ಗೊಳಸಂಗಿ: ಅನಿಯಮಿತ ತೂಕದ ವಾಹನಗಳ ಎತ್ತರ ನಿಯಂತ್ರಣ ಮತ್ತು ರೈಲ್ವೆ ಸೇತುವೆ ಸುರಕ್ಷತೆಗಾಗಿ ಸಮೀಪದ ತೆಲಗಿ ರೈಲ್ವೆ ಸೇತುವೆ ಬಳಿ ಅಳವಡಿಸಲಾಗಿದ್ದ ಕಬ್ಬಿಣದ ರಾಡ್ ಮೂರು ದಿನಗಳ ಹಿಂದೆ ಲಾರಿಯೊಂದಕ್ಕೆ ತಾಕಿ ರಸ್ತೆ ಪಕ್ಕದಲ್ಲೇ ಬಿದ್ದು ಸಂಚಾರಕ್ಕೆ ಸಂಚಕಾರ ತಂದಿದೆ.
ರೈಲು ಸೇತುವೆ ಬಳಿಯಲ್ಲಿ ರಸ್ತೆ ವರ್ತುಲಾಕಾರದಲ್ಲಿದೆ. ಜತೆಗೆ ವಾಹನಗಳ ದಟ್ಟನೆಯೂ ಅಧಿಕವಾಗಿದೆ. ಈ ಮಾರ್ಗದ ಸರ್ವೀಸ್ ರೋಡ್‌ನಲ್ಲಿಯೇ ಎರಡು ದಿನಗಳ ಹಿಂದೆಯೇ ಬಿದ್ದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಸಂಗತಿಯನ್ನು ಹತ್ತಿರದ ತೆಲಗಿ ಗ್ರಾಮ ಪಂಚಾಯಿತಿಯವರು ಸಂಬಂಧಿಸಿದ ಸ್ಟೇಷನ್ ಮಾಸ್ತರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಏನಾದರೂ ಅಚಾತುರ್ಯ ಸಂಭವಿಸುವ ಮುನ್ನ ರೈಲು ಇಲಾಖೆಯ ಮುಖ್ಯಸ್ಥರು ಗಮನಹರಿಸಿ ಆಗಿರುವ ತೊಂದರೆಯನ್ನು ನಿವಾರಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.
ಬಸವನಬಾಗೇವಾಡಿ ರೋಡ್(ತೆಲಗಿ) ರೈಲು ಸೇತುವೆ ಕೇವಲ 3.95 ಮೀಟರ್ ಎತ್ತರ ಹೊಂದಿದೆ. ಈ ಭಾಗದಲ್ಲಿ ರೈತಾಪಿ ಜನತೆ ಅಧಿಕವಾಗಿದ್ದು ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸಲು ಈ ರಸ್ತೆಯೇ ಸಂಪರ್ಕ ಸೇತುವೆಯಾಗಿದೆ. ಇದಲ್ಲದೆ ಪಕ್ಕದಲ್ಲಿ ಕೇವಲ ಎರಡು ಕಿಮೀ ದೂರದಲ್ಲಿ ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರ ತಲೆ ಎತ್ತಿ ನಿಂತಿದೆ. ವಿದ್ಯುತ್ ಉತ್ಪಾದನಾ ನಂತರದ ಹಾರುಬೂದಿಯನ್ನು ಸಿಮೆಂಟ್ ಮತ್ತಿತರ ಕಾರ್ಖಾನೆಗಳಿಗೆ ಸಾಗಿಸಲು ಸಾವಿರಾರು ಗೂಡ್ಸ್ ಲಾರಿಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಈ ರೈಲು ಸೇತುವೆ ಬಳಿ ಬಂದಾಗ ಎತ್ತರ ನಿಯಂತ್ರಣಕ್ಕಾಗಿ ಅಳವಡಿಸಲಾದ ರಾಡ್‌ಗೆ ತಾಕಿ ಸೇತುವೆಗೂ ಡಿಕ್ಕಿ ಹೊಡೆದು ಹೋಗುವುದು ಇಲ್ಲಿ ಸರ್ವೇ ಸಾಮಾನ್ಯ ಎನ್ನುವಂತಿದೆ. ಇದರಿಂದ ಯಾವುದೇ ಸಂದರ್ಭದಲ್ಲಿ ಸೇತುವೆಗೂ ಅಪಾಯ ತಪ್ಪಿದ್ದಲ್ಲ ಎಂಬುದು ಜನತೆಯ ಆತಂಕವಾಗಿದೆ.