More

    ಫೆಡರರ್ ಗೆಲುವಿನ ಶತಕ; ಸೆರೇನಾ, ಒಸಾಕಾಗೆ ಶಾಕ್​

    ಮೆಲ್ಬೋರ್ನ್: ಹಾಲಿ ಚಾಂಪಿಯನ್ ಆಟಗಾರ್ತಿಯನ್ನು 15 ವರ್ಷದ ಶಾಲಾ ಬಾಲಕಿ ಟೂರ್ನಿಯಿಂದ ಹೊರಹಾಕಿದ ದಿನದಂದೇ, ನಾಲ್ಕು ಮಕ್ಕಳ ತಂದೆ ಹಾಗೂ 38 ವರ್ಷದ ದಿಗ್ಗಜ ಆಟಗಾರ ಬರೋಬ್ಬರಿ 4 ಗಂಟೆಯ ಮ್ಯಾರಥಾನ್ ಪಂದ್ಯದಲ್ಲಿ ಗೆಲುವು ಸಾಧಿಸಿ ಮುನ್ನಡೆ ಕಂಡರು. ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್​ನಲ್ಲಿ ಐದನೇ ದಿನ ರೋಚಕ ಪಂದ್ಯಗಳಿಗೆ ವೇದಿಕೆಯಾಯಿತು. 20 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಸ್ವಿಸ್​ನ ರೋಜರ್ ಫೆಡರರ್ 5 ಸೆಟ್​ಗಳ ಹೋರಾಟದಲ್ಲಿ ಗೆದ್ದು ಆಸ್ಟ್ರೇಲಿಯನ್ ಓಪನ್​ನಲ್ಲಿ ನೂರು ಗೆಲುವಿನ ದಾಖಲೆ ಮಾಡಿದರೆ, 23 ಗ್ರಾಂಡ್ ಸ್ಲಾಂಗಳ ಒಡತಿ ಸೆರೇನಾ ವಿಲಿಯಮ್ಸ್​ ಹಾಗೂ ಹಾಲಿ ಚಾಂಪಿಯನ್ ನವೊಮಿ ಒಸಾಕ ಅವರ ಪ್ರಶಸ್ತಿ ಆಸೆ ನುಚ್ಚುನೂರಾಯಿತು.

    ರಾಡ್ ಲೆವರ್ ಅರೇನಾದಲ್ಲಿ ಸ್ಥಳೀಯ ಕಾಲಮಾನ ಶುಕ್ರವಾರ ರಾತ್ರಿ ಆರಂಭವಾಗಿ ಶನಿವಾರ ಮುಂಜಾನೆ 1 ಗಂಟೆ 4 ನಿಮಿಷಕ್ಕೆ ಮುಕ್ತಾಯವಾದ ಪಂದ್ಯದಲ್ಲಿ 3ನೇ ಶ್ರೇಯಾಂಕದ ಆಟಗಾರ ರೋಜರ್ ಫೆಡರರ್ 4-6, 7-6 (7), 6-4, 4-6, 7-6 (10) ರಿಂದ ಆಸ್ಟ್ರೇಲಿಯಾದ 30 ವರ್ಷದ ಆಟಗಾರ ಜಾನ್ ಮಿಲ್​ವ್ಯಾನ್​ರನ್ನು ಮಣಿಸಿದರು. ಕೊನೇ ಸೆಟ್​ನ ಸೂಪರ್ ಟೈಬ್ರೇಕರ್​ನಲ್ಲಿ ದೊಡ್ಡ ಹಿನ್ನಡೆಯಲ್ಲಿದ್ದ (8-4) ಫೆಡರರ್, ಸತತ ಆರು ಅಂಕಗಳನ್ನು ಗೆಲ್ಲುವ ಮೂಲಕ ಗೇಮ್ ಸೆಟ್, ಮ್ಯಾಚ್ ಗೆದ್ದುಕೊಂಡರು.

    ವಿಶ್ವ ನಂ.2 ಆಟಗಾರ ನೊವಾಕ್ ಜೋಕೊವಿಕ್ 6-3, 6-2, 6-2 ರಿಂದ ಯಶಿಯಿಟೋ ನಿಶಿಯೋಕಾರನ್ನು ಸೋಲಿಸಿದರೆ, ಮಿಲೋಸ್ ರಾವೋನಿಕ್ 7-5, 6-4, 7-6 ರಿಂದ ಗ್ರೀಸ್​ನ ಸ್ಟೆಫಾನೋಸ್ ಸಿಸಿಪಾಸ್​ರನ್ನು ಹೊರಗಟ್ಟಿದರು. ಮರಿನ್ ಸಿಲಿಕ್ ಮುನ್ನಡೆ ಕಂಡರು. ಮಹಿಳಾ ವಿಭಾಗದಲ್ಲಿ ವಿಶ್ವ ನಂ.1 ಆಶ್ಲೆಗ್ ಬಾರ್ಟಿ, ಪೆಟ್ರಾ ಕ್ವಿಟೋವಾ, ಸೋಫಿಯಾ ಕೆನಿನ್, ಅಲಿಸನ್ ರಿಸ್ಕೆ ಹಾಗೂ ಮಾರಿಯಾ ಸಕ್ಕರಿ ಮುನ್ನಡೆ ಪಡೆದರು.

    ಭಾರತದ ದಿವಿಜ್ ಶರಣ್ ಹಾಗೂ ಆರ್ಟೆಮ್ ಸಿಟಕ್ ಜೋಡಿ ಪುರುಷರ ಡಬಲ್ಸ್​ನ 2ನೇ ಸುತ್ತಿನಲ್ಲಿ ಶರಣಾಯಿತು.

    ವೋಜ್ನಿಯಾಕಿ ಸೋಲಿನ ವಿದಾಯ

    ಸೆರೇನಾ ಸೋಲು ಕಂಡ ದಿನದಲ್ಲಿಯೇ ಅವರ ಆಪ್ತ ಗೆಳತಿ ಮಾಜಿ ವಿಶ್ವ ನಂ.1 ಕ್ಯಾರೋಲಿನ್ ವೋಜ್ನಿಯಾಕಿ ಕೂಡ ಸೋಲು ಕಂಡು ಟೆನಿಸ್ ಜೀವನವನ್ನು ಕೊನೆ ಮಾಡಿದರು. 2018ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕೂಡ ಆಗಿದ್ದ ವೋಜ್ನಿಯಾಕಿ ಟುನೇಷಿಯಾದ ಆಟಗಾರ್ತಿ ಒನ್ಸ್ ಜಬೂರ್​ಗೆ 7-5, 3-6, 7-5ರಿಂದ ಶರಣಾದರು.

    ಹೊರಬಿದ್ದ ಸೆರೇನಾ, ಒಸಾಕ

    24ನೇ ಗ್ರಾಂಡ್ ಸ್ಲಾಂ ಗೆಲ್ಲುವ ಗುರಿಯಲ್ಲಿ ಅಭಿಯಾನ ಆರಂಭಿಸಿದ್ದ ಅಮೆರಿಕದ ಸೆರೇನಾ ವಿಲಿಯಮ್ಸ್​ರ ಹೋರಾಟ 3ನೇ ಸುತ್ತಿನಲ್ಲಿ ಆಘಾತಕಾರಿಯಾಗಿ ಕೊನೆಗೊಂಡಿತು. ಚೀನಾದ ಕ್ವಿಯಾಂಗ್ ವಾಂಗ್ 6-4, 6-7 (2), 7-5 ರಿಂದ ಸೆರೇನಾ ವಿಲಿಯಮ್ಸ್​ರನ್ನು ಸೋಲಿಸಿದರು. ಮಗಳು ಅಲೆಕ್ಸಿಸ್ ಒಲಿಂಪಿಯಾ ಹುಟ್ಟಿದ ಬಳಿಕ ಸೆರೇನಾ ಆಡಿದ 7 ಗ್ರಾಂಡ್ ಸ್ಲಾಂಗಳ ಪೈಕಿ 4ರಲ್ಲಿ ಫೈನಲ್​ಗೇರಿದ್ದರೂ, ಅವರಿಗೆ 24ನೇ ಗ್ರಾಂಡ್ ಸ್ಲಾಂ ಮುಕುಟ ಗಗನಕುಸುಮವಾಗಿಯೇ ಉಳಿದಿದೆ. ಇನ್ನೊಂದು ಪಂದ್ಯದಲ್ಲಿ 15 ವರ್ಷದ ಅಮೆರಿಕದ ಆಟಗಾರ್ತಿ ಕೊಕೊ ಗೌಫ್ ಹಾಲಿ ಚಾಂಪಿಯನ್ ಆಗಿದ್ದ ಜಪಾನ್​ನ ನವೋಮಿ ಒಸಾಕ ವಿರುದ್ಧ ಕಳೆದ ಯುಎಸ್ ಓಪನ್ ಸೋಲಿನ ಸೇಡು ತೀರಿಸಿಕೊಂಡರು. ಕೊಕೊ ಗೌಫ್ 6-3, 6-4 ರಿಂದ 3ನೇ ಶ್ರೇಯಾಂಕದ ಒಸಾಕರನ್ನು ಮಣಿಸುವ ಮೂಲಕ 4ನೇ ಸುತ್ತಿಗೆ ಪ್ರವೇಶ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts