ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದ ಕೆ.ಎಂ.ರಸ್ತೆಯಲ್ಲಿ ಬುಧವಾರ ರಸ್ತೆ ತಡೆ ನಡೆಸಿದರು.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸರ್ವೇ ನಡೆಸಿ ದೇಶಾದ್ಯಂತ 5,850 ಅಪಘಾತ ವಲಯಗಳನ್ನು ಗುರುತಿಸಲಾಗಿತ್ತು. ಸಮೀಕ್ಷೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ ಎಂಬ ವರದಿ ನೀಡಲಾಗಿದೆ. ಮೂಡಿಗೆರೆ ತಾಲೂಕು ಪ್ರವಾಸಿ ತಾಣಗಳ ಕೇಂದ್ರ. ವಾರಾಂತ್ಯದಲ್ಲಿ ಇಲ್ಲಿನ ಪ್ರಕೃತಿಯ ರಮಣೀಯ ತಾಣಗಳಿಗೆ ಬರುವ ಪ್ರವಾಸಿಗರ ವಾಹನಗಳ ದಟ್ಟಣಿ ಅಧಿಕ. ಇದರಿಂದ ಪದೇಪದೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇಲ್ಲಿನ ರಸ್ತೆಗಳು ಹಳೆಯ ಕಾಲದ, ಅವೈಜ್ಞಾನಿಕವಾಗಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷೃದಿಂದ ರಸ್ತೆಗಳು ಸುಸ್ಥಿತಿಗೆ ಬಂದಿಲ್ಲ. ಇನ್ನಾದರೂ ಎಚ್ಚೆತ್ತು ಕೂಡಲೇ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಗ್ರೀನ್‌ಆರ್ಮಿ ಇಂಡಿಯಾ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಆಗ್ರಹಿಸಿದರು.
    ಕರವೇ ಜಿಲ್ಲಾಧ್ಯಕ್ಷ ಪ್ರಸನ್ನ ದಾರದಹಳ್ಳಿ ಮಾತನಾಡಿ, ರಾಜಕಾರಣ ಹಣ ಮಾಡುವ ದಂಧೆಯಾಗಿದೆ. ಮೂಲ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್, ಚರಂಡಿ, ಸುಸಜ್ಜಿತ ಆಸ್ಪತ್ರೆಗಳನ್ನು ಒದಗಿಸುವುದು ಆಳುವ ಸರ್ಕಾರದ ಆದ್ಯ ಕರ್ತವ್ಯ. ಆದರೆ ಜನರಿಗೆ ಆಮಿಷ, ಭರವಸೆ ನೀಡಿ ತಾತ್ಕಾಲಿಕ ಖುಷಿ ನೀಡಿ ಕಾಲ ಕಳೆದರೆ ಜನರ ಸಮಸ್ಯೆ ನಿವಾರಣೆ ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಸರಿಯಾದ ಚರಂಡಿಯೇ ಇಲ್ಲ. ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟಿಗಳು ವಾಹನ ಸಂಚಾರಕ್ಕೆ ತೊಡಕಾಗಿವೆ. ಕೂಡಲೇ ಹೆದ್ದಾರಿ ಅಗಲೀಕರಣ ಮಾಡಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಚರಂಡಿ, ರಸ್ತೆ ಬದಿಯ ಗಿಡಗಂಟಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
    ಶಿರಸ್ತೇದಾರ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ತಾಲೂಕು ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿ ಗೌಡ, ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್, ರೈತ ಮುಖಂಡ ಮಂಜುನಾಥ್ ಗೌಡ, ಎಂ.ಎನ್.ಚಂದ್ರೇಗೌಡ, ಕರವೇ ಮುಖಂಡರಾದ ಕುಮಾರ್ ಬಕ್ಕಿ, ಕೆ.ಪಿ.ಮೋಹನ್, ಹಸನಬ್ಬ, ಯಾಕೂಬ್, ಶಿವಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts