More

    ರಸ್ತೆಬದಿ ನಿಂತಿದ್ದ ವಾಹನಗಳ ಗಾಜು ಒಡೆದವರ ವಿರುದ್ಧ ರೌಡಿಶೀಟ್

    ಬೆಂಗಳೂರು: ಏರಿಯಾದಲ್ಲಿ ಹವಾ ಸೃಷ್ಟಿಸಲು ರಸ್ತೆಬದಿ ನಿಲ್ಲಿಸಿದ್ದ ಕಾರು, ಆಟೋ ಸೇರಿ 17 ವಾಹನಗಳಿಗೆ ಹಾನಿ ಮಾಡಿ ಪುಂಡಾಟ ಮೆರೆದಿದ್ದ ಐವರನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

    ಮಣಿಕಂಠ ಅಲಿಯಾಸ್ ಕಳ್ಳ ಮಣಿ (22), ಸೋಮಶೇಖರ್ ಅಲಿಯಾಸ್ ಕುಳ್ಳ ಸೋಮ (23), ನಿತಿನ್ ಡ್ಯಾನಿಯಲ್ (22), ಲೋಕೇಶ್ (22) ಹಾಗೂ ಕಾರ್ತಿಕ್ (21) ಬಂಧಿತರು. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಲಾಂಗ್, ಮುಖವಾಡಗಳು, ಕಬ್ಬಿಣದ ರಾಡ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನ. 10ರಂದು ಮುಂಜಾನೆ 3 ಗಂಟೆಗೆ ರಾಜೀವ್ ಗಾಂಧಿನಗರದಲ್ಲಿ ರಸ್ತೆಬದಿ ನಿಲ್ಲಿಸಿದ್ದ 14 ಕಾರುಗಳು, 2 ಆಟೋ ಮತ್ತು 1 ಕ್ಯಾಂಟರ್ ಸೇರಿ 17 ವಾಹನಗಳನ್ನು ಜಖಂ ಮಾಡಿದ್ದರು. ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
    ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರಿಯ ಅಧಿಕಾರಿಗಳು ರಾಜಗೋಪಾಲನಗರ ಠಾಣೆ ಇನ್‌ಸ್ಪೆಕ್ಟರ್ ಬಿ.ಎನ್. ಪುನೀತ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಕಾರ್ಯಾಚರಣೆಗಿಳಿದಿದ್ದರು. ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮುಖಕ್ಕೆ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸೆಗಿರುವುದು ಬೆಳಕಿಗೆ ಬಂದಿತ್ತು. ವಾಹನಗಳ ನಂಬರ್ ಮತ್ತು ಮೊಬೈಲ್ ನೆಟ್‌ವರ್ಕ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರು ಲಗ್ಗೆರೆ ನಿವಾಸಿಗಳು. ಆರೋಪಿ ಮಣಿಕಂಠ ಈ ಹಿಂದೆ ಪೀಣ್ಯ, ಗಂಗಮ್ಮನಗುಡಿ, ಮಹಾಲಕ್ಷ್ಮೀ ಲೇಔಟ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದ. ಮತ್ತೊಬ್ಬ ಆರೋಪಿ ಸೋಮಶೇಖರ್ ಈ ಹಿಂದೆ ಅನ್ನಪೂರ್ಣೇಶ್ವರಿನಗರ, ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದಲ್ಲಿ ಭಾಗಿಯಾಗಿ ಜೈಲು ಸೇರಿದ್ದ.

    ಜಾಮೀನು ಪಡೆದು ಹೊರ ಬಂದಿದ್ದ ಆರೋಪಿಗಳು ತಮ್ಮದೇ ಒಂದು ಗ್ಯಾಂಗ್ ಕಟ್ಟಿಕೊಂಡು ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ನಿರ್ಧರಿಸಿದ್ದರು. ಪ್ರಮುಖ ಆರೋಪಿ ಮಣಿಕಂಠನ ವಿರುದ್ಧ ರೌಡಿ ಪಟ್ಟಿ ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts